ಆನಂದ್‌ ಎಂ. ಸೌದಿ

ಯಾದಗಿರಿ(ಜು.19): ಕೋವಿಡ್‌-19 ಸೋಂಕಿತ ರೋಗಿಗಳಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅವಶ್ಯಕವಾಗಿರುವುದರಿಂದ, ತಜ್ಞರ ಸಲಹೆ ಮೇರೆಗೆ ಉತ್ತಮ ದರ್ಜೆಯ ಪೌಷ್ಟಿಕಾಂಶಯುಕ್ತ ಆಹಾರವನ್ನು ರೋಗಿಗಳಿಗೆ ಕಾಲಕಾಲಕ್ಕೆ ತಪ್ಪದೆ ಒದಗಿಸಬೇಕೆಂಬುದು ಸರ್ಕಾರದ ಆದೇಶ. ಇದಕ್ಕಾಗಿ ಸರ್ಕಾರದ ಆರೋಗ್ಯ ಇಲಾಖೆಯೇ ಪಥ್ಯಾಹಾರ ಪಟ್ಟಿ ತಯಾರಿಸಿ, ಅದರಂತೆ ಪ್ರತಿ ದಿನ ವಿವಿಧ ರೀತಿಯ ಆಹಾರ ನೀಡುವಂತೆ ಸೂಚಿಸಿದೆ.

ಮುಂಜಾನೆ 7 ಗಂಟೆಗೆ ಉಪಾಹಾರ, ಮಧ್ಯಾಹ್ನ 1 ಗಂಟೆಗೆ ಹಾಗೂ ರಾತ್ರಿ 7 ಗಂಟೆಗೆ ನಿಯಮಿತ ಊಟಕ್ಕಾಗಿ ಪ್ರತಿಯೊಬ್ಬರಿಗೆ 250 ರು.ಗಳ ವೆಚ್ಚವನ್ನು ಸರ್ಕಾರವೇ ನಿಗದಿಪಡಿಸಿದೆ. ಈ ಮೊತ್ತವನ್ನು ಆಸ್ಪತ್ರೆಯ ಎ.ಆರ್‌.ಎಸ್‌. ನಿಧಿಯಿಂದ ಅಥವಾ ಜಿಲ್ಲಾಧಿಕಾರಿಗಳ ಆಧೀನದಲ್ಲಿರುವ ವಿಪತ್ತು ಪರಿಹಾರ ನಿಧಿಯಿಂದ ಪಡೆದುಕೊಳ್ಳಲು ತಿಳಿಸಿದೆ.

ಆದರೀಗ, ಸರ್ಕಾರದ ಈ ಪೌಷ್ಟಿಕಾಂಶಯುಕ್ತ ‘ಮೆನ್ಯೂ’ ಕೇವಲ ನಾಮ್‌ ಕೆ ವಾಸ್ತೆಯಂತೆ ಇದ್ದು, ದಾಖಲೆಗಾಗಿಯೋ ಅಥವಾ ಖರ್ಚು ವೆಚ್ಚಗಳನ್ನು ತೋರಿಸುವುದಕ್ಕಾಗಿ ಏನೋ ಎನ್ನುವಂತೆ ಇದೆ ಅನ್ನೋ ಅನುಮಾನಗಳು ಸೋಂಕಿತರಿಂದಲೇ ಕೇಳಿ ಬರುತ್ತಿವೆ. ಸೋಂಕಿತರಿಗೆ ನೀಡಲಾಗುತ್ತಿರುವ ಆಹಾರ ಕಳಪೆ ಗುಣಮಟ್ಟದಲ್ಲಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಜು.1ರಿಂದ ಸರ್ಕಾರದ ಹೊಸ ಮೆನ್ಯೂ ಜಾರಿಗೆ ಬಂದಿದೆ. ಹಾಗೆ ನೋಡಿದರೆ, ಸರ್ಕಾರದ ಮೆನ್ಯೂ ಸರಿಯಾಗಿ ದೊರೆತರೆ ರೋಗಿ ಮತ್ತಷ್ಟೂತೀವ್ರಗತಿಯಲ್ಲಿ ಚೇತರಿಸಿಕೊಳ್ಳಬಲ್ಲ ಎನ್ನುವುದರಲ್ಲಿ ಸಂಶಯವೂ ಇಲ್ಲ.

ಯಾದಗಿರಿ: SSLC ಮೌಲ್ಯಮಾಪನ, ಶಿಕ್ಷಕರೊಬ್ಬರಿಗೆ ಕೊರೋನಾ ಪಾಸಿಟಿವ್‌!

