ಮಡಿಕೇರಿ(ಜ.07): ಒಂದು ವರ್ಷದ ಮಗು ರಾತ್ರಿಯಿಡೀ ಒಂಟಿಯಾಗಿ ತೋಟದಲ್ಲೇ ಇದ್ದ ವಿಷಯ ಬೆಳಕಿಗೆ ಬಂದಿದೆ. ಕಾಫಿ ತೋಟದಲ್ಲಿ ಕಾಣೆಯಾದ ಮಗುವನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಶ್ರೀಮಂಗಲ, ಕುಟ್ಟಪೊಲೀಸ್‌ ಠಾಣೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ರಕ್ಷಿಸಿದ ಪ್ರಕರಣ ತಾಲೂಕಿನ ವೆಸ್ಟ್‌ ನೆಮ್ಮಲೆ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಪ್ರಕರಣದ ವಿವರ:

ಕೊಡಗಿನಲ್ಲಿ ಕಾಫಿ ಕೊಯ್ಲು ಆರಂಭವಾಗಿದ್ದು, ಕೊಯ್ಲಿಗಾಗಿ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಿಂದ 11 ಕೂಲಿ ಕಾರ್ಮಿಕರು ವೆಸ್ಟ್‌ ನೆಮ್ಮಲೆ ಗ್ರಾಮದ ಪೆಮ್ಮಂಡೆ ರಾಜ ಕುಶಾಲಪ್ಪ ಅವರ ತೋಟಕ್ಕೆ ಬಂದಿದ್ದರು.

ಭಾನುವಾರ ತೋಟದಲ್ಲಿ ಕಾಫಿ ಕೊಯ್ಯುವಾಗ ಕಾರ್ಮಿಕ ನಾಗರಾಜು-ಸೀತಾ ದಂಪತಿಯ 1 ವರ್ಷ 9 ತಿಂಗಳ ಹರೆಯದ ಹೆಣ್ಣು ಮಗು ನಿತ್ಯಾಶ್ರೀಯನ್ನು 2 ಕಾಫಿ ಗಿಡಗಳ ನಡುವೆ ಸೀರೆಯಿಂದ ತೊಟ್ಟಿಲು ಕಟ್ಟಿಮಲಗಿಸಲಾಗಿತ್ತು. ಸಂಜೆ ಸುಮಾರು 4ರ ತನಕವೂ ಮಗು ತೊಟ್ಟಿಲಲ್ಲಿ ಇತ್ತು. ಕೂಲಿ ಕೆಲಸ ಮುಗಿಸಿ ಮನೆಗೆ ಹೋಗುವ ಸಲುವಾಗಿ ತಾಯಿ ಸಂಜೆ 5ರ ವೆಳೆಗೆ ತೊಟ್ಟಿಲು ಬಳಿ ಬಂದು ನೋಡಿದಾಗ ತೊಟ್ಟಿಲು ಬರಿದಾಗಿತ್ತು.

ಕೋಲಾರ: 'ಆಶ್ರಯ' ನೀಡಿದ್ದ ಮನೆ ರಾತ್ರೋ ರಾತ್ರಿ ಧ್ವಂಸ..!

ತೊಟ್ಟಿಲು ನೆಲಕ್ಕೆ ತಾಕಿದಂತೆ ಇದ್ದುದರಿಂದ ಮಗು ತೊಟ್ಟಿಲಿನಿಂದ ಇಳಿದು, ದಾರಿ ತಪ್ಪಿ ಎಲ್ಲೋ ಕಾಣೆಯಾಗಿತ್ತು. ಈ ಕುರಿತು ರಾತ್ರಿ ಶ್ರೀಮಂಗಲ ಪೊಲೀಸರಿಗೆ ದೂರು ನೀಡಲಾಯಿತು.

ತಕ್ಷಣ ಕಾರ್ಯಾಚರಣೆ: ಕುಟ್ಟಹಾಗೂ ಶ್ರೀಮಂಗಲ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ತೆರಳಿದರು. ಕಾಣೆಯಾದ ಸ್ಥಳವು ಕಾಡಂಚಿನ ಪ್ರದೇಶವಾದ್ದರಿಂದ ಹಾಗು ವನ್ಯ ಪ್ರಾಣಿಗಳ ಹಾವಳಿಯಿರುವುದರಿಂದ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣನವರ್‌ ಮತ್ತು ಸಿಬ್ಬಂದಿಯ ಸಹಕಾರ ಕೋರಲಾಯಿತು.

ಬಳಿಕ ಪೊಲೀಸ್‌ ಹಾಗೂ ಅರಣ್ಯ ಸಿಬ್ಬಂದಿ ಸ್ಥಳೀಯ ಶೆಟ್ಟಿಗೇರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಮಾಡ ಸುಮಂತ್‌ ಹಾಗೂ ಗ್ರಾಮಸ್ಥರೊಂದಿಗೆ ರಾತ್ರಿಯಿಡಿ ಟಾಚ್‌ರ್‍ ಬೆಳಕಿನಲ್ಲಿ ಸುತ್ತಮುತ್ತಲ ತೋಟ, ಅರಣ್ಯ ಪ್ರದೇಶ ಹಾಗೂ ತೋಟದ ಮದ್ಯದಲ್ಲಿ ನೀರಿನ ತೊರೆ ಮತ್ತಿತರ ಕಡೆ ಶೋಧಿಸಲಾಯಿತು.

