ನಂಜನಗೂರು ಟಿಎಚ್ಒ ಡಾ ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ. ಆದರೆ ಪಿಡಿಒಗಳು ಪ್ರಶಾಂತ್ ಮಿಶ್ರಾ ಬೆಂಬಲಕ್ಕೆ ನಿಂತಿದ್ದಾರೆ.
ಮೈಸೂರು (ಆ.25): ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಅವರ ಆತ್ಮಹತ್ಯೆ ಸಂಬಂಧ ಸೂಕ್ತ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಬೇಕು. ಹಾಗೂ ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ(ಪಿಡಿಒ) ಕ್ಷೇಮಾಭಿವೃದ್ಧಿ ಸಂಘದವರು ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.
ನಾಗೇಂದ್ರ ಆತ್ಮಹತ್ಯೆ : ಮೈಸೂರು ಜಿಪಂ ಸಿಇಒ ವರ್ಗಾವಣೆ...
ಸಂಘದ ನೂರಾರು ಮಂದಿ ಸದಸ್ಯರು ಹುಣಸೂರು ರಸ್ತೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಗೆ ಆಗಮಿಸಿ, ಪ್ರಾದೇಶಿಕ ಆಯುಕ್ತ ಪ್ರಕಾಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಮೇಲೆ ಆರೋಪ ಹೊರಿಸಿರುವುದು ಹಾಗೂ ಪೊಲೀಸರ ತನಿಖೆಯ ವರದಿ ಬರುವ ಮೊದಲೇ ಸಿಇಒ ಅವರನ್ನು ವರ್ಗಾವಣೆಗೊಳಿಸಿರುವುದು ಸರಿಯಲ್ಲ. ಈ ವರ್ಗಾವಣೆ ಆದೇಶವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
‘ಕರ್ತವ್ಯದಿಂದ ಬಿಡುಗಡೆ ಮಾಡುವಂತೆ 4 ಬಾರಿ ಮನವಿ :ಲೋಪ ಯಾರದ್ದು?...
ಡಾ.ನಾಗೇಂದ್ರ ಆತ್ಮಹತ್ಯೆಗೆ ನೇರವಾಗಿ ಸಿಇಒ ಅವರ ಹೆಸರನ್ನು ಎಳೆದು ತಂದು, ನಿಂದಿಸುತ್ತಿರುವುದು ಇಲಾಖೆಯ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ನೋವುಂಟಾಗಿದೆ ಎಂದು ತಿಳಿಸಿದರು. ಮನವಿ ಸಲ್ಲಿಸಲು ನೂರಾರು ಮಂದಿ ಪಿಡಿಒಗಳು ತಮ್ಮ ಕೆಲಸಕ್ಕೆ ರಜೆ ಹಾಕಿ, ಕಪ್ಪು ಪಟ್ಟಿಧರಿಸಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ಆವರಣಕ್ಕೆ ಆಗಮಿಸಿದ್ದರು.
