Asianet Suvarna News Asianet Suvarna News

ಹುಬ್ಬಳ್ಳಿ- ಧಾರವಾಡ: IPS ಅಧಿಕಾರಿಗಳ ಕಿತ್ತಾಟಕ್ಕೆ ಸಾರ್ವಜನಿಕರ ಆಕ್ರೋಶ

ಸರ್ಕಾರ ಕೂಡಲೇ ಮಧ್ಯಪ್ರವೇಶಿಸಲಿ| ಎಲ್ಲ ಇಲಾಖೆಗಳಿಗೂ ಪೊಲೀಸರ ಸಹಕಾರ ಬೇಕೇ ಬೇಕು| ಅವರೇ ಈ ರೀತಿ ಜಗಳಾಡಿದರೆ ಸಮಸ್ಯೆಯಾಗಲ್ವೆ?| ಇಷ್ಟಾದರೂ ಸಚಿವ ಜಗದೀಶ ಶೆಟ್ಟರ್‌, ಗೃಹ ಸಚಿವರೇಕೆ ಸುಮ್ಮನಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆ| 

Outrage of the Public for IPS Officers Cold War in Hubballi Dharwad grg
Author
Bengaluru, First Published Oct 11, 2020, 12:32 PM IST

ಹುಬ್ಬಳ್ಳಿ(ಅ.11): ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್‌ ಕಮಿಷನರೇಟ್‌ನಲ್ಲಿ ನಡೆದಿರುವ ಐಪಿಎಸ್‌ ಅಧಿಕಾರಿಗಳ ತಿಕ್ಕಾಟಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೂಡಲೇ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಪೊಲೀಸ್‌ ಇಲಾಖೆಯ ವಿರುದ್ಧವೇ ಹೋರಾಟಕ್ಕೆ ಕೈಗೆತ್ತಿಕೊಳ್ಳಬೇಕಾಗುತ್ತೆ ಎಂಬ ಎಚ್ಚರಿಕೆ ಸಂದೇಶವನ್ನು ಸಾರ್ವಜನಿಕ ಸಂಘಟನೆಗಳು ನೀಡುತ್ತಿವೆ.

ಹೌದು, ಕಮಿಷನರೇಟ್‌ನಲ್ಲಿ ಕಮಿಷನರ್‌ ಆರ್‌. ದಿಲೀಪ್‌ ಹಾಗೂ ಡಿಸಿಪಿ ಕೃಷ್ಣಕಾಂತ ಇವರ ಮಧ್ಯೆ ಕಳೆದ 10- 15 ದಿನಗಳಿಂದ ಕಿತ್ತಾಟ ನಡೆಯುತ್ತಲೇ ಇದೆ. ಪ್ರತಿ ದಿನ ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂಡಿಸುತ್ತಾ ಪತ್ರ ಸಮರ ನಡೆಸಿದ್ದಾರೆ. ಇಬ್ಬರೂ ಐಪಿಎಸ್‌ ಅಧಿಕಾರಿಗಳೇ. ಹಾಗೆ ನೋಡಿದರೆ ಕಮಿಷನರೇಟ್‌ನಲ್ಲಿ ಹೊಂದಾಣಿಕೆ, ಸಮನ್ವಯದ ಕೊರತೆ ಇದ್ದು ಬಹಳ ದಿನಗಳೇ ಆಗಿವೆ. ಅದೀಗ ಬೀದಿರಂಪವಾಗಿದೆ.

