ಬೆಂಗಳೂರು(ಜ.05): ನಗರ ಸಂಚಾರಿ ಪೊಲೀಸರ ನೆರವಿನಿಂದ ರಸ್ತೆ ಗುಂಡಿಗಳ ಮಾಹಿತಿ ಪಡೆಯುವ ಮೂಲಕ ಬಿಬಿಎಂಪಿ ಈಗಾಗಲೇ ನಗರದ ವಿವಿಧ ರಸ್ತೆಯ 5,300 ಗುಂಡಿ ಭರ್ತಿ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 1,400 ಕಿ.ಮೀ. ಉದ್ದದ ಆರ್ಟೀರಿಯಲ್‌ ಹಾಗೂ ಸಬ್‌-ಆರ್ಟೀರಿಯಲ್‌ ರಸ್ತೆಗಳಿವೆ. ಜತೆಗೆ 13 ಸಾವಿರ ಕಿ.ಮೀ ಉದ್ದದ ವಾರ್ಡ್‌ ರಸ್ತೆಗಳಿವೆ. ನಗರದಲ್ಲಿ 84 ಲಕ್ಷ ವಾಹನಗಳು ಪ್ರತಿ ನಿತ್ಯ ರಸ್ತೆ ಮೇಲೆ ಸಂಚರಿಸಲಿವೆ. ರಸ್ತೆ ಗುಂಡಿಯಿಂದ ಹೆಚ್ಚು ಅಫಘಾತಗಳು ಸಂಭವಿಸುವುದನ್ನು ತಪ್ಪಿಸಲು ಬಿಬಿಎಂಪಿ ಸಂಚಾರಿ ಪೊಲೀಸರ ಸಹಕಾರವನ್ನು ಪಡೆದುಕೊಳ್ಳುತ್ತಿದೆ.

ಬೆಂಗ್ಳೂರಲ್ಲಿ ಮೋಡ-ಚಳಿ ಜೊತೆ ತುಂತುರು ಮಳೆ: ಇನ್ನೂ ಎಷ್ಟು ದಿನ ಇದೆ..?

ಸಂಚಾರಿ ಪೊಲೀಸರು ರಸ್ತೆಗಳಲ್ಲಿ ಕಂಡು ಬರುವ ಗುಂಡಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ವಿಳಾಸ ಸಮೇತ ಫೋಟೋ ತೆಗೆದು ಸಂಚಾರಿ ಪೊಲೀಸ್‌ ಇಲಾಖೆಯ ನಿಯಂತ್ರಣ ಕೊಠಡಿಗೆ ಕಳುಹಿಸಿ ಕೊಡುತ್ತಾರೆ. ಅಲ್ಲಿಂದ ಪ್ರತಿ 15 ದಿನಕ್ಕೆ ಒಂದು ಬಾರಿ ಎಲ್ಲ ಫೋಟೋಗಳನ್ನು ಬಿಬಿಎಂಪಿ ರಸ್ತೆ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್‌ಗೆ ರವಾನೆ ಮಾಡಲಾಗುತ್ತದೆ.

ಮುಖ್ಯ ಎಂಜಿನಿಯರ್‌ ಕಚೇರಿಯಲ್ಲಿ ರಸ್ತೆ ಗುಂಡಿಗಳನ್ನು ಮುಖ್ಯ ರಸ್ತೆ ಹಾಗೂ ವಾರ್ಡ್‌ ರಸ್ತೆಗಳನ್ನು ವಿಭಾಗಿಸಿ ವಲಯ ಕಚೇರಿಯ ಸಂಬಂಧ ಪಟ್ಟಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ಸಂಬಂಧ ಪಟ್ಟಅಧಿಕಾರಿಗಳು ತಕ್ಷಣ ರಸ್ತೆ ಗುಂಡಿ ಭರ್ತಿ ಮಾಡಿ ವರದಿ ನೀಡಲಿದ್ದಾರೆ.

5,300 ಗುಂಡಿ ಭರ್ತಿ :

ಬಿಬಿಎಂಪಿ ಎಂಜಿನಿಯರ್‌ಗಳಿಗಿಂತ ಹೆಚ್ಚಾಗಿ ಸಂಚಾರಿ ಪೊಲೀಸರು ರಸ್ತೆಗಳಲ್ಲಿ ಕಾರ್ಯನಿರ್ವಹಿಸುವುದರಿಂದ ಹೆಚ್ಚಿನ ಮಾಹಿತಿ ಅವರಿಗೆ ಇರಲಿದೆ. ಈಗಾಗಲೇ ನಗರ ಸಂಚಾರಿ ಪೊಲೀಸ್‌ ಇಲಾಖೆ, ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಅವರಿಗೆ ನೀಡಲಾದ 6 ಸಾವಿರ ರಸ್ತೆ ಗುಂಡಿಗಳಲ್ಲಿ 5,300 ಗುಂಡಿಗಳನ್ನು ಭರ್ತಿ ಮಾಡಲಾಗಿದೆ ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.