Asianet Suvarna News Asianet Suvarna News

ಕಲ​ಬು​ರಗಿ ಜಿಲ್ಲಾ​ದ್ಯಂತ ಪಿಂಚಣಿ ವಂಚನೆ ಹಗ​ರ​ಣ?

ಅನರ್ಹರ ಪಾಲಾಗುತ್ತಿದೆ ಬಹುಕೋಟಿ ಹಣ, ಹಲವು ಹಳ್ಳಿಗಳಲ್ಲಿ ಪಿಂಚಣಿ ಹಗರಣದ ಶಂಕೆ, ಊರಲ್ಲಿ ವಾಸವಿರೋರಿಗಿಂತಲೂ ಅಧಿಕ ಜನರಿಗೆ ಪಿಂಚಣಿ, ಇದು ಸಾಧ್ಯವೇ ಅನ್ನೋದೆ ಯಕ್ಷ ಪ್ರಶ್ನೆ. 

Pension Fraud Scandal in Kalaburagi district grg
Author
First Published Aug 23, 2023, 10:30 PM IST

ಕಲಬುರಗಿ(ಆ.23):  ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಹಲವು ಬಗೆ ಪಿಂಚಣಿ ಯೋಜನೆ ಮೂಲಕ ಮಾಸಿಕ ವಿತರಣೆಯಾಗುತ್ತಿರುವ ಲಕ್ಷಾಂತರ ರುಪಾಯಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅನರ್ಹರ ಪಾಲಾಗುತ್ತಿರುವ ಶಂಕೆ ಮೂಡಿದೆ.

ಯಡ್ರಾಮಿ ತಾಲೂಕಿನ ಮರುಗಾನೂರ್‌, ಅಫಜಲ್ಪುರ ತಾಲೂಕಿನ ಶೇಷಗಿರಿವಾಡಿ, ಚಿಂಚೋಳಿ ತಾಲೂಕಿನ ಒಂಟಿ ಗುಡಸಿ ಹಾಗೂ ಕಮಲಾಪುರ ತಾಲೂಕಿನ ವಡೇಗಾರ ಗ್ರಾಮಗಳಲ್ಲಿನ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪಟ್ಟಿಹಾಗೂ ಆಯಾ ಊರಿನ ಮತದಾರರ ಯಾದಿ ಪರಿಶೀಲನೆ ಮಾಡಿದಾಗ ಒಂದಕ್ಕೊಂದು ತಾಳೆಯಾಗಿಲ್ಲ. ಈ ನಾಲ್ಕೂ ಊರಲ್ಲಿ ವಾಸವಿರೋರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಿಂಚಣಿ ಫಲಾನುಭವಿಗಳೇ ಕಂಡಿರೋದು ಹಗರಣ ನಡೆದಿರುವ ಬಗ್ಗೆ ಬಲವಾದಂತಹ ಅನುಮಾನ ಹುಟ್ಟು ಹಾಕಿದೆ.

ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಮುಂದಾ​ಗಿ: ಸಚಿವ ಪ್ರಿಯಾಂಕ್‌ ಖರ್ಗೆ

ಅಚ್ಚರಿ ವಿಚಾರವೆಂದರೆ ಈ ಊರುಗಳಲ್ಲಿ ವಾಸವಿರುವ (ಮತದಾರರ ಯಾದಿಯಂತೆ) ಜನರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಪಿಂಚಣಿ ಮಂಜೂರಾಗಿದ್ದು, ಇದು ಹೇಗೆ ಸಾಧ್ಯ ಎಂಬುದೇ ಯಕ್ಷ ಪ್ರಶ್ನೆ. ವೃದ್ಧಾಪ್ಯ, ವಿಧವಾ, ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ, ರಾಷ್ಟ್ರೀಯ ಕುಟುಂಬ ನೆರವಿನ ಮಾಸಾಶನಗಳಲ್ಲಿ ವಂಚಕರ ಕೈಚಳಕ ನಡೆದ ಶಂಕೆ ವ್ಯಕ್ತ​ವಾ​ಗು​ತ್ತಿ​ದೆ.

ಎಲ್ಲವೂ ಆಯೋಮಯ: ಶೇಷಗಿರಿವಾಡಿಯಲ್ಲಿ ಮತದಾರರ ಯಾದಿಯಂತೆ 1,311 ಜನರಿದ್ದರೂ ಇಲ್ಲಿರುವ ಪಿಂಚಣಿ ಫಲಾನುಭವಿಗಳು 1,687. ಈ ಊರಿಗೆ ಮಾಸಿಕ 14.96 ಲಕ್ಷ ರು. ಪಿಂಚಣಿ ರೂಪದಲ್ಲಿ ಹಣ ಸಂದಾಯವಾಗುತ್ತಿದೆ. ಇದೇ ಊರಲ್ಲಿ ರಾಷ್ಟ್ರೀಯ ಕುಟುಂಬ ಯೋಜನೆಯಡಿ 38 ಫಲಾನುಭವಿಗಳಿಗೆ ಮಾಸಿಕ 7.60 ಲಕ್ಷದಂತೆ ವಾರ್ಷಿಕ 1.87 ಕೋಟಿ ರು. ಪಾವತಿಸುತ್ತಿದೆ.