ಏನಾಗಿದೆ?:

ಡಿಸಿಪಿ ಕೃಷ್ಣಕಾಂತ ಅವರು ತಮಗೆ ಕಮಿಷನರ್‌ ಭೇಟಿಯಾಗಲು ಅವಕಾಶವನ್ನೇ ನೀಡುತ್ತಿಲ್ಲ. ಇದರಿಂದಾಗಿ ಕೆಲ ಪ್ರಕರಣಗಳ ತನಿಖೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಸಂಚಾರ ನಿಯಮ ಉಲ್ಲಂಘನೆ, ಕೋವಿಡ್‌ ಹಿನ್ನೆಲೆ ಮಾಸ್ಕ್‌ ಧರಿಸದಿರುವುದಕ್ಕೆ ದಂಡ ವಸೂಲಿ ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಚರ್ಚೆಗೆ ಅವಕಾಶವನ್ನೇ ಕೊಡುತ್ತಿಲ್ಲ ಎಂದು ದೂರಿ ಪತ್ರ ಬರೆದಿದ್ದರು. ಅದು ಎರಡೇ ದಿನದಲ್ಲಿ ವೈರಲ್‌ ಆಗಿತ್ತು.

ಇದಾದ ಬಳಿಕ ಕಮಿಷನರ್‌ ಆರ್‌. ದಿಲೀಪ್‌, ಡಿಸಿಪಿಗೆ ಮೆಮೋ ಕೊಟ್ಟರು. ಇದಕ್ಕೆ ಪ್ರತ್ಯುತ್ತರವನ್ನು ಡಿಸಿಪಿ ಕೊಟ್ಟಿದ್ದುಂಟು. ಹೀಗೆ ಕಳೆದ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಪತ್ರ ಸಮರವನ್ನು ಇಬ್ಬರು ಅಧಿಕಾರಿಗಳು ನಡೆಸಿದ್ದುಂಟು. ಎಲ್ಲ ಪತ್ರಗಳ ಪ್ರತಿಗಳು ವೈರಲ್‌ ಆಗುತ್ತಿವೆ. ಹಾಗೆ ನೋಡಿದರೆ ಮೆಮೋ ನೀಡುವುದು, ಅದಕ್ಕೆ ಉತ್ತರ ಕೊಡುವುದು ಎಲ್ಲವೂ ಇಲಾಖೆಯ ಆಂತರಿಕ ವಿಷಯ. ಅದ್ಹೇಗೆ ಪತ್ರಗಳು ವೈರಲ್‌ ಆಗುತ್ತಿವೆ ಎಂಬ ಪ್ರಶ್ನೆ ಮೂಡುತ್ತದೆ. ಅಧಿಕಾರಿ ವರ್ಗವೇ ಈ ಪತ್ರಗಳನ್ನೆಲ್ಲ ವೈರಲ್‌ ಮಾಡುತ್ತಿದ್ದಾರೆ. ಇಲಾಖೆಯಲ್ಲಿ ನಡೆಯುತ್ತಿರುವ ವಿಷಯವೆಲ್ಲ ಸಾರ್ವಜನಿಕರಿಗೆ ಗೊತ್ತಾಗಲಿ ಎಂಬ ಉದ್ದೇಶ ಇದರಲ್ಲಿ ಅಡಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಗೃಹ ಸಚಿವ ಬೊಮ್ಮಾಯಿ ತವರೂರಲ್ಲಿ ಪೊಲೀಸ್‌ ಕಮಿಷನರೇಟ್‌ನಲ್ಲಿ ಅಧಿಕಾರಿಗಳ ತಿಕ್ಕಾಟ!

ಆಡಳಿತಕ್ಕೆ ಧಕ್ಕೆ:

