ಮಂಗಳೂರು(ಆ.29): ಯೋಧರ ಹೆಸರು ಹೇಳಿಕೊಂಡು ಆನ್‌ಲೈನ್‌ ವಂಚನೆ ನಡೆಸುತ್ತಿರುವ ಜಾಲವೊಂದು ಮಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಕಾರ್ಯಾಚರಿಸುತ್ತಿದೆ. OLX ಸೇರಿದಂತೆ ಹಲವು ಸೈಟ್‌ಗಳಲ್ಲಿ ವಾಹನ ಮಾರಾಟಕ್ಕಿದೆ ಎಂದು ಜಾಹೀರಾತಿನ ಜೊತೆಗೆ ಮೊಬೈಲ್‌ ನಂಬರ್‌ ನಮೂದಿಸಿಕೊಂಡಿರುವ ಈ ಜಾಲ ಗ್ರಾಹಕನನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಮಾರಾಟಕ್ಕಿರುವ ವಾಹನದ ಬಗ್ಗೆ ವಿಚಾರಿಸುವ ಸಂದರ್ಭದಲ್ಲಿ ಕರೆ ಸ್ವೀಕರಿಸುವ ವ್ಯಕ್ತಿ ತಾನು ಮಂಗಳೂರು, ಬೆಂಗಳೂರು, ಮುಂಬೈ ಹೀಗೆ ಎಲ್ಲ ವಿಮಾನ ನಿಲ್ದಾಣಗಳ ಹೆಸರು ಹೇಳಿ, ತಾನು ಸಿಐಎಸ್‌ಎಫ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ನಂಬಿಸುತ್ತಾ, ತನಗೆ ಬೇರೆಡೆಗೆ ವರ್ಗಾವಣೆಯಾಗಿರುವ ಕಾರಣಕ್ಕೆ ವಾಹನ ಮಾರುತ್ತಿರುವುದಾಗಿ ಹೇಳುತ್ತಾನೆ.

ಆನ್‌ಲೈನ್ ಬ್ಯಾಂಕ್ ಆಯ್ಕೆ ಮಾಡುವಾಗ ಈ ವಿಷಯಗಳನ್ನು ಗಮನಿಸಿ!

ಕೇಳಿದ ತಕ್ಷಣವೇ ವಾಹನದ ಆರ್‌.ಸಿ, ಫೋಟೋ ಜೊತೆಗೆ ಭಾರತ ಸರ್ಕಾರದ ಲಾಂಛನವಿರುವ ನಕಲಿ ಸೈನಿಕ ಗುರುತು ಪತ್ರವನ್ನೂ ಕಳುಹಿಸುತ್ತಾನೆ. ಗುರುತಿನ ಪತ್ರ ನಿಜವಾಗಿಯೂ ಯಾವುದೋ ಸೈನಿಕನಿಗೆ ಸೇರಿದ್ದೋ, ಅಥವಾ ಸೈನಿಕನ ನಕಲಿ ಗುರುತಿನ ಚೀಟಿ ತಯಾರಿಸಿ ಬೇರೆ ಯಾರದೋ ಚಿತ್ರ ಅಂಟಿಸಿ ಮಾಡಿರುವುದೋ ಎನ್ನುವುದು ತಿಳಿಯದಾಗಿದೆ.

ಆತನ ಹತ್ತಿರದ ವಿಮಾನ ನಿಲ್ದಾಣಕ್ಕೆ ಬರಹೇಳಿ, ಮಾರಾಟ ಮಾಡುವ ವಾಹನವನ್ನು ಅಲ್ಲೇ ನೀಡುವುದಾಗಿ ಭರವಸೆಯನ್ನೂ ಮೂಡಿಸುತ್ತಾನೆ. ಅಲ್ಲದೆ ವಾಹನ ನೋಡುವ ಮೊದಲು ವಿಮಾನ ನಿಲ್ದಾಣದಿಂದ ಹೊರ ಬರುವ ಚೆಕ್ಕಿಂಗ್‌ ಹಣ 2000 ರು.ವನ್ನು ಗೂಗಲ್‌ ಪೇ ಮೂಲಕ ಕಳುಹಿಸುವಂತೆ ನಂಬಿಸುತ್ತಾನೆ.

ಮಂಗಳೂರು: ಶುಷ್ಕ ವಾತಾವರಣ, ಇನ್ನೂ ದುರಸ್ತಿಯಾಗಿಲ್ಲ ರೈಲು ಹಳಿ

ಸೈನಿಕನ ಗುರುತಿನ ಚೀಟಿ ಕಂಡ ತಕ್ಷಣ ಪ್ರಾಮಾಣಿಕನಾಗಿರಬೇಕು ಎನ್ನುವ ಕಾರಣಕ್ಕೆ ಕೆಲವರು ಈ ವಂಚಕರಿಗೆ ಹಣ ವರ್ಗಾಯಿಸಿದ್ದಾರೆ. ನೂರಕ್ಕೂ ಮಿಕ್ಕಿದ ಜನರಿಗೆ ವಂಚನೆ ನಡೆಸುತ್ತಿರುವ ಈ ಬೃಹತ್‌ ಜಾಲ, ತನ್ನ ವಂಚನೆಗಾಗಿ ದೇಶದ ಹೆಮ್ಮೆಯ ಸೈನಿಕರ ಹೆಸರನ್ನು ಬಳಸುತ್ತಿದೆ.

ಭಾರತೀಯ ಸೇನೆಯ ನಕಲಿ ಗುರುತಿನ ಚೀಟಿ ಈ ವಂಚಕರಿಗೆ ಸಿಗುತ್ತಿರುವುದು ಗಂಭೀರ ವಿಷಯವಾಗಿದ್ದು, ಉಗ್ರಗಾಮಿಗಳೂ ಇದನ್ನು ಉಪಯೋಗಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.