Happy Birthday Puneeth Rajkumar: ಅಪ್ಪು ಅಭಿಮಾನಿಗಳ ಅಂಗಾಂಗ ದಾನ ಕ್ರಾಂತಿ..!

*  ನೇತ್ರದಾನದ ಜತೆಗೆ ಅಂಗಾಂಗ ದಾನವೂ ಹೆಚ್ಚಳ
*  ಜೀವಸಾರ್ಥಕತೆ ಟ್ರಸ್ಟ್‌ನಲ್ಲಿ 4 ತಿಂಗಳಲ್ಲಿ ಮೂರು ಪಟ್ಟು ನೋಂದಣಿ ಹೆಚ್ಚಳ
*  7000ಕ್ಕೂ ಅಧಿಕ ಮಂದಿ ಅಂಗಾಂಗ ದಾನಕ್ಕೆ ನೋಂದಣಿ
 

Organ Donation Revolution From Puneeth Rajkumar Fans in Karnataka grg

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಮಾ.17):  ಪುನೀತ್‌ ರಾಜಕುಮಾರ್‌(Appu) ನೇತ್ರದಾನದಿಂದ ಪ್ರೇರಣೆ ಪಡೆದ ಅವರ ಸಾವಿರಾರು ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಅಂಗಾಂಗ ದಾನದ(Organ Donation) ಪ್ರತಿಜ್ಞೆ ಪಡೆದಿದ್ದಾರೆ!ಇನ್ನೊಂದೆಡೆ ನಾರಾಯಣ ನೇತ್ರಾಲಯದಲ್ಲಿ(Narayana Netralaya) ಮೂರು ದಶಕಗಳ ನೋಂದಣಿಯ ದಾಖಲೆಯನ್ನು ಮುರಿದು ಕೇವಲ ನಾಲ್ಕು ತಿಂಗಳಲ್ಲಿ ಬರೋಬ್ಬರಿ 70 ಸಾವಿರ ಮಂದಿ ನೇತ್ರದಾನಕ್ಕೆ ನೋಂದಣಿಯಾಗಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಕಣ್ಣುಗಳು ಸಂಗ್ರಹವಾಗಿವೆ.

ಪುನೀತ್‌(Puneeth Rajkumar) ನೇತ್ರದಾನದ ನಂತರ ನೇತ್ರದಾನ ಜತೆಗೆ ಅಂಗಾಂಗ ದಾನ ಜಾಗೃತಿಯೂ ಹೆಚ್ಚಾಗಿದೆ. ರಾಜ್ಯ ಸರ್ಕಾರದ ಅಧಿಕೃತ ಅಂಗಾಂಗ ಕಸಿ ನಿರ್ವಹಣಾ ಸಂಸ್ಥೆಯಾಗಿರುವ ಜೀವಸಾರ್ಥಕತೆಯಲ್ಲಿ 2017ರಿಂದ 2021ರ ಅಕ್ಟೋಬರ್‌ವರೆಗೂ(ಐದು ವರ್ಷದಲ್ಲಿ) 2,775 ಮಂದಿ ಅಂಗಾಂಗ ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದರು. ಆದರೆ, ನವೆಂಬರ್‌ನಿಂದ ಫೆಬ್ರವರಿವರೆಗೂ ಬರೋಬ್ಬರಿ 7,641 ಮಂದಿ ಹೊಸದಾಗಿ ಅಂಗಾಂಗ ದಾನಕ್ಕೆ ನೋಂದಣಿಯಾಗಿದ್ದಾರೆ. ನಾಲ್ಕೇ ತಿಂಗಳಲ್ಲಿ ನೋಂದಣಿಯು ಮೂರುಪಟ್ಟು ಹೆಚ್ಚಾಗಿ ಒಟ್ಟಾರೆ 10 ಸಾವಿರ ಗಡಿದಾಟಿದೆ. ನೋಂದಣಿಯಾದವರ ಪೈಕಿ ಶೇ.90ರಷ್ಟು ಮಂದಿ ಯುವಜನರೇ ಆಗಿದ್ದಾರೆ.

