ಇನ್ನು ಮುಂದೆ ನಗರದಲ್ಲಿ ಬೇಕಾಬಿಟ್ಟಿ ಬೈಕ್‌, ಕಾರು ಪಾರ್ಕಿಂಗ್‌ ಮಾಡಲು ಅವಕಾಶವಿರಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಲ್ಲ ನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿ ಎರಡು ರೀತಿಯ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿ ಪೇ ಆ್ಯಂಡ್ ಪಾರ್ಕ್ ಜೊತೆಗೆ ಟೋಯಿಂಗ್‌ಗೂ ಮುಂದಾಗಿದ್ದು, ಶೀಘ್ರ ಜಾರಿಗೆ ಬರಲಿದೆ.

 ಬೆಂಗಳೂರು : ಇನ್ನು ಮುಂದೆ ನಗರದಲ್ಲಿ ಬೇಕಾಬಿಟ್ಟಿ ಬೈಕ್‌, ಕಾರು ಪಾರ್ಕಿಂಗ್‌ ಮಾಡಲು ಅವಕಾಶವಿರಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಲ್ಲ ನಗರ ಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿ ಎರಡು ರೀತಿಯ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿ ಪೇ ಆ್ಯಂಡ್ ಪಾರ್ಕ್ ಜೊತೆಗೆ ಟೋಯಿಂಗ್‌ಗೂ ಮುಂದಾಗಿದ್ದು, ಶೀಘ್ರ ಜಾರಿಗೆ ಬರಲಿದೆ.

ಅಗಲ ರಸ್ತೆಗಳಲ್ಲಿ ಅವಕಾಶ ಇರುವೆಡೆ ಆನ್‌ ಸ್ಟ್ರೀಟ್‌ ಪೇ ಪಾರ್ಕಿಂಗ್‌, ರಸ್ತೆ ಹೊರತುಪಡಿಸಿ ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆ ಮೈದಾನ ಹಾಗೂ ಗುರುತಿಸಿದ ಖಾಲಿ ಜಾಗಗಳಲ್ಲಿ ಆಫ್‌ ಸ್ಟ್ರೀಟ್‌ ಪೇ ಪಾರ್ಕಿಂಗ್‌ ಮಾಡಲಿವೆ. ಇದರ ಜತೆಗೆ ಬೇಕಾಬಿಟ್ಟಿ ಪಾರ್ಕಿಂಗ್‌ ಮಾಡಿ ಹೋದಲ್ಲಿ ಟೋಯಿಂಗ್‌ ಜಾರಿಗೆ ತಂದು ದಂಡ ವಿಧಿಸಲು ತೀರ್ಮಾನವಾಗಿದೆ. ಈ ಸಂಬಂಧ ಎಲ್ಲ ಐದು ಪಾಲಿಕೆಗಳು ಟೆಂಡರ್‌ ಕರೆದಿದ್ದು ಒಂದೆರಡು ವಾರದಲ್ಲಿ ಅಂತಿಮಗೊಳ್ಳಲಿದೆ. ಬಹುತೇಕ ಫೆಬ್ರವರಿ ಎರಡನೇ ವಾರದಿಂದ ಹಲವೆಡೆ ಇದು ಜಾರಿಯಾಗಲಿದೆ.

ಪೇ ಪಾರ್ಕ್‌:

ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸುವುದಕ್ಕೆ ಸ್ಥಳ ಮಾರ್ಕಿಂಗ್‌ ಮಾಡಲಾಗುತ್ತದೆ. ಗುರುತಿಸಿದ ಸ್ಥಳದಲ್ಲಿ ಮಾತ್ರ ವಾಹನ ನಿಲ್ಲಿಸುವುದಕ್ಕೆ ಅವಕಾಶ ಇರಲಿದೆ. ಒಂದು ತಾಸಿಗೆ ಬೈಕ್‌ಗೆ ₹ 15 ರು, ಕಾರಿಗೆ ₹ 30, ಇಡೀ ದಿನಕ್ಕೆ ಬೈಕ್‌ಗೆ ₹ 75, ಕಾರಿಗೆ ₹ 150 ಪಾವತಿಸಬೇಕಾಗಲಿದೆ. ಜತೆಗೆ ಪಾರ್ಕಿಂಗ್‌ಗೆ ಮಾಸಿಕ ಪಾಸ್‌ ವ್ಯವಸ್ಥೆ ಸಹ ಜಾರಿಗೊಳಿಸಲು ಪಾಲಿಕೆಗಳು ಯೋಜಿಸಿವೆ.