ಯಾದಗಿರಿ ಜಿಲ್ಲೆಯಲ್ಲಿ ಈವರೆಗೆ 1500ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಜುಲೈ ಮೊದಲ ವಾರದಿಂದ ಐದುನೂರಕ್ಕೂ ಹೆಚ್ಚು ಸೋಂಕಿತರಿಗೆ ಇಂತಹ ಪೌಷ್ಟಿಕಾಂಶ ನೀಡಲಾಗುತ್ತಿದೆ ಎಂಬುದು ಅಧಿಕಾರಿಗಳ ಪ್ರತಿಕ್ರಿಯೆ. ಆದರೆ, ಕೋವಿಡ್‌- ಆಸ್ಪತ್ರೆ ಅಥವಾ ಕೇರ್‌ ಸೆಂಟರ್‌ಗಳಲ್ಲಿ ಬಹುತೇಕ ಸೋಂಕಿತರು ಊಟಕ್ಕಾಗಿ ನರಕಯಾತನೆ ಅನುಭವಿಸಿದರಂತೆ.

ಈ ಬಗ್ಗೆ ‘ಕನ್ನಡಪ್ರಭ’ ಅನೇಕ ಸೋಂಕಿತರೊಂದಿಗೆ ದೂರವಾಣಿ/ವೀಡಿಯೋ ಕಾಲ್‌ ಮೂಲಕ ಮಾತನಾಡಿಸಿದಾಗ ಅಲ್ಲಿನ ಊಟದ ದುಸ್ಥಿತಿ ಬೆಚ್ಚಿ ಬೀಳಿಸುವಂತಿತ್ತು. ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ವೊಂದರಲ್ಲಿ ನೀಡಿದ ಸತ್ವಹೀನದಂತಹ ಅರಿಶಿನ ಬಣ್ಣದ ಬಾತ್‌ (ಆಲೂ ಅಲ್ಲ), ಕೊಳೆತ ತರಕಾರಿಗಳ ಪಲ್ಯೆ, ನೀರಿಗಿಂತಲೂ ತೆಳುವಾದ ಸಾಂಬಾರ್‌ (ಬಣ್ಣ-ರುಚಿ ನಿರೀಕ್ಷೆಯೇ ಮಾಡಬಾರದು) ಮುಂತಾದವು ಅಲ್ಲಿನ ವಾಸ್ತವಾಂಶವನ್ನು ತೋರಿಸಿದಂತಿತ್ತು.

ಸೋಂಕಿತ ಅಧಿಕಾರಿಯೊಬ್ಬರು ಅಲ್ಲಿ ಊಟ ಹಾಗೂ ಸ್ವಚ್ಛತೆಗಾಗಿ ಅನುಭವಿಸುತ್ತಿರುವ ಪಡಿಪಾಟಲನ್ನು ನೋವಿನಿಂದ ಹೇಳಿದರಲ್ಲದೆ, ಇಲ್ಲಿ ಸೋಂಕಿನಿಂದ ಸಾಯುವ ಬದಲು ಸಪ್ಪೆ ಆಹಾರದಿಂದ ಸಾಯುವ ಸ್ಥಿತಿ ಉಂಟಾದರೆ ಅಚ್ಚರಿಯಲ್ಲ ಎಂದರು. ಬಿಡುಗಡೆಯಾದ ನಂತರ ಹೊರಬಂದ ಅವರು, ‘ನರಕಯಾತನೆ’ ಅನುಭವಿಸಿದೆ ಎಂದರು. ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ ಹೇಳಿಕೆಯೇ ಈ ಮಟ್ಟದಲ್ಲಿದ್ದಾಗ, ಸಾಮಾನ್ಯರ ಪಾಡು ದೇವರೇ ಬಲ್ಲ. ಹೀಗಾಗಿ, ಅನೇಕರು ಮನೆಯಿಂದಲೇ ಬಿಸಿ ಬಿಸಿಯಾದ ಅಡುಗೆ ಮಾಡಿಸಿಕೊಂಡು ತರಿಸಿಕೊಂಡು ಊಟ ಮಾಡುತ್ತಿದ್ದರಂತೆ. ಭೀಮರಾಯನ ಗುಡಿಯ ಕೇಂದ್ರದಲ್ಲಿ ಊಟದಲ್ಲಿ ಹುಳ ಬಂದು, ಸೋಂಕಿನಿಂದ ಬಳಲುತ್ತಿದ್ದ ಪೊಲೀಸ್‌ ಇಲಾಖೆಯ ಕೆಲವರು ಕಂಗಾಲಾಗಿ, ಅದರ ಫೋಟೋವನ್ನು ಹಿರಿಯ ಅಧಿಕಾರಿಗಳಿಗೆ ವಾಟ್ಸಾಪ್‌ ಮೂಲಕ ಕಳುಹಿಸಿ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಕನ್ನಡಪ್ರಭ’ಕ್ಕೆ ಲಭ್ಯ ಮೂಲಗಳ ಪ್ರಕಾರ, ಸೋಂಕತರ ವೆಚ್ಚದಲ್ಲಿ ಹಣ ಲೂಟಿ ಮಾಡುವ ದಂಧೆ ನಡೆದಿರಬಹುದು ಎಂಬ ದೂರುಗಳು ಕೇಳಿಬಂದಿವೆ. ಮೊದಮೊದಲು ಒಂದೆರಡು ಹೋಟೆಲ್‌, ಖಾನಾವಳಿಗಳಲ್ಲಿ ಆಹಾರ ತರಿಸಿಕೊಂಡ ಅಧಿಕಾರಿಗಳು, ನಂತರದಲ್ಲಿ ತಾವೇ ಅಡುಗೆ ಕಂಟ್ರಾಕ್ಟ್ ಹಿಡಿದು ಹೋಟೆಲ್‌/ಖಾನಾವಳಿ ಬಿಲ್‌ ಪಡೆಯುತ್ತಿದ್ದಾರಂತೆ ! ನಗರದ ಹೊಸಳ್ಳಿ ರಸ್ತೆಯೊಂದರ ಬಿಲ್ಡಿಂಗ್‌ನಲ್ಲಿ ಗುತ್ತಿಗೆ ಆಧಾರದ ಅಡುಗೆಯವರನ್ನು ಮೇಲೆ ಊಟ ತಯಾರಿಸಲಾಗುತ್ತಿದೆ.

