* ದೂದ್‌ಸಾಗರ ಬಳಿ ಎರಡು ಕಡೆ ಭೂಕುಸಿತ* ರದ್ದಾದ ಹಲವು ರೈಲು* ಲೋಂಡಾ ನಿಲ್ದಾಣದಲ್ಲೇ ಸಿಲುಕಿದ ನೂರಾರು ಪ್ರಯಾಣಿಕರ ಪರದಾಟ 

ಹುಬ್ಬಳ್ಳಿ(ಜು.24): ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯ ಕ್ಯಾಸರಲಾಕ್‌ ಬಳಿ ಎರಡು ಕಡೆಗಳಲ್ಲಿ ಭೂಕುಸಿತವುಂಟಾಗಿದೆ. ಇದರ ಪರಿಣಾಮ ಮಂಗಳೂರು- ಮುಂಬೈ ರೈಲು ಹಳಿ ತಪ್ಪಿದೆ. ಅದೃಷ್ಟವಶಾತ್‌ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.

ಇನ್ನೊಂದು ರೈಲು ವಾಸ್ಕೋಡಿ ಗಾಮಾಕ್ಕೆ ತೆರಳಲು ಸಾಧ್ಯವಾಗದೇ ಲೋಂಡಾದಲ್ಲಿ ನಿಂತಿದೆ. ಭೂಕುಸಿತದಿಂದ ಹಳಿ ಮೇಲಿನ ಮಣ್ಣನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆ ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡಿದೆ. ಇದರಿಂದ ಹಲವು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಇನ್ನೂ ಸುಮಾರು 100 ಜನ ಪ್ರಯಾಣಿಕರು ಲೋಂಡಾ ನಿಲ್ದಾಣದಲ್ಲೇ ಸಿಲುಕಿದ್ದು, ಪರದಾಡುವಂತಾಗಿದೆ.

ಆಗಿದ್ದು ಏನು?

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದೂದಸಾಗರ- ಸೋನಾಲಿಯಂ ಹಾಗೂ ದೂದಸಾಗರ- ಕಾರನ್‌ಜೋಲ್‌ ಮಧ್ಯೆ ಬೆಳಗ್ಗೆ 6.10ರಿಂದ 6.20ರ ನಡುವೆ ಎರಡು ಕಡೆ ಭೂಕುಸಿತವಾಗಿದೆ. ಹಳಿ ಪಕ್ಕದಲ್ಲಿನ ಗುಡ್ಡದಿಂದ ಭೂಮಿ ಕುಸಿದು ರೈಲು ಹಳಿ ಮೇಲೆ ಬಿದ್ದಿದೆ. ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಮಂಗಳೂರು- ಛತ್ರಪತಿ ಶಿವಾಜಿ ಮಹಾರಾಜ ಎಕ್ಸ್‌ಪ್ರೆಸ್‌ (ಮಂಗಳೂರು- ಮುಂಬೈ -01134) ರೈಲಿನ ಎಂಜಿನ್‌ ಹಾಗೂ ಎರಡು ಬೋಗಿಗಳ ಹಳಿ ತಪ್ಪಿದೆ. ಅದೃಷ್ಟವಶಾತ್‌ ಪ್ರಯಾಣಿಕರಿಗೆ ಯಾವುದೇ ಬಗೆಯ ತೊಂದರೆಯಾಗಿಲ್ಲ. ಈ ರೈಲಿನಲ್ಲಿ 345 ಜನ ಪ್ರಯಾಣಿಕರು ಮುಂಬೈಗೆ ತೆರಳುತ್ತಿದ್ದರು. ಬಳಿಕ ಮತ್ತೊಂದು ಎಂಜಿನ್‌ನ್ನು ತರಿಸಿ ಎಲ್ಲ ಪ್ರಯಾಣಿಕರನ್ನು ಮಡಗಾಂವ್‌ಗೆ ಕಳುಹಿಸಲಾಯಿತು. ಈ ರೈಲು ಕೊಂಕಣ ಮಾರ್ಗವಾಗಿ ಸಂಚರಿಸಬೇಕಿತ್ತು. ಆದರೆ ಅಲ್ಲಿ ಭೂಕುಸಿತವಾದ ಕಾರಣ ಲೋಂಡಾ- ಮಿರಜ್‌ ಮಾರ್ಗವಾಗಿ ಸಂಚರಿಸುತ್ತಿತ್ತು.

