ಯಾದಗಿರಿ (ಆ.22):  ದಿನೇ ದಿನೇ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಆಕ್ಸಿಜನ್‌ ಸಿಲೆಂಡರ್‌ಗಳ ಕೊರತೆ ಇದೀಗ ಸೋಂಕಿತರ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಿದೆ.

ಯಾದಗಿರಿ ಹೊರವಲಯದ ಮುದ್ನಾಳ್‌ ಬಳಿಯ ಕೋವಿಡ್‌ ವಿಶೇಷ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಲೆಂಡರ್‌ ಕೊರತೆಯಿಂದಾಗಿ ಸೋಂಕಿತರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ ಎಂಬ ಮಾತುಗಳ ಜೊತೆಗೆ, ಸಕಾಲದಲ್ಲಿ ಆಕ್ಸಿಜನ್‌ ಸಿಗದೆ ಇತ್ತೀಚೆಗೆ ರೋಗಿಗಳಿಬ್ಬರು ಸಾವನ್ನಪ್ಪಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಸೋಂಕಿ​ತರು ಗಣ​ನೀಯ ಏರಿ​ಕೆ:

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನಾಲ್ಕು ಸಾವಿರ ದಾಟಿದೆ. ಮೇ ಹಾಗೂ ಜೂನ್‌ ಆರಂಭದಲ್ಲಿ ದೃಢ​ಪ​ಟ್ಟಿದ್ದ ಸೋಂಕಿ​ತ​ರಿ​ಗಿಂತ ದುಪ್ಪಟ್ಟು ಪ್ರಕರಣಗಳು ಈಗ ಪತ್ತೆಯಾಗುತ್ತಿದೆ. ಸಮುದಾಯದಲ್ಲಿ ಸೋಂಕು ಹರಡಿರುವುದು ಮತ್ತಷ್ಟೂಆತಂಕ ಮೂಡಿಸಿದೆ. ಇತ್ತ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲೂ ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡಿರುವುದರಿಂದ ಕಳೆದೊಂದು ವಾರದಿಂದ ಸೋಂಕಿತರಿಗೆ, ಅದರಲ್ಲೂ ಉಸಿರಾಟದ ತೊಂದರೆ ಹೆಚ್ಚಿರುವವರಿಗೆ ಆಮ್ಲಜನಕ ಕೊರತೆ ಎದುರಾಗಿದೆ ಎನ್ನಲಾಗಿದೆ.

ಕೊಪ್ಪಳ: ವೆಂಟಿಲೇಟರ್‌ ಸಮಸ್ಯೆಯಿಂದಲೇ ಹಲವರ ಸಾವು!...

ಆಕ್ಸಿಜನ್‌ ಕಲ್ಪಿಸುವಲ್ಲಿ ಭಾರಿ ಸಮಸ್ಯೆ:

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸೋಂಕಿತರಿಗೆ ಆಕ್ಸಿಜನ್‌ ಸಿಲೆಂಡರ್‌ ವ್ಯವಸ್ಥೆ ಕಲ್ಪಿಸುವಲ್ಲಿ ಇದೀಗ ಭಾರಿ ಸಮಸ್ಯೆಯಾಗಿದೆ. 350 ಹಾಸಿಗೆಯುಳ್ಳ ಈ ಆಸ್ಪತ್ರೆಯಲ್ಲಿ 250 ಬೆಡ್‌ಗಳಿಗೆ ಆಕ್ಸಿಜನ್‌ ವ್ಯವಸ್ಥೆ ಪೂರೈಸಲಾಗಿದೆ. ಪ್ರತಿ 12 ಗಂಟೆಗೊಮ್ಮೆ ಏನಿಲ್ಲವೆಂದರೂ ಸುಮಾರು 50ಕ್ಕೂ ಹೆಚ್ಚು ಆಕ್ಸಿಜನ್‌ ಸಿಲೆಂಡರ್‌ಗಳ ಅವಶ್ಯಕತೆಯಿದೆ. ಆದರೆ, ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಉಂಟಾದ ಕೊರತೆಯಿಂದಾಗಿ ಇದು ಜಿಲ್ಲಾಡಳಿತಕ್ಕೂ ಸವಾಲಾಗಿ ಪರಿಣಮಿಸಿದೆ.

ಲಾಲು ಯಾದವ್‌ ಭದ್ರತೆಗೆ ನಿಯೋಜಿತ 9 ಭದ್ರತಾ ಸಿಬ್ಬಂದಿಗೆ ಕೊರೋನಾ!.