ಹೀಗೆ ಈ ಇಬ್ಬರು ಅಧಿಕಾರಿಗಳ ನಡುವಿನ ತಿಕ್ಕಾಟದಿಂದಾಗಿ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಬ್ಬರ ನಡುವಿನ ತಿಕ್ಕಾಟದಿಂದ ಕೆಳಗಿನ ಅಧಿಕಾರಿ, ನೌಕರರಲ್ಲಿ ಯಾರ ಮಾತನ್ನು ಕೇಳಬೇಕು ಎಂಬ ಗೊಂದಲ ಉಂಟಾಗಿದೆ. ಒಬ್ಬರು ಒಂದು ಕೆಲಸ ಹೇಳಿದರೆ ಮತ್ತೊಬ್ಬರು ಅದಕ್ಕೆ ತಡೆಯೊಡ್ಡುತ್ತಿದ್ದಾರಂತೆ ಎಂಬ ಗುಸುಗುಸು ಶುರುವಾಗಿದೆ. ಇದರಿಂದ ಕಮಿಷನರೇಟ್‌ನಲ್ಲಿ ಅಧಿಕಾರಿ ವರ್ಗದಲ್ಲೇ ಎರಡು ಬಣಗಳಾಗಿವೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಕಮಿಷನರ್‌ ಅವರದ್ದು ಒಂದು ಬಣವಾದರೆ, ಡಿಸಿಪಿ ಅವರದೊಂದು ಬಣವೆಂಬಂತಾಗಿದೆ.

ಹಾಗೆ ನೋಡಿದರೆ ಕಮಿಷನರೇಟ್‌ನಲ್ಲಿ ಒಳಜಗಳ ಈ ಹಿಂದೆ ಇರಲಿಲ್ಲ ಅಂತೇನೂ ಇಲ್ಲ. ಹಿಂದೆಯೂ ಇತ್ತು. ಆದರೆ ಅದು ಸಭೆಗಳಲ್ಲಿ ಮಾತ್ರ ಸೀಮಿತವಾಗಿತ್ತು. ಹೀಗೆ ವಾರಗಟ್ಟಲೇ ಪರಸ್ಪರ ಕಚ್ಚಾಡುತ್ತಾ ಪತ್ರ ಸಮರ ನಡೆಸುವಷ್ಟರ ಮಟ್ಟಿಗೆ ಬೀದಿರಂಪವಾಗಿರಲಿಲ್ಲ. ಕೆಳಗಿನ ಅಧಿಕಾರಿಗಳಿಗೆ ಬುದ್ಧಿ ಹೇಳಬೇಕಾದ ಐಪಿಎಸ್‌ ಅಧಿಕಾರಿಗಳೇ ಬಹಿರಂಗವಾಗಿ ಕಚ್ಚಾಟದಲ್ಲಿ ತೊಡಗಿದರೆ ಹೇಗೆ ಎಂಬ ಮಾತು ಸಾರ್ವಜನಿಕ ವಲಯದ್ದು.

ಮಧ್ಯಪ್ರವೇಶಿಸಲಿ:

ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅಧಿಕಾರಿ ವರ್ಗದ ಈ ತಿಕ್ಕಾಟವನ್ನು ಕೂಡಲೇ ಶಮನಗೊಳಿಸಿ ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕಮಿಷನರೇಟ್‌ ವಿರುದ್ಧ ಹೋರಾಟ ರೂಪಿಸಬೇಕಾಗುತ್ತೆ ಎಂದು ಸಾರ್ವಜನಿಕ ಸಂಘಟನೆಗಳು ಒತ್ತಾಯಿಸಿವೆ. ಒಟ್ಟಿನಲ್ಲಿ ಕಮಿಷನರೇಟ್‌ನಲ್ಲಿ ನಡೆಯುತ್ತಿರುವ ತಿಕ್ಕಾಟಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವನ್ನುಂಟು ಮಾಡಿರುವುದಂತೂ ಸತ್ಯ.