ಕೇಂದ್ರ ವಲಯ: ಇಲ್ಲಿ ಎರಡು ಪ್ಯಾಕೇಜ್‌ನಲ್ಲಿ ಟೆಂಡರ್‌ ಕರೆಯಲಾಗಿದೆ. ಕಮರ್ಷಿಯಲ್ ಸ್ಟ್ರೀಟ್, ಕೇಂಬ್ರಿಡ್ಜ್ ರಸ್ತೆ, ಫುಡ್ ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ಮಗ್ರತ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ಕ್ರೆಸೆಂಟ್ ರಸ್ತೆ ಹಾಗೂ ಸಂಪಿಗೆ ರಸ್ತೆ ಸೇರಿದಂತೆ ಮೊದಲ ಪ್ಯಾಕೇಜಲ್ಲಿ ಒಟ್ಟು 23 ರಸ್ತೆಗಳು ಸೇರಿವೆ. ಎರಡನೇ ಪ್ಯಾಕೇಜಲ್ಲಿ 80 ಫೀಟ್‌ ರೋಡ್‌, ಬ್ರಿಗೇಡ್‌ ರಸ್ತೆ ಸೇರಿ 13 ರಸ್ತೆ ಸೇರಿ ಒಟ್ಟೂ 35 ರಸ್ತೆ ಗುರುತಿಸಲಾಗಿದೆ.

ಪಶ್ಚಿಮ: ಪಶ್ಚಿಮ ನಗರ ಪಾಲಿಕೆ ಟೆಂಡರ್ ಆಹ್ವಾನ ಮಾಡಿದ್ದು, ಸಂಪಿಗೆ ರಸ್ತೆ, 11,15 ಹಾಗೂ 18ನೇ ಅಡ್ಡ ರಸ್ತೆಗಳಲ್ಲಿ ಪಾರ್ಕಿಂಗ್​ಗೆ ಶುಲ್ಕ ಸಂಗ್ರಹಿಸಲಿದೆ. ವಾರ್ಷಿಕ ಪರವಾನಗಿ ಪಡೆಯಲು ಬಯಸುವ ಏಜೆನ್ಸಿಗಳಿಗೆ ₹ 2.20 ಕೋಟಿ ಶುಲ್ಕವನ್ನು ನಿಗದಿ ಮಾಡಿದೆ. ಶಾಪಿಂಗ್ ಪ್ರಿಯರ ಹಾಟ್ ಸ್ಪಾಟ್​ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಪಾರ್ಕಿಂಗ್‌ ಜಾರಿ ಅನಿವಾರ್ಯ. ಇಲ್ಲಿ ಉಂಟಾಗುವ ಟ್ರಾಫಿಕ್‌ ತಡೆಗೂ ಇದು ನೆರವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.

