ಬ್ಯಾಂಕಿನ ಕೆಲಸವೆಂದರೆ ತಲೆನೋವು. ಬ್ಯಾಂಕ್ ಕೂಡಾ ಕಚೇರಿ ಸಮಯದಲ್ಲೇ ಇರುತ್ತದೆ. ಹೀಗಾಗಿ ಅರ್ಧ ದಿನ ರಜೆ ಹಾಕಿ ಹೋಗಬೇಕಾಗುತ್ತದೆ. ಹೋದ ಮೇಲೆ ಇಡೀ ದಿನ ರಜೆ ಹಾಕಬೇಕಾಗಿ ಬಂದ ಪ್ರಮೇಯವೂ ಇರುತ್ತದೆ. ಕಾಯುತ್ತಾ ಕೂತು ಕೂತು ಅಲ್ಲೇ ತುಕ್ಕು ಹಿಡಿದುಬಿಡುತ್ತೇವೇನೋ ಎಂಬ ಅನುಮಾನವೂ ಬರುತ್ತದೆ. ಆದರೆ, ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಬಂದ ಮೇಲೆ ಈ ತರಲೆ ತಾಪತ್ರಯಗಳಿಲ್ಲ. ಕುಳಿತಲ್ಲಿಂದಲೇ ಹಣ ವರ್ಗಾವಣೆ, ಬಿಲ್ ಕಟ್ಟುವುದು, ಶಾಪಿಂಗ್ ಇತ್ಯಾದಿ ಹಣದ ಸಂಬಂಧಿ ಎಲ್ಲ ಕೆಲಸಗಳನ್ನೂ ಬೇಕೆಂದಾಗ ಮಾಡಿಕೊಳ್ಳಬಹುದು.

ಕೈಲೊಂದು ಸ್ಮಾರ್ಟ್‌ಫೋನ್ ಹಾಗೂ ಇಂಟರ್‌ನೆಟ್ ಸಂಪರ್ಕ ಇದ್ದರೆ ಸಾಕು. ಇಂದು ನಾವು ಮಾಡುವ ಬಹುತೇಕ ಎಲ್ಲ ಕೆಲಸವೂ ಪರಿಸರಕ್ಕೆ ವಿರುದ್ಧವಾಗಿಯೇ ಇರುವ ಸಂದರ್ಭದಲ್ಲಿ ಕನಿಷ್ಠ ಪಕ್ಷ ಬ್ಯಾಂಕಿಂಗ್ ವಿಷಯದಲ್ಲಿ ಪೇಪರ್‌ಲೆಸ್ ವ್ಯವಹಾರ ನಡೆಸಲು ಆನ್‌ಲೈನ್ ಬ್ಯಾಂಕಿಂಗ್ ಸಹಾಯಕ. ಫಾರ್ಮ್ ಫಿಲ್ ಮಾಡುವ ಕಿರಿಕಿರಿಯೂ ಇಲ್ಲ, ಸಮಯವೂ ಉಳಿಯುತ್ತದೆ. ನೀವು ಆನ್‌ಲೈನ್ ಬ್ಯಾಂಕ್ ಆಯ್ಕೆ ಮಾಡುವಾಗ ಈ 6 ವಿಷಯಗಳತ್ತ ಗಮನ ಕೊಡಿ. 

ಆಧಾರ್’ನೊಂದಿಗೆ ಪ್ರೊಫೈಲ್ ಲಿಂಕ್: ಫೇಸ್‌ಬುಕ್ ಇಂಕ್ ಮನವಿ ಆಲಿಸಲು ಒಪ್ಪಿಗೆ

1. ನಿಮ್ಮ ಆನ್‌ಲೈನ್ ಬ್ಯಾಂಕ್ ಇನ್‌ಶೂರ್ ಆಗಿದೆಯೇ ಪರೀಕ್ಷಿಸಿ

ಎಲ್ಲ ಬ್ಯಾಂಕ್‌ಗಳಂತೆಯೇ ಆನ್‌ಲೈನ್ ಬ್ಯಾಂಕ್ ಕೂಡಾ ಒಂದು ಲಿಮಿಟ್‌ನಲ್ಲಿ ಇನ್ಶೂರ್ ಮಾಡಿರುವುದು ಅಗತ್ಯ. ಇದರಿಂದ ಏನಾದರೂ ದೊಡ್ಡ ಲಾಸ್ ಆದಾಗ ಸ್ವಲ್ಪ ಹಣವಾದರೂ ತಿರುಗಿ ಬರುತ್ತದೆ. ಭಾರತೀಯ ಬ್ಯಾಂಕ್‌ಗಳಿಗೆ ಡೆಪಾಸಿಟ್ ಇನ್ಶೂರೆನ್ಸ್ ಹಾಗೂ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್‌ಗಳು ಇನ್ಶೂರೆನ್ಸ್ ಕುರಿತ ಆಡಳಿತ ಕೇಂದ್ರಗಳಾಗಿವೆ. 