ಭಾರೀ ಮಳೆಯಿಂದ ಧಾರವಾಡ ಜಿಲ್ಲೆಯಲ್ಲಿ 191 ಮನೆಗಳಿಗೆ ಧಕ್ಕೆ

ಪ್ರಯಾಣಿಕರ ಪರದಾಟ:

ಈ ನಡುವೆ ಇದೇ ವೇಳೆ ಹಜರತ್‌ ನಿಜಾಮವುದ್ದೀನ್‌- ವಾಸ್ಕೋಡಿಗಾಮಾ ಎಕ್ಸ್‌ಪ್ರೆಸ್‌ (ಸಂಖ್ಯೆ-2780) ಕೂಡ ಆಗಮಿಸಿದೆ. ಇದು ಲೋಂಡಾ ನಿಲ್ದಾಣ ಬಿಟ್ಟು ವಾಸ್ಕೋ ಡಿ ಗಾಮಾಕ್ಕೆ ತೆರಳುತ್ತಿತ್ತು. ಭೂಕುಸಿತವಾದ ಹಿನ್ನೆಲೆಯಲ್ಲಿ ಮುಂದೆ ಸಂಚರಿಸಲು ಸಾಧ್ಯವಾಗದೇ ಹಳಿ ಮೇಲೆ ನಿಲುಗಡೆ ಮಾಡಲಾಗಿತ್ತು. ಬಳಿಕ ಅದನ್ನು ಮರಳಿ ಲೋಂಡಾ ನಿಲ್ದಾಣಕ್ಕೆ ತೆಗೆದುಕೊಂಡು ಬಂದು ನಿಲ್ಲಿಸಲಾಗಿದೆ.

ಈ ರೈಲಿನಲ್ಲಿ 887 ಜನ ಪ್ರಯಾಣಿಕರಿದ್ದಾರೆ. ಲೋಂಡಾದಿಂದ ಬೆಳಗಾವಿಗೆ ರೈಲು ಮೂಲಕ ಕೆಲ ಪ್ರಯಾಣಿಕರನ್ನು ಸಾಗಿಸಲಾಯಿತು. 500ಕ್ಕೂ ಹೆಚ್ಚು ಪ್ರಯಾಣಿಕರು ಬೆಳಗಾವಿಗೆ ತೆರಳಿದರೆ, ಕೆಲ ಪ್ರಯಾಣಿಕರು ವೈಯಕ್ತಿಕವಾಗಿ ಸಾರಿಗೆ ವ್ಯವಸ್ಥೆ ಮಾಡಿಕೊಂಡು ತಮ್ಮ ತಮ್ಮ ಸ್ಥಳಗಳಿಗೆ ತೆರಳಿದ್ದಾರೆ.

ಸುಮಾರು 100 ಜನ ಪ್ರಯಾಣಿಕರು ಇನ್ನೂ ಲೋಂಡಾ ನಿಲ್ದಾಣದಲ್ಲೇ ಇದ್ದಾರೆ. ಅಳ್ನಾವರ- ಲೋಂಡಾ ಬಳಿಯೂ ರೈಲ್ವೆ ಹಳಿ ಮೇಲೆ ನೀರು ಹರಿಯುತ್ತಿರುವುದರಿಂದ ಇವರನ್ನು ಸಾಗಿಸಲು ಸಾಧ್ಯವಾಗಿಲ್ಲ. ನೀರು ಸ್ವಲ್ಪ ಕೆಳಮಟ್ಟಕ್ಕೆ ಇಳಿದರೆ ಎಲ್ಲರನ್ನು ಮರಳಿ ಹುಬ್ಬಳ್ಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಲೋಂಡಾ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಊಟ, ಚಹಾದ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿಯಿಂದ ವೈದ್ಯಕೀಯ ತಂಡವನ್ನು ಕರೆಯಿಸಿ ಹೆಲ್ತ್‌ ಡೆಸ್ಕ್‌ ತೆರೆಯಲಾಗಿದೆ. ಎಲ್ಲರಿಗೂ ರೈಲ್ವೆ ಇಲಾಖೆಯೂ ಪ್ರಯಾಣದ ವೆಚ್ಚವನ್ನು ಮರುಪಾವತಿ ಮಾಡಿದೆ.

