ಯಾದಗಿರಿ(ಜು.18): ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆಂದು ನಿಯೋಜಿತಗೊಂಡಿದ್ದ ಶಿಕ್ಷಕರೊಬ್ಬರಿಗೆ ಕೋವಿಡ್‌-19 ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಶುಕ್ರವಾರ ನಗರದ ಡಾನ್‌ ಬಾಸ್ಕೋ ಶಾಲೆಯ ಮೌಲ್ಯಮಾಪನ ಕೇಂದ್ರದಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು. ಮಾಹಿತಿ ಅರಿತ ಡಿಡಿಪಿಐ ಶ್ರೀನಿವಾಸರೆಡ್ಡಿ ಸೋಂಕಿತ ಶಿಕ್ಷಕರನ್ನು ಭೇಟಿಯಾಗಿ ತಮ್ಮ ಜೊತೆ ಕರೆದುಕೊಂಡು ಹೋದ ಪ್ರಸಂಗ ನಡೆದಿದೆ.

ಯಾದಗಿರಿಯಲ್ಲಿ ಒಟ್ಟು ಮೂರು ಮೌಲ್ಯಮಾಪನ ಕೇಂದ್ರಗಳಿವೆ. ನಗರದ ಚಿತ್ತಾಪೂರ ರಸ್ತೆಯಲ್ಲಿರುವ ಡಾನ್‌ ಬಾಸ್ಕೋ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರವಿದೆ. ಇಲ್ಲಿ ಹಿಂದಿ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸುತ್ತಿದ್ದ ಶಿಕ್ಷಕರೊಬ್ಬರಿಗೆ ಸೋಂಕು ತಗುಲಿದೆ ಎಂಬ ಮಾಹಿತಿ ಶುಕ್ರವಾರ ಮುಂಜಾನೆ ರವಾನೆಯಾಗಿದೆ. ವಿಜಯಪುರ ಜಿಲ್ಲೆಯ ತಾಳಿಕೋಟಿ ಮೂಲದ ಈ ಶಿಕ್ಷಕರು ಸುರಪುರ ತಾಲೂಕಿನ ಗ್ರಾಮದವೊಂದರ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಳಿಕೋಟಿಯಲ್ಲಿ ಇವರು ಸುಮಾರು ಹತ್ತು ದಿನಗಳ ಹಿಂದೆ ಕೋವಿಡ್‌ ಟೆಸ್ಟ್‌ ಮಾಡಿಸಿ, ಕರ್ತವ್ಯಕ್ಕೆ ಹಾಜರಾಗಿದ್ದರು. ಕೆಂಭಾವಿ ಮೂಲಕ ಸಾರಿಗೆ ಬಸ್ಸೊಂದರಲ್ಲಿ ಮೌಲ್ಯಮಾಪನ ಕೇಂದ್ರಕ್ಕೆ ಆಗಮಿಸಿದ್ದ ಈ ಶಿಕ್ಷಕರು ಇಲ್ಲಿಯೇ ವಾಸ್ತವ್ಯ ಹೂಡಿದ್ದರು.

ಯಾದಗಿರಿ: ಭಾನುವಾರ ಪಾಸಿಟಿವ್‌, ಮಂಗಳವಾರ ನೆಗೆಟಿವ್‌..!

ಕಳೆದ ನಾಲ್ಕು ದಿನಗಳಿಂದ ಮೌಲ್ಯಮಾಪನ ಕಾರ್ಯಕ್ಕೆ ಇವರ ಜೊತೆ ಅನೇಕರು ಸಂಪರ್ಕದಲ್ಲಿದ್ದರು. ಡಾನ್‌ ಬಾಸ್ಕೋ ಕೇಂದ್ರದಲ್ಲಿ 250ಕ್ಕೂ ಹೆಚ್ಚು ಶಿಕ್ಷಕರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಇಲ್ಲಿ ನಡೆಯುತ್ತಿದೆ. ಶುಕ್ರವಾರ ಮುಂಜಾನೆ 10 ಗಂಟೆ ಸುಮಾರಿಗೆ ಈ ಮಾಹಿತಿ ಬಂದಾಗ, ಈ ಶಿಕ್ಷಕರು ಮೌಲ್ಯಮಾಪನ ನಡೆಸುತ್ತಿದ್ದರು. ವಿಷಯ ಅರಿತ ನಂತರ ಗಾಬರಿಗೊಂಡಿದ್ದ ಅವರು ಕಣ್ಣೀರು ಹಾಕಿದರು ಎಂದು ಹೇಳಲಾಗಿದೆ. ಇವರ ಜೊತೆ ನೇರವಾಗಿ ಪ್ರಾಥಮಿಕ ಸಂಪರ್ಕ ಹೊಂದಿದ ಮೌಲ್ಯಮಾಪನ ಮುಖ್ಯಸ್ಥರು, ಉಳಿದ ಶಿಕ್ಷಕರು ಆತಂಕಗೊಂಡು ತಮ್ಮ ನೋವು ತೋಡಿಕೊಂಡರು. ಈ ಬಗ್ಗೆ ಮಾಹಿತಿ ಅರಿತ ಡಿಡಿಪಿಐ ಕೇಂದ್ರಕ್ಕೆ ಆಗಮಿಸಿ, ಸೋಂಕಿತ ಶಿಕ್ಷಕರಿಗೆ ಧೈರ್ಯ ತುಂಬಿ, ಅವರನ್ನು ಕರೆದುಕೊಂಡು ಹೊರಹೋದರು.

