*   ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭಾಗಿ *   ಮಿಲಾಗ್ರಿಸ್‌ ಚರ್ಚ್‌ನಲ್ಲಿ ಆಸ್ಕರ್‌ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ*   ಗಂಟೆಗೆ ಚರ್ಚ್‌ನಲ್ಲಿ ಬಲಿಪೂಜೆಯ ವಿಧಿ ವಿಧಾನಗಳು 

ಮಂಗಳೂರು/ಉಡುಪಿ(ಸೆ.15): ಅಗಲಿದ ಹಿರಿಯ ಕಾಂಗ್ರೆಸಿಗ, ರಾಜ್ಯಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಪಾರ್ಥಿವ ಶರೀರವನ್ನು ಅವರ ಹುಟ್ಟೂರು ಹಾಗೂ ಕಾರ್ಯಕ್ಷೇತ್ರವಾಗಿದ್ದ ಉಡುಪಿ, ಮಂಗಳೂರಿನಲ್ಲಿ ಮಂಗಳವಾರ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು, ನೂರಾರು ಮಂದಿ ಅಭಿಮಾನಿಗಳು, ಹಿತೈಷಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.

ಬೆಳಗ್ಗೆ ಉಡುಪಿಯ ಮದರ್‌ ಆಫ್‌ ಸೋರೋಸ್‌ ಚರ್ಚ್‌ನಲ್ಲಿ ಪ್ರಾರ್ಥನೆ, ಸಾರ್ವಜನಿಕ ದರ್ಶನದ ಬಳಿಕ ಮಧ್ಯಾಹ್ನ 3.30ರ ವೇಳೆಗೆ ರಸ್ತೆ ಮಾರ್ಗದ ಮೂಲಕ ಆಸ್ಕರ್‌ ಪಾರ್ಥಿವ ಶರೀರವನ್ನು ಮಂಗಳೂರಿಗೆ ಕರೆತರಲಾಯಿತು. ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಕಚೇರಿ ಎದುರು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪುಷ್ಪನಮನ ಸಲ್ಲಿಸಿದರು. ಆಸ್ಕರ್‌ ಪತ್ನಿ ಬ್ಲೋಸಂ ಫರ್ನಾಂಡಿಸ್‌, ಮಕ್ಕಳಾದ ಓಶನ್‌ ಮತ್ತು ಓಶನಿ ಅವರಿಗೆ ಸಾಂತ್ವನ ಹೇಳಿದರು.

ಆಸ್ಕರ್ ಮನೆ ಅಂದ್ರೆ ಕಾಂಗ್ರೆಸ್ ಆಫೀಸ್.. ಸದಾ ಲಭ್ಯ!

ಕುಟುಂಬಸ್ಥರಿಗೆ ಡಿಕೆಶಿ ಸಾಂತ್ವನ: ಆರಂಭದಲ್ಲಿ ಮಲಂಕರ ಆರ್ಥೊಡಾಕ್ಸ್‌ ಸಿರಿಯನ್‌ ಚರ್ಚ್‌ ಧರ್ಮಗುರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಧ್ರುವನಾರಾಯಣ ಸೇರಿದಂತೆ ಹಿರಿಯ ಕಾಂಗ್ರೆಸ್‌ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿ, ಆಸ್ಕರ್‌ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಾರ್ವಜನಿಕರು, ಹಿತೈಷಿಗಳು, ಅಭಿಮಾನಿಗಳು ಸರತಿ ಸಾಲಿನಲ್ಲಿ ಬಂದು ಕಂಬನಿ ಮಿಡಿದರು.

ರೈ, ಖಾದರ್‌ ಉಸ್ತುವಾರಿ: 

ಸುಮಾರು ಒಂದೂವರೆ ಗಂಟೆ ಕಾಲ ಪಾರ್ಥಿವ ಶರೀರದ ಬಳಿಯೇ ನಿಂತು ಮಾಜಿ ಸಚಿವ ರಮಾನಾಥ ರೈ, ಶಾಸಕ ಯು.ಟಿ. ಖಾದರ್‌, ಐವನ್‌ ಡಿಸೋಜ ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಜಿಲ್ಲೆಯ ಎಲ್ಲ ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಕಾರ್ಪೊರೇಟರ್‌ಗಳು, ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೊಲೀಸ್‌ ಆಯುಕ್ತ ಶಶಿಕುಮಾರ್‌ ಅಗಲಿದ ಹಿರಿಯ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.

ಆಸ್ಕರ್‌ ಫೆರ್ನಾಂಡಿಸ್‌ ನಿಧನಕ್ಕೆ ಸೋನಿಯಾ ಸಂತಾಪ, ಕಣ್ಣೀರಾದ ಪತ್ನಿ ಬ್ಲಾಸಂ!

ಬಿಗಿ ಭದ್ರತೆ: 

ಸಂಜೆ 5 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಳಿಕ ಪಾರ್ಥಿವ ಶರೀರವನ್ನು ಫಾದರ್‌ ಮುಲ್ಲರ್‌ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಯಿತು. ಮಲ್ಲಿಕಟ್ಟೆರಸ್ತೆಯನ್ನು ವಾಹನ ಸಂಚಾರ ಮುಕ್ತಗೊಳಿಸಲಾಗಿದ್ದು, ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ದಿನವಿಡಿ ಕರಾವಳಿಯಲ್ಲಿ ಕಳೆದ ಡಿಕೆಶಿ

ಆಸ್ಕರ್‌ ಫರ್ನಾಂಡಿಸ್‌ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ ಹಿನ್ನೆಲೆಯಲ್ಲಿ ಕರಾವಳಿಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ದಿನವಿಡಿ ಇಲ್ಲೇ ಇದ್ದು ಎಲ್ಲ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಬೆಳಗ್ಗೆ 11.30ರ ವೇಳೆಗೆ ಉಡುಪಿಗೆ ಆಗಮಿಸಿದ್ದ ಡಿಕೆಶಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಪಾರ್ಥಿವ ಶರೀರ ಹೊತ್ತ ಆಂಬ್ಯುಲೆನ್ಸ್‌ ಜತೆಗೇ ಮಂಗಳೂರಿಗೆ ಆಗಮಿಸಿ ಅಂತಿಮ ದರ್ಶನ ಮುಗಿಯುವವರೆಗೂ ಅಲ್ಲೇ ಇದ್ದರು.

ಬೆಂಗಳೂರಲ್ಲಿ ಅಂತ್ಯಸಂಸ್ಕಾರ

ಬುಧವಾರ ಬೆಳಗ್ಗೆ 9.30ಕ್ಕೆ ಮಂಗಳೂರಿನ ಮಿಲಾಗ್ರಿಸ್‌ ಚರ್ಚ್‌ನಲ್ಲಿ ಆಸ್ಕರ್‌ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟ ಬಳಿಕ 12 ಗಂಟೆಗೆ ಚರ್ಚ್‌ನಲ್ಲಿ ಬಲಿಪೂಜೆಯ ವಿಧಿ ವಿಧಾನಗಳು ನಡೆಯಲಿವೆ. ಅಲ್ಲಿಂದ ಸಂಜೆ ವಾಯು ಮಾರ್ಗದ ಮೂಲಕ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆದೊಯ್ದು ಗುರುವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ. ರಾಷ್ಟ್ರ, ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಆಗಮಿಸುವ ನಿರೀಕ್ಷೆಯಿದೆ. ಬಳಿಕ ಬೆಂಗಳೂರಿನ ಸೈಂಟ್‌ ಪ್ಯಾಟ್ರಿಕ್‌ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.