1,024 ಜನರಿರುವ ಯಡ್ರಾಮಿ ತಾಲೂಕಿನ ಮರಗಾನೂರಲ್ಲಿ 1,047 ಜನ ಮಾಸಿಕ 14 ಲಕ್ಷ ರು. ವಿವಿಧ ಪಿಂಚಣಿ ಯೋಜನೆಯಲ್ಲಿ ಹಣ ಪಡೆಯುತ್ತಿದ್ದಾರೆ. ಕಮಲಾಪುರದಲ್ಲಿರುವ ವಡಗೇರಾದಲ್ಲಿಯೂ 293 ಮತದಾರರಿದ್ದರೂ 1,073 ಜನ ಪಿಂಚಣಿದಾರರಿದ್ದಾರೆ. 359 ಜನ ಮತದಾರರಿರುವ ಚಿಂಚೋಳಿಯ ವಂಟಿಗುಡಸಿ ತಾಂಡಾದಲ್ಲಿ 800 ಕ್ಕೂ ಹೆಚ್ಚು ಮಂದಿ ಪಿಂಚಣಿದಾರರಿದ್ದಾರೆ!

ಈ ಭಾಗದಲ್ಲಿ ಕೆಲಸ ಅರಸಿ ಗುಳೆ ಹೋಗೋದು ವಾಡಿಕೆ. ಹೀಗೆ ಗುಳೆ ಹೋದವರ ಹೆಸರಲ್ಲಿಯೂ ನಕಲಿ ಪಿಂಚಣಿ ಖಾತೆ ಹುಟ್ಟು ಹಾಕಲಾಗಿದೆಯೆ? ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ರೆವಿನ್ಯೂ ಇನ್ಸಪೆಕ್ಟರ್‌ ಹಂತದಲ್ಲಿ ಕೈಚಳಕ ಪ್ರದರ್ಶಿಸಲಾಗಿದೆಯೆ? ಎಂಬ ಪ್ರಶ್ನೆಗಳು ಮೂಡಿದ್ದು ತನಿಖೆ ನಡೆಸಿ ನಿಜಾಂಶ ಹೊರಗೆ ತರುವ ಕೆಲಸ ಜಿಲ್ಲಾಧಿಕಾರಿಗಳು ಮಾಡಬೇಕಿದೆ.

ಪಿಂಚಣಿ ‘ಮಾನದಂಡ’ಗಳೇ ಇಲ್ಲಿ ದಂಡ!

ಪಿಂಚಣಿ ಯೋಜನೆ ಫಲಾನುಭವಿಗಳಿಗೆ ಸರ್ಕಾರ ಹಲವು ಮಾನದಂಡ ವಿಧಿಸಿದೆ. ಬಡತನ ರೇಖೆಗಿಂತ ಕೆಳಗಿರಬೇಕು ಎಂಬುದು ಸಾಮಾನ್ಯ ನಿಯಮ, ಇನ್ನುಳಿದಂತೆ ಆಯಾ ಪಿಂಚಣಿಗೆ ವಯೋಮಿತಿ, ಇತರೆ ಕೆಲವು ಷರತ್ತುಗಳು ಹಾಕಲಾಗಿದೆ. ಈ ಗ್ರಾಮ​ಗ​ಳ​ನ್ನು ಪರಿಶೀಲಿಸಿದರೆ ಶೇ. 40 ಕ್ಕೂ ಹೆಚ್ಚು ಮಂದಿ ಸರ್ಕಾರದ ಯಾವ ಮಾನದಂಡಗಳಲ್ಲಿಯೂ ಕೂಡೋದಿಲ್ಲ, ಆದಾಗ್ಯೂ ಇವರೆಲ್ಲರೂ ಪಿಂಚಣಿದಾರರಾಗಿದ್ದಾರೆ!

ಶೇ.75ರಷ್ಟು ಅಂಗ ಊನತೆ ಇದ್ದವರಿಗೆ ಮಾತ್ರ ವಿಂಕಲಾಂಗ ಪಿಂಚಣಿ, 65 ವಯೋಮಿತಿ ಇದ್ದರೆ ಮಾತ್ರ ವೃದ್ಧಾಪ್ಯ ವೇತನ ಸಂಧ್ಯಾ ಸುರಕ್ಷಾ ಮಸಾಶನಕ್ಕೆ ಅರ್ಹರು ಎಂದಿದ್ದರೂ ಮುರಗಾನೂರಿನ ಶೇ. 40 ರಷ್ಟುಮಂದಿ ಇಂತಹ ಕನಿಷ್ಠ ಅರ್ಹತೆಗಳು ಇಲ್ಲದೆ ಇದ್ದರೂ ಪಿಂಚಣಿ ಪಡೆಯುತ್ತಿರೋದೇ ಅಚ್ಚರಿಯ ಸಂಗತಿ!

