ಪಾವಗಡ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರು ತಮ್ಮ ಚಿಕ್ಕ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಪರಸ್ತ್ರೀ ಸಂಪರ್ಕವೇ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು/ತುಮಕೂರು (ಫೆ.17): ಪಾವಗಡ ತಾಲೂಕಿನಲ್ಲಿ ತನ್ನ ಗಂಡ ಪರಸ್ತ್ರೀ ಸಂಘ ಮಾಡಿಕೊಂಡು ಆಕೆಯೊಂದಿಗೆ ಅನೈತಿಕ ಸಂಬಂಧದಲ್ಲಿದ್ದಾನೆ ಎಂದು ಬೇಸತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತನ್ನ ಚಿಕ್ಕ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಬೆಂಗಳೂರಿನ ಬಾಗಲಗುಂಟೆಯಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಯ್ಯ ಲೇಔಟ್‌ನಲ್ಲಿ ಘಟನೆ ನಡೆದಿದೆ. ತನ್ನ ಚಿಕ್ಕ ಮಗಳನ್ನು ಕೊಲೆ ಮಾಡಿ ತಾನೂ ನೇಣು ಬಿಗಿದುಕೊಂಡಿದ್ದಾಳೆ. ಮೃತ ಮಗು ರೋಶಿಣಿ (5) ಹಾಗೂ ತಾಯಿ ಶೃತಿ (33) ಮೃತ ದುರ್ದೈವಿಗಳು. ನಿನ್ನೆ ಸಂಜೆ 6ಗಂಟೆ ಸುಮಾರಿಗೆ ಮನೆಯಲ್ಲಿ ಮಗುವನ್ನ ಕೊಂದು ಸಾವಿಗೆ ಶರಣಾಗಿದ್ದಾರೆ. ಇನ್ನು ಈ ಮಹಿಳೆ ಶೃತಿ ಪಾವಗಡ ತಾಲೂಕಿನ ಗ್ರಾಮವೊಂದರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಗಿದ್ದಳು.
ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣನನ್ನು ಕಳೆದ 10 ವರ್ಷದ ಹಿಂದೆ ಶೃತಿ ಮದುವೆ ಮಾಡಿಕೊಂಡಿದ್ದರು. ಈ ದಂಪತಿಗೆ ಇಬ್ಬರು (ಒಂದು ಗಂಡು, ಒಂದು ಹೆಣ್ಣು) ಮಕ್ಕಳಿದ್ದಾರೆ. ದೊಡ್ಡ ಮಗ ಹೊರಗಡೆ ಆಟವಾಡುತ್ತಿದ್ದರೆ, ಗಂಡ ಮನೆಯಿಂದ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದನು. ಈ ವೇಳೆ ಮನೆಯಲ್ಲಿದ್ದ ಚಿಕ್ಕ ಮಗುವಿನ ಕತ್ತು ಹಿಸುಕು ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾಳೆ. ಇನ್ನು ಆಟವಾಡಲು ಹೋಗಿದ್ದ ಮಗ ವಾಪಸ್ ಮನೆಗೆ ಬಂದಾಗ ತಾಯಿ ನೇಣಿನ ಕುಣಿಕೆಯಲ್ಲಿ ನೇತಾಡುವುದನ್ನು ಕಂಡು ಅಳುತ್ತಾ ನೆರೆಹೊರೆಯರನ್ನು ಕರೆದಿದ್ದಾನೆ. ಆಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಕುಟುಂಬದ ನಾಲ್ವರ ದುರಂತ ಅಂತ್ಯ; ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪೊಲೀಸರು!
ಇನ್ನು ಮಹಿಳೆಯ ಸಾವಿಗೆ ಕಾರಣ ಆಕೆಯ ಪತಿ ಗೋಪಾಲಕೃಷ್ಣ ಬೇರೊಬ್ಬ ಮಹಿಳೆ ಜೊತೆ ಸಂಪರ್ಕ ಹೊಂದಿದ್ದನಂತೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ. ಸದ್ಯ ಪತಿ ಗೋಪಾಲಕೃಷ್ಣನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ತನ್ನ ಗಂಡ ವಿವಾಹೇತರ ಸಂಬಂಧ ಹೊಂದಿದ್ದರ ಬಗ್ಗೆ ತಾನು ತುಂಬಾ ನೋವು ಅನುಭವಿಸಿದ್ದೇನೆ. ನಾನು ಇದ್ದರೂ ಮತ್ತೊಬಾಕೆ ಜೊತೆ ಸಂಬಂಧ ಇಟ್ಟುಕೊಂಡಿರುವುದೇ ನನ್ನ ಸಾವಿಗೆ ಕಾರಣ ಎಂದು ಉಲ್ಲೇಖ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗಳು ರೋಶಿಣಿ ಮತ್ತು ತಾಯಿ ಶೃತಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಇದೀಗ ಮೃತದೇಹಗಳನ್ನು ಕುಟುಂಬಸ್ಥರು ತುಮಕೂರಿನ ಶಿರಾಗೆ ತೆಗೆದುಕೊಂಡು ಹೋದರು.
ಇದನ್ನೂ ಓದಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ; ಪತಿಯ ಸಾವಿನ ಆಘಾತದಿಂದ ಪತ್ನಿಗೂ ಹೃದಯಾಘಾತ!
