ಹುಬ್ಬಳ್ಳಿ: ಚಿಕನ್‌ಗಿಂತ ಈರುಳ್ಳಿ ಬೆಲೆಯೇ ದುಬಾರಿ!

ನಾನ್‌ವೆಜ್‌ ಹೋಟೆಲ್‌ಗಳಿಗೆ ಈರುಳ್ಳಿ ಬೆಲೆ ಹೊಡೆತ|ಈರುಳ್ಳಿ ಹಾಕದಿದ್ದರೆ ರುಚಿ ಇರಲ್ಲ, ಹಾಕಿದರೆ ಗಿಟ್ಟಲ್ಲ|ಚಿಲ್ಲರೆ ಮಾರುಕಟ್ಟೆಯಲ್ಲಿ 180 ರುಪಾಯಿ ಗಡಿ ತಲುಪಿದ ಈರುಳ್ಳಿ ಬೆಲೆ| ಬೆಳಗಾವಿಯಲ್ಲಿ ಗುಣಮಟ್ಟದ ಈರುಳ್ಳಿ 170ರಿಂದ 180 ರುಪಾಯಿಗೆ ಮಾರಾಟ| ಒಂದು ಕೆ.ಜಿ. ಕೋಳಿ ಮಾಂಸದ ದರ ಮಾರುಕಟ್ಟೆಯಲ್ಲಿ 140 ರಿಂದ 200-250 ರುಪಾಯಿವರೆಗೂ ಇದೆ|

