ನಂಜನಗೂಡು (ಆ.24):  ಆರಂಭದಲ್ಲಿ ಇಡೀ ರಾಜ್ಯದಲ್ಲಿಯೇ ನಂಜನಗೂಡಿನ ಜುಬಿಲಿಯಂಟ್‌ ಕಾರ್ಖಾನೆಯಲ್ಲಿ 70ಕ್ಕೂ ಹೆಚ್ಚು ಕಾರ್ಮಿಕರಿಗೆ ಸೋಂಕು ತಗುಲಿದಾಗ ಸಮೂದಾಯಕ್ಕೆ ಹರಡದಂತೆ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರು ನಂತರ ಬರುತ್ತಿದ್ದ ಒತ್ತಡದಿಂದ ‘ಕರ್ತವ್ಯ’ದಿಂದ ಬಿಡುಗಡೆ ಮಾಡುವಂತೆ ನಾಲ್ಕು ಬಾರಿ ಮನವಿ ಮಾಡಿದ್ದರೂ ‘ಲೋಪ’ ಎಸಗಿದವರು ಯಾರು? ಎಂಬ ಪ್ರಶ್ನೆ ಎದ್ದಿದೆ.

"

ಡಾ.ನಾಗೇಂದ್ರ ಅವರು ಸಿಬ್ಬಂದಿ ಕೊರತೆ ನಡುವೆಯೂ ಸುಮಾರು 5200 ಸ್ವಾಬ್‌ ಟೆಸ್ಟ್‌, 3655 ರಾರ‍ಯಪಿಡ್‌ ಟೆಸ್ಟ್‌ ಸೇರಿದಂತೆ ಸುಮಾರು 8855 ತಪಾಸಣೆ ನಡೆಸಿ 745 ಸೊಂಕಿತರನ್ನು ಪತ್ತೆಹಚ್ಚಿ ನಿರೀಕ್ಷೆಗೂ ಮೀರಿ ಸಮರ್ಥವಾಗಿ ಕೊರೋನಾವನ್ನು ನಿಯಂತ್ರಿಸಲು ಶ್ರಮಿಸಿದ್ದರು.

ಜಿಲ್ಲಾಡಳಿತ ಮತ್ತು ಮೇಲಧಿಕಾರಿಗಳು ಸಿಬ್ಬಂದಿ ಕೊರತೆ ನೀಗಿಸುವ ಬದಲಾಗಿ ಅವರಿಗೆ ದಿನ ನಿತ್ಯ ಶೇ.10ರಷ್ಟುಹೆಚ್ಚು ತಪಾಸಣೆ ನಡೆಸುವಂತೆ ತೀವ್ರ ಒತ್ತಡ ಹೇರುತ್ತಿದ್ದರು. ಈ ಒತ್ತಡ ಸಹಿಸದೆ ಅವರು ಪ್ರಭಾರ ಆರೋಗ್ಯಾಧಿಕಾರಿ ಸ್ಥಾನದಿಂದ ನನ್ನನ್ನು ವಿಮುಖಗೊಳಿಸುವಂತೆ 4 ಬಾರಿ ಮನವಿ ಮಾಡಿದ್ದರೂ ಸಹ ಅವರ ಮನವಿಯನ್ನು ಪುರಸ್ಕರಿಸಿರಲಿಲ್ಲ ಎನ್ನಲಾಗಿದೆ.

ಕೊರೋನಾ ಪರೀಕ್ಷೆಗೆ ಹೆದರಬೇಡಿ: ಜನತೆಗೆ ಸರ್ಕಾರದ ಮನವಿ...

