ಕೊಪ್ಪಳ ಜಿಲ್ಲೆಗೆ ಹೆಚ್ಚುವರಿ ರಸಗೊಬ್ಬರ ನೀಡಲು ಕೇಂದ್ರ ಸಚಿವರಿಗೆ ಮನವಿ
* ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ರಸಗೊಬ್ಬರ ಮಂತ್ರಿ ಖೂಬಾ ಭೇಟಿಯಾದ ಅಮರೇಶ ಕರಡಿ
* ಎಲ್ಲೆಡೆ ಗುರಿ ಮೀರಿ ಬಿತ್ತನೆ ಮಾಡಿದ ರೈತರು
* ಗೊಬ್ಬರವಿಲ್ಲದೆ ರೈತರ ಪರದಾಟ
ಕೊಪ್ಪಳ(ಆ.02): ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ತೀವ್ರವಾಗಿದ್ದು, ಮುಂಗಾರು ಬೆಳೆ ಮತ್ತು ಬತ್ತದ ಬೆಳೆಗಾರರಿಗೆ ತೊಂದರೆ ಆಗುತ್ತಿದ್ದು, ಆದ್ಯತೆ ಮೇರೆಗೆ ಪೂರೈಕೆ ಮಾಡಬೇಕು ಎಂದು ಕೆಡಿಪಿ ಸದಸ್ಯ, ಬಿಜೆಪಿ ಯುವ ಮುಖಂಡ ಅಮರೇಶ ಕರಡಿ ಮನವಿ ಮಾಡಿದ್ದಾರೆ.
ಅವರು ಭಾನುವಾರ ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಎಲ್ಲೆಡೆ ಗುರಿ ಮೀರಿ ಬಿತ್ತನೆ ಮಾಡಿದ್ದಾರೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಆರಂಭದಲ್ಲಿ ಗೊಬ್ಬರ ಪೂರೈಕೆ ಮಾಡಲಾಗಿತ್ತು. ಹೆಸರು, ಉದ್ದು, ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ತೊಗರಿ ಸೇರಿದಂತೆ ಅನೇಕ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.
ಮೋದಿ ಕನಸು ಈಡೇರಿಸಲು ನಾನು ಬದ್ಧ: ರೈತರಿಗೆ ಸಾಲದಿಂದ ಮುಕ್ತಿ ಕೊಡಿಸಲು ಯತ್ನ
ಈಗ ಗೊಬ್ಬರದ ಅವಶ್ಯತೆ ಇದ್ದು, ಕೇಂದ್ರ ಸರ್ಕಾರ ಹಿಂದುಳಿದ ಮತ್ತು ಬರಗಾಲದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕೊಪ್ಪಳ ಜಿಲ್ಲೆಗೆ ಶೀಘ್ರ ಗೊಬ್ಬರ ಪೂರೈಕೆ ಮಾಡಬೇಕು. ಅಲ್ಲದೆ ತುಂಗಭದ್ರಾ ಜಲಾಶಯ ಸಕಾಲದಲ್ಲಿ ತುಂಬಿದ್ದು, ಸರ್ಕಾರ ನುಡಿದಂತೆ ನಡೆದು ಜುಲೈ ತಿಂಗಳಿನಲ್ಲಿಯೇ ಕಾಲುವೆಗೆ ನೀರು ಬಿಟ್ಟಿದೆ. ಆದ್ದರಿಂದ ಬತ್ತ ನಾಟಿಗೆ ಸಿದ್ಧತೆ ನಡೆದಿದ್ದು, ಗೊಬ್ಬರವಿಲ್ಲದೆ ರೈತರು ಪರದಾಡುತ್ತಿದ್ದಾರೆ. ಆದ್ದರಿಂದ ಯೂರಿಯಾ, ಡಿಎಪಿ ಸೇರಿದಂತೆ ವಿವಿಧ ರಸಗೊಬ್ಬರಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯ ಕೃಷಿ ಚಟುವಟಿಕೆಗಳ ಮಾಹಿತಿಯನ್ನು ಪಡೆದುಕೊಂಡ ಸಚಿವೆ ಶೋಭಾ ಕರಂದ್ಲಾಜೆ ಶೀಘ್ರ ರಸಗೊಬ್ಬರ ಸೇರಿದಂತೆ ಎಲ್ಲ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ಪೂರೈಸುವುದಾಗಿ ಭರವಸೆ ನೀಡಿದರು.
ಸಂಸದ ಸಂಗಣ್ಣ ಕರಡಿ ಅವರು ಗೊಬ್ಬರದ ಅವಶ್ಯಕತೆ ಕುರಿತು ನಮ್ಮ ಗಮನಕ್ಕೆ ತಂದಿದ್ದು, ಬೇಡಿಕೆ ಈಡೇರಿಸುವುದಾಗಿ ಸಚಿವ ಖೂಬಾ ಭರವಸೆ ನೀಡಿದ್ದಾರೆ ಎಂದು ಅಮರೇಶ ಕರಡಿ ತಿಳಿಸಿದ್ದಾರೆ.