Asianet Suvarna News Asianet Suvarna News

ಕುಂಚಿಟಿಗ ಸಮಾಜಕ್ಕೆ ಓಬಿಸಿ ಮೀಸಲು: ಬಿಎಸ್‌ವೈ ಭರವಸೆ

ಕುಂಚಿಟಿಗ ಸಮಾಜಕ್ಕೆ ಓಬಿಸಿ ಮೀಸಲಾತಿಯನ್ನು ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಸ್ಪಂದಿಸಲಿದ್ದು, ಈ ದಿಸೆಯಲ್ಲಿ ಶೀಘ್ರದಲ್ಲಿಯೇ ಪ್ರಧಾನಿ ಮೋದಿ ಹಾಗೂ ಸಂಬಂಧಿಸಿದ ಕೇಂದ್ರ ಸಚಿವರ ಜತೆ ಚರ್ಚಿಸಲಾವುದು. ಆ ಮೂಲಕ ವರ್ಷದ ಕಾಲಾವಧಿಯಲ್ಲಿ ಸಮುದಾಯದ ಬಹುಸುದೀರ್ಘ ಕಾಲದ ಬೇಡಿಕೆ ಈಡೇರಿಸುವುದಾಗಿ ನಿಕಟಪೂರ್ವ ಮುಖ್ಯಮಂತ್ರಿ, ಶಾಸಕ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

OBC reservation for kunchitiga community BSY promises rav
Author
First Published Oct 17, 2022, 12:10 PM IST

ಶಿಕಾರಿಪುರ (ಅ.17) : ಕುಂಚಿಟಿಗ ಸಮಾಜಕ್ಕೆ ಓಬಿಸಿ ಮೀಸಲಾತಿಯನ್ನು ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಸ್ಪಂದಿಸಲಿದ್ದು, ಈ ದಿಸೆಯಲ್ಲಿ ಶೀಘ್ರದಲ್ಲಿಯೇ ಪ್ರಧಾನಿ ಮೋದಿ ಹಾಗೂ ಸಂಬಂಧಿಸಿದ ಕೇಂದ್ರ ಸಚಿವರ ಜತೆ ಚರ್ಚಿಸಲಾವುದು. ಆ ಮೂಲಕ ವರ್ಷದ ಕಾಲಾವಧಿಯಲ್ಲಿ ಸಮುದಾಯದ ಬಹುಸುದೀರ್ಘ ಕಾಲದ ಬೇಡಿಕೆ ಈಡೇರಿಸುವುದಾಗಿ ನಿಕಟಪೂರ್ವ ಮುಖ್ಯಮಂತ್ರಿ, ಶಾಸಕ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ಬಿಎ​ಸ್‌ವೈ ನೆತ್ತರು ಜಿಲ್ಲೆಗೆ ನೀರಾ​ವ​ರಿ ರೂಪ​ದಲ್ಲಿ ಪರಿ​ವ​ರ್ತ​ನೆ: ಸಂಸದ ರಾಘ​ವೇಂದ್ರ

ಭಾನುವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಕುಂಚಿಟಿಗರ ಕೇಂದ್ರ ಓಬಿಸಿ ಮೀಸಲಾತಿ ಹಕ್ಕೊತ್ತಾಯ ಅಂಗವಾಗಿ ನಡೆದ ಕುಂಚಿಟಿಗರ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನ ಜನತೆಯ ಆಶೀರ್ವಾದದಿಂದ 4 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ರೈತಪರ, ದೀನ ದಲಿತರ ಪರ ಕೆಲಸ ಮಾಡುವ ಸೌಭಾಗ್ಯ ಲಭಿಸಿದೆ. ಈ ದಿಸೆಯಲ್ಲಿ ತಾಲೂಕಿನ ಜನತೆಯನ್ನು ಎಂದಿಗೂ ಮರೆಯುವುದಿಲ್ಲ. ಜಾತಿ- ಮತದ ಹೆಸರಿನಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ. ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದ ಮಾಜಿ ಸಭಾಪತಿ ದಿ. ಕೆ.ವಿ. ನರಸಪ್ಪನವರ ಹೆಸರಿನಲ್ಲಿ ಕಳೆದ 3 ದಶಕದ ಹಿಂದೆ .6 ಕೋಟಿ ವೆಚ್ಚದಲ್ಲಿ ರಂಗ ಮಂದಿರ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಕುಂಚಿಟಿಗ ಸಮಾಜದಲ್ಲಿ ಬಡವರು, ಅನಕ್ಷರಸ್ಥರು ಹೆಚ್ಚಿದ್ದಾರೆ. ಸ್ವಾಭಿಮಾನದ ಸಮಾಜಕ್ಕೆ ಓಬಿಸಿ ಮೀಸಲಾತಿ ದೊರೆತು ಉದ್ಯೋಗ ಶಿಕ್ಷಣ ಮತ್ತಿತರ ಸರ್ಕಾರಿ ಸೌಲಭ್ಯ ದೊರೆಯಬೇಕು. ಎಲ್ಲರ ರೀತಿ ಪ್ರಾಮಾಣಿಕವಾಗಿ ಬದುಕಬೇಕು. ಈ ದಿಸೆಯಲ್ಲಿ ಓಬಿಸಿ ಮೀಸಲಾತಿ ಕಲ್ಪಿಸಿಕೊಡಲು ಪೂರ್ಣ ಸಹಮತವನ್ನು ಹೊಂದಲಾಗಿದೆ. ಸಿಎಂ ಆದಾಗ ಬ್ರಾಹ್ಮಣ, ಒಕ್ಕಲಿಗ, ಮರಾಠ ಸಹಿತ ವಿವಿಧ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸಿ .1000 ಕೋಟಿ ಅನುದಾನ ನೀಡಿದ್ದು, ಸರ್ಕಾರಿ ಸೌಲಭ್ಯ ಕೇವಲ ಉಳ್ಳವರ ಪಾಲಾಗದೆ ಅರ್ಹ ಹಿಂದುಳಿದವರಿಗೆ ದೊರೆತು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂಬ ಅಪೇಕ್ಷೆ ಹೊಂದಿರುವುದಾಗಿ ತಿಳಿಸಿದರು.

