Asianet Suvarna News Asianet Suvarna News

KSRTC : ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್

KSRTC ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್.. ಏನದು ತಿಳಿಯಿರಿ ಮಾಹಿತಿ 

Panic Button installed in KSRTC Buses snr
Author
Bengaluru, First Published Oct 14, 2020, 7:01 AM IST
  • Facebook
  • Twitter
  • Whatsapp

ಕಾರವಾರ (ಅ.14):  ಬಸ್‌ ಚಲಿಸುತ್ತಿದ್ದಾಗ ಅವಘಡ ನಡೆದರೆ ಅಥವಾ ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರಾದರೆ, ಇತರೇ ಸಮಸ್ಯೆಯಾದರೆ ಕೂಡಲೇ ಚಾಲಕರಿಗೆ ಸಂದೇಶ ಹೋಗುವ ಸೈರನ್‌ ವ್ಯವಸ್ಥೆಯನ್ನು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಹೊಸದಾಗಿ ಅಳವಡಿಸಲಾಗಿದೆ.

ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಗೆ ಒಳಪಡುವ ಉತ್ತರ ಕನ್ನಡ ವಿಭಾಗದ ಹೊಸ ಬಸ್‌ಗಳಿಗೆ ಈ ಸೈರನ್‌ ಅಳವಡಿಕೆ ಮಾಡಲಾಗಿದೆ. ನಿರ್ಭಯ ಪ್ರಕರಣದಲ್ಲಿ ಚಲಿಸುತ್ತಿದ್ದ ಬಸ್‌ನಲ್ಲೇ ಯುವತಿಯ ಅತ್ಯಾಚಾರವಾಗಿತ್ತು. ಬಳಿಕ ಸುಪ್ರಿಂ ಕೋರ್ಟ್‌ ಸಾರ್ವಜನಿಕ ಸಾರಿಗೆಗೆ ಸುರಕ್ಷತಾ ಕ್ರಮ ಅಳವಡಿಕೆ ಮಾಡಲು ಸೂಚನೆ ನೀಡಿತ್ತು. ಈ ನಿಟ್ಟಿನಲ್ಲಿ ಉತ್ತರ ಕನ್ನಡ ವಿಭಾಗಕ್ಕೆ ಹೊಸದಾಗಿ ಬಂದ ಬಸ್‌ಗಳಲ್ಲಿ ಈ ವ್ಯವಸ್ಥೆ ಅಳವಡಿಕೆ ಮಾಡಲಾಗಿದೆ. ಕೇವಲ ರೈಲ್ವೆಯಲ್ಲಿ ಅವಘಡವಾದಾಗ ಚೈನ್‌ ಎಳೆದು ರೈಲು ನಿಲ್ಲಿಸುವ ವ್ಯವಸ್ಥೆಯಿತ್ತು. ಈಗ ಸಾರಿಗೆ ಸಂಸ್ಥೆ ತನ್ನ ಬಸ್‌ಗಳಲ್ಲಿ ಸೈರನ್‌ ವ್ಯವಸ್ಥೆಯನ್ನು ಅಳವಡಿಕೆ ಮಾಡಿಕೊಂಡಿದೆ.

ಸೈರನ್‌ ಹೇಗೆ ಕಾರ್ಯನಿರ್ವಹಿಸುತ್ತೆ?

ಬಸ್‌ ಚಲಿಸುತ್ತಿರುವಾಗ ಅವಘಡವಾದರೆ, ಆರೋಗ್ಯದಲ್ಲಿ ಸಮಸ್ಯೆಯಾದರೆ ಅಥವಾ ಇನ್ಯಾವುದೇ ರೀತಿಯ ತೊಂದರೆಗೆ ಸಿಲುಕಿದರೆ ಕೂಡಲೇ ಪ್ರಯಾಣಿಕರು ತಾವು ಕುಳಿತ ಸೀಟ್‌ ಮೇಲಿರುವ ಕೆಂಪು ಬಣ್ಣದ ಗುಂಡಿ (ಬಟಣ್‌) ಒತ್ತಿದರೆ ಚಾಲಕನ ಬಳಿ ಶಬ್ಧವಾಗುತ್ತದೆ.

ಇದಕ್ಕೆ ಪ್ಯಾನಿಕ್‌ ಬಟನ್‌ ಎಂದು ಕರೆಯಲಾಗುತ್ತದೆ. ಪ್ರತಿ 10 ಸೆಕೆಂಡಿಗೊಮ್ಮೆ ಲೈಟ್‌ ಆಗುತ್ತಾ ಇರುತ್ತದೆ. ಒಂದು ಬಸ್‌ಗೆ ಈ ಪ್ಯಾನಿಕ್‌ ಬಟನ್‌ ವ್ಯವಸ್ಥೆ ಅಳವಡಿಸಲು 25,000 ರು. ಬೇಕಾಗುತ್ತದೆ. ಕೇವಲ ಚಾಲಕನಿಗೆ ಒಂದೇ ಅಲ್ಲದೇ ಬಸ್‌ ಸಂಚರಿಸುತ್ತಿರುವ ರಸ್ತೆಯಲ್ಲಿ ಬರುವ ಸಮೀಪದ ಪೊಲೀಸ್‌ ಠಾಣೆಗೂ ಸಂದೇಶ ಹೋಗುತ್ತದೆ. ಆದರೆ ಹಾಲಿ ಈ ತಂತ್ರಜ್ಞಾನ ಕೆಲಸ ಮಾಡುತ್ತಿಲ್ಲ.

