ಕೊಪ್ಪಳ(ಅ.27): ಸಾಲು ಸಾಲು ರಜೆಗಳು ಮತ್ತು ವಿಜಯದಶಮಿ ಪ್ರಯುಕ್ತ ಸುಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನ ಹಾಗೂ ಅಂಜನಾದ್ರಿ ಬೆಟ್ಟದಲ್ಲಿ ಕಳೆದ ಮೂರು ದಿನಗಳಲ್ಲಿ ಸಹಸ್ರಾರು ಭಕ್ತರು ಆಗಮಿಸಿದ್ದರು. ಯಾವುದೇ ಸಾಮಾಜಿಕ ಅಂತರ, ಮುನ್ನೆಚ್ಚರಿಕೆ ವಹಿ​ಸ​ದಿ​ರು​ವು​ದು ಕಂಡುಬಂತು.

ಹುಲಿಗೆಮ್ಮ ದೇವಸ್ಥಾನಕ್ಕೆ ಕಳೆದ ಕೆಲ ದಿನಗಳಿಂದ ನಿತ್ಯವೂ ಹತ್ತಾರು ಸಾವಿರ ಭಕ್ತರು ಆಗಮಿಸುತ್ತಿದ್ದಾರೆ. ವಿಜಯಶಮಿ ಪ್ರಯುಕ್ತ ಕಳೆದೆರಡು ದಿನಗಳಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದು ವಿಶೇಷವಾಗಿದೆ.
ದೇವಸ್ಥಾನ ಬಾಗಿಲು ತೆರೆದೇ ಇಲ್ಲ. ಆದರೂ ಭಕ್ತರ ಮಹಾಪೂರ ಹರಿದುಬರುತ್ತಿದೆ. ಈ ತಿಂಗಳಾಂತ್ಯದವರೆಗೂ ದೇವಸ್ಧಾನದ ಬಾಗಿಲು ಹಾಕಿರಲು ದೇವಸ್ಥಾನ ಸಮಿತಿ ನಿರ್ಧರಿಸಿದೆ. ಆದರೂ ಭಕ್ತರ ಸಂಖ್ಯೆ ದಿನೇ ದಿನೆ ಏರುತ್ತಲೇ ಇದೆ. ಹಾಗೊಂದು ವೇಳೆ ದೇವಸ್ಥಾನದ ಬಾಗಿಲು ತೆರೆದರೇ ನಿತ್ಯವೂ ಬರೋಬ್ಬರಿ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವುದರಲ್ಲಿ ಯಾವುದೇ ಸಂಶಯ ಇಲ್ಲ ಎನ್ನುತ್ತಾರೆ ದೇವಸ್ಥಾನ ಸಮಿತಿಯವರು.

ಅಂಜನಾದ್ರಿ ಬೆಟ್ಟಕ್ಕೆ ಶನಿವಾರ ಸುಮಾರು 20 ಸಾವಿರ ಭಕ್ತರು ಆಗಮಿಸುತ್ತಾರೆ. ಕಳೆದೆರಡು ದಿನಗಳಿಂದ ನಾಲ್ಕಾರು ಸಾವಿರ ಸಂಖ್ಯೆಯ ಭಕ್ತರು ಆಗಮಿಸಿ, ದೇವರ ದರುಶನ ಪಡೆದರು. ಅಂಜನಾದ್ರಿ ಬೆಟ್ಟದಲ್ಲಿ ದೇವರ ದರ್ಶನ ನೀಡುತ್ತಿರುವುದರಿಂದ ಇಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ.

ಮುನ್ನೆಚ್ಚರಿಕೆ ಇಲ್ಲ:

ಹುಲಿಗಿ ಮತ್ತು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರು ಯಾವುದೇ ಮುನ್ನೆಚ್ಚರಿಕೆ ವಹಿಸುತ್ತಿಲ್ಲ. ಕನಿಷ್ಠ ಮಾಸ್ಕ್‌ ಸಹ ಧರಿಸುವುದಿಲ್ಲ. ಹೀಗಾಗಿ, ಕೊರೋನಾ ಹರಡುವ ಸಾಧ್ಯತೆ ಇದೆ. ಆದ್ದರಿಂದ ಇಲ್ಲಿ ಮುನ್ನೆಚ್ಚರಿಕೆಯ ಅಗತ್ಯವಿದೆ ಎನ್ನುತ್ತಾರೆ ಪ್ರಜ್ಞಾವಂತರು. ಜಿಲ್ಲಾಡಳಿತ ದೇವಸ್ಥಾನಕ್ಕೆ ಆಗಮಿಸುವವರು ಮಾಸ್ಕ್‌ ಇಲ್ಲದೆ ಬರುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.

ನವಲಿಯಲ್ಲಿ ದಸರಾ ಉತ್ಸವ: ಶಮಿ ವೃಕ್ಷಕ್ಕೆ ವಿಶೇಷ ಪೂಜೆ

ಸಮೀಪದ ನವಲಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಸ್ಥಳವಾಗಿರುವ ಭೋಗಾಪುರೇಶ ದೇವಸ್ಥಾನದಲ್ಲಿ ಸಂಭ್ರಮದಿಂದ ದಸರಾ ಉತ್ಸವ ಆಚ​ರಿ​ಸ​ಲಾ​ಯಿ​ತು. ಕಳೆದ 9 ದಿನಗಳಿಂದ ದೇವಸ್ಥಾನದಲ್ಲಿ ದೀಪೋತ್ಸವ ಏರ್ಪಡಿಸಲಾಗಿತ್ತು. ಭಾನುವಾರ ಸಂಜೆ ದೇವಸ್ಥಾನದಿಂದ ಶಮಿ ವೃಕ್ಷ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಅಚ್ಯುತಾಚಾರ,ಪ್ರವೀಣಾಚಾರ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಶ್ಯಾನಭೋಗರ ನಿವಾಸದಿಂದ ತಂದಿದ್ದ ಶಮಿ ಪತ್ರವನ್ನು ಸಂಪ್ರದಾಯದಂತೆ ರಾಮಮೂರ್ತಿ ನವಲಿ ಪೂಜೆ ಸಲ್ಲಿಸಿ ವಿವರ ನೀಡಿದರು.

ನಂತರ ಆಯುಧದಿಂದ ಬನ್ನಿಯನ್ನು ಬಿಡಿಸಿ ಬನ್ನಿ ಮಹಾಕಾಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಜಿ.ಪವನಕುಮಾರ ಗುಂಡೂರು, ವಿಜಯಕುಮಾರ ಗುಂಡೂರು, ನಿವೃತ್ತ ಶಿಕ್ಷಕ ವೆಂಕಟೇಶ್‌ ನವಲಿ, ಶ್ರೀನಿವಾಸಚಾರ್‌ ಪೂಜಾರ, ಹನುಮಂತರಾವ್‌ ಕುಲಕರ್ಣಿ, ಲಕ್ಷ್ಮಣ್‌ ಬೆಳ್ಳುಬ್ಬಿ, ವಾದಿರಾಜಾಚಾರ್‌ ಸಿಂಗನಾಳ, ಮುರುಳಿಧರಾಚಾರ್‌ ಸೇರಿದಂತೆ ಭಕ್ತರು ಭಾಗವಹಿಸಿದ್ದರು.