ಬಾಗಲಕೋಟೆ: ಕಪ್ಪು ಬಣ್ಣಕ್ಕೆ ತಿರುಗಿದ ಘಟಪ್ರಭೆ, ಜನರಲ್ಲಿ ಆತಂಕ
* ಅಪಾಯದಲ್ಲಿ ಜಲಚರ ಜೀವಿಗಳು
* ನೀರಿನ ಸ್ಯಾಂಪಲ್ ವರದಿ ಬಳಿಕೆ ನಿಜಾಂಶ ಬಯಲಿಗೆ
* ನದಿ ನೀರು ಜಾನುವಾರುಗಳಿಗೆ ಕುಡಿಸಲು ಜನರ ಹಿಂದೇಟು
ಚಂದ್ರಶೇಖರ ಶಾರದಾಳ
ಕಲಾದಗಿ(ಜು.03): ಘಟಪ್ರಭ ನದಿ ಪಾತ್ರ ಭಾಗದ ಅನೇಕ ಹಳ್ಳಿಗಳ ಜನ, ಜಾನುವಾರು, ರೈತರಿಗೆ ಜಲ ಜೀವನಾಡಿಯಾದ ಘಟಪ್ರಭೆ ನದಿ ನೀರು ಕಳೆದ ಮೂರು ದಿನದಿಂದ ಕಪ್ಪಾಗಿದೆ. ಇದರಿಂದ ನದಿ ಪಾತ್ರದ ಜನರು ತಮ್ಮ ಜಾನುವಾರುಗಳಿಗೆ ನೀರು ಕುಡಿಸಲು ಹಿಂಜರಿಯುತ್ತಿದ್ದಾರೆ. ಇನ್ನು ಜಲಚರಗಳ ಪರಿಸ್ಥಿತಿ ಹೇಗೆ? ಜಾನುವಾರುಗಳಿಗೆ ನೀರು ಕುಡಿಯಬೇಕೋ ಅಥವಾ ಬೇಡವೋ ಎಂಬ ಜಿಜ್ಞಾಸೆ ಕೂಡ ರೈತರನ್ನು ಕಾಡುತ್ತಿದೆ. ಘಟಪ್ರಭೆ ನಿರಂತರವಾಗಿ ಬೆಳ್ಳಗೆ ಮತ್ತು ಮಳೆಗಾಲವೆಂಬ ಕಾರಣದಿಂದ ನಸು ಕೆಂಪಾಗಿ (ರಾಡಿ) ಹರಿಯುವುದನ್ನು ಈವರೆಗೂ ಕಾಣುತ್ತಿದ್ದ ಜನ, ಇದೀಗ ಕಪ್ಪು ನೀರು ನೋಡಿ ಆತಂಕಕ್ಕೆ ಒಳಗಾಗಿದ್ದಾರೆ.
ಕಪ್ಪು ಹೇಗೆ?:
ಹಿಂದೆಂದೂ ಕಪ್ಪಾಗಿ ಹರಿಯದ ಘಟಪ್ರಭೆ ಇತ್ತೀಚಿನ ದಿನಗಳಲ್ಲಿ ಕಪ್ಪಾಗಿ ಮಲಿನಗೊಂಡು ಹರಿಯುತ್ತಿರುವುದಕ್ಕೆ ಕಾರಣ ಕಾರ್ಖಾನೆಗಳಿಂದ ನದಿಗೆ ಬಿಡುತ್ತಿರುವ ತ್ಯಾಜ್ಯವೆಂದು ಸಾರ್ವಜನಿಕರು ಹೇಳುತ್ತಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು ಹಾಗೂ ಮುಧೋಳ ತಾಲೂಕಿನ ಕೆಲ ಕಾರ್ಖಾನೆಗಳಿಂದ ಅಪಾಯಕಾರಿ ತ್ಯಾಜ್ಯವನ್ನು ಘಟಪ್ರಭಾ ನದಿಗೆ ಬಿಡಲಾಗುತ್ತಿದೆ. ಇದೇ ಕಾರಣಕ್ಕೆ ನದಿಯ ಒಡಲು ಕಪ್ಪಾಗಿ, ಅಪಾಯಕಾರಿಯಾಗಲು ಕಾರಣ ಎನ್ನಲಾಗುತ್ತಿದೆ.
ಉದಗಟ್ಟಿ, ಶಾರದಾಳ, ಅಂಕಲಗಿ, ಕಲಾದಗಿ, ಚಿಕ್ಕಸಂಶಿ ಮುಂತಾದ ಊರುಗಳ ಸಮೀಪದ ಘಟಪ್ರಭೆಯ ನದಿಯ ಹರಿವಿನಲ್ಲಿ ಕಣ್ಣು ಹಾಯಿಸಿದರೆ ಕಪ್ಪು ನೀರು ಕಣ್ಣಿಗೆ ಕಾಣುತ್ತಿದೆ. ಇದರಿಂದಾಗಿ ನದಿಯ ನೀರನ್ನು ಜಾನುವಾರುಗಳಿಗೆ ಕುಡಿಸಲು ಜನ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ನದಿ ನೀರು ಕಪ್ಪಾಗಿರುವುದರಿಂದ ಮೀನು, ಕಪ್ಪೆ, ಹಾವು, ಏಡಿ ಇನ್ನಿತರ ಜಲಚರ ಜೀವಿಗಳು ಒದ್ದಾಡುತ್ತಿವೆ. ಸಣ್ಣ ಮೀನುಗಳು ಮತ್ತು ಏಡಿಗಳು ಸತ್ತು ನದಿ ದಂಡೆಯ ಬಳಿ ಸತ್ತು ಬಿದ್ದಿವೆ. ಇವುಗಳನ್ನು ನೋಡಿ ಜನರು ಮತ್ತಷ್ಟು ಆತಂಕಗೊಂಡಿದ್ದಾರೆ.
