Gadag| ಮೋಡ ಕವಿದ ವಾತಾವರಣ, ಈರುಳ್ಳಿ ದರದಲ್ಲಿ ತೀವ್ರ ಕುಸಿತ!
* ತಮಿಳುನಾಡಿನಲ್ಲಿ ವ್ಯಾಪಕ ಮಳೆ
* ಗದಗ ಜಿಲ್ಲೆಯ ಈರುಳ್ಳಿಗೆ ಬೇಡಿಕೆ ಕುಸಿತ
* ಅಕಾಲಿಕ ಮಳೆಯಿಂದ ರೈತರಿಗೆ ನಷ್ಟ
ಶಿವಕುಮಾರ ಕುಷ್ಟಗಿ
ಗದಗ(ನ.13): ಗದಗ(Gadag) ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೆ ಮತ್ತೊಮ್ಮೆ ಅಕಾಲಿಕ ಮಳೆಯ ಮೂಲಕ ಸಂಕಷ್ಟ ಸೃಷ್ಟಿಯಾಗಿದ್ದು, ಈರುಳ್ಳಿ ಸಗಟು ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರುವ ಮೊದಲೇ ಮಳೆಯಲ್ಲಿ ಕೊಚ್ಚಿ ಹೋಗುತ್ತಿದೆ.
ಜಿಲ್ಲೆಯ ಈರುಳ್ಳಿ(Onion) ಮಾರಾಟಕ್ಕೆ ಬರುವುದೇ ದೀಪಾವಳಿಯ(Deepavali) ನಂತರ, ಪ್ರಸಕ್ತ ಸಾಲಿನ ದೀಪಾವಳಿ ನಂತರ ಈರುಳ್ಳಿ ಉತ್ತಮ ಬೆಲೆಗೆ ಮಾರಾಟವಾಗುತ್ತಿದ್ದ ಹಿನ್ನೆಲೆಯಲ್ಲಿ ರೈತರು(Farmers) ಈರುಳ್ಳಿಯನ್ನು ಸಿದ್ಧ ಮಾಡಿಕೊಂಡು ಮಾರಾಟಕ್ಕೆ ತಂದಿದ್ದಾರೆ. ಆದರೆ, ತೀವ್ರ ಮೋಡ ಕವಿದ ವಾತಾವರಣ(Cloudy Weather) ಮತ್ತು ಆಗಾಗ್ಗೆ ತುಂತುರು ಮಳೆ(Rain) ಆಗುತ್ತಿದ್ದು, ಈರುಳ್ಳಿ ದರಕ್ಕೆ ಭಾರೀ ಪೆಟ್ಟು ನೀಡಿದೆ.
ದುಬಾರಿ ದುನಿಯಾ: ಪೆಟ್ರೋಲ್, ಡಿಸೇಲ್ ಹಾಕಿಸಿಕೊಳ್ಳೋಕೆ ಆಗಲ್ಲ, ತರಕಾರಿಗಳು ಮುಟ್ಟೋಕಾಗಲ್ಲ!
ಒಮ್ಮೆಲೇ ಕುಸಿತ
ಈರುಳ್ಳಿ ಸಗಟು ದರದಲ್ಲಿ ಪ್ರತಿ ಕ್ವಿಂಟಲ್‌ಗೆ ನ. 10ರ ವರೆಗೆ ಗರಿಷ್ಠ 4500 ವರೆಗೂ ಮಾರಾಟವಾಗಿತ್ತು. ನ. 10ರ ಬುಧವಾರ ರಾತ್ರಿಯಿಂದ ತೀವ್ರ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಆಗಾಗ್ಗೆ ತುಂತುರು ಮಳೆ ಆಗಿದ್ದರಿಂ ಈರುಳ್ಳಿ ಸಗುಟು ಬೆಲೆಯಲ್ಲಿಯೇ ಒಮ್ಮೆಲೇ ಕುಸಿತವಾಗಿದೆ. ಶುಕ್ರವಾರ ಮಾರುಕಟ್ಟೆಯಲ್ಲಿ(Market) ಪ್ರತಿ ಕ್ವಿಂಟಲ್ ಉತ್ತಮ ಗುಣಮಟ್ಟದ ಈರುಳ್ಳಿ 2950ರ ವರೆಗೆ ಮಾರಾಟವಾಗಿದ್ದು, ಇದರಿಂದಾಗಿ ಉತ್ತಮ ಬೆಲೆ ನಿರೀಕ್ಷೆಯೊಂದಿಗೆ ಮಾರುಕಟ್ಟೆಗೆ ಈರುಳ್ಳಿ ತಂದಿದ್ದ ರೈತರಿಗೆ ತೀವ್ರ ನಿರಾಶೆ ಉಂಟಾಗಿದೆ.
ತಮಿಳುನಾಡು ಮಳೆಯೇ ದೊಡ್ಡ ಆತಂಕ.