ಸೋಂಕಿತ ಆ ಶಿಕ್ಷಕರು ಇಲ್ಲಿಯೆ ವಾಸ್ತವ್ಯ ಹೂಡಿದ್ದರಲ್ಲದೆ, ಅನೇಕ ಸಹೋದ್ಯೋಗಿಗಳೊಡನೆ ಸಹಜವಾಗಿ ಸಂಪರ್ಕ ಹೊಂದಿದ್ದರು. ಹೀಗಾಗಿ, ಪಾಸಿಟಿವ್‌ ಬಂದ ನಂತರ ಉಳಿದವರು ಮೌಲ್ಯಮಾಪನ ಕಾರ್ಯದ ಹೊರಗೆ ಬಂದಿದ್ದಾರೆ. ಅಲ್ಲದೇ, ಉಳಿದ ಕೇಂದ್ರಗಳಲ್ಲಿನ ಸಹ ಶಿಕ್ಷಕರೊಡನೆಯೂ ಇವರು ಭೇಟಿಯಾಗಿದ್ದರಿಂದ ಸರ್ಕಾರಿ ಪಿಯು ಕಾಲೇಜಿನ ಕೇಂದ್ರದಲ್ಲೂ ಆತಂಕ ಮೂಡಿದೆ.

ಸೋಂಕಿತ ಶಿಕ್ಷಕರ ಜೊತೆ ಶಶೀಲ್‌ ನಮೋಶಿ ಭೇಟಿ?

ಡಾನ್‌ ಬಾಸ್ಕೋ ಸೇರಿದಂತೆ ನಗರದ ಮೂರು ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಕೇಂದ್ರಕ್ಕೆ ಬುಧವಾರ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ್‌ ನಮೋಶಿ ಭೇಟಿ ನೀಡಿದ್ದರು. ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಸಂದರ್ಭದಲ್ಲಿ ಶಿಕ್ಷಕರ ವ್ಯವಸ್ಥೆಗಳ ಬಗ್ಗೆ ಕೇಳಿದ್ದರಂತೆ. ಮುಂಬರುವ ದಿನಗಳಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಇದೊಂದು ರೀತಿಯಲ್ಲಿ ಆರಂಭದ ಪ್ರಚಾರದ ಭೇಟಿ ಇದಾಗಿತ್ತು ಎಂದು ಶಿಕ್ಷಕ ಮೂಲಗಳು ತಿಳಿಸಿವೆ. ಹಾಗೆ ನೋಡಿದರೆ, ರಾಜಕೀಯ ವ್ಯಕ್ತಿಗಳಾಗಲೀ, ಸಾರ್ವಜನಿಕರಿಗಾಗಲೀ ಯಾರಿಗೂ ಇಂತಹ ಕೇಂದ್ರಕ್ಕೆ ಭೇಟಿಗೆ ಅವಕಾಶವಿಲ್ಲ. ಆದರೆ, ನಮೋಶಿ ಭೇಟಿ ನೀಡಿದ್ದು ಅಚ್ಚರಿ ಮೂಡಿಸಿತ್ತಲ್ಲದೆ, ಈಗ ಈ ಸೋಂಕಿತ ಶಿಕ್ಷಕರನ್ನು ಭೇಟಿಯಾಗಿದ್ದರೇ ಅನ್ನೋ ಪ್ರಶ್ನೆ ಕಾಡಿದೆ. ಎಲ್ಲ ಶಿಕ್ಷಕರನ್ನು ಭೇಟಿಯಾದಂತೆ, ಇವರನ್ನೂ ಸಹ ನಮೋಶಿ ಭೇಟಿ ಮಾಡಿರಬಹುದಾಗಿದ್ದು, ಅವರು ಪ್ರಾಥಮಿಕ ಸಂಪರ್ಕಕ್ಕೆ ಬರುತ್ತಾರೆ ಎಂಬ ಮಾತುಗಳಿವೆ.

ಸೋಂಕಿತ ಶಿಕ್ಷಕರು ಟೆಸ್ಟ್‌ ಮಾಡಿಸಿಕೊಂಡು ಬಂದಿದ್ದನ್ನು ಕರ್ತವ್ಯಕ್ಕೆ ಹಾಜರಾಗುವ ಮುನ್ನ ನನ್ನೆದುರು ಹೇಳಿದ್ದರು. ಆದರೆ, ಇಷ್ಟು ದಿನಗಳಾದರೂ ವರದಿ ಬಂದಿಲ್ಲವಾದ್ದರಿಂದ ಸೋಂಕು ಇರಲಿಕ್ಕಿಲ್ಲ ಎಂದು ಭಾವಿಸಲಾಗಿತ್ತು. ಅವರ ಕುಟುಂಬದ ಎಲ್ಲರಿಗೂ ನೆಗೆಟಿವ್‌ ಬಂದಿದ್ದು, ಇವರಿಗೆ ಪಾಸಿಟಿವ್‌ ಬಂದಿದ್ದರಿಂದ ಅವರಿಗೆ ಗಾಬರಿಯಾಗದಂತೆ ಹೇಳಿದ್ದೇನೆ. ದ್ವಿಚಕ್ರ ವಾಹನದಲ್ಲಿ ಅವರು ತಮ್ಮ ಸ್ವಂತ ಊರಿಗೆ ತೆರಳಿದರು ಎಂದು ಯಾದಗಿರಿ ಡಿಡಿಪಿಐ ಶ್ರೀನಿವಾಸರೆಡ್ಡಿ ಅವರು ತಿಳಿಸಿದ್ದಾರೆ.