ಕುಂಚಿಟಿಗ ಸಮಾಜಕ್ಕೆ ಓಬಿಸಿ ಮೀಸಲಾತಿ ಬಹುದೀರ್ಘ ಕಾಲದ ಬೇಡಿಕೆಯಾಗಿದೆ. ಇದುವರೆಗೂ ದೊರೆಯದೆ ಪ್ರಕ್ರಿಯೆಯಲ್ಲಿ ನಿಧಾನವಾಗಿದೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಪಡೆದು ಸೇರ್ಪಡೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಈ ಬಗ್ಗೆ ಪ್ರಧಾನಿ ಹಾಗೂ ಸಂಬಂಧಿಸಿದ ಕೇಂದ್ರ ಸಚಿವರ ಜತೆ ಚರ್ಚಿಸಿ ಯಾವುದೇ ಸ್ಥಾನಮಾನ ಇಲ್ಲದಿದ್ದರೂ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸಿ, ವರ್ಷದ ಕಾಲಾವಧಿಯಲ್ಲಿ ಸೇರ್ಪಡೆಗೆ ಕ್ರಮ ವಹಿಸಲಾಗುವುದು. ಮೀಸಲಾತಿ ದೊರೆಯುವ ಅಪೇಕ್ಷೆ ಮೇರೆಗೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಸಮುದಾಯದ ಜನತೆಯ ನಿರೀಕ್ಷೆ ಹುಸಿಯಾಗದ ರೀತಿ ಪ್ರಾಮಾಣಿಕವಾಗಿ ನನಸಾಗಿಸುವುದಾಗಿ ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಇದೇ ಪ್ರಥಮ ಬಾರಿಗೆ ಮಠಾಧೀಶರು, ಸ್ವಾಮೀಜಿಗಳ ಅನುಪಸ್ಥಿತಿಯಲ್ಲಿ ಪ್ರಭಾವಿ ನಾಯಕ ಯಡಿಯೂರಪ್ಪ ಅವರ ಸ್ವಕ್ಷೇತ್ರದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. 1978ರಲ್ಲಿ ಹಾವನೂರು ವರದಿಯ ಅನ್ವಯ ಒಕ್ಕಲಿಗ ಸಮುದಾಯದ ಉಪಪಂಗಡ ಕುಂಚಿಟಿಗರನ್ನು ಓಬಿಸಿಗೆ ಸೇರ್ಪಡೆಗೆ ನೀಡಿದ ಶಿಫಾರಸ್ಸು 1999ರಲ್ಲಿ ಒಪ್ಪಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ನಡೆದ ಅಚಾತುರ್ಯದಿಂದ ಕುಂಚಿಟಿಗ ಸಮಾಜವನ್ನು ಉದ್ದೇಶಪೂರ್ವಕವಾಗಿ ಬೇರ್ಪಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರಾದ ಅವಧಿಯಲ್ಲಿ ಮೀಸಲಾತಿ ಪಟ್ಟಿಯಿಂದ ಕೈಬಿಟ್ಟಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿ ಕುಲಶಾಸ್ತ್ರ ಅಧ್ಯಯನ ಮೂಲಕ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಅಂತಿಮವಾಗಿದೆ. ಯಡಿಯೂರಪ್ಪನವರು ಪ್ರಧಾನಿ ಮೋದಿ ಅತ್ಯಾಪ್ತರಾಗಿದ್ದು, ಚರ್ಚಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಬಸವಣ್ಣನವರ ಸರ್ವರಿಗೂ ಸಮಪಾಲು ಸಮಬಾಳು ರೀತಿ ಯಡಿಯೂರಪ್ಪನವರು ಅಧಿಕಾರಾವಧಿಯಲ್ಲಿ ಯೋಜನೆ ರೂಪಿಸಿದ್ದು, ಶೋಷಿತರು, ಹಿಂದುಳಿದವರ ಕಲ್ಯಾಣಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದರು. ಎಂತಹ ಸಂದರ್ಭದಲ್ಲಿಯೂ ರಾಜಿಯಾಗದ ಅವರು ಮೀಸಲಾತಿ ಕಲ್ಪಿಸಿಕೊಡಲು ಶಕ್ತಿ ಮೀರಿ ಶ್ರಮಿಸಲಿದ್ದಾರೆ ಎಂದು ತಿಳಿಸಿದರು. ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸರ್ವ ಸಮಾಜದ ಅಭಿವೃದ್ಧಿ ಯಡಿಯೂರಪ್ಪ ಅವರ ಏಕೈಕ ಮಂತ್ರವಾಗಿದೆ. ಈ ದಿಸೆಯಲ್ಲಿ ಕುಂಚಿಟಿಗ ಸಮಾಜದ ನ್ಯಾಯಬದ್ಧ ಬೇಡಿಕೆ ಈಡೇರಿಕೆಗೆ ಸ್ಪಂದಿಸಲಿದ್ದಾರೆ ಎಂದು ತಿಳಿಸಿದರು.

ಶಿಕಾ​ರಿ​ಪುರ ತಾಲೂ​ಕು ಅಭಿ​ವೃ​ದ್ಧಿ​ಯಲ್ಲಿ ಯಡಿ​ಯೂ​ರಪ್ಪ ಶ್ರಮ ಅಪಾ​ರ: ವಿಜಯೇಂದ್ರ

ಮೀಸಲಾತಿ ಹಕ್ಕೊತ್ತಾಯದ ಮನವಿಯನ್ನು ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು. ಗಣ್ಯರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ತಾಲೂಕು ಕುಂಚಿಟಿಗ ಸಮಾಜದ ಅಧ್ಯಕ್ಷ ರುದ್ರಪ್ಪ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ವಿಪ ಸದಸ್ಯ ಚಿದಾನಂದಗೌಡ, ಕೆಇಆರ್‌ಸಿ ಮಾಜಿ ಅಧ್ಯಕ್ಷ ಎಚ್‌.ಆರ್‌. ಗೋಪಾಲ್‌, ಜಿಪಂ ಮಾಜಿ ಉಪಾಧ್ಯಕ್ಷ ಅರುಣ, ಜಿ.ಸಿ. ಜಗದೀಶ, ದಯಾನಂದ್‌, ಎನ್‌.ರಾಜು, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios