Asianet Suvarna News Asianet Suvarna News

ಕತ್ತಲೆಯಲ್ಲಿ ಮುಳುಗಿದ ಬಾಗಲಕೋಟೆಯ ನವನಗರ: ಕರೆಂಟ್​ ಬಂದ್​, ನಳ ಬಂದ್​, ಎಲ್ಲವೂ ಬಂದ್‌..!

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಿಂದ ಕೋಟಿ ಕೋಟಿ ಬಾಕಿ...ನಿರ್ವಹಣೆ ನಿಲ್ಲಿಸಿದ ಗುತ್ತಿಗೆದಾರರು. 

People Faces Electricity Problem in Bagalkot grg
Author
First Published Nov 2, 2023, 11:15 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ನ.02): ರಾಜ್ಯಾದ್ಯಂತ ಎಲ್ಲೆಡೆ ಝಗಮಗಿಸುವ ಬೆಳಕಿನ ಮಧ್ಯೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದರೆ ಇತ್ತ ಮುಳುಗಡೆ ನಗರಿ ಎಂದೇ ಖ್ಯಾತಿಯನ್ನ ಹೊಂದಿರೋ ಬಾಗಲಕೋಟೆಯ ನವನಗರದಲ್ಲಿ ಜನ್ರು ಕತ್ತಲೆಯ ಮಧ್ಯೆ ಜೀವನ ನಡೆಸುವಂತಾಯಿತು, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ನಿರ್ವಹಣೆಗೆ ಇದ್ದ ಹಣವನ್ನ ಸರ್ಕಾರ ಪಡೆದಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಹಾಗಾದ್ರೆ ಒಟ್ಟಾರೆ ಆಗಿದ್ದಾದ್ರೂ ಏನು? ಹೇಗೆ? ಅಂತೀರಾ. ಈ ಕುರಿತ ವರದಿ ಇಲ್ಲಿದೆ...

ಒಂದೆಡೆ ರಸ್ತೆಯಲ್ಲಿ, ಮನೆಯಲ್ಲಿ ಎಲ್ಲೆಂದರಲ್ಲಿ ಕತ್ತಲೋ ಕತ್ತಲು, ಮನೆಯಿಂದ ಹೊರ ಬಂದರೆ ಜನರಿಗೆ ತಪ್ಪದ ಸಂಕಷ್ಟ,  ಇವುಗಳ ಮಧ್ಯೆ ನಿರ್ವಹಣೆಗೆ ಹಣ ಇಲ್ಲದೆ ಒದ್ದಾಡುತ್ತಿರೋ ಪಟ್ಟಣ ಅಭಿವೃದ್ದಿ ಪ್ರಾಧಿಕಾರ. ಅಂದಹಾಗೆ ಇಂತಹವೊಂದು ಪರಿಸ್ಥಿತಿ ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯ ನವನಗರದಲ್ಲಿ. ಹೌದು, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಲ್ಲಿ ಇದೀಗ ಹಣ ಇಲ್ಲದೆ ನಿತ್ಯ  ಮೂಲಭೂತ ಸೌಲಭ್ಯಗಳ ನಿರ್ವಹಣೆ ಕಷ್ಟವಾಗುತ್ತಿದೆ. ಮುಖ್ಯವಾಗಿ ಕಸ ವಿಲೇವಾರಿ, ಡ್ರೈನೇಜ್​, ನೀರು ಮತ್ತು ವಿದ್ಯುತ್ ಬೀದಿ ದೀಪಗಳ ನಿರ್ವಹಣೆಯನ್ನ ಗುತ್ತಿಗೆಯಾಗಿ ನೀಡಲಾಗುತ್ತಿದೆ. ಆದ್ರೆ ಕಳೆದೊಂದು ವರ್ಷದಿಂದ ಉಳಿಸಿಕೊಂಡಿರೋ ಬಾಕಿ ಹಣವನ್ನ ಗುತ್ತಿಗೆದಾರರಿಗೆ ನೀಡಿಲ್ಲ. ಸಧ್ಯದಮಟ್ಟಿಗೆ 42 ಕೋಟಿ ರೂಪಾಯಿ ಬಾಕಿ ಹಣವನ್ನ ಪ್ರಾಧಿಕಾರ ಗುತ್ತಿಗೆದಾರರಿಗೆ ನೀಡಬೇಕಿದೆ. ಇವುಗಳ ಮಧ್ಯೆ ಇಂದಿನಿಂದ ವಿದ್ಯುತ್​ ಸರಬರಾಜು ಸಹ ಸ್ಥಗಿತಗೊಳಿಸಲಾಗಿದ್ದು, ಇದ್ರಿಂದ ನವನಗರದ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದ್ದು, ಕತ್ತಲೆಯಲ್ಲಿ ಮಕ್ಕಳು ಮರಿಗಳೊಂದಿಗೆ ಬದುಕುವುದು ಹೇಗೆ, ಮೇಲಾಗಿ ರಾಜ್ಯಾದ್ಯಂತ ಈಗ ಎಲ್ಲೆಡೆ ಬೆಳಕಿನೊಂದಿಗೆ ಕನ್ನಡ ರಾಜ್ಯೋತ್ಸವ ನಡೆಯುತ್ತಿದ್ದರೆ ನಮಗೆ ಮಾತ್ರ ಬರೀ ಕತ್ತಲೆಯಾಗಿದೆ. ಕೂಡಲೇ ಈ ಸಂಭಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಅಂತಾರೆ ನವನಗರದ ನಿವಾಸಿಗಳು.