ಬೆಂಕಿ ಉರಿಸಿ ಕಾವಲು:

ಬೆಳಕು ಹರಿಯುವ ಸಮಯದವರೆಗೆ ಮಗು ಕಾಣೆಯಾದ ಪ್ರದೇಶದ ಸುತ್ತಮುತ್ತ ಕಾಡು ಮೃಗಗಳು ಹತ್ತಿರ ಸುಳಿಯದಂತೆ ಎಚ್ಚರವಹಿಸಿ ಅಲ್ಲಲ್ಲಿ ಬೆಂಕಿ ಹಚ್ಚಿ ರಾತ್ರಿಯಿಡಿ ಕಾವಲು ಕಾಯಲಾಯಿತು. ಬೆಳಕು ಹರಿದ ಮೇಲೆ ಪುನಃ ಕಾರ್ಯಾಚರಣೆ ಮುಂದುವರಿಸಿದಾಗ ಸೋಮವಾರ ಬೆಳಗ್ಗೆ 7.30ರ ವೆಳೆಗೆ ಮಗು ಕಾಣೆಯಾದ ಸ್ಥಳದಿಂದ ಎತ್ತರದ ಪ್ರದೇಶದ ಕಾಫಿ ಗಿಡ ಒಂದರ ಬುಡದ ಕೆಳಗೆ ನಿತ್ರಾಣಗೊಂಡ ಸ್ಥಿತಿಯಲ್ಲಿ ಮಗು ಪತ್ತೆಯಾಯಿತು.

ಕೂಡಲೆ ಸ್ಥಳದಲ್ಲಿ ಚಿಕಿತ್ಸೆ ಮಾಡಿಸಿ, ವೈದ್ಯರಿಂದಲೂ ಚಿಕಿತ್ಸೆ ಕೊಡಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಲಾಯಿತು. ಆತಂಕ ಕಂಡುಬಂದ ತಕ್ಷಣ ಸ್ಪಂದಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಸಾರ್ವಜನಿಕರು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಶಂಸಿಸಿದ್ದಾರೆ.

ಕಾಲು ಕೆಜಿ ತೂಗುತ್ತೆ ಈ ಸಿಗಡಿ, ಕೊಡಗಿನ ಮತ್ಸ್ಯ ಭವನಕ್ಕೆ ಕೇರಳದ ಟೈಗರ್ ಪ್ರಾನ್ಸ್..!

ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕ ಸಿ.ಟಿ.ಜಯಕುಮಾರ್‌ ನೇತೃತ್ವದಲ್ಲಿ ಕುಟ್ಟವೃತ್ತದ ಪೊಲೀಸ್‌ ವೃತ್ತ ನಿರೀಕ್ಷಕ ಎಸ್‌.ಪರಶಿವಮೂರ್ತಿ ನಡೆಸಿದ ಕಾರ್ಯಾಚರಣೆಯಲ್ಲಿ ಶ್ರೀಮಂಗಲ ಠಾಣೆ ಪೊಲೀಸ್‌ ಉಪ ನಿರೀಕ್ಷಕ ಎಂ.ದಿನೇಶ್‌ ಕುಮಾರ್‌, ಕುಟ್ಟಪೊಲೀಸ್‌ ಠಾಣೆ ಪೊಲೀಸ್‌ ಉಪ ನಿರೀಕ್ಷಕ ಎಚ್‌.ಜೆ.ಚಂದ್ರಪ್ಪ, ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸವಣ್ಣನವರ್‌, ಶ್ರೀಮಂಗಲ ಠಾಣೆಯ ಸಿಬ್ಬಂದಿಯಾದ ಎಎಸ್‌ಐ ಅರುಣ, ರವಿ, ವಿಶ್ವನಾಥ, ಧನಂಜಯ, ಸ್ವಾಮಿ, ಶರತ್‌, ಕುಟ್ಟಪೊಲೀಸ್‌ ಠಾಣೆಯ ಸಿಬ್ಬಂದಿ ಎಎಸ್‌ಐ ಸಣ್ಣಪ್ಪ, ರಂಜಿತ್‌, ಮನೋರಂಜನ್‌, ಕೃಷ್ಣಮೂರ್ತಿ, ಮೋಹನ್‌, ಚಾಲಕ ಮೋಹನ್‌,ವಿನಾಯಕ ಹಿರೆಮಠ, ಅರಣ್ಯ ಇಲಾಖೆಯ ಸಿಬ್ಬಂದಿ ಹರೀಶ್‌, ಡೀಲಾಕ್ಷ, ಗಜೇಂದ್ರ, ಪೊನ್ನಣ್ಣ, ದೀಕ್ಷೀತ, ಹರ್ಷಿತ್‌, ಪ್ರಜ್ವಲ್‌ ಭಾಗವಹಿಸಿದ್ದರು.