ಜಿಲ್ಲೆಗೆ ಜಿಲ್ಲಾಧಿಕಾರಿಯೇ ಮುಖ್ಯಸ್ಥರು. ಜಿಪಂ ಸಿಇಒ ಮುಖ್ಯಸ್ಥರು. ಇಡೀ ಜಿಲ್ಲೆಯ ಆಡಳಿತ ಜಿಲ್ಲಾಧಿಕಾರಿ ಅಣಿತಿಯಂತೆ ನಡೆಯುತ್ತದೆ. ಅದೇ ರೀತಿ ಜಿಪಂ ವ್ಯಾಪ್ತಿಗೆ ಬರುವ ಇಲಾಖೆಗಳ ಆಡಳಿತ ಸಿಇಒ ಉಸ್ತುವಾರಿಯಲ್ಲಿ ನಡೆಯುತ್ತದೆ. ಇದಲ್ಲದೇ, ಆಯಾ ಇಲಾಖೆಗಳಿಗೆ ಜಿಲ್ಲಾ ಮಟ್ಟದಲ್ಲಿ ಮುಖ್ಯಸ್ಥರಿರುತ್ತಾರೆ. ಡಾ. ನಾಗೇಂದ್ರ ಕೆಲಸ ಮಾಡುವ ಆರೋಗ್ಯ ಇಲಾಖೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಒಚ್‌ಒ) ಮುಖ್ಯಸ್ಥರು. ನಾಗೇಂದ್ರ ರಜೆಯಾಗಲಿ, ಕರ್ತವ್ಯದಿಂದ ಬಿಡುಗಡೆ ಮಾಡುವುದೇ ಆಗಲಿ ಡಿಎಚ್‌ಒ ಅವರನ್ನು ಕೇಳಬೇಕು. ನೇರವಾಗಿ ಸಿಇಒ ಕೇಳುವಂತಿಲ್ಲ. ಹಾಗಾದರೆ ಡಾ.ನಾಗೇಂದ್ರ ಅವರ ಮನವಿಯನ್ನು ಪುರಸ್ಕರಿಸಿ, ಕರ್ತವ್ಯದಿಂದ ಬಿಡುಗಡೆ ಮಾಡಬೇಕಾದವರು ಯಾರು?.,

ಕೊರೋನಾ ತುರ್ತು ಪರಿಸ್ಥಿತಿ ಇದ್ದಿದ್ದರಿಂದ ಬಿಡುಗಡೆ ಮಾಡಲು ಬರುವುದಿಲ್ಲ ಎಂದಾದಲ್ಲಿ ಡಿಎಚ್‌ಒ ತಮ್ಮ ಮೇಲಿನ ಅಂದರೆ ಜಿಲ್ಲಾಧಿಕಾರಿ ಮತ್ತು ಸಿಇಒ ಗಮನಕ್ಕೆ ತಂದಿದ್ದರೆ? ಎಂಬ ಚರ್ಚೆಗಳು ನಡೆಯುತ್ತಿವೆ. ಇದಲ್ಲದೇ, ಜಿಪಂ ಸಿಇಒ ಕೂಡ ನೇರವಾಗಿ ಟಿಎಚ್‌ಒಗೆ ಕರೆ ಮಾಡುವ ಬದಲು ಆರೋಗ್ಯ ಇಲಾಖೆಯ ಜಿಲ್ಲಾ ಮುಖ್ಯಸ್ಥರಾದ ಡಿಎಚ್‌ಒ ಮೂಲಕ ಸೂಚನೆ ಕೊಡಿಸಬೇಕಿತ್ತು ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

ನಾಗೇಂದ್ರ ಆತ್ಮಹತ್ಯೆ : ಮೈಸೂ​ರು ಜಿಪಂ ಸಿಇಒ ವರ್ಗಾ​ವ​ಣೆ...

ಈ ರೀತಿಯ ಚರ್ಚೆಗಳು ಏನೇ ಇರಲಿ ಡಾ. ನಾಗೇಂದ್ರ ಅವರಂತಹ ವೈದ್ಯರ ಸೇವೆ ಸಮಾಜಕ್ಕೆ ಸುದೀರ್ಘ ಕಾಲ ದೊರಕಬೇಕಿತ್ತು. ಯಾರದೋ ತಪ್ಪಿಗೆ ಅವರು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ.

ತಾಲೂಕಿನ ಜನತೆ ಕಂಬನಿ:

ಡಾ.ನಾಗೇಂದ್ರ ಅವರ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ತಾಲೂಕಿನ ಜನತೆ ಕಂಬನಿ ಮಿಡಿದಿದ್ದಾರೆ.

