'ಬಾಕಿ ವಿಮೆ ಹಣ ರೈತರ ಖಾತೆಗೆ ಶೀಘ್ರದಲ್ಲಿ ಜಮಾ'
* ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ, ಮನವಿ ಸಲ್ಲಿಸಿದ ಸಂಸದ ಸಂಗಣ್ಣ ಕರಡಿ
* ಸಂಸದ ಕರಡಿಗೆ ಸಚಿವೆ ಶೋಭಾ ಕರಂದ್ಲಾಜೆ ಭರವಸೆ
* ಅಧಿಕಾರಿಗಳಿಗೆ ಸೂಚನೆ ನೀಡಿ, ಕ್ರಮ ವಹಿಸುವಂತೆ ಸೂಚಿಸಲಾಗುವುದು: ಕರಂದ್ಲಾಜೆ
ಕೊಪ್ಪಳ(ಆ.06): ಜಿಲ್ಲೆಯಲ್ಲಿ ಬೆಳೆ ವಿಮೆ ಮಂಜೂರಿಯಾಗಿದ್ದರೂ ಪರಿಹಾರ ಮೊತ್ತ ರೈತರ ಖಾತೆಗೆ ಜಮೆಯಾಗದಿರುವ ಕುರಿತು ಕೇಂದ್ರ ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ, ಮನವಿ ಸಲ್ಲಿಸಿರುವ ಅವರು, ಜಿಲ್ಲೆಯಲ್ಲಿ ರೈತರ ಬೆಳೆ ವಿಮಾ ಪರಿಹಾರ ಮಂಜೂರಿಯಾಗಿದೆ. ಆದರೆ, ಅದು ರೈತರಿಗೆ ಬಿಡುಗಡೆಯಾಗಿಲ್ಲ. ಈ ಬಗ್ಗೆ ಅನೇಕ ಪತ್ರ ವ್ಯವಹಾರ ಮಾಡಿದರೂ ವಿಮಾ ಕಂಪನಿಗಳು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಆದ್ದರಿಂದ ಈ ದಿಸೆಯಲ್ಲಿ ಕ್ರಮವಹಿಸಿ, ರೈತರಿಗೆ ದೊರೆಯಬೇಕಾದ ಪರಿಹಾರವನ್ನು ಜಮೆ ಮಾಡಿಸುವಂತೆ ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿಯೇ ಸ್ಪಂದನೆ ಮಾಡಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಕ್ರಮ ವಹಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಗೆ ಹೆಚ್ಚುವರಿ ರಸಗೊಬ್ಬರ ನೀಡಲು ಕೇಂದ್ರ ಸಚಿವರಿಗೆ ಮನವಿ
ನಾಲ್ಕಾರು ವರ್ಷಗಳಿಂದ ಪರಿಹಾರ ಬಾಕಿ ಇದೆ. ಈ ಬಗ್ಗೆ ಇರುವ ಸಮಸ್ಯೆಯನ್ನು ಕಂಪನಿಗಳು ಬಗೆಹರಿಸಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಪದೇ ಪದೇ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಕೋಟ್ಯಂತರ ರುಪಾಯಿ ಬಾಕಿ ಇದೆ. ಹೀಗಾಗಿ, ಇದನ್ನು ಬಿಡುಗಡೆ ಮಾಡುವ ಅಗತ್ಯವನ್ನು ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದಿದ್ದಾರೆ.