ಲಾಕ್‌ಡೌನ್: ಪತ್ನಿ ಮಗಳ ಜೊತೆ ಬಾವಿ ಕೊರೆದು ನೀರು ಪಡೆದ ಕ್ಯಾನ್ಸರ್ ರೋಗಿ
ಲಾಕ್‌ಡೌನ್‌ನಲ್ಲಿ ಜನ ಬೋರ್ ಎಂದು ಸ್ಟೇಟಸ್ ಹಾಕುತ್ತಿದ್ದರೆ ಕಾಸರಗೋಡಿನ ಪೆರ್ಲದ ಬಡ ಕುಟುಂಬವೊಂದು ಸ್ವತಃ ಬಾವಿ ಕೊರೆದು ನೀರನ್ನೂ ಪಡೆದಿದೆ. ಕ್ಯಾನ್ಸರ್ ಪೀಡಿತ ತಂದೆ ಪತ್ನಿ ಮಗಳೊಂದಿಗೆ ಬಾವಿ ಕೊರೆದಿದ್ದನ್ನು ನೋಡಿ. ಇಲ್ಲಿವೆ ಫೋಟೋಸ್
ಪರಿಸರದಲ್ಲಿ ನೀರಿನ ಕೊರತೆ ತಲೆದೋರಿದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಮಯದಲ್ಲಿ ಪತ್ನಿ, ಪುತ್ರಿ ಹಾಗೂ ಹಿರಿಯ ಜೀವ ಸೇರಿ ತಾವೇ ಸ್ವತಃ ಬಾವಿ ತೋಡಿ ನೀರಿನ ಕೊರತೆ ನಿವಾರಿಸಿದ ಘಟನೆ ಗಡಿನಾಡು ಕಾಸರಗೋಡು ಜಿಲ್ಲೆಯ ಪೆರ್ಲದ ಬಳಿ ನಡೆದಿದೆ.
ಎಣ್ಮಕಜೆ ಗ್ರಾಮ ಪಂಚಾಯ್ತಿ 13ನೇ ವಾರ್ಡ್‌ನ ಏಳ್ಕಾನ ಕೊಡಿಪ್ಪಾಡಿಯ ಐತ್ತಪ್ಪ ನಾಯ್ಕ (65), ಅವರ ಪತ್ನಿ ಸರಸ್ವತಿ ಮತ್ತು ಪುತ್ರಿ ಸೌಮ್ಯ ತಾವೇ ಹಾರೆ, ಗುದ್ದಲಿ ಹಿಡಿದು ನೆಲ ಅಗೆದು ಬಾವಿತೋಡುವ ಸಾಹಸ ನಡೆಸಿದವರು.
ಇವರಿಗೆ ಸ್ವಂತ ನೀರಿನ ಆಸರೆ ಕೊರತೆ ಹಿನ್ನೆಲೆಯಲ್ಲಿ, ಕ್ಯಾನ್ಸರ್‌ನಿಂದ ಬಳಲುತ್ತಿರುವ ಐತ್ತಪ್ಪ ನಾಯ್ಕ ಹಾಗೂ ಅವರನ್ನು ನೋಡಿಕೊಳ್ಳುತ್ತಿರುವ ಪುತ್ರಿ ಸೌಮ್ಯ ಮತ್ತು ಕೂಲಿ ಕೆಲಸಕ್ಕೆ ಹೋಗುತ್ತಿರುವ ಪತ್ನಿ ಸರಸ್ವತಿ ಸೇರಿ ತಾವೇ ಸ್ವತಃ ಬಾವಿ ತೋಡಲು ನಿರ್ಧರಿಸಿದರು.
ಲಾಕ್‌ಡೌನ್ ಆರಂಭವಾದ ಮಾ.20ರಿಂದ ಬೆಳಗ್ಗಿನಿಂದ ಮಧ್ಯಾಹ್ನ ವರೆಗೆ ಬಾವಿ ತೋಡಿದರು. ಸರಸ್ವತಿ ಹಾಗೂ ಸೌಮ್ಯ ಗುಂಡಿ ತೋಡಿ ಮಣ್ಣನ್ನು ಮೇಲಕ್ಕೆ ಹಾಕಿದರೆ, ಐತ್ತಪ್ಪ ನಾಯ್ಕ ಅವರು ಅನಾರೋಗ್ಯ ಹಾಗೂ ಇಳಿವಯಸ್ಸಿನಲ್ಲೂ ಮಣ್ಣನ್ನು ಕಷ್ಟಪಟ್ಟು ಸಾಗಿಸುತ್ತಿದ್ದರು.
20 ದಿನದಲ್ಲಿ ಆರು ಅಡಿ ಆಳದ ಬಾವಿಯನ್ನು ತೋಡಿದ್ದು, ಸಾಧಾರಣ ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.