2. ಸುರಕ್ಷತೆಯ ದೃಷ್ಟಿಯಲ್ಲಿ ಬ್ಯಾಂಕ್ ಸಮರ್ಥ ಕ್ರಮಗಳನ್ನು ಕೈಗೊಂಡಿದೆಯೇ ನೋಡಿ

ಆನ್‌ಲೈನ್ ಬ್ಯಾಂಕಿಂಗ್ ಎಂದರೆ ಹ್ಯಾಕರ್‌ಗಳ ಭಯ ಇದ್ದೇ ಇರುತ್ತದೆ. ಇದೆಲ್ಲದರಿಂದ ಸುರಕ್ಷತೆ ಒದಗಿಸಲು ಒಟಿಪಿ ನೀಡುವುದು, ಪಾಸ್‌ವರ್ಡ್ ಪ್ರೊಟೆಕ್ಷನ್ ಇತ್ಯಾದಿ ಸೆಕ್ಯೂರಿಟಿ ಫೀಚರ್‌ಗಳನ್ನು ಅಳವಡಿಸಿರುತ್ತಾರೆ. ಜೊತೆಗೆ, ನಿಮ್ಮ ಮಾಹಿತಿ ಸೋರದಂತೆ ನೋಡಲು ಎನ್ಕ್ರಿಪ್ಶನ್ ಬಳಸುತ್ತದೆ. ಅಲ್ಲದೆ, ತನ್ನ ಸೆಕ್ಯೂರಿಟಿ ಸ್ಟ್ಯಾಂಡರ್ಡ್‌ಗೆ ಹೊಂದದ ವೆಬ್‌ಸೈಟ್ ಬಳಸದಂತೆ ಬ್ಯಾಂಕ್ ನಿಮ್ಮನ್ನು ಅಲ್ಲಿ ಬ್ಲಾಕ್ ಮಾಡುತ್ತದೆ. ಬ್ಯಾಂಕ್‌ಗಳು ಪಾಸ್‌ವರ್ಡ್‌ಗಳು ಸಖತ್ ಸ್ಟ್ರಾಂಗ್ ಆಗಿರುವಂತೆ ಡಿಮ್ಯಾಂಡ್ ಮಾಡಬೇಕು ಮತ್ತು ನೀವೇ ಖಾತೆ ಚೆಕ್ ಮಾಡುತ್ತಿದ್ದೀರಿ ಎಂಬುದಕ್ಕೆ ಹಲವು ರೀತಿಯ ಅಥೆಂಟಿಫಿಕೇಶನ್ ಕೇಳಬೇಕು. ಹೊಸ ಕಂಪ್ಯೂಟರ್ ಅಥವಾ ಫೋನ್‌ನಿಂದ ಖಾತೆ ಓಪನ್ ಮಾಡಿದಾಗ ಇಮೇಲ್ ಮೂಲಕ ಮೆಸೇಜ್ ಹಾಕುವುದು ಸೇರಿದಂತೆ ಬ್ಯಾಂಕ್ ತನ್ನ ಗ್ರಾಹಕರ ಸುರಕ್ಷತೆಗಾಗಿ ಏನೆಲ್ಲ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಚೆಕ್ ಮಾಡಿ. 

ವೆಹಿಕಲ್ ಬಿಟ್ಟು ವಾಕಿಂಗ್ ಮಾಡಿ; ಈ ಆ್ಯಪ್‌ಗಳೇ ನಿಮ್ಮಗೆ ದುಡ್ಡು ಕೊಡುತ್ವೆ!

3. ಬ್ಯಾಂಕ್‌ನ ಎಟಿಎಂ ಎಲ್ಲ ಕಡೆ ಇದೆಯೇ ಪರೀಕ್ಷಿಸಿ. 

ನಿಮ್ಮದು ಆನ್‌ಲೈನ್ ಬ್ಯಾಂಕೇ ಆಗಿರಬಹುದು. ಆದರೆ, ಕೈಯ್ಯಲ್ಲಿ ಸ್ವಲ್ಪ ಹಣವಿಟ್ಟುಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಹಾಗಾಗಿ, ನೀವು ಬಳಸುವ ಬ್ಯಾಂಕ್‌ನ ಎಟಿಎಂ‌ ಕೇಂದ್ರಗಳು ನೀವು ವಾಸಿಸುವ ಎಲ್ಲೆಡೆ ಇದೆಯೇ ಎಂದು ಪರೀಕ್ಷಿಸಿ. ಎಟಿಎಂ ನೆಟ್‌ವರ್ಕ್ ಸ್ಟ್ರಾಂಗ್ ಇದ್ದಾಗ ಯಾವುದೇ ಊರಿಗೆ ಹೋದರೂ ಅಷ್ಟು ತೊಂದರೆಯಾಗದು. ಇಷ್ಟಕ್ಕೂ ನಿಮ್ಮ ಹಣದಿಂದ ನೀವೇ ದೂರವುಳಿಯುವುದರಲ್ಲಿ ಅರ್ಥವಿಲ್ಲ ಅಲ್ಲವೇ? 

