Kolar: ಗಣೇಶನಿಗೂ ಪ್ರಿಯರಾದ ನಗು ಮೊಗದ ರಾಜಕುಮಾರ ಅಪ್ಪು

ನಗು ಮೊಗದ ರಾಜಕುಮಾರ ಅಪ್ಪು ಅವರ ಫೋಟೋಗಳು ಎಲ್ಲೆಡೆ ರಾರಾಜಿಸುತ್ತಿವೆ. ಹಬ್ಬ,ಜಾತ್ರೆ ,ಮೆರವಣಿಗೆಗಳಲ್ಲಿ ಪುನೀತ್ ಪೋಸ್ಟರ್‌ಗಳದ್ದೇ ಹವಾ. ಇದೀಗ ಅಭಿಮಾನಿಗಳು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು,ಗೌರಿ ಗಣೇಶ ಹಬ್ಬಕ್ಕೆ ಪುನೀತ್ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

puneeth rajkumar statue along with ganesha statue at kolar gvd

ವರದಿ: ದೀಪಕ್ ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಆ.26): ನಗು ಮೊಗದ ರಾಜಕುಮಾರ ಅಪ್ಪು ಅವರ ಫೋಟೋಗಳು ಎಲ್ಲೆಡೆ ರಾರಾಜಿಸುತ್ತಿವೆ. ಹಬ್ಬ,ಜಾತ್ರೆ ,ಮೆರವಣಿಗೆಗಳಲ್ಲಿ ಪುನೀತ್ ಪೋಸ್ಟರ್‌ಗಳದ್ದೇ ಹವಾ. ಇದೀಗ ಅಭಿಮಾನಿಗಳು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು,ಗೌರಿ ಗಣೇಶ ಹಬ್ಬಕ್ಕೆ ಪುನೀತ್ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಹೌದು! ಈ ಬಾರಿ ಗೌರಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅನುಮತಿ ಸಿಕ್ಕಿರುವ ಹಿನ್ನೆಲೆ ಜೀವಕಳೆ ಬಂದಿದೆ. ಈಗಾಗಲೇ ಮಾರುಕಟ್ಟೆಗಳಲ್ಲಿ ತರಹೇವಾರಿ ಗಣೇಶನ ಮೂರ್ತಿಗಳು ಸಹ ಲಗ್ಗೆ ಇಟ್ಟಿದೆ. 

ಕೋವಿಡ್ ಇದ್ದಿದ್ದರಿಂದ 2020 ಹಾಗೂ 2021ನೇ ಇಸವಿಗಳಲ್ಲಿ ಸರಳವಾಗಿ ಆಚರಿಸಲು ನೀಡಲಾಗಿತ್ತು. ಹಾಗಾಗಿ ಈ ಬಾರಿ ಎಲ್ಲೆಡೆ ಗೌರಿ ಗಣೇಶ ಹಬ್ಬದ ತಯಾರಿ ಜೋರಾಗಿದೆ. ಇದರ ನಡುವೆ ಚಿನ್ನದ ನಾಡು ಕೋಲಾರ ಜಿಲ್ಲೆಯಲ್ಲಿ ಗೌರಿ ಗಣೇಶ ಮೂರ್ತಿಯ ಜೊತೆ ನಗು ಮೊಗದ ರಾಜಕುಮಾರ ಅಪ್ಪು ಮನೆಗೆ ಬರ್ತಿದ್ದಾರೆ. ಈಗಾಗಲೇ ಗಣೇಶ ಮೂರ್ತಿಗಳ ಜೊತೆ ಪುನೀತ್ ಅವರ ಮೂರ್ತಿಗಳು ತಯಾರಿಕೆ ಸಾಗುತ್ತಿದೆ. ಪುನೀತ್ ಅವರು ನಿಧನರಾದ ಬಳಿಕ ಬಹುತೇಕ ಎಲ್ಲಾ ಜಾತ್ರೆ, ಮೆರವಣಿಗೆ, ಕಾರ್ಯಕ್ರಮಗಳಲ್ಲಿ ಪುನೀತ್‌ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಇದೀಗ ಗಣೇಶ ಹಬ್ಬದಲ್ಲೂ ಪುನೀತ್‌ ಮೂರ್ತಿಗಳ ಹವಾ ಶುರುವಾಗಿದ್ದು, ಭಾರಿ ಬೇಡಿಕೆ ಹೆಚ್ಚಾಗಿದೆ. 

