ಪಡಿತರ ಪಡೆಯಲು ದಿನವಿಡಿ ಸರತಿಯಲ್ಲಿ ನಿಂತಿದ್ದ ವೃದ್ಧ ಸಾವು
ಪಡಿತರ ಚೀಟಿ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ಸಾವು| ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದ ಘಟನೆ| ಆಸ್ಪತ್ರೆಗೆ ಭೇಟಿ ನೀಡಿದ ಎಸಿ ಸುರೇಖಾ, ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ, ಪಿಎಸೈ ರವಿ ಯಡವಣ್ಣವರ|
ಇಂಡಿ:(ಸೆ.20) ತುತ್ತು ಅನ್ನಕ್ಕಾಗಿ ಪಡಿತರ ಚೀಟಿ ಪಡೆಯಲು ಸರತಿ ಸಾಲಿನಲ್ಲಿ ದಿನವಿಡಿ ನಿಂತ ವೃದ್ಧನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ನಡೆಸಿದೆ.
ಮೃತ ವೃದ್ಧನನ್ನು ಇಂಡಿ ತಾಲೂಕಿನ ತಡವಲಗಾ ಗ್ರಾಮದ ರಾಯಪ್ಪ ಮಳಸಿದ್ದಪ್ಪ ಗುಡ್ಲಮನಿ (62) ಎಂದು ಗುರುತಿಸಲಾಗಿದೆ. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿರುವ ಆಹಾರ ವಿಭಾಗದಲ್ಲಿ ಪಡಿತರ ಚೀಟಿ ಪಡೆಯಲು ಸರತಿ ಸಾಲಿನಲ್ಲಿ (ಪಾಳಿ) ಹಚ್ಚಿದಾಗ ಮಧ್ಯಾಹ್ನ 3.40ಕ್ಕೆ ಸರತಿ ಸಾಲಿನಲ್ಲಿಯೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾನೆ. ಕೂಡಲೆ ತಹಸೀಲ್ದಾರ್ ಕಚೇರಿ ಸಿಬ್ಬಂದಿ ತಹಸೀಲ್ದಾರ್ ಜೀಪ್‌ನಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗಮಧ್ಯೆಯೇ ವೃದ್ಧ ಮೃತಪಟ್ಟಿದ್ದಾನೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಸಂಬಂಧ ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಗೆ ಎಸಿ ಸುರೇಖಾ, ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ, ಪಿಎಸೈ ರವಿ ಯಡವಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಇಂಡಿ ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ ಅವರು, ತಾಲೂಕಿನ ತಡವಲಗಾ ಗ್ರಾಮದ ವೃದ್ಧ ಪಡಿತರ ಚೀಟಿ ಪಡೆಯಲು ಪಾಳಿ ಹಚ್ಚಿದ ಸಂದರ್ಭದಲ್ಲಿ ಹೃದಯಾಘಾತವಾಗಿ ಮೃತಪಟ್ಟಿರುವುದು ನಿಜ. ಮೃತಪಟ್ಟವ್ಯಕ್ತಿಗೆ ಹೃದಯಾಘಾತದ ಕಾಯಿಲೆ ಮೊದಲೆ ಇತ್ತು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಪಡಿತರ ಚೀಟಿ, ಆಧಾರ್ ಕಾರ್ಡ್‌ಗಾಗಿ ಪಾಳಿ ಇರುವುದು ನಿಜ. ಅದಕ್ಕೊಂದು ಹೆಚ್ಚುವರಿ ಕೌಂಟರ್ ತೆರೆಯಲು ಮೇಲಧಿಕಾರಿಗಳಿಗೆ ಬರೆಯಲಾಗುತ್ತದೆ ಎಂದು ಹೇಳಿದರು.