ಲಾಕ್‌ಡೌನ್‌ ವಿನಾಯಿತಿ ಅಥವಾ ಮುಕ್ತಾಯದ ನಂತರ ವಾಣಿಜ್ಯ ಚಟುವಟಿಕೆ ಹಾಗೂ ಜನಸಂಚಾರದಿಂದ ಉಂಟಾಗಬಹುದಾದ ತೀವ್ರ ಪ್ರಮಾಣದ ಕೊರೋನಾ ಸೋಂಕು ಭೀತಿಯನ್ನು ಗರಿಷ್ಠ ಮಟ್ಟದಲ್ಲಿ ನಿಯಂತ್ರಿಸಲು ಪ್ರಮುಖ ಸೂತ್ರಗಳನ್ನು ಜಾರಿಗೊಳಿಸಲು ದ.ಕ. ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. 

ಮಂಗಳೂರು(ಮೇ.01): ಲಾಕ್‌ಡೌನ್‌ ವಿನಾಯಿತಿ ಅಥವಾ ಮುಕ್ತಾಯದ ನಂತರ ವಾಣಿಜ್ಯ ಚಟುವಟಿಕೆ ಹಾಗೂ ಜನಸಂಚಾರದಿಂದ ಉಂಟಾಗಬಹುದಾದ ತೀವ್ರ ಪ್ರಮಾಣದ ಕೊರೋನಾ ಸೋಂಕು ಭೀತಿಯನ್ನು ಗರಿಷ್ಠ ಮಟ್ಟದಲ್ಲಿ ನಿಯಂತ್ರಿಸಲು ಪ್ರಮುಖ ಸೂತ್ರಗಳನ್ನು ಜಾರಿಗೊಳಿಸಲು ದ.ಕ. ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೋವಿಡ್‌ ನೋಡೆಲ್‌ ಅಧಿಕಾರಿಯಾಗಿರುವ ಪೊನ್ನುರಾಜ್‌ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಎಲ್ಲ ವಿಭಾಗಗಳ ಮ್ಯಾರಥಾನ್‌ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಬಹುತೇಕ ಮೇ 3ರ ನಂತರ ಲಾಕ್‌ಡೌನ್‌ ಸಡಿಲಗೊಳಿಸಬೇಕಾದ ಸಂದರ್ಭ ಬಂದಾಗ ಹಾಗೂ ಸಂಪೂರ್ಣ ಲಾಕ್‌ಡೌನ್‌ ತೆಗೆದುಹಾಕಿದ ಬಳಿಕದ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕು ಎಂಬ ಬಗ್ಗೆ ಈಗಾಗಲೇ ಸಮಾಲೋಚನೆ ಆರಂಭಗೊಂಡಿದೆ. ಈ ಬಗ್ಗೆ ಸ್ವತಃ ಪೊನ್ನುರಾಜ್‌ ಅವರು ಗುರುವಾರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಕಾರ್ಮಿಕರಿಗೆ ಜೀವನಾಸರೆ, ಊರಿಗೆ ನೀರಿನಾಸರೆ..!

ಲಾಕ್‌ಡೌನ್‌ ಪೂರ್ತಿ ಮುಕ್ತಾಯ ನಂತರ ದ.ಕ. ಜಿಲ್ಲೆಯಲ್ಲಿ ಎಂದಿನಂತೆ ವಾಹನ ಸಂಚಾರ ಏರ್ಪಟ್ಟು ಜನಜೀವನ ಸಹಜ ಸ್ಥಿತಿಗೆ ಬರಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದು ಎಂಬ ತಾರ್ಕಿತ ನಿಲುವಿಗೆ ಬರಲಾಗಿದೆ. ಇದೇ ವೇಳೆ ಸೋಂಕು ಮತ್ತೆ ವ್ಯಾಪಿಸದಂತೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಕೂಲಂಕಷ ಚರ್ಚೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲಾಕ್‌ಡೌನ್‌ ಮುಕ್ತಾಯ ನಂತರದ ಮಾರ್ಗದರ್ಶನಗಳ ಹೊರತಾಗಿ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚಿಂತನೆ ನಡೆಯುತ್ತಿದೆ. ಪ್ರಮುಖವಾಗಿ ಮೂರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಕೋವಿಡ್‌-19 ನಿಯಂತ್ರಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