ಬಿಜೆಪಿಗರು ಆಪರೇಷನ್‌ ಮಾಡಿಯೇ ಅಧಿಕಾರ ಮಾಡಿದವರು: ಸಚಿವ ಆರ್‌.ಬಿ.ತಿಮ್ಮಾಪೂರ

ಬಾರದ ಕಾರ್ಪಸ್ ಫಂಡ್....ಅತಂತ್ರರಾದ ಗುತ್ತಿಗೆದಾರರು...ಸಂಕಷ್ಟದಲ್ಲಿ ಜನರು...

ಇನ್ನು ನವನಗರದ ಮುಖ್ಯರಸ್ತೆ, ಮನೆಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದರಿಂದ ಜನರು ಆತಂಕ ಎದುರಿಸುವಂತಾಗಿದ್ದು, ಎಲ್ಲೆಂದರಲ್ಲಿ ಹುಳು, ಹುಪ್ಪಟೆ ಹಾವು, ಚೇಳಿನ ಕಾಟ ಇರೋದ್ರಿಂದ ಸಮಸ್ಯೆ ಎದುರಿಸುವಂತಾಗಿದೆ. ಈ ಮಧ್ಯೆ ನೀರಿಗಾಗಿಯೂ ಸಹ ಪರದಾಡುವಂತಹ ಪರಿಸ್ಥಿತಿ ಕಂಡು ಬರುತ್ತಿದೆ. ಇದು ಜನರ ಸಮಸ್ಯೆಯಾದ್ರೆ ಇತ್ತ ಇನ್ನು ಹಣ ಬಾಕಿ ನೀಡದೇ ಇರೋದ್ರಿಂದ ಗುತ್ತಿಗೆದಾರರು  ಕಾರ್ಯನಿರ್ವಹಣೆಗೆ ಹಿಂದೆ ಮುಂದೆ ನೋಡಬೇಕಾದ ಅನಿವಾರ್ಯತೆ ಆಗಿದೆ. ಈ ಮಧ್ಯೆ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಲ್ಲಿ 377 ಕೋಟಿ ರೂಪಾಯಿ ಕಾರ್ಪಸ್ ಫಂಡ್​ ಇರಿಸಲಾಗಿತ್ತು, ಪ್ರತಿವರ್ಷ ಅದರಿಂದ ಬರುವ ಬಡ್ಡಿಯಿಂದಲೇ ನವನಗರದ ಮೂಲಭೂತ ಸೌಲಭ್ಯಗಳ ನಿರ್ವಹಣಾ ಕಾರ್ಯಗಳು ನಡೆಯುತ್ತಿದ್ದವು, ಆದ್ರೆ ಈಗ ಸರ್ಕಾರ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ 377 ಕೋಟಿ ರೂಪಾಯಿ ಕಾರ್ಪಸ್ ಫಂಡ್​​ನ್ನ ಪಡೆದುಕೊಂಡಿದ್ದೇ ಇಂದಿನ ಅವ್ಯವಸ್ಥೆಗೆ ಕಾರಣವಾಗಿದ್ದು, ಈ ಸಂಭಂದ ಜಿಲ್ಲೆಯ ಜನಪ್ರತಿನಿಧಿಗಳು ಡಿಸಿಎಂ ಡಿಕೆ ಶಿವುಕುಮಾರ್ ಅವರಿಗೆ ಮನವರಿಕೆ ಮಾಡಿದ್ರೂ ಪ್ರಯೋಜನವಾಗ್ತಿಲ್ಲ, ಇದ್ರಿಂದ ತೀವ್ರ ಸಂಕಷ್ಟ ಎದುರಿಸುವಂತಾಗಿದ್ದು, ಶೀಘ್ರ ಕ್ರಮಕೈಗೊಳ್ಳಿ ಅಂತ ಮಹಿಳೆಯರು ಗೋಳಿಟ್ಟಿದ್ದಾರೆ.                  

ಒಟ್ಟಿನಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಮೂಲಭೂತ ಸೌಲಭ್ಯಗಳ ನಿರ್ವಹಣೆಗೆ ಹಣ ಇಲ್ಲದೆ ಪರದಾಡುವಂತಾಗಿದ್ದು, ಜನರೆಲ್ಲಾ ಕತ್ತಲಲ್ಲಿ ಬದುಕು ನಡೆಸುವಂತಾಗಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತು ಶೀಘ್ರ ಅನುದಾನ ನೀಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಾ ಅಂತ ಕಾದು ನೋಡಬೇಕಿದೆ.

Follow Us:
Download App:
  • android
  • ios