ಸಾರ್ವಜನಿಕರಿಗೆ ರಕ್ಷಣೆಯಷ್ಟೇ ಅಲ್ಲ. ಪ್ರತಿಯೊಂದು ಇಲಾಖೆಗೂ ಕಾನೂನಾತ್ಮಕ ನೆರವು ನೀಡುವಂತಹ ಇಲಾಖೆ ಪೊಲೀಸ್‌ ಇಲಾಖೆ. ಆದರೆ ಹುಬ್ಬಳ್ಳಿ- ಧಾರವಾಡ ಕಮಿಷನರೇಟ್‌ನಲ್ಲಿನ ಐಪಿಎಸ್‌ ಅಧಿಕಾರಿಗಳಿಬ್ಬರು ಪರಸ್ಪರ ಕಚ್ಚಾಡುವುದನ್ನು ನೋಡಿದರೆ ಬೇಸರವಾಗುತ್ತೆ. ಸರ್ಕಾರ ಏನು ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಕೂಡಲೇ ಸಚಿವರು ಮಧ್ಯಪ್ರವೇಶಿಸಿ ಇದನ್ನು ಶಮನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರು ತಿಳಿಸಿದ್ದಾರೆ. 

ಗೃಹ ಸಚಿವರೇಕೆ ಮೌನ: ಹೊರಟ್ಟಿ ಪ್ರಶ್ನೆ

ಹು- ಧಾ ಪೊಲೀಸ್‌ ಕಮೀಷನರ್‌ ಹಾಗೂ ಡಿಸಿಪಿ ನಡುವಿನ ಕಲಹ ಯಾವ ಉದ್ದೇಶಕ್ಕಾಗಿ ನಡೆಯುತ್ತಿದೆಯೋ ತಿಳಿದಿಲ್ಲ. ಇದರಲ್ಲಿ ದುಡ್ಡಿನ ವಿಚಾರ ಏನಾದರೂ ಇದೆಯೋ ಎಂಬುದು ಗೊತ್ತಿಲ್ಲ. ಗೃಹ ಸಚಿವರು ಇಬ್ಬರಲ್ಲಿ ಒಬ್ಬರನ್ನು ವರ್ಗಾವಣೆ ಮಾಡುವುದು ಸೂಕ್ತ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಕಮೀಷನರ್‌ ಆರ್‌. ದಿಲೀಪ್‌, ಡಿಸಿಪಿ ಕೃಷ್ಣಕಾಂತ ನಡುವಿನ ಪತ್ರ ಸಮರ ಕುರಿತು ಮಾತನಾಡಿದ ಅವರು, ಕಳೆದ ನಲ್ವತ್ತು ವರ್ಷಗಳ ರಾಜಕೀಯ ಅನುಭವದಲ್ಲಿ ನಾವು ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಕಾನ್ಸ್‌ಟೆಬಲ್‌ ನಡುವಿನ ಗಲಾಟೆ ನೋಡಿದ್ದೇವೆ. ಆದರೆ, ಇಂತಹ ಪೊಲೀಸ್‌ ಕಮೀಷನರ್‌ ಹಾಗೂ ಡಿಸಿಪಿಯನ್ನು ನೋಡಿರಲಿಲ್ಲ. ಈಗ ಇದನ್ನೂ ಕಂಡ ಹಾಗಾಗಿದೆ. ಡಿಸಿಪಿ ಕೃಷ್ಣಕಾಂತ ಸ್ಟ್ರಿಕ್ಟ್ ಎಂದು ಕೇಳಿದ್ದೇನೆ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿ, ರಾಜಕೀಯ ಹಿತಾಸಕ್ತಿ ಕಾರಣದಿಂದ ಇಂಥ ಸಮರ ನಡೆಯುತ್ತಿದೆ ಎನ್ನಲಾಗಿದೆ. ಆದರೆ, ಇದು ಆಡಳಿತ ವೈಫಲ್ಯ, ಸಮಾಜಕ್ಕೆ ಬೇರೆ ರೀತಿಯ ಸಂದೇಶ ರವಾನೆ ಆಗುತ್ತಿದೆ. ಇಷ್ಟಾದರೂ ಸಚಿವ ಜಗದೀಶ ಶೆಟ್ಟರ್‌, ಗೃಹ ಸಚಿವರೇಕೆ ಸುಮ್ಮನಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
 

Follow Us:
Download App:
  • android
  • ios