Bengaluru: ಗುತ್ತಿಗೆ ಆಧಾರದ ಟೋಯಿಂಗ್ ರದ್ದು ಕಷ್ಟಸಾಧ್ಯ: ಕಮಲ್ ಪಂತ್
* ಟೋಯಿಂಗ್ ವ್ಯವಸ್ಥೆ ಜಾರಿ ಬಗ್ಗೆ ರಾಜ್ಯ ಸರ್ಕಾರದಿಂದ ಸೂಕ್ತ ನಿರ್ಧಾರ
* ಬೆಂಗಳೂರಲ್ಲಿ ಕನಿಷ್ಠ 50 ಟೋಯಿಂಗ್ ವಾಹನಗಳ ಅಗತ್ಯ
* ನೋ ಪಾರ್ಕಿಂಗಲ್ಲಿ ವಾಹನ ನಿಲುಗಡೆ ಹೆಚ್ಚಳ
ಬೆಂಗಳೂರು(ಫೆ.13): ನಗರದಲ್ಲಿ ಗುತ್ತಿಗೆ ಆಧಾರದ ಟೋಯಿಂಗ್(Contract Basis Towing) ವ್ಯವಸ್ಥೆ ಸದ್ಯಕ್ಕೆ ಸ್ಥಗಿತವಾಗಿದ್ದು, ಮುಂದಿನ ದಿನಗಳಲ್ಲಿ ಟೋಯಿಂಗ್ ವ್ಯವಸ್ಥೆ ಜಾರಿ ಬಗ್ಗೆ ರಾಜ್ಯ ಸರ್ಕಾರ(Government of Karnataka) ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್(Kamal Pant) ಹೇಳಿದರು.
ಬಾಣಸವಾಡಿಯ ಖಾಸಗಿ ಶಾಲೆಯಲ್ಲಿ ಶನಿವಾರ ನಡೆದ ಸಂಚಾರ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಆಧಾರದ ಟೋಯಿಂಗ್(Towing) ಶಾಶ್ವತವಾಗಿ ರದ್ದುಗೊಳಿಸಿ, ಸರ್ಕಾರವೇ ಸಿಬ್ಬಂದಿ ನಿಯೋಜಿಸಿ ಟೋಯಿಂಗ್ ವ್ಯವಸ್ಥೆ ನೋಡಿಕೊಳ್ಳುವಂತೆ ಕೆಲವರು ಸಲಹೆ ನೀಡಿದ್ದಾರೆ. ಆದರೆ ಸದ್ಯಕ್ಕೆ ಗುತ್ತಿಗೆ ಆಧಾರದ ಟೋಯಿಂಗ್ ವ್ಯವಸ್ಥೆ ರದ್ದುಗೊಳಿಸುವುದು ಕಷ್ಟ. ಏಕೆಂದರೆ, ನಗರದಲ್ಲಿ ಕನಿಷ್ಠ 50 ಟೋಯಿಂಗ್ ವಾಹನಗಳ ಅಗತ್ಯವಿದೆ. ಇಲಾಖೆ ಬಳಿ ಟೋಯಿಂಗ್ ವಾಹನಗಳಿಲ್ಲ. ಹೊಸ ವಾಹನ ಖರೀದಿ, ಸಿಬ್ಬಂದಿ ನಿಯೋಜನೆ, ಅವರಿಗೆ ವೇತನದ ಬಗ್ಗೆ ಸರ್ಕಾರ ಚಿಂತನೆ ನಡೆಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.