ಆದರೆ, ಕೋವಿಡ್‌-19 ಇಂತಹ ಸಂಕಷ್ಟದ ಸಮಯದಲ್ಲಿ ಇದನ್ನೇ ಬಂಡವಾಳವಾಗಿಸಿಕೊಳ್ಳಲು ಜಿಲ್ಲೆಯಲ್ಲಿ ಕೆಲವು ಅಧಿಕಾರಿ ವಲಯದಲ್ಲಿ ನಡೆದಿರುವ ತಂತ್ರಗಳು ನಿಜಕ್ಕೂ ಆಘಾತ ಮೂಡಿಸಿವೆ. ಕೋವಿಡ್‌-19 ಸೋಂಕಿತರ ಆರೋಗ್ಯದ ಹಿತದೃಷ್ಟಿಗಿಂತ ಮುಖ್ಯವಾಗಿ, ಈ ಸಮಯದಲ್ಲೇ ಹಣ ಮಾಡಿಕೊಳ್ಳುವ ದಂಧೆ ನಡೆಸಲಾಗುತ್ತಿದೆ ಎಂಬ ಆರೋಪಗಳೂ ಮೂಡಿಬಂದಿವೆ. ಇದೊಂದು ರೀತಿಯಲ್ಲಿ ಬೆಂಕಿ ಹತ್ತಿದ ಮನೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವಂತಿದೆ.
ಸರ್ಕಾರದ ಮೆನ್ಯೂ ಪ್ರಕಾರ ನೋಡಿದರೆ ಇಲ್ಲಿ ವಾಸ್ತವದ ಬಹಳ ದೂರವಿದೆ. ಊಟದ ಆಹಾರದ ದುಸ್ಥಿತಿಯಂತೂ ಕೇಳಬಾರದು. ಊಟವಷ್ಟೇ, ಅಲ್ಲಿನ ಸೌಲಭ್ಯಗಳು, ಸ್ಯಾನಿಟೈಜರ್‌, ಶೌಚಾಲಯ ಅವ್ಯವಸ್ಥೆ ನೋಡಲೂ ಭಯವಾಗುತ್ತಿತ್ತು ಎಂದು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿ ಬಂದ ಹಿರಿಯ ಪತ್ರಕರ್ತ ಅನಿಲ್‌ ದೇಶಪಾಂಡೆ ಅವರು ಹೇಳಿದ್ದಾರೆ. 