Bengaluru Traffic Police: ಹೆಲ್ಮೆಟ್‌ ಅಭಿಯಾನಕ್ಕೆ ಪುನೀತ್‌ ರಾಜಕುಮಾರ್‌ ಸಂದೇಶ

ನೇತ್ರದಾನದ ವೇಳೆ ಜಾಗೃತಿ:

ನವೆಂಬರ್‌ನಿಂದ ಸಹಾಯವಾಣಿಗೆ ನೇತ್ರದಾನದ(Eye Donation) ನೋಂದಣಿ ಮಾಹಿತಿ ಕೋರಿ ಬರುವ ಕರೆಗಳು ಹೆಚ್ಚಾದವು. ಬಹುತೇಕರು ಪುನೀತ್‌ ನೇತ್ರದಾನದ ಪ್ರೇರೇಪಣೆಯನ್ನು ಉಲ್ಲೇಖಿಸಿದರು. ಅಂತಹವರಿಗೆ ಅಂಗಾಂಗದಾನ ಮಹತ್ವವನ್ನು ವಿವರಿಸಲಾಗುತ್ತಿತ್ತು. ಇದರಿಂದ ಪ್ರೇರಿತರಾಗಿ ಬಹಳಷ್ಟುಮಂದಿ ನೇತ್ರದಾನ ಜತೆಗೆ ಅಂಗಾಂಗಗಳ ದಾನಕ್ಕೂ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಸಂಸ್ಥೆಯಿಂದ ಪ್ರಮಾಣಪತ್ರ ವಿತರಿಸಲಾಗಿದೆ ಎಂದು ಜೀವಸಾರ್ಥಕತೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ 22 ಯುವಕ-ಯುವತಿಯರ ಮರಣಾನಂತರ ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ. ಮೆದುಳು ನಿಷ್ಕ್ರೀಯರಾದ, ಅಪಘಾತಕ್ಕೀಡಾದ, ಹಠಾತ್‌ ಹೃದಯಾಘಾತವಾದ(Heart Attack) ಯುವಜನತೆಯಲ್ಲಿ ಅಂಗಾಂಗ ದಾನ ಮತ್ತು ನೇತ್ರದಾನ ಹೆಚ್ಚಾಗಿದೆ. ಸದ್ಯ 6 ಸಾವಿರ ಮಂದಿ ಅಂಗಾಂಗ ವೈಫಲ್ಯದಿಂದ ದಾನಿಗಳಿಗೆ ಕಾಯುತ್ತಿದ್ದಾರೆ. ಪ್ರತಿತಿಂಗಳು 150 ಮಂದಿ ಕಸಿಗೆ ಅಂಗಾಂಗ ಬೇಕು ಎಂದು ನೋಂದಣಿ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ದಾನ ಮತ್ತು ದಾನಕ್ಕೆ ಸ್ವಯಂಪ್ರೇರಿತ ನೋಂದಣಿ ಹೆಚ್ಚಾಗಿರುವುದು ಆಶಾದಾಯಕ ಬೆಳವಣಿಗೆ ಎನ್ನುತ್ತಾರೆ ಜೀವಸಾರ್ಥಕತೆಯ ಅಂಗಾಂಗ ಕಸಿ ಸಂಯೋಜಕ ನೌಷದ್‌ ಪಾಷಾ ಹೇಳಿತ್ತಾರೆ.

3 ದಶಕದ ನೇತ್ರದಾನ ನೋಂದಣಿ ನಾಲ್ಕೇ ತಿಂಗಳಲ್ಲಿ!

ನಟ ರಾಜ್‌ಕುಮಾರ್‌(Dr Rajkumar) ಮತ್ತು ಪುನೀತ್‌ ರಾಜಕುಮಾರ್‌ ನೇತ್ರದಾನ ಮಾಡಿದ್ದ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನ ನೋಂದಣಿಯ ಕಾಂತ್ರಿಯೇ ಆಗುತ್ತಿದೆ. ಆಸ್ಪತ್ರೆ ಆರಂಭವಾಗಿ 28 ವರ್ಷಗಳಲ್ಲಿ 68 ಸಾವಿರ ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದರು. ಕಳೆದ ನಾಲ್ಕು ತಿಂಗಳಲ್ಲಿ ಹೊಸದಾಗಿ 70 ಸಾವಿರ ಮಂದಿ ನೇತ್ರದಾನಕ್ಕೆ ನೋಂದಣಿಯಾಗಿದ್ದಾರೆ. ಪುನೀತ್‌ ಅವರ ಅಭಿಮಾನಿ ಬಳಗ, ಸಂಘ ಸಂಸ್ಥೆಗಳ ಸಂಸ್ಥೆಗಳ ಸದಸ್ಯರು, ಯುವಜನತೆ ಹೆಚ್ಚಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅಲ್ಲದೇ, ರಾಜ್ಯಾದ್ಯಂತ ನೇತ್ರ ಸೇವಾ ಸಂಸ್ಥೆ, ಕಣ್ಣಿನ ಆಸ್ಪತ್ರೆಗಳಲ್ಲಿ ನೇತ್ರದಾನ ನೋಂದಣಿಯು ಈವರೆಗಿನ ದಾಖಲೆಗಳನ್ನು ಮೀರಿ ನಡೆಯುತ್ತಿದೆ.

