ಕಾರ್ಮಿಕರಿಗೆ ಜೀವನಾಸರೆ, ಊರಿಗೆ ನೀರಿನಾಸರೆ..!
ಲಾಕ್‌ಡೌನ್ ಸದ್ಬಳಕೆ ಮಾಡಿಕೊಂಡ ಇಲ್ಲಿನ ಅಲೆವೂರು ಗ್ರಾಮ ಪಂಚಾಯಿತಿ ಊರಿನ ಸುಸ್ಥಿರ ಅಭಿವೃದ್ಧಿಯ ಜೊತೆಗೆ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ಸೈ ಎನಿಸಿಕೊಂಡಿದೆ.
ಉಡುಪಿ(ಮೇ.01): ಲಾಕ್‌ಡೌನ್‌ನಿಂದಾಗಿ ಎಲ್ಲ ರೀತಿಯ ಉತ್ಪಾದಕ, ಅಭಿವೃದ್ಧಿ ಕಾರ್ಯಗಳು ಸ್ಥಬ್ದವಾಗಿವೆ, ಇದರಿಂದ ನಿತ್ಯ ದುಡಿದು ನಿತ್ಯ ಉಣ್ಣುವ ಕೂಲಿ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. ಇಂತಹ ಕೆಟ್ಟದಿನಗಳನ್ನೇ ಸದ್ಬಳಕೆ ಮಾಡಿಕೊಂಡ ಇಲ್ಲಿನ ಅಲೆವೂರು ಗ್ರಾಮ ಪಂಚಾಯಿತಿ ಊರಿನ ಸುಸ್ಥಿರ ಅಭಿವೃದ್ಧಿಯ ಜೊತೆಗೆ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ಸೈ ಎನಿಸಿಕೊಂಡಿದೆ.
ಇಲ್ಲಿನ ಕೋಡಿ ಎಂಬಲ್ಲಿರುವ ಪುರಾತನ ಕೆರೆಯೊಂದರ ಪುನರುಜ್ಜೀವನಕ್ಕೆ ಕೈಹಾಕಿರುವ ಪಂಚಾಯಿತಿ, ಈ ಮೂಲಕ ಸುಮಾರು 25 ಮಂದಿ ಬಡ ಕೂಲಿ ಕಾರ್ಮಿಕರ ಕುಟುಂಬದ ಅನ್ನಕ್ಕೆ ಆಧಾರವಾಗಿದೆ, ಈ ಕೆರೆಯ ಸುತ್ತಮುತ್ತಲಿನ 60- 70 ಕೃಷಿಕರ ಗದ್ದೆ ನೀರುಣಿಸುವ, ಬಾವಿಗಳಲ್ಲಿ ನೀರಿನ ಮಟ್ಟಹೆಚ್ಚಿಸುವ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದೆ.
ಬೆಂಗಳೂರಿನ ವ್ಯಕ್ತಿಗೆ ಮಂಗಳೂರಿನಿಂದ ಆ್ಯಂಬುಲೆನ್ಸ್‌ನಲ್ಲಿ ಔಷಧಿ ರವಾನೆ
ಲಾಕ್‌ಡೌನ್ ಇದ್ದರೂ, ಗ್ರಾಮೀಣ ಭಾಗದಲ್ಲಿ ನಿರ್ಮಾಣ ಕಾಮಗಾರಿಗಳಿಗೆ ನೀಡಲಾದ ಅನುಮತಿಯನ್ನು ಬಳಸಿಕೊಂಡು, ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ಈ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಈಗಾಗಲೇ 7 ದಿನಗಳ ಮೊದಲ ಹಂತದ ಕಾಮಗಾರಿ ಮುಗಿದಿದೆ, ಸುಮಾರು 55 ಅಡಿ ಅಗಲ, 55 ಅಡಿ ಉದ್ದದ ಈ ಕೆರೆಯನ್ನು ಈಗಾಗಲೇ 5 ಅಡಿ ಆಳಗೊಳಿಸಲಾಗಿದೆ. ಇನ್ನೂ 20 ದಿನಗಳಲ್ಲಿ ಇನ್ನೂ 10 ಅಡಿ ಅಂದರೆ ಒಟ್ಟು ಸುಮಾರು 15 ಅಡಿ ಆಳಗೊಳಿಸುವ ಉದ್ದೇಶ ಇದೆ ಎನ್ನುತ್ತಾರೆ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ನಾಯಕ್.