ಕುಡಿಯುವ ನೀರು ವಿಷ?:
ನದಿ ನೀರು ಕಪ್ಪಾಗಿ ಹರಿಯುತ್ತಿರುವುದರಿಂದ ಅಂತರ್ಜಲವು ವಿಷಕಾರಿಯಾಗುವುದನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ಭೂಗೋಳ ತಜ್ಞರು. ನದಿ ಪಾತ್ರದ ಗ್ರಾಮದಲ್ಲಿ ಕುಡಿಯುನ ನೀರಿನ ಕೊಳವೆ ಬಾವಿಗಳು ನದಿ ಜಲಮೂಲದಿಂದಲೇ ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತವೆ. ನದಿಯ ಸ್ವಲ್ಪ ದೂರದಲ್ಲಿಯೇ ಇವೆ ಈ ಕೊಳವೆ ಬಾವಿಗಳು. ಇದರಿಂದ ಕುಡಿಯುವ ನೀರಿನ ಕೊಳವೆ ಬಾವಿಯಲ್ಲಿ ತ್ಯಾಜ್ಯ ವಿಷಯುಕ್ತ ನೀರು ಮಿಶ್ರಣವಾಗುತ್ತಿದೆಯೇ ಎಂಬ ಅನುಮಾನ ಕೂಡ ಇದೆ.
ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ
ವಿಷಕಾರಿ ತ್ಯಾಜ್ಯದಿಂದ ಕಪ್ಪಾಗಿದೆ ಎಂದು ಹೇಳಲಾಗುತ್ತಿರುವ ಘಟಪ್ರಭೆಯ ನೀರಿನಿಂದ ಏನಾದರೂ ಜನ, ಜಾನುವಾರುಗಳಿಗೆ ಅನಾಹುತಗಳು ಸಂಭವಿಸುವ ಮೊದಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಮುಖ್ಯವಾಗಿ ಜಲ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿಗಳು ಘಟಪ್ರಭೆಯ ಒಡಲು ಹೀಗೆ ಕಪ್ಪಾಗಿರುವುದಕ್ಕೆ ಕಾರಣ ಗುರುತಿಸಬೇಕು. ಕಾರ್ಖಾನೆಯ ತ್ಯಾಜ್ಯವನ್ನು ನದಿಗೆ ಬಿಡುತ್ತಿರುವುದೇ ನಿಜವಾದರೆ ಕೂಡಲೇ ಅದನ್ನು ತಡೆಯುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟಪ್ರಭಾ ನದಿ ನೀರು ಕಪ್ಪಾಗಿ ಹರಿಯುತ್ತಿರುವುದು ಗಮನಕ್ಕೆ ಬಂದಿದೆ. ಕಳೆದೆರಡು ದಿನದ ಹಿಂದೆ, ಅನಗವಾಡಿ ಬ್ರಿಡ್ಜ್ ಬಳಿಯ, ಕಲಾದಗಿ ಕಾತರಕಿ, ಮಾಚಕನೂರು ಬಳಿಯ ನೀರು ಸ್ಯಾಂಪಲ್ ಪಡೆದು ಪರೀಕ್ಷೆಗೆಂದು ಬೆಳಗಾವಿ ಲ್ಯಾಬೋರೇಟರಿಗೆ ಕಳುಹಿಸಲಾಗಿದೆ. ಕಾರ್ಖಾನೆಯ ತ್ಯಾಜ್ಯ ನದಿಗೆ ಬಿಡಲಾಗಿದೆ ಎಂದು ಹೇಳಲಾಗುವುದಿಲ್ಲ. ಟೆಸ್ಟ್ ವರದಿ ಬಳಿಕ ಗೊತ್ತಾಗಲಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ ತಿಳಿಸಿದ್ದಾರೆ.
ನದಿ ನೀರು ಹೊಲಕ್ಕೆ ಹಾಯಿಸಿದಲ್ಲಿ ಹೊಲಗಳು ಗಬ್ಬೆದ್ದು ನಾರುತ್ತಿವೆ. ಘಟಪ್ರಭಾ ನದಿ ಪಾತ್ರದ ಸಮೀಪ ಇರುವ ಕೆಲವೊಂದು ಕಾರ್ಖಾನೆಗಳು ತ್ಯಾಜ್ಯವನ್ನು ನದಿಗೆ ಬಿಡುವುತ್ತಿರುವುದರಿಂದ ನದಿಯ ನೀರು ಕಪ್ಪಾಗುತ್ತಿದೆ ಎನ್ನುವ ಅನುಮಾನ ಇದೆ. ಇದು ಪ್ರತಿವರ್ಷವೂ ನಡೆಯುತ್ತದೆ. ಅಧಿಕಾರಿಗಳು, ಜನಪ್ರತಿನಿದಿಗಳು ಕ್ರಮಕೈಗೊಂಡು ಜನರ ಆತಂಕ ದೂರ ಮಾಡಬೇಕು ಎಂದು ಅಂಕಲಗಿ ಗ್ರಾಮಸ್ಥ ಬಸುರಾಜ ಬಿಲಕೇರಿ ಹೇಳಿದ್ದಾರೆ.