ಮಡಿಕೇರಿ(ಜ.07): ವೀರಾಜಪೇಟೆಯ ಆಧುನಿಕ ಮತ್ಸ್ಯ ಭವನದ ಮಾರುಕಟ್ಟೆಗೆ ಈಚೆಗೆ ಕೇರಳದ ತಲಶ್ಶೇರಿಯಿಂದ ಟೈಗರ್‌ ಪ್ರಾನ್ಸ್‌ (ದೊಡ್ಡ ಗಾತ್ರದ ಸಿಗಡಿ) ಬಂದಿದ್ದು, ಮತ್ಸ್ಯ ಪ್ರಿಯರ ಗಮನ ಸೆಳೆದಿದೆ.

ಕೇವಲ ನಾಲ್ಕು ಸಿಗಡಿಗಳು ಒಂದು ಕೆ.ಜಿ. ತೂಗುತ್ತವೆ. ಮತ್ಸ್ಯಭವನದ ಆದ್ಯ ಫಿಶರೀಶ್‌ ಮಳಿಗೆಗೆ ಐದು ಕೆ.ಜಿ.ಯಷ್ಟುಬಂದಿದ್ದ ದೊಡ್ಡ ಗಾತ್ರದ ಟೈಗರ್‌ ಪ್ರಾನ್ಸ್‌ ಅನ್ನು ಗ್ರಾಹಕರು ಕೆ.ಜಿ. ಒಂದಕ್ಕೆ 900 ರು.ನಂತೆ ಮುಗಿಬಿದ್ದು ಖರೀದಿಸಿದ್ದಾರೆ.

ತೀರಕ್ಕೆ ಬಂದು ಬಿತ್ತು ಪುರುಷರ ಶಿಶ್ನದಂತೆ ಕಾಣುವ 'ಪೆನಿಸ್ ಫಿಶ್' ಏನ್ ಕತೆ?

ಎಂದಿನಂತೆ ಮಾರುಕಟ್ಟೆಗೆ ಬರುವ ಸಾಮಾನ್ಯ ಪ್ರಾನ್ಸ್‌ ಮೀನಿಗೆ 400ರಿಂದ 500 ರು. ಇದ್ದು, ಇದು ಒಂದು ಕೆ.ಜಿ.ಗೆ 50ರಿಂದ 60 ಮೀನುಗಳು ತೂಗುತ್ತವೆ. ಸಿಗಡಿಗೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯೂ ಇದೆ. ಕೇರಳದ ಮಾರುಕಟ್ಟೆಯಲ್ಲಿ ಟೈಗರ್‌ ಪ್ರಾನ್ಸ್‌ಗೆ ಇನ್ನೂ ಹೆಚ್ಚಿನ ಬೆಲೆ ಇದೆ. ಈ ಮೀನಿಗೆ ಜಪಾನ್‌ ದೇಶದಲ್ಲಿ ಬೇಡಿಕೆ ಹೆಚ್ಚಿದೆ.

ಜಪಾನ್‌ನಲ್ಲಿ ಒಂದು ಕೆ.ಜಿ.ಗೆ ಭಾರತದ ರುಪಾಯಿ ಮೌಲ್ಯಕ್ಕೆ ಹೋಲಿಸಿದರೆ 2 ಸಾವಿರ ರು. ಇದೆ. ಗೋವಾದಲ್ಲಿ ಇದೇ ಸಿಗಡಿಗೆ 1000ದಿಂದ 1500 ರು.ವರೆಗೆ ಬೆಲೆ ಇದೆ. ದಕ್ಷಿಣ ಕನ್ನಡದ ಮಲ್ಪೆ ಸಮುದ್ರದ ಕರಾವಳಿ ಹಾಗೂ ಕಣ್ಣಾನೂರು, ತಲಶ್ಶೇರಿ ಸಮುದ್ರದ ಕರಾವಳಿಯಿಂದಲೂ ಈ ಎಲ್ಲ ವರ್ಗದ ಪ್ರಾನ್ಸ್‌ ಮೀನುಗಳು ಜಪಾನ್‌ಗೆ ರಫ್ತಾಗುತ್ತಿವೆ.

ಚೀನಾ: ಮನುಷ್ಯ ಮುಖ ಹೋಲುವ ಮೀನು ಪತ್ತೆ!

ಪ್ರಾನ್ಸ್‌ ಮೀನು ಮಾದರಿಯಲ್ಲಿಯೇ ಇರುವ ಲಾಬ್‌ಸ್ಟರ್‌ ಎಂಬ ಒಂದೇ ಮೀನು ಒಂದು ಕೆ.ಜಿ.ಯಿಂದ ಒಂದೂವರೆ ಕೆಜಿ ತನಕ ತೂಗುತ್ತದೆ. ಟೈಗರ್‌ ಪ್ರಾನ್ಸ್‌ನ ತೂಕ ಅತಿ ಹೆಚ್ಚೆಂದರೆ 200 ಗ್ರಾಂನಿಂದ 250 ಗ್ರಾಂ ಇರುತ್ತದೆ. ಪ್ರಾನ್ಸ್‌ಗೆ ಕನ್ನಡದಲ್ಲಿ ಸಿಗಡಿ, ಮಲಯಾಳಂನಲ್ಲಿ ಚೆಮ್ಮಿನ್‌ ಎಂಬ ಹೆಸರಿದೆ.