ದಂಡ ಕಟ್ತೇನೆ ಎಂದರೂ ಬಿಡದೆ ಟ್ರಾಫಿಕ್ ಪೊಲೀಸರ ಅಟ್ಯಾಕ್.. ಪ್ರಶ್ನೆ ಮಾಡಿದ ಯುವಕನಿಗೆ ಅವಾಜ್
ಸಭೆಯಲ್ಲಿ ಬಾಣಸವಾಡಿ ಸಂಚಾರ ಠಾಣೆ ವ್ಯಾಪ್ತಿಯ ಪಾದಚಾರಿ ಮಾರ್ಗಗಳ ಒತ್ತುವರಿ, ಪಾದಚಾರಿ ಮಾರ್ಗಗಳ ದುರಸ್ತಿ, ರಸ್ತೆ ಹಂಫ್ಸ್‌ಗಳ ಬಗ್ಗೆ ದೂರು ಕೇಳಿ ಬಂದವು. ಕೆಲವರು ಹಂಫ್ಸ್ ಬೇಕು ಎಂದರೆ, ಮತ್ತೆ ಕೆಲವರು ಹಂಫ್ಸ್ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಇನ್ನು ಕೆಲವರು ಇಲ್ಲಿನ ಹಲವು ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿದೆ ಎಂದು ದೂರಿದರು.
ಸಾರ್ವಜನಿಕ ಅಹವಾಲುಗಳನ್ನು ಆಲಿಸಿದ ಪೊಲೀಸ್ ಆಯುಕ್ತರು(Commissioner of Police), ಪಾದಚಾರಿ ಒತ್ತುವರಿ ಮಾರ್ಗ ತೆರವು, ಅನಗತ್ಯ ರಸ್ತೆ ಹಂಫ್ಸ್‌ಗಳ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಂತೆಯೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸಮಸ್ಯೆ ಪರಿಶೀಲಿಸಿ ಪರಿಹರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಪೂರ್ವ ಸಂಚಾರ ವಿಭಾಗದ ಡಿಸಿಪಿ ಶಾಂತರಾಜು, ಸಂಚಾರ ವಿಭಾಗದ ಎಸಿಪಿ, ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್‌ಗಳು ಉಪಸ್ಥಿತರಿದ್ದರು.
ನೋ ಪಾರ್ಕಿಂಗಲ್ಲಿ ವಾಹನ ನಿಲುಗಡೆ ಹೆಚ್ಚಳ!
ನಗರದಲ್ಲಿ(Bengaluru) ನೋ ಪಾರ್ಕಿಂಗ್(No Parking) ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿದ್ದ ವಾಹನ(Vehicle) ಟೋಯಿಂಗ್ ಸ್ಥಗಿತಗೊಂಡು ವಾರ ಕಳೆದ ಬೆನ್ನಲ್ಲೇ, ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುವ ವಾಹನಗಳ ಸಂಖ್ಯೆ ಹೆಚ್ಚಾಗ ತೊಡಗಿದೆ. ಆದರೆ, ಸದ್ದಿಲ್ಲದೇ ವಾಹನಗಳ ಫೋಟೋ ಕ್ಲಿಕ್ಕಿಸುತ್ತಿರುವ ಪೊಲೀಸರು, ಪ್ರಕರಣ ದಾಖಲಿಸುತ್ತಿದ್ದಾರೆ.
ಟೋಯಿಂಗ್ ಸ್ಥಗಿತಗೊಂಡ ಬೆನ್ನಲ್ಲೇ ನಗರದ ಬಸವನಗುಡಿ, ವಿಶ್ವೇಶ್ವರಪುರ, ಹನುಮಂತನಗರ, ಜೆ.ಸಿ.ರಸ್ತೆ, ಲಾಲ್‌ಬಾಗ್ ರಸ್ತೆ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಮಹಾಲಕ್ಷ್ಮೇ ಲೇಔಟ್, ಇಂದಿರಾನಗರ, ಅಶೋಕನಗರ ಸೇರಿದಂತೆ ನಗರದ ಹಲವೆಡೆ ನೋ ಪಾರ್ಕಿಂಗ್ ಸ್ಥಳಗಳಲ್ಲೇ ಸವಾರರು ವಾಹನ ನಿಲುಗಡೆ ಮಾಡುತ್ತಿರುವುದು ಕಂಡು ಬಂದಿದೆ. ಸದ್ಯಕ್ಕೆ ಟೋಯಿಂಗ್ ಸ್ಥಗಿತವಾಗಿರುವುದರಿಂದ ವಾಹನ ನಿಲುಗಡೆ ಮಾಡಿದರೂ ತೊಂದರೆ ಇಲ್ಲ ಎಂಬ ಭಾವನೆಯಲ್ಲಿ ಸವಾರರು ನಿಲುಗಡೆ ಮಾಡುತ್ತಿದ್ದಾರೆ.