ಬೆಂಗಳೂರಿನ ವ್ಯಕ್ತಿಗೆ ಮಂಗಳೂರಿನಿಂದ ಆ್ಯಂಬುಲೆನ್ಸ್‌ನಲ್ಲಿ ಔಷಧಿ ರವಾನೆ

ಕೋವಿಡ್‌ ತಪಾಸಣೆ ಕಡ್ಡಾಯ: ಲಾಕ್‌ಡೌನ್‌ ತೆರವಾದ ಬಳಿಕ ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ಕೋವಿಡ್‌- 19 ತಪಾಸಣೆಯನ್ನು ಮಾಡಿಸಿಯೇ ರೋಗಿಗಳನ್ನು ದಾಖಲು ಮಾಡುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸುವಂತೆ ವೈದ್ಯರುಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಸೂತ್ರದಡಿ ತಪಾಸಣೆ ನಡೆಸಿದ ಬಳಿಕವೂ ಕೋವಿಡ್‌ ಪತ್ತೆಯಾದರೆ ಆಗ ಇಡೀ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡುವ ಪ್ರಮೇಯ ಬರುವುದಿಲ್ಲ. ಕೇವಲ ರೋಗಿ ದಾಖಲಾದ ವಾರ್ಡ್‌ನ್ನು ಮಾತ್ರ ಸೀಲ್‌ಡೌನ್‌ ಮಾಡಿದರೆ ಸಾಕಾಗುತ್ತದೆ. ಅಷ್ಟರವರೆಗೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಜಿಲ್ಲಾಡಳಿತ ಸೂಚನೆ ಹೊರಡಿಸಲಿದೆ.

ಆರೋಗ್ಯ ತಂಡ:

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಪತ್ತೆ ಕಾರ್ಯ ಹಾಗೂ ಮಾಹಿತಿಗಾಗಿ ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಭೇಟಿ ಪೂರ್ತಿಯಾಗಿದೆ. ಇನ್ನು ಎರಡನೇ ಹಂತದಲ್ಲಿ ಜಿಲ್ಲೆಯಲ್ಲಿರುವ ಆರು ಲಕ್ಷಕ್ಕೂ ಅಧಿಕ ಪ್ರತಿ ಕುಟುಂಬಗಳಿಗೆ ತೆರಳಿ ಮನೆಯಲ್ಲಿನ ಆರೋಗ್ಯ ಸ್ಥಿತಿಗತಿಯ ಮಾಹಿತಿ ಪಡೆಯಲಿದ್ದಾರೆ. ಇವರ ಕೆಲಸಕ್ಕೆ ಪೂರಕವಾಗಿ ಉತ್ಸಾಹಿ ಆರೋಗ್ಯ ಕಾರ್ಯಕರ್ತರ ತಂಡವನ್ನು ರಚಿಸುವ ಪ್ರಸ್ತಾಪ ಜಿಲ್ಲಾಡಳಿತದ ಮುಂದಿದೆ. ಪ್ರತಿ ಗ್ರಾಮ ಅಥವಾ ವಾರ್ಡ್‌ ಮಟ್ಟದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ. ಪ್ರತಿ ಮನೆಗಳ ಆರೋಗ್ಯದ ಬಗ್ಗೆ ನಿಗಾ ಹಾಗೂ ನಿಖರ ಮಾಹಿತಿಯನ್ನು ಆರೋಗ್ಯ ಕಾರ್ಯಕರ್ತರಿಗೆ ನೀಡಲಿದೆ. ಸ್ವಯಂ ಆಗಿ ಆಸಕ್ತರು ಈ ತಂಡಕ್ಕೆ ಸೇರ್ಪಡೆಯಾಗಲು ಅವಕಾಶ ಇದೆ. ಇದರಲ್ಲಿ ಕೆಲಸ ಮಾಡುವ ಮುನ್ನ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸೂಕ್ತ ತರಬೇತಿ ಕೂಡ ಪಡೆಯಲಿದ್ದಾರೆ. ಕೊರೋನಾ ಸೇರಿದಂತೆ ವೈರಸ್‌ ಕಾಯಿಲೆಗಳ ಬಗ್ಗೆ ಈ ತಂಡ ಮನೆಗಳಲ್ಲಿ ತಿಳಿವಳಿಕೆ ನೀಡಲಿದೆ. ಈ ಆರೋಗ್ಯ ತಂಡದ ರೂಪುರೇಷೆ ಸಿದ್ಧಗೊಳ್ಳುತ್ತಿದ್ದು, ಶೀಘ್ರವೇ ಅಂತಿಮಗೊಳ್ಳಲಿದೆ.

ಲಾಕ್‌ಡೌನ್: ಪತ್ನಿ ಮಗಳ ಜೊತೆ ಬಾವಿ ಕೊರೆದು ನೀರು ಪಡೆದ ಕ್ಯಾನ್ಸರ್ ರೋಗಿ

ಸರ್ಕಾರ ಅಥವಾ ಜನಪ್ರತಿನಿಧಿಗಳು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅದೇ ರೀತಿ ಎಲ್ಲ ಜನರು ಕೂಡ ಸ್ವತಃ ಮುತುವರ್ಜಿಯಿಂದ ಸ್ವಯಂ ಆಗಿ ವೈರಸ್‌ ಕಾಯಿಲೆಗಳ ವಿರುದ್ಧ ಜಾಗೃತರಾಗಬೇಕು. ಹಾಗಾದರೆ ಶೇ.80ರಷ್ಟುರೋಗಗಳಿಂದ ದೂರ ಇರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೆಲವೊಂದು ಸೂತ್ರಗಳನ್ನು ಜಾರಿಗೆ ತರಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ನೋಡೆಲ್‌ ಅಧಿಕಾರಿ ಕೋವಿಡ್‌-19,ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್‌ ತಿಳಿಸಿದ್ದಾರೆ.