Chitradurga: ಗಣೇಶನ ಮೂರ್ತಿಗಳ ಮಧ್ಯೆ ಕಂಗೊಳಿಸುತ್ತಿರುವ ಅಪ್ಪು ಪ್ರತಿಮೆ

ಪುನೀತ್‌ ರಾಜ್‌ಕುಮಾರ್‌ ಅಪ್ಪಟ ಅಭಿಮಾನಿಯಾಗಿರುವ ಕೋಲಾರ ಜಿಲ್ಲೆಯ ಗಾಂಧಿನಗರದ ಭೀಮರಾಜ್‌ ಕುಟುಂಬ ವೈವಿಧ್ಯಮಯವಾಗಿ ಅಪ್ಪು ಸಮೇತ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡು, ಅಗಲಿದ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ. ಪ್ರಮುಖವಾಗಿ ಇಲ್ಲಿ ಅಪ್ಪು ಅವರ ನಗು ಮುಖ, ಅವರ ಹೇರ್‌ ಸ್ಟೈಲ್‌, ಪಾರಿವಾಳದ ಜೊತೆಗಿರುವ ಗಣೇಶ–ಅಪ್ಪು, ಗಣಪನ ಮಡಿಲಲ್ಲಿರುವ ಪುನೀತ್‌, ಅಪ್ಪುವನ್ನು ಮುದ್ದು ಮಾಡುತ್ತಿರುವ ಗಣೇಶ, ಪುನೀತ್‌ಗೆ ಮೋದಕ ತಿನ್ನಿಸುತ್ತಿರುವ ಗಣೇಶನ ಮೂರ್ತಿಗಳನ್ನು ಜೇಡಿ ಮಣ್ಣಿನಿಂದ ಸಿದ್ದಪಡಿಸಿರುವುದು ವಿಶೇಷ. 

ಇನ್ನು ಸಂಪೂರ್ಣವಾಗಿ ಇವೆಲ್ಲ ಪರಿಸರಕ್ಕೆ ಹಾನಿ ಉಂಟು ಮಾಡದೆ ಇರುವ ಮೂರ್ತಿಗಳು ಆಗಿರೋದ್ರಿಂದ ಮನೆಗಳಲ್ಲಿ ಹಾಗೂ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಲು ಯುವಕರು ಖರೀದಿ ಮಾಡ್ತಿದ್ದಾರೆ. ಗೌರಿ ಗಣೇಶ ಮೂರ್ತಿಗಳ ಜೊತೆ ನಗು ಮೊಗದ ರಾಜಕುಮಾರ ಅಪ್ಪು ಮೂರ್ತಿಯನ್ನೂ ಬರಮಾಡಿಕೊಳ್ಳುತ್ತಿದ್ದಾರೆ. ಗಣೇಶನ ಜೊತೆ ಇರುವ ಅಪ್ಪು ಮೂರ್ತಿಗಳಿಗೆ ಗಾತ್ರಕ್ಕೆ ಅನುಗುಣವಾಗಿ 300 ರೂಪಾಯಿರಿಂದ 3 ಸಾವಿರದವರಿಗೂ ಮಾರಾಟವಾಗ್ತಿದೆ. ಇನ್ನು ಭೀಮರಾಜ್‌ ಕುಟುಂಬ ಕಳೆದ 40 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. 

‘ಪುನೀತ್‌’ ಉಪಗ್ರಹ ಡಿ.31ರೊಳಗೆ ಉಡಾವಣೆ: ಸಚಿವ ಅಶ್ವತ್ಥನಾರಾಯಣ

ಪತ್ನಿ ನಾಗರತ್ನಾ ಮಕ್ಕಳಾದ  ಗಣೇಶ್‌, ಮುತ್ತುರಾಜ್‌, ಭಾನು ಸಹ ಕೈ ಜೋಡಿಸುತ್ತಿದ್ದಾರೆ. ಮತ್ತೊಂದು ವಿಶೇಷ ಅಂದರೆ ಈಗಾಗಲೇ ತಯಾರು ಮಾಡಿರುವ ಅಪ್ಪು ಇರುವ 30 ಗಣೇಶ ವಿಗ್ರಹಗಳ ಪೈಕಿ ಗಣೇಶ ಹಾಗೂ ಪಾರಿವಾಳ ಜೊತೆಗಿರುವ ಅಪ್ಪು ಮೂರ್ತಿಯನ್ನು ಪುನೀತ್ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕಳುಹಿಸಿಕೊಡಲು ಭೀಮರಾಜ್ ಕುಟುಂಬ ಸಿದ್ಧತೆ ಮಾಡಿಕೊಳ್ತಿದೆ. ಒಟ್ಟಾರೆ ಮಾರುಕಟ್ಟೆಯಲ್ಲಿ ಈ ಬಾರಿಯ ಗೌರಿ ಗಣೇಶನ ಹಬ್ಬಕ್ಕೆ ಗಣಪನ ಜೊತೆ ನಗು ಮೊಗದ ರಾಜಕುಮಾರ ಅಪ್ಪುಗೂ ಅಭಿಮಾನಿಗಳು ಸ್ಥಾನ ನೀಡಿದ್ದು ದೇವರಂತೆ ಪೂಜೆ ಮಾಡಲು ತಯಾರಿ ಆಗ್ತಿದೆ.

Latest Videos
Follow Us:
Download App:
  • android
  • ios