ಪಟ್ಟಣದಲ್ಲಿರುವ ಆಧಾರ್‌ ಸೇವಾ ಕೇಂದ್ರವು ಸರಿಯಾದ ಕಾರ್ಯನಿರ್ವಹಣೆಯಿಲ್ಲದ ಕಾರಣ ಜನರು ಪರಿತಪಿಸುವಂತಾಗಿದೆ. ರಾಜ್ಯ ಸರ್ಕಾರ ತಂದಿರುವ ವಿವಿಧ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಜನರು ದಿನನಿತ್ಯ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಗೆ ಮುಂದಾಗಿದ್ದಾರೆ. ಆದರೆ, ಸರಿಯಾದ ಆಧಾರ್‌ ಸೇವಾ ಕೇಂದ್ರ ಇಲ್ಲದಿರುವುದರಿಂದ ಜನತೆ ಪರದಾಡುವಂತಾಗಿದೆ.

ಅನಿಲ್‌ ಬಿರಾದಾರ್‌

 ಕೊಡೇಕಲ್‌ (ಜೂ.23) ಪಟ್ಟಣದಲ್ಲಿರುವ ಆಧಾರ್‌ ಸೇವಾ ಕೇಂದ್ರವು ಸರಿಯಾದ ಕಾರ್ಯನಿರ್ವಹಣೆಯಿಲ್ಲದ ಕಾರಣ ಜನರು ಪರಿತಪಿಸುವಂತಾಗಿದೆ. ರಾಜ್ಯ ಸರ್ಕಾರ ತಂದಿರುವ ವಿವಿಧ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಜನರು ದಿನನಿತ್ಯ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಗೆ ಮುಂದಾಗಿದ್ದಾರೆ. ಆದರೆ, ಸರಿಯಾದ ಆಧಾರ್‌ ಸೇವಾ ಕೇಂದ್ರ ಇಲ್ಲದಿರುವುದರಿಂದ ಜನತೆ ಪರದಾಡುವಂತಾಗಿದೆ.

ಕೊಡೇಕಲ್‌ ವ್ಯಾಪ್ತಿಯ 30ಕ್ಕೂ ಗ್ರಾಮಗಳ ಜನತೆ ಆಧಾರ್‌ ಪ್ರಕ್ರಿಯೆಗಾಗಿ ಕೊಡೇಕಲ್‌ಗೆ ಆಗಮಿಸಬೇಕಿದ್ದು, ಜನದಟ್ಟಣೆಯಿಂದ ಬಹುತೇಕ ಜನರು ಅರ್ಜಿ ಸಲ್ಲಿಸಲಾಗದೆ ಮರಳಿ ಮನೆಗೆ ತೆರಳುವಂತಾಗಿದೆ. ಹೋಬಳಿ ಕೇಂದ್ರವಾದ ಕೊಡೇಕಲ್‌ ವ್ಯಾಪ್ತಿಯ ಬಹುತೇಕ ಹಳ್ಳಿಗಳ ಜನರು ತಮ್ಮ ದಾಖಲಾತಿಗಳನ್ನು ಹಿಡಿದು ಪ್ರತಿನಿತ್ಯ ಕೊಡೇಕಲ್‌ನ ಉಪ ತಹಸೀಲ್ದಾರ್‌ ಕಚೇರಿಯ ನಾಡ ಕಚೇ​ರಿ ಕಾರ್ಯಾಲಯಕ್ಕೆ ಅಲೆಯುತ್ತಿದ್ದು ಜನದಟ್ಟಣೆ ನಿವಾರಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ.

ಗೃಹಜ್ಯೋತಿ ಸರ್ವರ್‌ ಡೌನ್‌, ಸೇವಾಸಿಂಧು ಪೋರ್ಟಲ್ ಕ್ರ್ಯಾಶ್ ಜನರ ಪರದಾಟ!

ಆಧಾರ ಸೇವಾ ಕೇಂದ್ರ ಆರಂಭಿಸಿ:

ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗಾಗಿ ಜನತೆ ತಮ್ಮ ಆಧಾರ್‌ ಕಾರ್ಡ್‌ಗಳಿಗೆ ಮೊಬೈಲ್‌ ನಂಬರ್‌ ಲಿಂಕ್‌ ಸೇರಿದಂತೆ ಇತರ ಪ್ರಕ್ರಿಯೆ ಮಾಡಿಸಿಕೊಳ್ಳಲು ಹಾಗೂ ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಶಾಲಾ ದಾಖಲಾತಿಗಾಗಿ ವಿದ್ಯಾರ್ಥಿಗಳು ಆಧಾರ್‌ ನೋಂದಣಿ ಮಾಡಿಸಿಕೊಳ್ಳುತ್ತಿದ್ದು, ಕೇವಲ ಒಂದೇ ಆಧಾರ್‌ ಕೇಂದ್ರವಿರುವುದರಿಂದ ಸಮಸ್ಯೆ ಉಲ್ಬಣವಾಗಿದೆ. ಈ ಹಿನ್ನೆಲೆ ಪಟ್ಟಣದಲ್ಲಿ ಇನ್ನೊಂದು ಅಧಿಕೃತ ಆಧಾರ್‌ ಸೇವಾ ಕೇಂದ್ರ ಆರಂಭಿಸಲು ಜನತೆ ಆಗ್ರಹಿಸಿದ್ದಾರೆ.

ಸರ್ವರ್‌ ಸಮಸ್ಯೆ ಬಗೆಹರಿಸಿ:

ಸರ್ಕಾರದ ಗೃಹಜ್ಯೋತಿ ಯೋಜನೆ ನೋಂದ​ಣಿ ಈಗಾಗಲೇ ಆರಂಭವಾಗಿದ್ದು, ಸರ್ವರ್‌ ಸಮಸ್ಯೆಯಿಂದ ಅರ್ಜಿಗಳು ಸ್ವೀಕೃತಗೊಳ್ಳುತ್ತಿಲ್ಲ. ಸರಿಸುಮಾರು ಒಂದು ಅರ್ಜಿಗೆ ಒಂದು ಗಂಟೆಗೂ ಅಧಿಕ ಸಮಯ ತಗೆದುಕೊಳ್ಳುತ್ತಿದ್ದು, ಪಟ್ಟಣದ ಸೈಬರ್‌ ಕೇಂದ್ರಗಳು ಸೇರಿ ಸೇವಾಕೇಂದ್ರಗಳಲ್ಲಿ ಜನದಟ್ಟಣೆ ಅಧಿಕವಾಗಿದೆ. ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಜನರು ಕಳೆದ ಮೂರ್ನಾಲ್ಕು ದಿನಗಳಿಂದ ತಮ್ಮ ದೈನಂದಿನ ಕೆಲಸ ಬದಿಗೊತ್ತಿ ನಿತ್ಯ ಮುಂಜಾನೆಯಿಂದ ಸಂಜೆವರೆಗೂ ಕಾದರೂ ಸಹಿತ ಸರ್ವರ್‌ ಸಮಸ್ಯೆಯಿಂದಾಗಿ ಕೆಲಸ ಆಗು​ತ್ತಿ​ಲ್ಲ. ಅಧಿಕಾರಿಗಳು ಆದಷ್ಟುಬೇಗ ಸಮಸ್ಯೆಗೆ ಪರಿಹಾರ ಒದಗಿಸಿ ಸುಲಲಿತವಾಗಿ ಅರ್ಜಿ ಸಲ್ಲಿಸಲು ಅನುವುಮಾಡಿಕೊಡಬೇಕೆಂದು ಜನರು ಒತ್ತಾಯಿಸಿದ್ದಾರೆ.

ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲವೇ, ಇಲ್ಲಿದೆ ನೋಡಿ ಸುಲಭ ಮಾರ್ಗ

ಆಧಾರ್‌ ತಿದ್ದುಪಡಿಗಾಗಿ ಕಳೆದೆರಡು ದಿನಗಳಿಂದ ಕೊಡೇಕಲ್‌ಗೆ ಆಗಮಿಸುತ್ತಿದ್ದೇನೆ. ಆಧಾರ್‌ ಕೇಂದ್ರದಲ್ಲಿನ ಜನದಟ್ಟಣೆಯಿಂದಾಗಿ ಬೇಗ ನೋಂದಾಯಿಸಲಾಗುತ್ತಿಲ್ಲ. ಇನ್ನೊಂದೆಡೆ ಸರ್ವರ್‌ ಸಮಸ್ಯೆಯಿಂದಾಗಿ ವಿಳಂಬವಾಗುತ್ತಿದೆ. ಆದ ಕಾರಣ ಕೊಡೇಕಲ್‌ನಲ್ಲಿ ಇನ್ನೊಂದು ಅಧಿಕೃತ ಆಧಾರ್‌ ಸೇವಾ ಕೇಂದ್ರ ಆರಂಭಿಸಬೇಕು.

ಶಿವಪ್ಪ ಬೂದಿಹಾಳ, ಗ್ರಾಮಸ್ಥರು.