ಹುಬ್ಬಳ್ಳಿ(ಅ.07): ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ನಲ್ಲಿನ ಇಬ್ಬರು ಐಪಿಎಸ್‌ ಅಧಿಕಾರಿಗಳ ನಡುವೆ ನಡೆಯುತ್ತಿರುವ ಶೀತಲ ಸಮರ ಇದೀಗ ತಾರಕ್ಕೇರಿದೆ. ಕಮಿಷನರ್‌ ಆರ್‌. ದಿಲೀಪ್‌ ಹಾಗೂ ಡಿಸಿಪಿ ಕೃಷ್ಣಕಾಂತ ನಡುವಿನ ಜಗಳ ಪೊಲೀಸ್‌ ಮಹಾನಿರ್ದೇಶಕರ ವರೆಗೂ ತಲುಪಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ತವರೂರಲ್ಲೇ ಈ ರೀತಿ ಪೊಲೀಸ್‌ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಸಮರ ಕಮಿಷನರೇಟ್‌ ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.

ಆಗಿದ್ದೇನು?:

ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮೀಷನರ್‌ ಆರ್‌. ದಿಲೀಪ್‌, ಇಲಾಖೆಯ ವಿಚಾರಗಳು, ಅಕ್ರಮ ಚಟುವಟಿಕೆ, ಕೋವಿಡ್‌ -19 ವಿಚಾರದಲ್ಲಿ ಮಾಸ್ಕ್‌ ಧರಿಸದೇ ಇರುವವರಿಗೆ ದಂಡ ವಿಧಿಸುವ ವಿಚಾರ ಹಾಗೂ ಸಾಮಾಜಿಕ ಅಂತರ ಕಾಪಾಡುವ ವಿಚಾರದ ಬಗ್ಗೆ ಚರ್ಚೆ ಮಾಡಲು ಅನುಮತಿ ನೀಡುತ್ತಿಲ್ಲವೆಂದು ಡಿಸಿಪಿ ಕೃಷ್ಣಕಾಂತ್‌ ಆರೋಪಿಸಿ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಡಿಸಿಪಿ ಆಗಿರುವ ತಾವೂ ಆಯುಕ್ತರನ್ನು ಭೇಟಿ ಮಾಡಲು ಇಂಟರ್‌ಕಾಮ್‌ ಫೋನ್‌ ಮೂಲಕ ಸಂಪರ್ಕ ಮಾಡಿದರೂ ಭೇಟಿಗೆ ಅವಕಾಶ ನೀಡುತ್ತಿಲ್ಲ. ಎರಡುವರೆ ಗಂಟೆಗಳ ಕಾಲ ಆಯುಕ್ತರ ಭೇಟಿಗೆ ಕಾಯ್ದರೂ ಅವಕಾಶ ನೀಡಿಲ್ಲ. ಈ ಕಾರಣದಿಂದಾಗಿ ತಾವು ಕಂಟ್ರೋಲ್‌ ರೂಂ ಮೂಲಕ ಆಯುಕ್ತರಿಗೆ ಪತ್ರ ಬರೆದಿರುವುದಾಗಿ ತಿಳಿಸಿರುವ ಕೃಷ್ಣಕಾಂತ, ಪತ್ರದ ಪ್ರತಿಯನ್ನು ಪೊಲೀಸ್‌ ಮಹಾನಿರ್ದೇಶಕರಿಗೂ ಕಳುಹಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ನಿವೃತ್ತ ಶಿಕ್ಷಕ : 1.44 ಕೋಟಿ ಆಸ್ತಿ ಘೋಷಣೆ

ಈ ಹಿಂದೆ ಕಮಿಷನರ್‌ ಆರ್‌. ದಿಲೀಪ್‌, ಡಿಸಿಪಿ ಹಾಗೂ ಎಸಿಪಿಗಳ ಜತೆಗೆ ಇದೇ ರೀತಿ ಜಗಳ ಮಾಡಿಕೊಂಡಿದ್ದರು. ಡಿಸಿಪಿ ಬಿ.ಎಲ್‌. ನಾಗೇಶ ಅವರಿದ್ದಾಗಲೂ ಇದೇ ರೀತಿ ಕಮಿಷನರೇಟ್‌ನ ಒಳಜಗಳ ಬಹಿರಂಗಗೊಂಡಿತ್ತು. ಆಗಲೂ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಆಗಿನ ಡಿಸಿಪಿ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದುಂಟು. ಇದೀಗ ಡಿಸಿಪಿ ಕೃಷ್ಣಕಾಂತ ತಮ್ಮ ಅಸಮಾಧಾನವನ್ನು ಪತ್ರದ ಮೂಲಕ ಹೊರ ಹಾಕಿದ್ದಾರೆ. ಇದರಿಂದ ಕಮಿಷನರೇಟ್‌ನಲ್ಲಿ ಒಳಜಗಳ ಬೀದಿರಂಪವಾದಂತಾಗಿದೆ. ಕಮಿಷನರೇಟ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿ ನೀಡಿದಂತಾಗಿದೆ.

