ಕೋಲಾರದಲ್ಲಿ ಎತ್ತಿನ ಜೋಡಿಯೊಂದು ಬರೋಬ್ಬರಿ 10 ಲಕ್ಷ ರು.ಗೆ ಮಾರಾಟವಾಗಿ ದಾಖಲೆ ಬರೆದಿದೆ. ಈ ಎತ್ತಿನ ಜೋಡಿ ಹಳ್ಳಿಕಾರ್ ತಳಿಗೆ ಸೇರಿದ್ದಾಗಿದೆ.
ಮಾಲೂರು (ಜ.25): ಕೊರೋನಾ ಹಿನ್ನೆಲೆಯಲ್ಲಿ ನಿಷೇಧಿಸಿದ್ದರೂ ತಾಲೂಕಿನ ಕಸಬಾ ಹೋಬಳಿಯ ತೊರ್ನಹಳ್ಳಿ ಗ್ರಾಮದಲ್ಲಿ ಶ್ರೀ ಸಪಲಾಂಭ ದೇವಿ ಹಾಗೂ ಶ್ರೀ ಭೀಮೇಶ್ವರಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವ ಭಾನುರ ನೆರವೇರಿತು. ರಾಸುಗಳ ಕೊಳ್ಳುವಿಕೆ ಹಾಗೂ ಮಾರಾಟ ಮಾಡುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳನ್ನು ತರಲಾಗಿತ್ತು.
ಜಾತ್ರೆ ನಿಷೇಧಿಸಿರುವುದು ತಿಳಿಯದೆ ದೂರದ ಊರುಗಳಿಂದ ನೂರಾರು ಸಂಖ್ಯೆಯಲ್ಲಿ ರೈತರು ತಮ್ಮ ರಾಸುಗಳ ಜತೆ ಬಂದಿದ್ದರು. ವಿಷಯ ತಿಳಿದ ಸಂಸದ ಮುನಿಸ್ವಾಮಿ ಅವರು ತಹಸೀಲ್ದಾರ್ ಅವರನ್ನು ಸಂಪರ್ಕಿಸಿ ಈಗಾಗಲೇ ರೈತರು ಬಂದಿರುವುದರಿಂದ ಅವರು ವಾಪಸ್ ಹೋಗಲು ಮೂರು ದಿನಗಳ ಅವಕಾಶ ನೀಡುವಂತೆ ಸೂಚಿಸಿದ್ದಾರೆ. ಕೊರೋನಾ ಸಂಬಂಧ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳುವಂತೆ ತಿಳಿಸಿದ್ದಾರೆ.
ನೆರೆ ರಾಜ್ಯಗಳಿಂದಲೂ ರೈತರ ಆಗಮನ
ರಾಜ್ಯವು ಸೇರಿದಂತೆ ನೆರೆಯ ತಮಿಳುನಾಡು, ಆಂದ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವಾರು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತೊರ್ನಹಳ್ಳಿ ಗ್ರಾಮದಲ್ಲಿ ನಡೆಯುವ ಶ್ರೀ ಸಪಲಾಂಭ ದೇವಿ ಹಾಗೂ ಶ್ರೀ ಭೀಮೇಶ್ವರಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ರಾಸುಗಳ ಕೊಳ್ಳುವಿಕೆ ಹಾಗೂ ಮಾರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರು.
18ನೇ ಗಣರಾಜ್ಯೋತ್ಸವ ಪರೇಡ್‌ಗೆ ಸಜ್ಜಾದ ಕ್ಯಾವಲ್ರಿ ರಿಜೆಮೆಂಟ್ ಕುದುರೆ; ಇದು ದಾಖಲೆ! ...
10 ಲಕ್ಷಕ್ಕೆ ಮಾರಾಟವಾದ ಜೋಡಿ ಎತ್ತು
ಜಾತ್ರೆಯಲ್ಲಿ ಈ ಬಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ಪ್ರಗತಿಪರ ರೈತ ವೆಂಕಟರೆಡ್ಡಿ ಅವರ ಹಳ್ಳಿಕಾರ್ ರಾಸುಗಳು 10 ಲಕ್ಷಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿದ್ದು, ವೆಂಕಟರೆಡ್ಡಿ ಅವರು ರಾಸುಗಳ ಉತ್ತಮ ಪೋಷಣೆ ಮಾಡುವ ಖ್ಯಾತಿ ಹೊಂದಿದ್ದಾರೆ. ಜಾತ್ರೆಗೆ 10 ಜೊತೆ ಎತ್ತುಗಳನ್ನು ಮಾರಾಟಕ್ಕೆ ತಂದಿದ್ದರು. ಅವುಗಳಲ್ಲಿ 6 ಜತೆ 6 ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ.
