ಮಧ್ಯರಾತ್ರಿ ಕತ್ತಿಯಿಂದ ಕುತ್ತಿಗೆಗೆ ಹೊಡೆದು ಪತ್ನಿ ಹತ್ಯೆಗೈದ ಪತಿ
ಮಧ್ಯರಾತ್ರಿಯಲ್ಲಿ ಪತಿಯೋರ್ವ ಪತ್ನಿಯನ್ನು ಕತ್ತಿಯಿಂದ ಹೊಡೆದು ಕೊಲೆಗೈದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿಕಾರಿಪುರ [ಫೆ.09]: ಪಾರ್ಶವಾಯು ಪೀಡಿತ ಪತಿ ತನ್ನ ಪತ್ನಿ ಜತೆ ಜಗಳವಾಡಿಕೊಂಡು ಕತ್ತಿಯಿಂದ ಕುತ್ತಿಗೆಗೆ ಹೊಡೆದು ಹತ್ಯೆ ಮಾಡಿದ ಘಟನೆ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಕೂಲಿ ವೃತ್ತಿಯ ಗ್ರಾಮದ ಪಾರ್ವತಿಬಾಯಿ (52) ಮೃತ ದುರ್ದೈವಿ. ಕಳೆದ ಕೆಲ ತಿಂಗಳ ಹಿಂದಿನಿಂದ ಪಾರ್ಶವಾಯು ಪೀಡಿತನಾಗಿದ್ದ ಪತಿ ಕೃಷ್ಣಾನಾಯ್ಕ ಪತ್ನಿ ಜತೆ ಸಣ್ಣಪುಟ್ಟವಿಚಾರಗಳಿಗೂ ಪದೇಪದೆ ಜಗಳವಾಡುತ್ತಿದ್ದು, ವಿಕೋಪಕ್ಕೆ ತೆರಳಿದಾಗ ಸಮೀಪದವರು ಬಂದು ಸಮಾಧಾನಿಸುತ್ತಿದ್ದರು.
ಗುರುವಾರ ರಾತ್ರಿ ಊಟ ಮುಗಿಸಿ ಮಲಗಿದ ನಂತರ ಮಧ್ಯರಾತ್ರಿ 1ರ ವೇಳೆಯಲ್ಲಿ ಜಗಳ ವಿಕೋಪಕ್ಕೆ ತಿರುಗಿ ಕೃಷ್ಣನಾಯ್ಕ ಪತ್ನಿಗೆ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾರೆ.
ರಕ್ತಸಿಕ್ತವಾಗಿ ನರಳಾಡ್ತಾ ಪ್ರಾಣಬಿಟ್ಟ ಗಿರೀಶ್, ಶಿವಮೊಗ್ಗದ ಘೋರ ಹತ್ಯೆಯ ಸಿಸಿಟಿವಿ ದೃಶ್ಯ..
ಕೂಡಲೇ ಮನೆಗೆ ಸಮೀಪದಲ್ಲಿಯೇ ವಾಸವಿದ್ದ ಪುತ್ರಿ ಸವಿತಾಬಾಯಿ ಮತ್ತಿತರರು ಧಾವಿಸಿ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ನೋಡಿದ್ದಾರೆ. ಆದರೆ ತಾವು ಬಂದು ನೋಡುವಷ್ಟರಲ್ಲಾಗಲೆ ಪಾರ್ವತಿಬಾಯಿ ಮೃತಪಟ್ಟಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಪುತ್ರಿ ಸವಿತಾಬಾಯಿ ತಿಳಿಸಿದ್ದಾಳೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.