Onions are more expensive than chicken in Hubballi

ಹುಬ್ಬಳ್ಳಿ/ಬೆಂಗಳೂರು(ಡಿ.05): ಕೋಳಿ ಮಾಂಸಕ್ಕಿಂತ ಈರುಳ್ಳಿಯೇ ತುಟ್ಟಿ! ಹೌದು, ಕಳೆದ ಕೆಲ ದಿನಗಳಿಂದ ಗಗನಕ್ಕೇರುತ್ತಿರುವ ಈರುಳ್ಳಿ ದರ ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ 180 ರುಪಾಯಿ ಗಡಿ ತಲುಪಿದ್ದು, ಒಂದು ಕೆ.ಜಿ. ಕೋಳಿ ಮಾಂಸಕ್ಕಿಂತ ಒಂದು ಕೆ.ಜಿ. ಈರುಳ್ಳಿಯೇ ತುಟ್ಟಿ ಅನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಈರುಳ್ಳಿ ದರ ಏರಿಕೆಯ ಪರಿಣಾಮ ಮನೆ ಮನೆಯ ಅಡುಗೆ ಮನೆಗಷ್ಟೇ ಅಲ್ಲ, ನಾನ್‌ವೆಜ್‌ ಹೋಟೆಲ್‌ಗಳ ಮೇಲೂ ಬಿದ್ದಿದೆ. ಈರುಳ್ಳಿ ರೇಟು ಕೇಳಿ ಮಾಂಸದೂಟಕ್ಕೆ ಮಸಾಲೆ ಅರೆಯೋ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯಾದ್ಯಂತ ಈರುಳ್ಳಿ ದರ ಕಳೆದೊಂದು ತಿಂಗಳಿಂದ ಏರುಗತಿಯಲ್ಲೇ ಸಾಗಿದೆ. ಸಗಟು ಮಾರುಕಟ್ಟೆಯಲ್ಲಿ ಸೋಮವಾರ ನೂರರ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದ ಪ್ರತಿ ಕೆ.ಜಿ. ಗುಣಮಟ್ಟದ ಈರುಳ್ಳಿ ಬುಧವಾರದ ವೇಳೆಗೆ (ಬೆಳಗಾವಿಯಲ್ಲಿ) 150ರ ಗಡಿ ದಾಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳಗಾವಿಯಲ್ಲಿ ಗುಣಮಟ್ಟದ ಈರುಳ್ಳಿ 170ರಿಂದ 180 ರುಪಾಯಿಗೆ ಮಾರಾಟವಾಗುತ್ತಿದೆ. ಒಂದು ಕೆ.ಜಿ. ಕೋಳಿ ಮಾಂಸದ ದರ ಮಾರುಕಟ್ಟೆಯಲ್ಲಿ 140 ರಿಂದ 200-250 ರುಪಾಯಿವರೆಗೂ ಇದೆ. ಆದರೆ, ಈರುಳ್ಳಿ ದರ ಕೋಳಿ ಮಾಂಸದ ದರವನ್ನೂ ಮೀರಿ ಏರಿಕೆಯಾಗಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವುದರಿಂದ ಹೋಟೆಲ್‌ ನಡೆಸುವುದು ಹೇಗೆನ್ನುವ ಚಿಂತೆ ಸಣ್ಣ ಸಣ್ಣ ಬಿರಿಯಾನಿ ಸೆಂಟರ್‌, ಮಾಂಸದ ಊಟದ ಹೋಟೆಲ್‌ಗಳ ಮಾಲೀಕರನ್ನು ಈಗ ಕಾಡಲು ಶುರುವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿರಿಯಾನಿ ಹೋಟೆಲ್‌ಗಳಲ್ಲಂತೂ ಈರುಳ್ಳಿ ಹಾಕದೆ ಬಿರಿಯಾನಿ ಮಾಡಿದರೆ ರುಚಿ ಬರಲ್ಲ, ಈರುಳ್ಳಿ ಹಾಕಿ ಮಾಡಿದರೆ ದರ ಗಿಟ್ಟಲ್ಲ ಎನ್ನುವ ತಲೆಬಿಸಿ ಇದೆ. ಬಿರಿಯಾನಿ ತಯಾರಿಸಲು ಪ್ರಮುಖವಾಗಿ ಈರುಳ್ಳಿ ಬೇಕೆ ಬೇಕು. ಒಂದು ಕೆಜಿ ಅಕ್ಕಿಯ ಬಿರಿಯಾನಿ ತಯಾರಿಸಬೇಕೆಂದರೆ ಅರ್ಧ ಕೆ.ಜಿ.ಯಷ್ಟು ಈರುಳ್ಳಿ ಬಳಸಲಾಗುತ್ತದೆ. ಇದರ ಜತೆಗೆ ಬಿರಿಯಾನಿ, ಮಾಂಸದ ಖಾದ್ಯಗಳ ಜತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಹಸಿ ಈರುಳ್ಳಿ ಬೇಕೇಬೇಕು. ಅಡುಗೆಗೇ ಈರುಳ್ಳಿ ಹಾಕಲು ಹಿಂದೆ ಮುಂದೆ ಯೋಚನೆ ಮಾಡಬೇಕಾದ ಸ್ಥಿತಿ ಇರುವಾಗ ಇನ್ನು ಹಚ್ಚಿದ ಈರುಳ್ಳಿ ಗ್ರಾಹಕರಿಗೆ ಹೇಗೆ ಕೊಡೋದು ಎನ್ನುವ ಚಿಂತೆ ಮಾಲೀಕರದ್ದು.

ಇದು ಮಾಂಸಾಹಾರಿ ಹೋಟೆಲ್‌ಗಳ ಕತೆಯಾದರೆ ಸಸ್ಯಾಹಾರಿ ಹೋಟೆಲ್‌ಗಳ ಸಮಸ್ಯೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಈರುಳ್ಳಿ ಕೆಲವು ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆ, ಈರುಳ್ಳಿ ಬಜಿಯಂಥ ಈರುಳ್ಳಿಯೇ ಪ್ರಮುಖವಾಗಿರುವ ಆಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಷ್ಟರ ಮಟ್ಟಿಗೆ ಈರುಳ್ಳಿ ದರ ಏರಿಕೆಯ ಬಿಸಿಯಿಂದ ಪಾರಾಗಲು ಹೋಟೆಲ್‌ ಮಾಲೀಕರು ಯತ್ನಿಸಿದ್ದಾರೆ.
 

Latest Videos
Follow Us:
Download App:
  • android
  • ios