ಗಂಟೆ​ಗೊಮ್ಮೆ ಬೇಡಿಕೆ ಹೆಚ್ಚ​ಳ:

ಶುಕ್ರವಾರ ಆಕ್ಸಿ​ಜನ್‌ ಕೊರತೆಯಿಂದಾಗಿ ಸೋಂಕಿತರಿಬ್ಬರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ರವಾ​ನಿ​ಸ​ಲಾ​ಗಿ​ದೆ. ಖಾಸಗಿ ಆಸ್ಪತ್ರೆಯೊಂದರಿಂದ 10 ಹಾಗೂ ಹಳೆಯ ಜಿಲ್ಲಾಸ್ಪತ್ರೆಯಿಂದ 40 ಸಿಲೆಂಡರ್‌ಗಳನ್ನು ತಂದು ವ್ಯವಸ್ಥೆ ಕಲ್ಪಿಸಲು ಹೆಣಗಾಡುತ್ತಿದ್ದಾರೆ. ಖಾಸಗಿ ಕಂಪನಿಯೊಂದು ಇದನ್ನು ಪೂರೈಸುತ್ತಿದ್ದು, ಗಂಟೆಗೊಮ್ಮೆ ಇದಕ್ಕೆ ಬೇಡಿಕೆ ಹೆಚ್ಚುತ್ತಿರುವುದು ಕೊರತೆಗೆ ಕಾರಣ. ಯಾದಗಿರಿಯಲ್ಲಿ ಇದರ ಒಂದು ಪ್ಲಾಂಟ್‌ ನಿರ್ಮಿಸಿದರೆ ಮುಂದಿನ ದಿನಗಳಲ್ಲಿ ಕೊರತೆಯ ಪ್ರಮಾಣ ತಗ್ಗಬಹುದು ಅನ್ನೋದು ವೈದ್ಯರ ಹೇಳಿಕೆ.

10-12 ದಿನಗಳ ಹಿಂದೆ ಆಕ್ಸಿಜನ್‌ ಸಿಲೆಂಡರ್‌ ಕೊರತೆ ಕಾರಣಕ್ಕೆ ಶಹಾಪೂರ ಹಾಗೂ ಯಾದಗಿರಿ ತಾಲೂಕಿನ ವೃದ್ಧರಿಬ್ಬರು ಕಲಬುರಗಿಗೆ ಹೋಗುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಶ್ರೀಮಂತರು ಬೆಂಗಳೂರು, ಹೈದರಾಬಾದ್‌, ಕಲಬುರಗಿ, ಮಹಾರಾಷ್ಟ್ರದ ಸೊಲ್ಲಾಪೂರ ಹಾಗೂ ಪುಣೆಯ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ದಾಖಲಾಗಿದ್ದಾರೆ. ಯಾದಗಿರಿ ನಗರವೊಂದರಿಂದಲೇ ಸುಮಾರು 400ಕ್ಕೂ ಹೆಚ್ಚು ಜನರು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಗಳಿವೆ.

ಈ ಮಧ್ಯೆ, ಕೋವಿಡ್‌ ಆಸ್ಪತ್ರೆಯ ಉಸ್ತುವಾರಿ ವೈದ್ಯರಿಗೂ ಸಹ ಅನಾರೋಗ್ಯ ಕಾಡಿದ್ದರಿಂದ ಅವರೂ ಸಹ ಚಿಕಿತ್ಸೆ ಪಡೆಯುತ್ತಿದ್ದು, ನಗರದ ಕೆಲವು ಖಾಸಗಿ ವೈದ್ಯರಿಗೂ ಕೋವಿಡ್‌ ಸೋಂಕಿನ ಬಿಸಿ ತಗುಲಿದ್ದರಿಂದ ಆಸ್ಪತ್ರೆಗಳನ್ನು ಬಂದ್‌ ಮಾಡಲಾಗಿದೆ.

ಆಕ್ಸಿಜನ್‌ ಕೊರತೆಯಿಂದ ನಮ್ಮ ಸಂಬಂಧಿಕರನ್ನು ಶುಕ್ರವಾರ ಬೆಳಿಗ್ಗೆ ಕಲಬುರಗಿಗೆ ಕರೆದೊಯ್ಯಲಾಗಿದೆ.

- ಜಮೀರ್‌ ಹಕ್‌, ಯಾದಗಿರಿ ನಿವಾಸಿ.