ಲಾಕ್‌ಡೌನ್: ಪತ್ನಿ ಮಗಳ ಜೊತೆ ಬಾವಿ ಕೊರೆದು ನೀರು ಪಡೆದ ಕ್ಯಾನ್ಸರ್ ರೋಗಿ
ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯಡಿ 500 ಮಾನವ ದಿನಗಳಿಗೆ 1.50 ಲಕ್ಷ ರು. ಮಂಜೂರಾಗಿದೆ. ಇನ್ನೂ 1.50 ಲಕ್ಷ ರು.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ ಅಧ್ಯಕ್ಷರು. ಸುಮಾರು 12 ವರ್ಷಗಳ ಹಿಂದೆ ಈ ಕೆರೆ ಜೀವಂತವಾಗಿದ್ದು, ಸುತ್ತಮುತ್ತಲಿನ ಸುಮಾರು 100 ಎಕರೆ ಕೃಷಿ ಗದ್ದೆಗಳಿಗೆ ಜನವರಿ- ಫೆಬ್ರವರಿ ತಿಂಗಳವರೆಗೆ ನೀರು ಪೂರೈಕೆ ಮಾಡುತ್ತಿದ್ದು,ಕುಡಿಯುವ ನೀರಿಗೂ ಆಶ್ರಯವಾಗಿತ್ತು. ಆದರೆ ಈ ಕೆರೆಯ ಮೇಲ್ಭಾಗದಲ್ಲಿ ಭೂಮಿಯನ್ನು ವಾಣಿಜ್ಯ ಬಳಕೆಗೆ ಸಮುತಟ್ಟು ಮಾಡಿದಾಗ, ಮಳೆಗಾಲದಲ್ಲಿ ಅಲ್ಲಿಂದ ಮಣ್ಣು ಹರಿದು ಬಂದು ಈ ಕೆರೆ ತುಂಬಿ ತನ್ನ ಸ್ವರೂಪವನ್ನೇ ಕಳೆದುಕೊಂಡಿದೆ ಎಂದು ಊರಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಲಾಕ್‌ಡೌನ್‌ನಲ್ಲಿ ಬಾವಿ ಅಗೆದ ಅಕ್ಷತಾ: ಫಿಟ್ನೆಸ್ ಆಯ್ತು, ನೀರೂ ಸಿಕ್ತು..!
ಅದನ್ನು ಮತ್ತೆ ಪುನರುಜ್ಜೀವನಗೊಳಿಸಿದರೆ ಕನಿಷ್ಠ ಡಿಸೆಂಬರ್‌ವರೆಗೆ ಕೃಷಿಗದ್ದೆಗಳಿಗೆ ನೀರು ಪೂರೈಕೆ ಮಾಡಿ, ಇಲ್ಲಿ ತೀವ್ರವಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಎಂಬುದು ಪಂಚಾಯಿತಿ ಅಧ್ಯಕ್ಷರ ಆಶಯವಾಗಿದೆ. ಭವಿಷ್ಯದಲ್ಲಿ ಊರಿಗೆ ಕುಡಿಯುವುದಕ್ಕೆ - ಕೃಷಿಗೆ ನೀರಿನ ಭರವಸೆಯಾದರೆ, ಪ್ರಸ್ತುತ ಉದ್ಯೋಗವಿಲ್ಲದೆ ತಲೆಮೇಲೆ ಕೈಹೊತ್ತಿದ್ದ ಸುಮಾರು 25 ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಈ ಕೆರೆ ಕಾಮಗಾರಿ ಆಸರೆಯಾಗಿರುವುದು ವಾಸ್ತವವಾಗಿದೆ.
ಬಡವ್ರಿಗೆ ಕಿಟ್ ಬದ್ಲು ಕೂಲಿ ಕೊಡುವ ಯೋಚನೆ
ಕೊರೋನಾ ಲಾಕ್‌ಡೌನ್ ಇನ್ನೆಷ್ಟುದಿನ ಮುಂದುವರಿಯುತ್ತದೋ ಗೊತ್ತಿಲ್ಲ, ಬಡವರಿಗೆ ಆಹಾರ ಕಿಟ್‌ಗಳನ್ನು ಇನ್ನೆಷ್ಟುದಿನ ವಿತರಿಸುವುದು ಎನ್ನುವುದೂ ಗೊತ್ತಿಲ್ಲ, ಇಂತಹ ಸಂದರ್ಭದಲ್ಲಿ ಅವ್ರಿಗೆ ಕೂಲಿ ಕೊಡುವಂತಹ ಯೋಜನೆ ಮಾಡ್ಬೇಕು ಎಂದೆಣಿಸಿ, 2 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕೆರೆಯ ಪುನರುಜ್ಜೀವ ಮಾಡುತಿದ್ದೇವೆ ಎಂದು ಅಲೆವೂರು ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ತಿಳಿಸಿದ್ದಾರೆ.
-ಸುಭಾಶ್ಚಂದ್ರ ಎಸ್. ವಾಗ್ಳೆ