ಫೋಟೋ ಸಮೇತ ಕೇಸ್:
ವಾಹನಗಳ ಟೋಯಿಂಗ್ ವಿಚಾರದಲ್ಲಿ ಸಂಚಾರ ಪೊಲೀಸರು(Traffic Police), ಟೋಯಿಂಗ್ ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ಜಟಾಪಟಿ ನಡೆದು ರಾಜ್ಯದ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಸ್ವತಃ ಮುಖ್ಯಮಂತ್ರಿಗಳೇ ಮಧ್ಯೆ ಪ್ರವೇಶಿಸಿ ನಗರದಲ್ಲಿ ತಾತ್ಕಾಲಿಕವಾಗಿ ಟೋಯಿಂಗ್ ಸ್ಥಗಿತಗೊಳಿಸಲು ಸೂಚಿಸಿದ್ದರು. ಇದೀಗ ನಗರದಲ್ಲಿ ಟೋಯಿಂಗ್ ಸ್ಥಗಿತಗೊಂಡು ವಾರ ಕಳೆದಿದೆ. ಇದರ ಬೆನ್ನಲ್ಲೇ ಪೊಲೀಸರು ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುವ ವಾಹನಗಳ ಫೋಟೋ ತೆಗೆದು ಕೇಸ್ ಹಾಕುತ್ತಿದ್ದಾರೆ.
Vehicle Towing ಬೆಂಗಳೂರಿನಲ್ಲಿ 15 ದಿನ ಟೋಯಿಂಗ್ ತಾತ್ಕಾಲಿಕ ಸ್ಥಗಿತ!
ಈ ಹಿಂದೆ ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ವಾಹನಗಳನ್ನು ಸಂಚಾರ ಪೊಲೀಸರು ಟೋಯಿಂಗ್ ವಾಹನಗಳಲ್ಲೇ ಎಳೆದೊಯ್ದು ಕೇಸ್ ಹಾಕುತ್ತಿದ್ದರು. ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆದು ಕೇಸ್ ಹಾಕುವುದು ಹೊಸದೇನು ಅಲ್ಲ. ಆದರೆ, ಟೋಯಿಂಗ್ ಸ್ಥಗಿತವಾಗಿರುವುದರಿಂದ ಪೋಟೋ ತೆಗೆದು ಕೇಸ್ ಹಾಕುವುದನ್ನು ಸಂಚಾರ ಪೊಲೀಸರು ಚುರುಕುಗೊಳಿಸಿದ್ದಾರೆ.
ಮತ್ತೊಂದೆಡೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಮೆಜೆಸ್ಟಿಕ್ ಪ್ರದೇಶ ಸೇರಿದಂತೆ ವಾಣಿಜ್ಯ ಚಟುವಟಿಕೆಗಳ ಪ್ರದೇಶಗಳಲ್ಲಿ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಲು ಸವಾರರು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ನಿಲುಗಡೆ ಮಾಡಿದರೂ ಕೆಲವೇ ನಿಮಿಷಗಳಲ್ಲಿ ವಾಹನ ತೆಗೆದುಕೊಂಡು ಹೋಗುತ್ತಾರೆ. ಈ ಪ್ರದೇಶಗಳಲ್ಲಿ ಸಂಚಾರ ಪೊಲೀಸರು ಸದಾ ಗಸ್ತಿನಲ್ಲಿರುವುದರಿಂದ ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ಫೋಟೋ ತೆಗೆದುಕೊಂಡು ಕೇಸ್ ದಾಖಲಿಸುತ್ತಿದ್ದಾರೆ.