ಸಾವಿರಕ್ಕೂ ಹೆಚ್ಚು ಕಣ್ಣುಗಳು ಸಂಗ್ರಹ

ಕೊರೋನಾದಿಂದ(Coronavirus) ನೇತ್ರದಾನ ಪ್ರಮಾಣವು ಸಾಕಷ್ಟುಕುಗ್ಗಿತ್ತು. ಪ್ರತಿ ತಿಂಗಳು 50 ನೇತ್ರ(ಕಾರ್ನಿಯಾ) ಸಂಗ್ರಹವಾಗುತ್ತಿದ್ದವು. ಆದರೆ, ನವೆಂಬರ್‌ನಿಂದ ಪ್ರತಿ ತಿಂಗಳು 250ಕ್ಕೂ ನೇತ್ರ ಹೆಚ್ಚು ಸಂಗ್ರಹವಾಗುತ್ತಿವೆ. ನಾಲ್ಕು ತಿಂಗಳಲ್ಲಿ ಒಟ್ಟಾರೆ 1022 ಕಣ್ಣುಗಳು ದಾನವಾಗಿ ಲಭಿಸಿವೆ. ಆಸ್ಪತ್ರೆಗಳಲ್ಲಿ ನಾನಾ ಕಾರಣಗಳಿಂದ ಮೃತಪಟ್ಟವರ ವಾರಸುದಾರರು ಸ್ವಯಂ ಪ್ರೇರಿತವಾಗಿ ನೇತ್ರದಾನಕ್ಕೆ ಅನುಮತಿ ಸೂಚಿಸುತ್ತಿದ್ದಾರೆ. ಅಪಘಾತಕ್ಕೀಡಾದವರು, ದೀರ್ಘಕಾಲ ಅನಾರೋಗ್ಯಕ್ಕೀಡಾಗಿ ಸಾವಿಗೆ ಸಮೀಪವಿರುವ ರೋಗಿಗಳು ಸ್ವತಃ ನಿರ್ಧರಿಸಿ ನಿಧನ ನಂತರ ನೇತ್ರದಾನ ಮಾಡಿದ್ದಾರೆ ಎಂದು ನಾರಾಯಣ ನೇತ್ರಾಲಯ ಮುಖ್ಯಸ್ಥರು ಡಾ.ಭುಜಂಗಶೆಟ್ಟಿ ತಿಳಿಸಿದ್ದಾರೆ.

James 2022: ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ ಶುರುವಾಗಲಿದೆ 'ಜೇಮ್ಸ್' ಮೇನಿಯಾ!

ನವೆಂಬರ್‌ನಿಂದ ಅಂಗಾಂಗದಾನಕ್ಕೆ ನೋಂದಣಿ ಮತ್ತು ದಾನವು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದೆಲ್ಲವೂ ನಟ ಪುನೀತ್‌ ರಾಜಕುಮಾರ್‌ ನೇತ್ರದಾನದ ಪ್ರೇರಣೆಯಿಂದಲೇ ಆಗಿದೆ. ಅಭಿಮಾನಿಗಳು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗುತ್ತಿದ್ದಾರೆ ಅಂತ ಜೀವಸಾರ್ಥಕತೆ ಅಂಗಾಂಗ ಕಸಿ ಸಂಯೋಜಕ ನೌಷದ್‌ ಪಾಷಾ ತಿಳಿಸಿದ್ದಾರೆ. 

ನೋಂದಣಿಗೆ:

*ವೆಬ್‌ಸೈಟ್‌ ವಿಳಾಸ: jeevasarthakthe.karnataka.gov.in 
*ದೂರವಾಣಿ: 98450 06768 , 080-29538373
*ನಾರಾಯಣ ನೇತ್ರಾಲಯ- 8884018800 (ಮಿಸ್ಡ್‌ಕಾಲ್‌)
 

Latest Videos
Follow Us:
Download App:
  • android
  • ios