ಮಂಗಳೂರು(ಆ.29): ಜಿಲ್ಲೆಯಲ್ಲಿ ಬುಧವಾರ ಶುಷ್ಕ ವಾತಾವರಣ ಮುಂದುವರಿದಿದೆ. ಈ ಮಧ್ಯೆ ಮಂಗಳೂರಿನ ಕುಲಶೇಖರ ಬಳಿ ಹಳಿಗೆ ಗುಡ್ಡಕುಸಿದು ಕಳೆದ ನಾಲ್ಕು ದಿನಗಳಿಂದ ಸ್ಥಗಿತಗೊಂಡ ಕೇರಳ-ಮಂಗಳೂರು-ಮುಂಬಯಿ ನೇರ ರೈಲು ಯಾನ ಬುಧವಾರವೂ ಆರಂಭವಾಗಿಲ್ಲ.

ಸ್ಥಳಕ್ಕೆ ಫಾಲ್ಘಾಟ್‌ ರೈಲ್ವೆ ವಿಭಾಗದ ಅಧಿಕಾರಿಗಳು ಭೇಟಿ ನೀಡಿದ್ದು, ಅದೇ ಸ್ಥಳದಲ್ಲಿ ಪರ್ಯಾಯ ರೈಲು ಹಳಿ ಅಳವಡಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಬುಧವಾರ ನಸುಕಿನ ಜಾವ ಗ್ರಾಮೀಣ ಪ್ರದೇಶದಲ್ಲಿ ಮಳೆ ಸುರಿದಿದೆ. ಬಳಿಕ ಮೋಡ ಹಾಗೂ ತುಂತುರು ಮಳೆಯಾಗಿದೆ. ಆದರೆ ಹಗಲು ಹೊತ್ತು ಮಳೆ ಬಂದಿಲ್ಲ. ಕೇವಲ ಬಿಸಿಲು ಹಾಗೂ ಮೋಡದ ವಾತಾವರಣ ಕಂಡುಬಂತು.

ಬೆಳ್ತಂಗಡಿಯಲ್ಲಿ ಗರಿಷ್ಠ ಮಳೆ:

ಬುಧವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ ಗರಿಷ್ಠ 6 ಮಿಲಿ ಮೀಟರ್‌ ಮಳೆಯಾಗಿದೆ. ಬಂಟ್ವಾಳ 3.4 ಮಿ.ಮೀ, ಮಂಗಳೂರು 5.7 ಮಿ.ಮೀ, ಪುತ್ತೂರು 0.6 ಮಿ.ಮೀ. ಮಳೆ ದಾಖಲಾಗಿದೆ. ದಿನದಲ್ಲಿ ಸುರಿದ ಒಟ್ಟು ಮಳೆ 3.1 ಮಿ.ಮೀ. ಆಗಿದ್ದು, ಕಳೆದ ವರ್ಷ ಇದೇ ದಿನ 28.4 ಮಿ.ಮೀ. ಮಳೆಯಾಗಿತ್ತು. ಆಗಸ್ಟ್‌ನಲ್ಲಿ ಈವರೆಗೆ ಒಟ್ಟು 1,297 ಮಿ.ಮೀ. ಮಳೆಯಾಗಿದ್ದು, ಕಳೆದ ಬಾರಿ 1,166.4 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಈವರೆಗೆ ಒಟ್ಟು 2,77.9 ಮಿ.ಮೀ. ಮಳೆಯಾಗಿದ್ದು, ಕಳೆದ ಬಾರಿ 4,138.2 ಮಿ.ಮೀ. ಮಳೆ ವರದಿಯಾಗಿತ್ತು.

ಪರ್ಯಾಯ ಹಳಿ; ಒಂದೆರಡು ದಿನದಲ್ಲಿ ಮಂಗಳೂರು-ಮುಂಬಯಿ ರೈಲು ಪುನಾರಂಭ

ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 24.6 ಮೀಟರ್‌ ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿ 5.2 ಮೀಟರ್‌ ಎತ್ತರಕ್ಕೆ ಹರಿಯುತ್ತಿದೆ.