ದುರ್ಬಲಗೊಂಡಿದ್ದ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಮುಂದಿನ ನಾಲ್ಕು ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಬೆಂಗಳೂರು (ಸೆ.02): ದುರ್ಬಲಗೊಂಡಿದ್ದ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಮುಂದಿನ ನಾಲ್ಕು ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಮುಂದಿನ ಎರಡು ದಿನ ಯಲ್ಲೋ ಅಲರ್ಟ್‌ನ ಸೂಚನೆ ನೀಡಲಾಗಿದೆ. ಇದರಿಂದ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಇನ್ನು ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಸೆ.3 ಹಾಗೂ 4ರಂದು ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಯಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಾರಾಯಣ ಗುರುಗಳಂತಹರಿಂದಾಗಿ ನಮ್ಮ ಸಂಸ್ಕಾರಗಳು ಉಳಿದಿವೆ: ಶೋಭಾ ಕರಂದ್ಲಾಜೆ

ಇನ್ನು ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಅತಿ ಹೆಚ್ಚು 12 ಸೆಂ.ಮೀ ಮಳೆಯಾದ ವರದಿಯಾಗಿದೆ. ಉಳಿದಂತೆ ಬೆಳಗಾವಿಯ ಹಿಡಕಲ್‌ ಅಣೆಕಟ್ಟು, ಮದ್ದೂರು, ಬೆಂಗಳೂರಿನ ಕೆಎಸ್‌ಎನ್‌ಡಿಎಂಸಿ ಆವರಣದಲ್ಲಿ 11, ಬೆಂಗಳೂರು ನಗರ 9, ರಾಮನಗರದಲ್ಲಿ 7, ತುಮಕೂರಿನ ಗುಬ್ಬಿ, ದೊಡ್ಡ ಬಳ್ಳಾಪುರದಲ್ಲಿ ತಲಾ 6, ಧಾರಾವಾಡ, ಬಾದಾಮಿ, ಹುಣಸೂರು, ಮಾಗಡಿ, ತುಮಕೂರು, ಚನ್ನಪಟ್ಟಣದಲ್ಲಿ ತಲಾ 5, ಹುಬ್ಬಳ್ಳಿ, ಬೇಲೂರು, ಹರಪನಹಳ್ಳಿ, ಚಿಂತಾಮಣಿ, ಗೌರಿಬಿದನೂರು, ತೊಂಡೆಭಾವಿಯಲ್ಲಿ ತಲಾ 4 ಸೆಂ.ಮೀ. ಮಳೆಯಾದ ವರದಿಯಾಗಿದೆ.

ಮದ್ದೂರಲ್ಲಿ ನಾಲೆ ಬಿದ್ದು ಸಾವು: ರಾಜಧಾನಿ ಬೆಂಗಳೂರು, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ ಸೇರಿ ರಾಜ್ಯದ ಕೆಲವೆಡೆ ಶುಕ್ರವಾರ ಮಳೆಯಾಗಿದೆ. ವಿದ್ಯಾರಣ್ಯಪುರ, ಹೆಬ್ಬಾಳ, ಕೆಂಪಾಪುರ ಸೇರಿ ಬೆಂಗಳೂರಿನ ಕೆಲವೆಡೆ ಶುಕ್ರವಾರ ಮಧ್ಯಾಹ್ನದ ನಂತರ ಸಾಧಾರಣ ಮಳೆಯಾಯಿತು. ಚಿತ್ರದುರ್ಗದಲ್ಲಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಯಿತು. 

ನಮೋ ನಮಃ ನವ ಮಂತ್ರಾಲಯ ಸುಕ್ಷೇತ್ರ: ಶುರುವಾಗಿದೆ ಪರಿವರ್ತನೆ ಪರ್ವ

ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ ಜಿಲ್ಲೆಗಳ ಕೆಲವೆಡೆಯೂ ಮಳೆಯಾಗಿದ್ದು, ರೈತರಲ್ಲಿ ಹರ್ಷ ಮೂಡಿಸಿತು. ಈ ಮಧ್ಯೆ, ಮಂಡ್ಯ ಜಿಲ್ಲೆ ಮದ್ದೂರು ಸುತ್ತಮುತ್ತ ಗುರುವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಮದ್ದೂರಿನ ನಗರಕೆರೆ ರಸ್ತೆಯ ವೈದ್ಯನಾಥಪುರ ಆರ್ಚರ್‌ ಬಳಿ ತುಂಬಿ ಹರಿಯುತ್ತಿದ್ದ ಕಿರು ನಾಲೆಗೆ ಬಿದ್ದು ಸುಮಾರು 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಅಸುನೀಗಿದ್ದಾನೆ. ಈತ ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮದ್ದೂರಿನಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮಳೆ ಕಾರಣಕ್ಕೆ ಚಲಿಸಲಾಗದೆ ವಾಹನಗಳು ರಸ್ತೆ ಬದಿ ಸಾಲುಗಟ್ಟಿ ನಿಂತಿದ್ದವು.