Asianet Suvarna News Asianet Suvarna News

ವಿಜಯಪುರ: ಗೌರಿ ಗಣೇಶ ಹಬ್ಬ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ

ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ದಕ ಬಳಕೆಗೆ ಅವಕಾಶ, ವಾಹನಗಳ ಸಂಚಾರಕ್ಕೆ ಅಡೆತಡೆಯಾಗದಂತೆ ಮಂಟಪ ನಿರ್ಮಿಸಲು ಸೂಚನೆ

Peace Meeting by District Administration and Police in Vijayapura For Ganeshotsav grg
Author
Bengaluru, First Published Aug 26, 2022, 9:24 PM IST

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಆ.26): ಗೌರಿ ಗಣೇಶ ಹಬ್ಬದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಇಂದು(ಶುಕ್ರವಾರ) ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಶಾಂತಿ ಸಭೆ ನಡೆಯಿತು.  ಈ

ವೇಳೆ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ್‌ ಅವರು ಮಾತನಾಡಿ, ಕೆಲವು ಸಂದರ್ಭದಲ್ಲಿ ಶಾಂತಿಯನ್ನು ಕದಡುವಂತಹ ಮತ್ತು ಕಾನೂನು ವ್ಯವಸ್ಥೆಯನ್ನು ಹಾಳು ಮಾಡುವಂತಹ ಕೃತ್ಯಗಳು ನಡೆಯುತ್ತವೆ. ಹೀಗಾಗಿ ಹಬ್ಬದ ವೇಳೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಜಾಗೃತೆ ವಹಿಸಬೇಕು. ವಿಜಯಪುರ ಜಿಲ್ಲೆಯು ಶಾಂತಿ ಸೌಹಾರ್ದತೆಗೆ ಹೆಸರಾಗಿದೆ. ಈ ಪರಂಪರೆ ಮುಂದುವರೆಯಬೇಕು. ಆಗಸ್ಟ್ 30ರಿಂದ ಆಚರಿಸಲಾಗುವ ಗಣೇಶ ಹಬ್ಬವನ್ನು ಎಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸಬೇಕು. ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಕೂಡಿಸಬೇಕು. ಗಣೇಶ ಮಂಟಪ ನಿರ್ಮಿಸಲು ಮಹಾನಗರ ಪಾಲಿಕೆ, ವಿದ್ಯುತ್ ಸಂಪರ್ಕಕ್ಕೆ ಹೆಸ್ಕಾಂ, ಪೆಂಡಾಲಗೆ ಲೋಕೋಪಯೋಗಿ, ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಗಣೇಶ ಮಂಟಪಗಳಲ್ಲಿ ಅಶ್ಲೀಲ ಚಿತ್ರಗೀತೆಗಳು, ಕೋಮುಭಾವನೆ ಕೆರಳಿಸುವ ಹಾಡು ಮತ್ತು ಭಾಷಣ ಬಿತ್ತರಿಸಬಾರದು. ಗಣೇಶ ಮಂಟಪದಲ್ಲಿ ಅಥವಾ ಮೆರವಣಿಗೆಯಲ್ಲಿ ಕೋಮುಪ್ರಚೋದಿತ, ಬಿತ್ತಿ ಪತ್ರ ಬ್ಯಾನರ್, ಸ್ತಬ್ದ ಚಿತ್ರಗಳನ್ನು ಪ್ರದರ್ಶಿಸಬಾರದು. ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿದ ಸಮಯದಲ್ಲಿ ಮಂಟಪದಲ್ಲಿ ಕನಿಷ್ಟ ಪ್ರಮಾಣದ ಬೆಂಕಿ ನಂದಿಸುವ ಅಗ್ನಿ ಶಾಮಕ ಉಪಕರಣಗಳು, ನೀರು, ಮರಳು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

Kolar: ಗಣೇಶನಿಗೂ ಪ್ರಿಯರಾದ ನಗು ಮೊಗದ ರಾಜಕುಮಾರ ಅಪ್ಪು

ಸೌಹಾರ್ದತೆಯಿಂದ ಹಬ್ಬ ಆಚರಣೆ ಎಸ್ಪಿ ಕರೆ 

ಇದೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೆಚ್.ಡಿ.ಆನಂದಕುಮಾರ ಅವರು ಮಾತನಾಡಿ, ವಿಜಯಪುರ ಜಿಲ್ಲೆಯು ಸೌಹಾರ್ದತೆಗೆ ಹೆಸರಾಗಿದೆ. ಇದನ್ನು ನಾವು ಉಳಿಸಿಕೊಂಡು ಹೋಗೋಣ. ಈ ಹಬ್ಬದ ಉದ್ದೇಶವೇ ನಾವೆಲ್ಲರೂ ನೆಮ್ಮದಿಯಿಂದ ಇರಬೇಕು ಎನ್ನುವುದಾಗಿದೆ. ನಮ್ಮೆಲ್ಲರ ಸಂರಕ್ಷಣೆ ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿರುವ ಕೆಲವು ನೀತಿ ನಿಯಮಗಳನ್ನು ಸಾರ್ವಜನಿಕರು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು. ಗಣೇಶಮೂರ್ತಿಯ ಮೆರವಣಿಗೆಯನ್ನು ಪೊಲೀಸರಿಂದ ಅನುಮತಿ ಪಡೆದ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಕೊಂಡೋಯ್ಯದಂತೆ ಮತ್ತು ಮೆರವಣಿಗೆ ಸಮಯದಲ್ಲಿ ಕರ್ಕಶವಾದ ವಾದ್ಯಗಳು, ಬೆಂಕಿ ಆಟಗಳನ್ನು ಪ್ರದರ್ಶಿಸಬಾರದು ಎಂದು ತಿಳಿಸಿದರು. ಗಣೇಶ‌ ಮಂಟಪದಲ್ಲಿ ಸಮೀಪದ ಪೊಲೀಸ್ ಠಾಣೆ, ಹೆಸ್ಕಾಂ, ಅಗ್ನಿಶಾಮಿಕ ಠಾಣೆ, ಸಂಘಟನೆಕಾರ ಪದಾಧಿಕಾರಿಗಳ ಮೊಬೈಲ್ ನಂಬರ್ ಹೊಂದಿರುವ ಫಲಕವನ್ನು ತೂಗು ಹಾಕಬೇಕು. ಗಣೇಶ ಮೂರ್ತಿ ವೀಕ್ಷಿಸಲು ಬರುವ ಸಾರ್ವಜನಿಕರಿಂದ, ಭಕ್ತಾದಿಗಳಿಂದ ಒತ್ತಾಯವಾಗಿ ಚಂದಾ ವಸೂಲಿ, ಪ್ರವೇಶ ಶುಲ್ಕ, ಲಾಟರಿ ಮೂಲಕ ಹಣ ಪಡೆಯದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಾಂಪ್ರದಾಯಿಕ ಹಬ್ಬ ಆಚರಣೆಗೆ ಸಹಕರಿಸಿ 

ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ, ಈಗಾಗಲೇ ಹಲವಾರು ಬಾರಿ ಹಬ್ಬಗಳನ್ನು ಆಚರಣೆ ಮಾಡಿದ ಅನುಭವ ನಮಗಿದೆ. ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ತಾವು ತಮ್ಮ ಮಂಡಳಿಯ ಇನ್ನೀತರ ಎಲ್ಲರಿಗೂ ತಿಳಿಸಿ ಶಾಂತಿಯುತ ಹಬ್ಬ ಆಚರಣೆಗೆ ಸಹಕರಿಸಬೇಕು. ಡಾಲ್ಟಿ ಡಿಜೆ ಸೌಂಡ್ ಸಿಸ್ಟಂ ಬದಲಿಗೆ ಭಜನೆ, ಡೊಳ್ಳಿನ‌ ಮೂಲಕ ಸಾಂಪ್ರದಾಯಿಕ ರೀತಿಯಲ್ಲಿ ಹಬ್ಬದಾಚರಣೆಗೆ ಸಹಕರಿಸಬೇಕು ಎಂದು ಸಭೆಯ ಮೂಲಕ ಮನವಿ ಮಾಡಿದರು.

ಗಣೇಶ ವಿಸರ್ಜನೆಗೆ ಕೃತಕ ಹೊಂಡ ನಿರ್ಮಾಣ 

ಅವಕಾಶವಿರುವ ಎಲ್ಲ ಕಡೆಗಳಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಿ ಗಣೇಶ ವಿಸರ್ಜನೆಗೆ ಅವಕಾಶ ಮಾಡಲಾಗುವುದು. ಜನರ ಬೇಡಿಕೆಯಂತೆ, ತಗ್ಗು ಗುಂಡಿ ಬಿದ್ದಿರುವ ನಗರದಲ್ಲಿನ ಕೆಲವು ರಸ್ತೆಗಳನ್ನು ದುರಸ್ತಿ ಮಾಡಲಾಗುದು. ಬೀದಿ ದೀಪಗಳಿಗೆ ವ್ತವಸ್ಥೆ ಮಾಡಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ‌ ಮೆಕ್ಕಳಕೆ ಅವರು ತಿಳಿಸಿದರು.

Ganesha Chaturthi: ಸಾರ್ವಜನಿಕರ ಬಳಿ ಪೀಡಿಸಿ ಚಂದಾ ಕೇಳಿದ್ರೆ ಕ್ರಿಮಿನಲ್ ಕೇಸ್‌

ಸಾರ್ವಜನಿಕರ ಸಲಹೆ ಆಲಿಸಿದ ಅಧಿಕಾರಿಗಳು 

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮೆರವಣಿಗೆ ಸಹಜವಾಗಿ ಇರುವುದರಿಂದ ಸುಗಮವಾಗಿ ಮೆರವಣಿಗೆ ನಡೆಸಲು ಅನುಕೂಲವಾಗುವಂತೆ ನಗರದ ಎಲ್ಲ ರೋಡಗಳನ್ನು ಕೂಡಲೇ ದುರಸ್ತಿ ಮಾಡಬೇಕು. ಮಣ್ಣಿನ ಗಣಪತಿಗಳನ್ನು ಜನರ ಅವಶ್ಯಕತೆಗೆ ತಕ್ಕಂತೆ ಪೂರೈಸಬೇಕು. ವಿಶೇಷವಾಗಿ ಹಬ್ಬದ ಸಂದರ್ಭದಲ್ಲಿ ಮದ್ಯಮಾರಾಟ ನಿಲ್ಲಿಸಬೇಕುಮಹಾನಗರ ಪಾಲಿಕೆಯಿಂದ ದೊಡ್ಡದಾದ ಹೊಂಡ ನಿರ್ಮಿಸಿ ಗಣೇಶ ಮೂರ್ತಿಗಳ‌ ವಿಸರ್ಜನೆಗೆ ಅವಕಾಶ ಮಾಡಬೇಕು ಎಂದು ಇದೆ ವೇಳೆ ವಿವಿಧ ಗಣೇಶ ಮಂಡಳಿಗಳ ಪ್ರಮುಖರು, ಸಾರ್ವಜನಿಕರು ಮತ್ತು ಗಣ್ಯರು ಸಭೆಗೆ ಸಲಹೆ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಾಜಶೇಖರ ಡಂಬಳ ಹಾಗೂ ಇತರರು ಇದ್ದರು. 
 

Follow Us:
Download App:
  • android
  • ios