ಉತ್ತರ: ಉತ್ತರ ಪಾಲಿಕೆಯು ವಾರದ ಹಿಂದೆ ಟೆಂಡರ್‌ ಕರೆದಿದೆ. ವರ್ಷಕ್ಕೆ 1.6 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ಟ್ರಾಫಿಕ್ ಹಬ್ ಅಂದರೆ ಹೆಬ್ಬಾಳ ಏರ್‌ಪೋರ್ಟ್ ರಸ್ತೆಯಲ್ಲಿ ಸಂಚಾರ ದಟ್ಟಣೆ, ಟ್ರಾಫಿಕ್ ಸಮಸ್ಯೆ ನಿವಾರಿಸಲು ಜಿಬಿಎ ನಿರ್ಧರಿಸಿದೆ. ಬಳಿಕ ಆಫ್‌ ಸ್ಟ್ರೀಟ್‌ ಪೇ ಪಾರ್ಕಿಂಗ್‌ ಮಾಡಲು ಜಾಗ ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ದಕ್ಷಿಣ: ದಕ್ಷಿಣ ನಗರ ಪಾಲಿಕೆಯಲ್ಲಿ ಆರಂಭಿಕವಾಗಿ ಜಯನಗರ ಕ್ಷೇತ್ರದಲ್ಲಿ ಪೇ ಪಾರ್ಕಿಂಗ್‌ ಟೆಂಡರ್‌ ಕರೆಯಲಾಗುತ್ತಿದೆ. ಸಂಚಾರಿ ಪೊಲೀಸರ ಜತೆ ಗುರುವಾರ ಸಭೆ ನಡೆಯುತ್ತಿದ್ದು ರಸ್ತೆಗಳ ಬಗ್ಗೆ ಅಂತಿಮ ತೀರ್ಮಾನ ಆಗಲಿದೆ ಎಂದು ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ತಿಳಿಸಿದರು.

ಪೂರ್ವ: ಪೂರ್ವ ನಗರ ಪಾಲಿಕೆಯು 6 ರಸ್ತೆಗೆ ಪೇ ಪಾರ್ಕಿಂಗ್‌ಗೆ ಟೆಂಡರ್‌ ಕರೆದಿತ್ತು. ಆದರೆ, ಗುತ್ತಿಗೆದಾರರು ಮುಂದೆ ಬಾರದ ಹಿನ್ನೆಲೆಯಲ್ಲಿ ರಿಟೆಂಡರ್‌ ಮಾಡಲು ಮುಂದಾಗಿದೆ.

ಜನರ ಅಸಮಾಧಾನ

ಪೇ ಪಾರ್ಕಿಂಗ್‌, ಟೋಯಿಂಗ್‌ ಕುರಿತ ಜಿಬಿಎ ನಿರ್ಧಾರ ಅಸಮಂಜಸ ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ. ದರವನ್ನು ಪರಿಷ್ಕೃತಗೊಳಿಸಿ ಕಡಿಮೆ ಮಾಡಬೇಕು. ಟೋಯಿಂಗ್‌ನಿಂದ ತೊಂದರೆ ಆಗಲಿದೆ ಎಂದಿದ್ದಾರೆ. ಜತೆಗೆ ಹೊಸ ಮಾದರಿಯಲ್ಲಿ ಟೆಂಡರ್‌ ಕರೆದಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕೂಡ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದು ಟೆಂಡರ್‌ ಮೊತ್ತ ಕಡಿಮೆಗೊಳಿಸಲು ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾರ್ಕಿಂಗ್ ವ್ಯವಸ್ಥೆ ಸುಗಮಗೊಳಿಸಲು ಎರಡು ರೀತಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ಉದ್ದೇಶಿಸಲಾಗಿದೆ. ಆನ್‌ ಸ್ಟ್ರೀಟ್‌ ಪೇ ಪಾರ್ಕಿಂಗ್‌, ಆಫ್‌ ಸ್ಟ್ರೀಟ್‌ ಪೇ ಪಾರ್ಕಿಂಗ್‌ ಜೊತೆಗೆ ಟೋಯಿಂಗ್‌ ಜಾರಿಗೆ ಮುಂದಾಗಿದ್ದೇವೆ. ಆನ್‌ ಸ್ಟ್ರೀಟ್‌ ರಸ್ತೆ ಪೇಯ್ಡ್‌ ಪಾರ್ಕಿಂಗ್‌ನಲ್ಲಿ ಯಲಹಂಕ 5 ಹಾಗೂ ಹೆಬ್ಬಾಳದಲ್ಲಿ 3 ರಸ್ತೆ ಗುರುತಿಸಲಾಗಿದ್ದು ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ.

ಪೊಮ್ಮಲ ಸುನೀಲ್‌ ಕುಮಾರ್‌, ಉತ್ತರ ಪಾಲಿಕೆ ಆಯುಕ್ತ