ಗದಗ ತಾಲೂಕಿನ ಬೆಳಧಡಿ ತಾಂಡಾದಲ್ಲಿ, ಶಾಲಾ ಆಟದ ಸಮಯದಲ್ಲಿ ಗೋಡಂಬಿ ಬೀಜವೆಂದು ತಪ್ಪಾಗಿ ಭಾವಿಸಿ ವಿಷಕಾರಿ 'ಔಡಲ ಕಾಯಿ' ತಿಂದ ಪರಿಣಾಮ 25ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ವಾಂತಿ, ಭೇದಿ, ತಲೆಸುತ್ತಿನಿಂದ ಬಳಲುತ್ತಿದ್ದ ಮಕ್ಕಳನ್ನು ತಕ್ಷಣವೇ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗದಗ: ಶಾಲಾ ಆಟದ ಸಮಯದಲ್ಲಿ ಮಕ್ಕಳಿಬ್ಬರು ಮಾಡಿದ ಸಣ್ಣದೊಂದು ಯಡವಟ್ಟು ಈಗ ಆತಂಕ ತಂದಿಟ್ಟಿದೆ . ಗಿಡದಲ್ಲಿದ್ದ ಕಾಯನ್ನು ಗೋಡಂಬಿ ಬೀಜ ಎಂದು ತಪ್ಪಾಗಿ ಭಾವಿಸಿ ತಿಂದ ಪರಿಣಾಮ 25ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಗದಗ ತಾಲೂಕಿನ ಬೆಳಧಡಿ ತಾಂಡಾದಲ್ಲಿ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಟದ ಸಮಯ ಜವರಾಯನಾದ 'ಔಡಲ ಕಾಯಿ'!

ಸ್ಥಳೀಯ ಮೂಲಗಳ ಪ್ರಕಾರ, ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಧಡಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ಶಾಲಾ ಆಟದ ಅವಧಿಯಲ್ಲಿ (Sports time) 2, 3 ಮತ್ತು 4ನೇ ತರಗತಿಯ ಪುಟಾಣಿ ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಶಾಲೆಯ ಆವರಣದ ಪಕ್ಕದಲ್ಲೇ ಇದ್ದ ಗಿಡವೊಂದರಲ್ಲಿ ಬಿಟ್ಟಿದ್ದ ಕಾಯಿಗಳನ್ನು ಗಮನಿಸಿದ ಮಕ್ಕಳು, ಅವುಗಳನ್ನು ಗೋಡಂಬಿ ಬೀಜ ಎಂದು ಭಾವಿಸಿ ತಿಂದಿದ್ದಾರೆ.

ಇದು ಒಬ್ಬರಿಂದ ಒಬ್ಬರಿಗೆ ವಿಷಯ ಮುಟ್ಟಿ ಒಟ್ಟು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆ ಬೀಜಗಳನ್ನು ಕಿತ್ತು ತಿಂದಿದ್ದಾರೆ. ಆದರೆ, ಆ ಮಕ್ಕಳು ತಿಂದಿದ್ದು ಗೋಡಂಬಿಯನ್ನಲ್ಲ, ಬದಲಿಗೆ ವಿಷಕಾರಿ ಅಂಶವಿರುವ 'ಔಡಲ ಕಾಯಿ' (Castor Seeds - ಹರಳೆಣ್ಣೆ ಕಾಯಿ) ಎಂಬುದು ಬಳಿಕ ಬೆಳಕಿಗೆ ಬಂದಿದೆ

ವಾಂತಿ, ಭೇದಿ, ತಲೆಸುತ್ತು, ಮಕ್ಕಳ ಆರೋಗ್ಯದಲ್ಲಿ ಏರುಪೇರು!

ಬೀಜ ತಿಂದ ಕೆಲವೇ ನಿಮಿಷಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದೆ. ಒಂದಾದ ಮೇಲೊಂದರಂತೆ ಮಕ್ಕಳಿಗೆ ತೀವ್ರ ಹೊಟ್ಟೆನೋವು, ವಾಂತಿ, ಭೇದಿ ಹಾಗೂ ತಲೆಸುತ್ತುವಿಕೆ ಕಾಣಿಸಿಕೊಂಡಿದೆ. ಏಕಾಏಕಿ ಇಷ್ಟೊಂದು ಸಂಖ್ಯೆಯ ಮಕ್ಕಳು ಅಸ್ವಸ್ಥಗೊಂಡದನ್ನು ನೋಡಿ ಶಾಲಾ ಶಿಕ್ಷಕರು ಹಾಗೂ ಸ್ಥಳೀಯ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಸ್ವಸ್ಥಗೊಂಡವರಲ್ಲಿ ಸುಮಾರು 18 ಬಾಲಕಿಯರು ಹಾಗೂ 9 ಬಾಲಕರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ಗದಗ ಜಿಮ್ಸ್ (GIMS) ಆಸ್ಪತ್ರೆಗೆ ದಾಖಲು:

ವಿಷಯ ತಿಳಿಯುತ್ತಿದ್ದಂತೆಯೇ ಪರಿಸ್ಥಿತಿಯ ಗಂಭೀರತೆ ಅರಿತ ಶಾಲಾ ಮಂಡಳಿ ಮತ್ತು ಪೋಷಕರು, ಅಸ್ವಸ್ಥಗೊಂಡ ಎಲ್ಲಾ 25ಕ್ಕೂ ಹೆಚ್ಚು ಮಕ್ಕಳನ್ನು ತಕ್ಷಣವೇ ಗದಗದ ಜಿಮ್ಸ್ (GIMS) ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಜಿಮ್ಸ್ ಆಸ್ಪತ್ರೆಯ ಮಕ್ಕಳ ತುರ್ತು ಚಿಕಿತ್ಸಾ ವಿಭಾಗದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ತಂಡ ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದೆ. ಸದ್ಯಕ್ಕೆ ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಶಾಲಾ ಆವರಣದ ಸುತ್ತಮುತ್ತ ಇಂತಹ ವಿಷಕಾರಿ ಗಿಡ-ಗಂಟೆಗಳು ಇರಬಾರದು ಹಾಗೂ ಅಪರಿಚಿತ ಕಾಯಿಗಳನ್ನು ತಿನ್ನಬಾರದು ಎಂದು ಮಕ್ಕಳಿಗೆ ಜಾಗೃತಿ ಮೂಡಿಸಬೇಕಾದ ಅಗತ್ಯವನ್ನು ಈ ಘಟನೆ ನೆನಪಿಸಿದೆ.