ಕೊರೋನಾ ಸೋಂಕಿನಿಂದ ಸಾಯುವ ಬದಲು ಇಲ್ಲಿನ ಕಳಪೆ ಆಹಾರ ಹಾಗೂ ಅವ್ಯವಸ್ಥೆಯಿಂದ ನರಳಿ ಸಾಯುವ ಸ್ಥಿತಿ ಉಂಟಾದರೆ ಅಚ್ಚರಿಯಲ್ಲ. ಕೋವಿಡ್‌ ಆಸ್ಪತ್ರೆಯಲ್ಲಿ ನಾನೂ ‘ನರಕಯಾತನೆ’ ಅನುಭವಿಸಿದೆ. ಸರ್ಕಾರಿ ನೌಕರನಾಗಿರುವ ನನಗೇ ಹೀಗಾದರೆ, ಸಾಮಾನ್ಯರ ಪಾಡು ದೇವರೇ ಬಲ್ಲ ಎಂದು ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡ ಅಧಿಕಾರಿ ತಿಳಿಸಿದ್ದಾರೆ.  

ಸೋಂಕಿತರಿಗೆ ನೀಡು ಪಥ್ಯಾಹಾರ ಪಟ್ಟಿ(ಮೆನ್ಯೂ)

ಬೆಳಿಗ್ಗೆ 7 ಗಂಟೆಗೆ : 

ಸೋಮವಾರ ರವೆ ಇಡ್ಲಿ, ಮಂಗಳವಾರ ಪೊಂಗಲ್‌, ಬುಧವಾರ ಸೆಟ್‌ ದೋಸೆ, ಗುರುವಾರ ಅಕ್ಕಿ ಇಡ್ಲಿ, ಶುಕ್ರವಾರ ಬಿಸಿ ಬೇಳೆ ಭಾತ್‌, ಶನಿವಾರ ಚೌ ಚೌ ಭಾತ್‌ ಹಾಗೂ ಭಾನುವಾರ ಸೆಟ್‌ ದೋಸೆ. ಬೆಳಿಗ್ಗೆ 10 ಗಂಟೆಗೆ, ಸೋಮವಾರ ಕಲ್ಲಂಗಡಿ ಹಣ್ಣು-ರಾಗಿ ಗಂಜಿ, ಮಂಗಳವಾರ ಪಪಾಯಾ ಹಣ್ಣು - ಪಾಲಕ್‌ ಸೂಪ್‌, ಬುಧವಾರ ಕರಬೂಜ ಹಣ್ಣು- ರವೆ ಗಂಜಿ, ಗುರುವಾರ ಕಲ್ಲಂಗಡಿ ಹಣ್ಣು-ಕ್ಯಾರೆಟ್‌ ಸೂಪ್‌, ಶುಕ್ರವಾರ ಪಪಾಯಾ ಹಣ್ಣು-ರಾಗಿ ಗಂಜಿ, ಶನಿವಾರ ಕರಬೂಜ್‌ ಹಣ್ಣು-ಟೊಮ್ಯಾಟೋ ಸೂಪ್‌, ಭಾನುವಾರ ಪಪಾಯಾ ಹಣ್ಣು-ರವೆ ಗಂಜಿ.

ಮಧ್ಯಾಹ್ನ 1 ಗಂಟೆಗೆ ಊಟ : 

ದಿನಾಲೂ ರೊಟ್ಟಿ/ಚಪಾತಿ-2, ಪಲ್ಯ, ಅನ್ನ, ಬೇಳೇಸಾರು, ಮೊಸರು/ಮೊಟ್ಟೆ ಸಂಜೆ 5.30ಕ್ಕೆ : ದಿನಾಲೂ ಏಲಕ್ಕಿ ಬಾಳೆಹಣ್ಣು, ಮಾರಿ ಬಿಸ್ಕೆಟ್‌-3/ಪ್ರೋಟೀನ್‌ ಬಿಸ್ಕೆಟ್‌-2/ಫ್ರೆಶ್‌ ಡೇಟ್ಸ್‌-2, ಮ್ಯಾಂಗೋ ಬಾರ್‌ (ವಿಟಮಿನ್‌ ಸಿ) ರಾತ್ರಿ 7ಕ್ಕೆ ಊಟ : ದಿನಾಲೂ ರೊಟ್ಟಿ/ಚಪಾತಿ-2, ಪಲ್ಯ, ಅನ್ನ, ಬೇಳೆಸಾರು/ಮೊಸರು. ರಾತ್ರಿ : ದಿನಾಲೂ 9ಕ್ಕೆ ಫ್ಲೇವರ್ಡ್‌ ಮಿಲ್ಕ್‌  ಈ ಆಹಾರ ಪಟ್ಟಿ ಪ್ರತಿದಿನ ರೋಗಿಗಳಿಗೆ ವೈದ್ಯರುಗಳಿಗೆ, ಅಧಿಕಾರಿಗಳು ಹಾಗೂ ಇತರರಿಗೆ ಒದಗಿಸಬೇಕು.