ತಾಲೂಕಿನ ಬಿಳುಗುಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 8 ವರ್ಷ, ಕೂಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 4 ವರ್ಷ ಸೇವೆ ಸಲ್ಲಿಸುವ ಮೂಲಕ ಹಿರಿಯ ವೈದ್ಯಾಧಿಕಾರಿಯಾಗಿ ಅನುಭವ ಹೊಂದಿದ್ದರು. ಕಳೆದ ಜನವರಿಯಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಡಾ. ಕಲಾವತಿ ಅವರು ಬಡ್ತಿ ಪಡೆದು ಜಿಲ್ಲಾ ಕೇಂದ್ರಕ್ಕೆ ವರ್ಗಾವಣೆಗೊಂಡ ನಂತರ ಪ್ರಭಾರ ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ. ನಾಗೇಂದ್ರ ಅಧಿಕಾರ ವಹಿಸಿಕೊಂಡರು. ಆರೋಗ್ಯ ಇಲಾಖೆಯ ಸಿಬ್ಬಂದಿ ಜೊತೆಯಲ್ಲಿ ಸಾಮಾನ್ಯರಂತೆ ಬೆರೆಯುತ್ತಿದ್ದರಲ್ಲದೆ ಜನಸಾಮಾನ್ಯರ ಜೊತೆ ಉತ್ತಮ ಬಾಂಧವ್ಯವನ್ನು ಇರಿಸಿಕೊಂಡು ಸಭ್ಯ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದರು.

ಮಾಚ್‌ರ್‍ 26ರ ವೇಳೆಗೆ ಜುಬಿಲಿಯೆಂಟ್‌ ಕಾರ್ಖಾನೆಯಿಂದ ಮೊದಲ ಸೋಂಕಿತನಿಂದ ವಕ್ಕರಿಸಿದ ಕೊರೋನಾ ನಿಯಂತ್ರಿಸುವ ಸಲುವಾಗಿ ಹಗಲಿರುಳೆನ್ನದೆ ಸೇವೆಯಲ್ಲಿ ತೊಡಗುವ ಮೂಲಕ ಕೊರೋನಾವನ್ನು ಸಮರ್ಥವಾಗಿ ನಿಯಂತ್ರಿಸಲು ನೆರವಾಗಿದ್ದರು. ಅಲ್ಲದೆ ನಂಜನಗೂಡು ಕೊರೋನಾ ಮುಕ್ತವಾಗಲು ಶ್ರಮಿಸಿದ್ದರು.

ಲಾಕ್‌ಡೌನ್‌ ತೆರವಾದ ನಂತರ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದ ಸಂದರ್ಭದಲ್ಲೂ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಕೊರೋನಾ ನಿಯಂತ್ರಣ ಕೆಲಸದಲ್ಲಿ ತಾಲೂಕಿನಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ಎಲ್ಲೆಡೆ ಸಂಚರಿಸಿ ಕೊರೋನಾ ವಾರಿಯ​ರ್ಸ್ ಎನಿಸಿಕೊಂಡಿದ್ದರು.

ಬಾಡಿಗೆ ಮನೆಯಲ್ಲಿ ಒಂಟಿಯಾಗಿದ್ದರು:

ಕುಟುಂಬಕ್ಕೆ ಸೋಂಕು ತಗಲಬಹುದೆಂಬ ಉದ್ದೇಶದಿಂದ ಕಳೆದ 6 ತಿಂಗಳಿನಿಂದ ಬಾಡಿಗೆ ಮನೆ ಮಾಡಿಕೊಂಡು ಒಂಟಿಯಾಗಿ ವಾಸವಾಗಿದ್ದರು. ಒಂದು ದಿನವೂ ರಜೆ ಹಾಕದೆ ಸೊಂಕಿತರರೊಡನೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಸೊಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿ ಕೆಲಸದಲ್ಲಿ ತಮ್ಮದೇ ಛಾಪು ಮೂಡಿಸಿ ಸಾರ್ವಜನಿಕರ ಪ್ರಸಂಶೆಗೆ ಪಾತ್ರವಾಗಿದ್ದರು.