ದುರಸ್ತಿ ಕಾರ್ಯ:

ಹಳಿ ತಪ್ಪಿದ್ದ ರೈಲನ್ನು ಮರಳಿ ಹಳಿಗೆ ತರಲಾಗಿದೆ. ಹಳಿ ಮೇಲೆ ಬಿದ್ದಿರುವ ಮಣ್ಣು ಹಾಗೂ ಕಲ್ಲನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ. 2 ಹಿಟಾಚಿ, 15 ಜನ ಟ್ರ್ಯಾಕ್‌ಮನ್‌, 50ಕ್ಕೂ ಹೆಚ್ಚು ಕಾರ್ಮಿಕರು ದುರಸ್ತಿ ಕಾರ್ಯದಲ್ಲಿ ನಿರತವಾಗಿದ್ದಾರೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. ಇದರಿಂದಾಗಿ ಇನ್ನೆರಡು ದಿನಗಳ ಕಾಲ ಈ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಪ್ರಚಂಡ ಮಳೆ: 2 ದಿನಕ್ಕೆ 136 ಬಲಿ!

ರೈಲು ಸಂಚಾರ ರದ್ದು:

ದೂದಸಾಗರ- ಕಾರನ್‌ಜೋಲ್‌ ಹಾಗೂ ದೂದಸಾಗರ- ಸೋನಾಲಿಯಂ ಬಳಿ ಭೂಕುಸಿತವಾದ ಕಾರಣ 9 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ವಾಸ್ಕೋ ಡಿಗಾಮಾ- ಹೌರಾ (ಟ್ರೈನ್‌ ಸಂಖ್ಯೆ- 08048), ವಾಸ್ಕೋಡಿಗಾಮಾ- ತಿರುಪತಿ ಎಕ್ಸ್‌ಪ್ರೆಸ್‌/ಹೈದ್ರಾಬಾದ್‌ (ಸಂಖ್ಯೆ- 07420, 07022), ಯಶವಂತಪುರ- ವಾಸ್ಕೋಡಿಗಾಮಾ (ಸಂಖ್ಯೆ- 07339, 07340), ವಾಸ್ಕೋಡಿಗಾಮಾ- ನಿಜಾಮಾದ್ದೀನ್‌ (ಸಂಖ್ಯೆ- 02779), ಹುಬ್ಬಳ್ಳಿ- ದಾದರ್‌ ಎಕ್ಸ್‌ಪ್ರೆಸ್‌ (ಸಂಖ್ಯೆ- 07317, 07318), ಮಿರಜ್‌- ಬೆಂಗಳೂರು (06590) ರದ್ದುಪಡಿಸಲಾಗಿದೆ. ಇನ್ನೆರಡು ದಿನ ಈ ರೈಲು ಸಂಚಾರ ರದ್ದುಪಡಿಸಲಾಗಿದೆ. ಇನ್ನು 9 ರೈಲುಗಳ ಮಾರ್ಗ ಬದಲಾಯಿಸಲಾಗಿದೆ.

ನಿಜಾಮಾದ್ದೀನ್‌- ವಾಸ್ಕೋ ಡಿಗಾಮಾ ರೈಲಲ್ಲಿ ಬಂದ 100 ಪ್ರಯಾಣಿಕರು ಲೋಂಡಾ ನಿಲ್ದಾಣದಲ್ಲಿ ಸುರಕ್ಷಿತವಾಗಿದ್ದಾರೆ. ಅಳ್ನಾವರ- ಲೋಂಡಾ ಮಧ್ಯೆ ಹಳಿ ಮೇಲೆ ನೀರು ಹರಿಯುತ್ತಿರುವುದರಿಂದ ರೈಲು ಸಂಚರಿಸಲು ಸಾಧ್ಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ವೈದ್ಯಕೀಯ ತಂಡ ಕೂಡ ನಿಲ್ದಾಣದಲ್ಲಿದೆ. ಹಳಿ ಮೇಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಅವರನ್ನು ಬೆಳಗಾವಿ ಅಥವಾ ಹುಬ್ಬಳ್ಳಿಗೆ ಸಾಗಿಸುವ ಕಾರ್ಯ ಮಾಡಲಾಗುವುದು ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.