ಜಿಲ್ಲೆಯ ಈರುಳ್ಳಿ ಅತೀ ಹೆಚ್ಚು ಮಾರಾಟವಾಗುವುದು ಬೆಂಗಳೂರಿನ(Bengaluru) ಪೀಣ್ಯದಲ್ಲಿರುವ ಎಪಿಎಂಸಿ(APMC) ಮಾರುಕಟ್ಟೆಯಲ್ಲಿ. ಕಳೆದ 3 ದಿನಗಳ ಹಿಂದೆ ಬೆಂಗಳೂರು ಎಪಿಎಂಸಿಯಲ್ಲಿಯೂ ಸಗಟು ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 4 ಸಾವಿರದ ವರೆಗೂ ಮಾರಾಟವಾಗಿತ್ತು. ಆದರೆ, ತಮಿಳುನಾಡಿನಲ್ಲಿ(Tamil Nadu) ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯ ಈರುಳ್ಳಿ ಖರೀದಿದಾರರು ಬರದೇ ಇರುವುದು ಮತ್ತು ಈಗಾಗಲೇ ಖರೀದಿಸಿರುವ ಈರುಳ್ಳಿಯನ್ನು ಸಾಗಾಟ ಮಾಡಲು ಸಾಧ್ಯವಾಗದೇ ಇರುವುದರಿಂದಾಗಿ ಬೆಂಗಳೂರು ಮಾರುಕಟ್ಟೆಯಲ್ಲಿಯೂ ಈರುಳ್ಳಿ ದರದಲ್ಲಿ ಕುಸಿತವಾಗಿದೆ. ಗದಗ ಜಿಲ್ಲೆಯಿಂದ ಮಾರಾಟಕ್ಕೆಂದು ಬೆಂಗಳೂರಿಗೆ ತೆರಳಿದ ರೈತರೂ ಮಳೆಯಿಂದಾಗಿ ನಷ್ಟ(Loss) ಅನುಭವಿಸುವಂತಾಗಿದೆ.
ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಇದರಿಂದಾಗಿ ಈರುಳ್ಳಿ ಇಳುವರಿಯಲ್ಲಿ ಗಣನೀಯ ಕುಸಿತವಾಗಿದೆ. ಇರುವಷ್ಟು ಈರುಳ್ಳಿ ಮಾರಾಟ ಮಾಡಿ ಆಗಬಹುದಾದ ನಷ್ಟವನ್ನಾದರೂ ಕಡಿಮೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ಜಿಲ್ಲೆಯ ರೈತರಿಗೆ ಅಕಾಲಿಕ ಮಳೆ ಮತ್ತು ತೀವ್ರ ಮೋಡ ಕವಿದ ವಾತಾವರಣದಿಂದಾಗಿ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. ರೈತರು ಈರುಳ್ಳಿ ಬಿತ್ತನೆ, ಪೊಷಣೆ ಸೇರಿದಂತೆ ಮಾರುಕಟ್ಟೆಗೆ ತರುವ ವರೆಗೆ ಮಾಡಿದ ಖರ್ಚು ಮರಳಿ ಬರದಂತಾ ಸ್ಥಿತಿ ದಿನ ಕಳೆದಂತೆ ನಿರ್ಮಾಣವಾಗುತ್ತಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಚಿಕ್ಕಮಗಳೂರು: ಈರುಳ್ಳಿ ಬೆಳೆದ ರೈತರು ಕಂಗಾಲು, ಕಣ್ಣೀರಲ್ಲೇ ಕೈತೊಳೆಯುತ್ತಿರುವ ಅನ್ನದಾತ
ಎರಡೆರಡು ಸಮಸ್ಯೆ
ಮಳೆಯಿಂದಾಗಿ ರೈತರಿಗೆ ಎರಡೆರಡು ಸಮಸ್ಯೆಗಳು ಸೃಷ್ಟಿಯಾಗಿದ್ದು, ಕಟಾವಿಗೆ ಬಂದಿರುವ ಈರುಳ್ಳಿಯನ್ನು ಹೊಲದಲ್ಲಿಯೇ ಬಿಟ್ಟರೆ ಕೊಳೆತು ಹೋಗುತ್ತದೆ ಎಂದು ಕಿತ್ತು ತಂದು, ಸ್ವಚ್ಛಗೊಳಿಸಿ ಮಾರುಕಟ್ಟೆಗೆ ತಂದರೆ ಇದಕ್ಕೆಲ್ಲ ಮಾಡಿದ ಖರ್ಚು ಬರದಂತ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಇದೇ ರೈತರು ಬಿತ್ತನೆ(Sowing) ಮಾಡಿರುವ ಜೋಳ ಸೇರಿದಂತೆ ಪ್ರಮುಖ ಬೆಳೆಗಳಿಗೆ ಮಳೆಯ ಅವಶ್ಯಕತೆ ಕೂಡಾ ಇದೆ. ಹಾಗಾಗಿ ಏನು ಮಾಡಬೇಕು ಎನ್ನುವುದು ತಿಳಿಯದಂತ ಸಂದಿಗ್ಧ ಪರಿಸ್ಥಿತಿ ರೈತರಿಗೆ ಎದುರಾಗಿದ್ದು, ದೀಪಾವಳಿ ನಂತರ ಹಿಂಗಾರು ಮಳೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಮಳೆ ಮುಂದುವರಿದಿರುವುದು ಸಮಸ್ಯೆಗೆ ಕಾರಣವಾಗಿದೆ.
ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದು ಈರುಳ್ಳಿ ದರದಲ್ಲಿ ದಿಢೀರ್ ಕುಸಿತವಾಗಲು ಕಾರಣವಾಗಿದೆ. ಈಗಾಗಲೇ ಬೆಂಗಳೂರು ಮಾರುಕಟ್ಟೆಗೆ ಬಂದಿದ್ದೇವೆ. ದರದಲ್ಲಿ ಕಡಿಮೆಯಾದರೂ ಮಾರಾಟ ಮಾಡದೇ ಬೇರೆ ದಾರಿಯೇ ಇಲ್ಲ. ಈ ಮಳೆಯಿಂದಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ಸುರೇಶಗೌಡ ಪಾಟೀಲ ತಿಳಿಸಿದ್ದಾರೆ.