4. ಬ್ಯಾಂಕ್ ಸೇವೆಗಳು ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಎರಡರಲ್ಲೂ ಸಿಗುತ್ತವೆಂದು ಖಚಿತಪಡಿಸಿಕೊಳ್ಳಿ.

ನಿಮ್ಮ ಖಾತೆಯನ್ನು ನೀವು ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್ ಎರಡರಲ್ಲೂ ಬಳಸುವಂತಿರಬೇಕು. ಯಾವುದರಿಂದ ಬೇಕಾದರೂ ಬಿಲ್ ಕಟ್ಟುವುದು, ಡೆಪಾಸಿಟ್ ಮಾಡುವುದು, ಖಾತೆ ಚೆಕ್ ಮಾಡುವುದಕ್ಕೆ ಅವಕಾಶವಿರಬೇಕು. ಬ್ರ್ಯಾಂಚ್‌ಗೆ ಹೋಗುವ ಅಗತ್ಯವಿಲ್ಲದೆ ಫೋನ್‌ನಲ್ಲಿಯೇ ಕೆಲಸ ಮಾಡಿಕೊಳ್ಳಿ. 

5. ಬ್ಯಾಂಕ್ ನೀಡುವ ಸೇವೆಗಳನ್ನು ಗಮನಿಸಿ

ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ಪ್ರತಿಯೊಂದು ಬ್ಯಾಂಕ್ ಕೂಡಾ ಹೊಸ ಹೊಸ ಆಫರ್, ಹೊಸ ಸೇವೆಗಳು, ಹೊಸ ಫೀಚರ್‌ಗಳನ್ನು ಅಳವಡಿಸುತ್ತಿವೆ. ಹಾಗಾಗಿ, ಯಾವ ಬ್ಯಾಂಕ್‌ನ ಸೇವೆಗಳು ನಿಮಗೆ ಹೆಚ್ಚು ಲಾಭ ತರಬಹುದು ಎಂದು ಪರೀಕ್ಷಿಸಿ. ಬ್ಯಾಂಕ್ ಜೀರೋ ಬ್ಯಾಲೆನ್ಸ್ ಸೇವಿಂಗ್ಸ್ ಖಾತೆ ಒದಗಿಸುತ್ತದೆಯೇ, ಇ-ವ್ಯಾಲೆಟ್ ಸೌಲಭ್ಯ ಇದೆಯೇ, ಸೇವಿಂಗ್ಸ್‌ಗೆ ಬಡ್ಡಿದರ ಎಷ್ಟಿದೆ, ಇನ್ಶೂರೆನ್ಸ್ ಪಾಲಿಸಿಗಳು ಆಕರ್ಷಕವಾಗಿವೆಯೇ, 24/7 ಗ್ರಾಹಕರ ಸೇವೆಗೆ ತೆರೆದಿರುತ್ತವೆಯೇ ಮುಂತಾದವುಗಳನ್ನು ವಿಚಾರಿಸಿ. ಸ್ಪರ್ಧಾತ್ಮಕ ಬಡ್ಡಿದರ ನೀಡುವ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ. 

6. ಬ್ಯಾಂಕ್‌ನ ನಂಬಿಕಾರ್ಹತೆ

ನೀವು ಬಳಸುವ ಬ್ಯಾಂಕ್ ಎಷ್ಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ, ಗ್ರಾಹಕರ ನಂಬಿಕೆಗಳನ್ನು ಹೇಗೆ ಉಳಿಸಿಕೊಂಡಿದೆ, ಅದರ ಕ್ಯಾಪಿಟಲ್ ರಿಸರ್ವ್ ಉತ್ತಮವಾಗಿದೆಯೇ, ಕಸ್ಟಮರ್ ಸರ್ವಿಸ್ ಚೆನ್ನಾಗಿದೆಯೇ, ಅಗತ್ಯವಿದ್ದಾಗೆಲ್ಲ ಕಸ್ಟಮರ್ ಕೇರ್ ಕೈಗೆಟುಕುತ್ತದೆಯೇ, ತಕ್ಷಣಕ್ಕೆ ಪ್ರತಿಕ್ರಿಯಿಸುತ್ತಾರೆಯೇ ಎಲ್ಲವನ್ನೂ ಚೆಕ್ ಮಾಡಿ.