ಸೆಟ್‌ಲೈಟ್‌ ಮೂಲಕ ಈ ಸಂದೇಶ ರವಾನೆಯಾಗಬೇಕಿದ್ದು, ಈ ಕಾರ್ಯ ಪ್ರಗತಿಯಲ್ಲಿದೆ. ಕೋವಿಡ್‌-19 ಸೋಂಕಿನ ಲಾಕ್‌ಡೌನ್‌ನಿಂದ ಸಾರಿಗೆ ಸಂಚಾರ ಬಂದ್‌ ಮಾಡಲಾಗಿತ್ತು. ಇದಕ್ಕೂ ಕೆಲವು ದಿನ ಪೂರ್ವದಲ್ಲಿ ಬಸ್‌ಗಳಿಗೆ ಪ್ಯಾನಿಕ್‌ ಬಟನ್‌ ಅಳವಡಿಕೆ ಮಾಡಲಾಗಿದ್ದು, ಲಾಕ್‌ಡೌನ್‌ ಆಗಿದ್ದರಿಂದ ಸೆಟಲೈಟ್‌ ಸಂಪರ್ಕಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಆಗಿಲ್ಲ. ಆದಷ್ಟುಶೀಘ್ರದಲ್ಲಿ ಠಾಣೆಗೂ ಸಂದೇಶ ಹೋಗುವಂತೆ ಅಗತ್ಯ ತಂತ್ರಾಂಶ ಅಳವಡಿಕೆ ಆಗಲಿದೆ.

ಎಚ್ಚರಿಕೆ ಅಗತ್ಯ: ಈ ವ್ಯವಸ್ಥೆಯ ಬಗ್ಗೆ ಪ್ರಯಾಣಿಕರು ಮುತುವರ್ಜಿವಹಿಸಬೇಕಾಗಿದೆ. ಯಾವುದೇ ತೊಂದರೆ ಆಗದೇ ಚಿಕ್ಕ ಮಕ್ಕಳು ಅಥವಾ ದೊಡ್ಡವರು ಅನಾವಶ್ಯಕವಾಗಿ, ತಮಾಷೆಗಾಗಿ ಬಟನ್‌ ಒತ್ತಿದರೆ ಸಂದೇಶ ರವಾನೆಯಾಗಿಬಿಡುತ್ತದೆ. ಕೂಡಲೇ ಪೊಲೀಸರು ಬಸ್‌ ಇರುವ ಸ್ಥಳವನ್ನು ಹುಡುಕಿಕೊಂಡು ಬರುತ್ತಾರೆ. ಹೀಗಾಗಿ ತಮಾಷೆಗಾಗಿ, ಅನಾವಶ್ಯಕವಾಗಿ ಈ ಬಟನ್‌ ಪ್ರೆಸ್‌ ಮಾಡದಂತೆ ಪ್ರಯಾಣಿಕರು ಜವಾಬ್ದಾರಿ ವಹಿಸಬೇಕಿದೆ. ಈ ಮೂಲಕ ಈ ಯೋಜನೆ ಸದ್ಭಳಕೆ ಮಾಡಿಕೊಳ್ಳಬೇಕಿದೆ.

ಈ ಪ್ಯಾನಿಕ್‌ ಬಟನ್‌ ಬಗ್ಗೆ ಬಹುತೇಕ ಪ್ರಯಾಣಿಕರಿಗೆ ಮಾಹಿತಿ ಇಲ್ಲ. ಹೀಗಾಗಿ ಈ ವ್ಯವಸ್ಥೆ ಅಳವಡಿಸಿದ ಬಸ್‌ಗಳಲ್ಲಿ ಸಂಸ್ಥೆ ಯಾವ ಉದ್ದೇಶಕ್ಕೆ ಅಳವಡಿಸಲಾಗಿದೆ ಎನ್ನುವ ಬಗ್ಗೆ ಫಲಕ ಹಾಕಬೇಕಿದೆ. ಈ ಮೂಲಕ ಪ್ರಯಾಣಿಕರಿಗೆ ಬಟನ್‌ ಬಗ್ಗೆ ತಿಳಿಸುವ ಕಾರ್ಯ ಕೂಡಾ ಆಗಬೇಕಿದೆ.

ಸಂಸ್ಥೆಯ ಬಸ್‌ನಲ್ಲಿ ಅಪಾಯ ಉಂಟಾದರೆ ಕೂಡಲೇ ಪ್ರಯಾಣಿಕರು ಕೆಂಪು ಬಣ್ಣದ ಪ್ಯಾನಿಕ್‌ ಬಟನ್‌ ಒತ್ತಿದರೆ ಸೈರನ್‌ ಆಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಸಂಸ್ಥೆ ಅಳವಡಿಸುತ್ತಿದೆ.

ವಿವೇಕ ಹೆಗಡೆ ವಿಭಾಗೀಯ ನಿಯಂತ್ರಣಾಧಿಕಾರಿ ಉತ್ತರ ಕನ್ನಡ

Follow Us:
Download App:
  • android
  • ios