ಎಚ್ಚರಿಕೆ ಏನಾಯ್ತು?:

ಹೀಗೆ ಪೊಲೀಸ್‌ ಕಮಿಷನರೇಟ್‌ನಲ್ಲಿ ಹಿರಿಯ ಹಾಗೂ ಕಿರಿಯ ಅಧಿಕಾರಿಗಳ ನಡುವೆ ಸಮನ್ವಯ ಕೊರತೆ ಇದ್ದೇ ಇದೆ. ಇದರಿಂದಾಗಿ ಕಮಿಷನರೇಟ್‌ನ ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ. ಅಪರಾಧ ಪ್ರಕರಣಗಳ ತಡೆಗಟ್ಟಲು ತೊಂದರೆಯಾಗುತ್ತಿರುವುದು ಒಂದೆಡೆಯಾಗಿದ್ದರೆ, ಮತ್ತೊಂದೆಡೆ ಇಬ್ಬರು ಹಿರಿಯ ಅಧಿಕಾರಿಗಳು ಈ ರೀತಿ ಕಿತ್ತಾಡಿದರೆ ಅವರ ಕೆಳಗಿನ ಅಧಿಕಾರಿ, ನೌಕರರ ವರ್ಗದಲ್ಲಿ ಗೊಂದಲ ಉಂಟಾಗುವುದು ಸಹಜ

ಎಬಿವಿಪಿ ಕಾರ್ಯಕರ್ತರು ಇತ್ತೀಚಿಗೆ ಮನವಿ ಸಲ್ಲಿಸಲು ಹೋದರೆ ಆಗಲೂ ಆಯುಕ್ತರು ಸಿಕ್ಕಿರಲಿಲ್ಲ. ಕಚೇರಿಯಲ್ಲೇ ಇದ್ದ ಡಿಸಿಪಿ ಸೇರಿದಂತೆ ಯಾವುದೇ ಹಂತದ ಅಧಿಕಾರಿ ಮನವಿ ಸ್ವೀಕರಿಸಲು ಬಂದಿರಲಿಲ್ಲ. ಹೀಗಾಗಿ ಆಯುಕ್ತರ ಕುರ್ಚಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದ್ದುಂಟು. ಹೀಗೆ ಕಮಿಷನರೇಟ್‌ನಲ್ಲಿ ಒಂದಿಲ್ಲೊಂದು ಗೊಂದಲಗಳು ಆಗಾಗ ಸಂಭವಿಸುತ್ತಲೇ ಇವೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಳೆದ ತಿಂಗಳು ಕಮಿಷನರಿಗೆ ಎಚ್ಚರಿಕೆ ಕೊಟ್ಟು ಹೋಗಿದ್ದರು. ಕಚೇರಿ ಬಿಟ್ಟು ಫಿಲ್ಡ್‌ಗೆ ಇಳಿಯುವಂತೆ ಸೂಚನೆ ನೀಡಿದ್ದರು. ಇದಾಗಿ ಮೂರು ದಿನಕ್ಕೆ ಪೊಲೀಸ್‌ ಮಹಾನಿರ್ದೇಶಕ ಸೂದ್‌ ಅವರು ಸಭೆ ನಡೆಸಿದ್ದರು. ಇಷ್ಟೆಲ್ಲ ಆದರೂ ಕಮಿಷನರೇಟ್‌ನಲ್ಲಿನ ಗೊಂದಲ ಮಾತ್ರ ಬಗೆಹರಿಯುತ್ತಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ತವರೂರಲ್ಲಿ ಕಮಿಷನರೇಟ್‌ನ ಪರಿಸ್ಥಿತಿ ಈ ರೀತಿ ಆಗಿದೆ ಎಂದರೆ ಹೇಗೆ? ಇಲ್ಲಿನ ಪರಿಸ್ಥಿತಿ ಸರಿಪಡಿಸಲು ಇನ್ನಾದರೂ ಕ್ರಮ ಕೈಗೊಳ್ಳಬೇಕು. ಕಮಿಷನರೇಟ್‌ಗೆ ಬಿಸಿ ಮುಟ್ಟಿಸಿ ಆಡಳಿತ ಚುರುಕುಗೊಳಿಸಬೇಕು ಎಂಬ ಆಗ್ರಹ ಸಾರ್ವಜನಿಕರದ್ದು.