Asianet Suvarna News Asianet Suvarna News

ಮಹಾರಾಷ್ಟ್ರದಲ್ಲಿ ಪ್ರಚಂಡ ಮಳೆ: 2 ದಿನಕ್ಕೆ 136 ಬಲಿ!

* ಮಹಾ ಮಳೆಗೆ ನೆರೆ ರಾಜ್ಯ ತತ್ತರ

* ಮಹಾರಾಷ್ಟ್ರ ಮಳೆ: 2 ದಿನಕ್ಕೆ 136 ಬಲಿ

* ವಿಕೋಪಕ್ಕೆ ಮೋದಿ, ಶಾ ಆಘಾತ

Maharashtra Rains 136 Dead Rescue Ops on Govt Says Next 48 Hours Crucial pod
Author
Bangalore, First Published Jul 24, 2021, 7:23 AM IST

ಮುಂಬೈ(ಜು.24): ಕೋವಿಡ್‌ನಿಂದ ನಲುಗಿದ್ದ ಮಹಾರಾಷ್ಟ್ರದಲ್ಲಿ ಇದೀಗ ಮುಂಗಾರು ಮಳೆ ತನ್ನ ರೌದ್ರನರ್ತನ ತೋರಿದ್ದು, ಕಳೆದ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ 136 ಜನರನ್ನು ಬಲಿ ಪಡೆದಿದೆ. ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದ್ದು, ನೂರಾರು ಸಂಖ್ಯೆಯಲ್ಲಿ ಮನೆಗಳು ಭೂಸಮಾಧಿಯಾಗಿವೆ. ರಾಯಗಢ ಜಿಲ್ಲೆಯ ತಲಾಯಿ ಎಂಬ ಒಂದೇ ಗ್ರಾಮದಲ್ಲಿ ಶುಕ್ರವಾರ 24 ಮನೆಗಳು ಧರಾಶಾಯಿಯಾಗಿದ್ದು, 38 ಜನರು ಸಾವನ್ನಪ್ಪಿದ್ದಾರೆ.

ಈ ಮಳೆ ಅನಾಹುತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜ್ಯಕ್ಕೆ ಪರಿಹಾರ ಹಾಗೂ ರಕ್ಷಣಾ ಕಾರ್ಯದಲ್ಲಿ ಕೇಂದ್ರದಿಂದ ನೆರವು ನೀಡುವ ಎಲ್ಲ ಭರವಸೆ ನೀಡಿದ್ದಾರೆ. ಇನ್ನು, ಮಳೆಗೆ ಬಲಿಯಾದವರ ಕುಟುಂಬಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ತಲಾ 5 ಲಕ್ಷ ರು. ಮತ್ತು ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರು. ಪರಿಹಾರ ಪ್ರಕಟಿಸಿದ್ದಾರೆ.

ಇದರ ಬೆನ್ನಲ್ಲೇ ರಾಜ್ಯದಲ್ಲಿ ಈವರೆಗಿನ ಅತಿದೊಡ್ಡ ರಕ್ಷಣಾ ಕಾರಾರ‍ಯಚರಣೆ ಆರಂಭವಾಗಿದ್ದು, ಸೇನೆ, ನೌಕಾಪಡೆ, ವಾಯುಪಡೆ, ಕರಾವಳಿ ಪಡೆ, ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ ಹಾಗೂ ಮಹಾರಾಷ್ಟ್ರ ಸರ್ಕಾರದ ವಿವಿಧ ವಿಭಾಗಗಳ ಸಿಬ್ಬಂದಿ, ಕಾರಾರ‍ಯಚರಣೆಗೆ ಇಳಿದಿದ್ದಾರೆ.

38 ಜನ ಮಣ್ಣುಪಾಲು:

ರಾಯಗಢ ಜಿಲ್ಲೆಯ ತಲಾಯಿ ಗ್ರಾಮದಲ್ಲಿ ಗುಡ್ಡವೊಂದು ಕುಸಿದ ಪರಿಣಾಮ ಕೆಳಭಾಗದಲ್ಲಿದ್ದ 24 ಮನೆಗಳು ಮಣ್ಣಿನಲ್ಲಿ ಹೂತು ಹೋಗಿವೆ. ಇದರಿಂದಾಗಿ 38 ಜನ ಜೀವಂತ ಸಮಾಧಿಯಾಗಿದ್ದಾರೆ. ಇನ್ನು ಸತಾರಾ ಜಿಲ್ಲೆಯ ಮೋರಿಗಾಂವ್‌ ಎಂಬಲ್ಲಿ ಮಣ್ಣು ಕುಸಿದು 6 ಜನ ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ ಮನೆ ಬಿದ್ದು 4 ಜನ ಸಾವನ್ನಪ್ಪಿದ್ದಾರೆ. ರತ್ನಗಿರಿ ಜಿಲ್ಲೆಯಲ್ಲಿ 10, ಸತಾರಾದಲ್ಲಿ ಮೂವರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಶುಕ್ರವಾರದ ಸಾವೂ ಸೇರಿದಂತೆ ಕಳೆದ 48 ಗಂಟೆಗಳ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಸಂಬಂಧಿ ಘಟನೆಗಳಿಗೆ ಒಟ್ಟು 136 ಜನ ಬಲಿಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.

11 ಜನರ ರಕ್ಷಣೆ:

ಕೊಲ್ಹಾಪುರ ಜಿಲ್ಲೆಯ ಪಂಗಿರೆ ಎಂಬ ಗ್ರಾಮದ ಬಳಿ ಸೇತುವೆಯ ಮೇಲೆ ನದಿ ಉಕ್ಕೇರಿದ್ದರೂ ಚಾಲಕನು ಅಧಿಕಾರಿಗಳ ಎಚ್ಚರಿಕೆ ನಿರ್ಲಕ್ಷಿಸಿ ಬಸ್‌ ಚಲಾಯಿಸಿದ್ದಾನೆ. ಈ ವೇಳೆ ಬಸ್‌ ಕೊಚ್ಚಿ ಹೋಗುತ್ತಿತ್ತು. ಸುದೈವವಶಾತ್‌ ಸ್ಥಳದಲ್ಲೇ ಇದ್ದ ಪೊಲೀಸರು ನೀರಲ್ಲೇ ಸಾಗಿ, ಬಸ್‌ನಲ್ಲಿದ್ದ 11 ಮಂದಿಯನ್ನು ಹೊರತಂದು ರಕ್ಷಿಸಿದ್ದಾರೆ. ಬಳಿಕ ಬಸ್‌ ನದಿಯಲ್ಲಿ ಕೊಚ್ಚಿಹೋಗಿದೆ.

Follow Us:
Download App:
  • android
  • ios