ವೃದ್ಧಾಪ್ಯ ವೇತನಕ್ಕೆ ಅರ್ಹತೆ ಇದ್ದರೂ ಪಿಂಚಣಿಗೆ ತನ್ನನ್ನು ಪರಿಗಣಿಸುತ್ತಿಲ್ಲವೆಂದು ವಯೋವೃದ್ಧನೋರ್ವ ನೊಂದು ತನ್ನ ಗೋಳು ತೋಡಿಕೊಂಡಾಗ ಈ ಪಿಂಚಣಿ ವಿಚಾರವಾಗಿ ಹೆಚ್ಚು ಪರಿಶೀಲನೆಗೆ ಮುಂದಾದ ಇಲ್ಲಿನ ಅಹಿಂದ ಚಿಂತಕರ ವೇದಿಕೆಯ ಸೈಬಣ್ಣ ಜಮಾದಾರ್‌ ಕಂದಾಯ ಇಲಾಖೆಯ ‘ಮಾಹಿತಿ ಕಣಜ’ ಮುಖಾಂತರ ಪಿಂಚಣಿ ಬಗ್ಗೆ ಇರುವ ಮಾಹಿತಿಯನ್ನೆಲ್ಲ ಕಲೆ ಹಾಕಿ ನೋಡಿದಾಗ ಮುರಗಾನೂರಲ್ಲಿ ಯಾವದೇ ಮಾನದಂಡದಲ್ಲಿ ಕೂಡದೆ ಹೋದವರೂ ಸಹ ಪಿಂಚಣಿ ಪಡೆಯುತ್ತಿರೋದನ್ನು ಗಮನಿಸಿ ದಂಗಾಗಿದ್ದಾರೆ.

ಕಲಬುರಗಿ: ಪೊಲೀಸ್‌ ವಶದಲ್ಲಿದ್ದ ಆರೋಪಿ ಅನುಮಾನಾಸ್ಪದ ಸಾವು

ಅಷ್ಟಕ್ಕೆ ಸುಮ್ಮನಿರದೆ ಕಂದಾಯ ಇಲಾಖೆ ಕಣಜದಿಂದ ’ಮಾಹಿತಿ’ಯನ್ನೆಲ್ಲ ಡೌನ್‌ಲೋಡ್‌ ಮಾಡಿಕೊಂಡು ತಮಗೆ ಚಿರಪರಿತವಾಗಿರುವ ವಿವಿಧ ತಾಲೂಕಿನ ಆಯ್ದ ಹಲವು ಹಳ್ಳಿಗಳಿಗೆ ಹೋಗಿ ನೋಡಿದಾಗ ಪಿಂಚಣಿ ಪಡೆಯುತ್ತಿರುವವರ ಪೈಕಿ ಶೇ. 45 ರಷ್ಟು ಅನರ್ಹರೇ ಗೋಚರವಾದಾಗ ಹಗರಣ ನಡೆದಿರುವ ಸಾಧ್ಯತೆ ಗಮನಿಸಿ ಜಿಲ್ಲಾದ್ಯಂತ ತನಿಖೆಯಾಗಬೇಕು. ಪಿಂಚಣಿ ಹಣ ಸೋರಿಕೆ ನಿಲ್ಲಬೇಕೆಂದು ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ.

ಈ ನಾಲ್ಕೇ ಊರಷ್ಟೇ ಅಲ್ಲ, ಕಲಬುರಗಿ ಜಿಲ್ಲೆಯ ಬಹುತೇಕ ಕಡೆ ಪಿಂಚಣಿ ಅನರ್ಹರ ಪಾಲಾಗುತ್ತಿರುವ ಪ್ರಕರಣಗಳು ಇದ್ದರೂ ಜಿಲ್ಲಾಡಳಿತ ಯಾಕೆÜ ಸುಮ್ಮನಿದೆಯೋ ಗೊತ್ತಿಲ್ಲ. ಕಲಬುರಗಿಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಪಿಂಚಣಿ ಅನರ್ಹರ ಪಾಲಾಗುತ್ತಿರುವ ಬಗ್ಗೆ ಎಚ್ಚರಿಸಿ ನಾನು ಕಂಡ ಅನೇಕ ವಾಸ್ತವ ಸಂಗತಿಗಳನ್ನು ವಿವರಿಸಿ ಗಮನ ಸೆಳೆದಿರುವೆ. ಬಹುಕೋಟಿ ಹಣದ ಸೋರಿಕೆ ನಿಲ್ಲಬೇಕು, ಮಾಸಾಶನ ಹೆಸರಲ್ಲಿ ಹಣ ಗುಳುಂ ಆಗುತ್ತಿದೆ. ತನಿಖೆ ನಡೆಯಬೇಕು, ಅಂದಾಗಲೇ ಪಿಂಚಣಿ ಹಣಕ್ಕೆ ಗಂಟು ಬಿದ್ದಿರುವ ವಂಚಕರು ಹೊರಬರುತ್ತಾರೆ ಎಂದು ಅಹಿಂದ ಚಿಂತಕರ ವೇದಿಕೆ ಅಧ್ಯಕ್ಷ ಸೈಬಣ್ಣ ಜಮಾದಾರ್‌ ತಿಳಿಸಿದ್ದಾರೆ.  

Follow Us:
Download App:
  • android
  • ios