Onake Obavva Jayanti: 18ರಂದು ಅದ್ಧೂರಿ ವೀರ ವನಿತೆ ಓಬವ್ವ ಜಯಂತಿ

  • 18ರಂದು ಅದ್ಧೂರಿ ವೀರ ವನಿತೆ ಓಬವ್ವ ಜಯಂತಿ
  • ಜಿಲ್ಲಾಧಿಕಾರಿ ದಿವ್ಯಪ್ರಭು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ
  • ಸಿಎಂ ಬೊಮ್ಮಾಯಿ ಉದ್ಘಾಟನೆ
obavva jayannti on december 18 chitradurga rav

ಚಿತ್ರದುರ್ಗ (ಡಿ.10) ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಆಯೋಜಿಸಲಾದ ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿ ಡಿಸೆಂಬರ್‌ 18ರಂದು ಚಿತ್ರದುರ್ಗದಲ್ಲಿ ನಡೆಯಲಿದೆ. ಇದಕ್ಕಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಸಿಂಗಾರಗೊಳ್ಳುತ್ತಿದೆ. ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಶುಕ್ರವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮ ಉದ್ಘಾಟನೆ ಆಗಮಿಸಲು ಒಪ್ಪಿಗೆ ಸೂಚಿಸಿದ್ದಾರೆ. ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಚಿತ್ರದುರ್ಗದಲ್ಲಿ ಆಚರಿಸಲು ಅವಕಾಶ ದೊರೆತಿರುವುದು ನಮಗೆ ಹೆಮ್ಮೆ. ಜಯಂತಿ ಅಂಗವಾಗಿ ಅಂದು ಬೆಳಗ್ಗೆ 9 ಗಂಟೆಗೆ ನಗರದ ಕನಕ ವೃತ್ತದಿಂದ ಮುರುಘರಾಜೇಂದ್ರ ಕ್ರೀಡಾಂಗಣದವರೆಗೂ » Üವ್ಯ ಮೆರವಣಿಗೆ ಏರ್ಪಡಿಸಲಾಗುವುದು. ಒನಕೆ ಓಬವ್ವ ಜಯಂತಿ ಆಚರಣೆಯನ್ನು ನಮ್ಮ ಮನೆಯ ಕಾರ್ಯಕ್ರಮವೆಂದು ಭಾಗವಹಿಸಿ, ಎಲ್ಲ ಸಮಾಜದವರು, ಸಂಘಟನೆಗಳು, ಸಮುದಾಯ, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದರು.

ಒನಕೆ ಓಬವ್ವ ಕ್ರೀಡಾಂಗಣ ಅವ್ಯವಸ್ಥೆಗೆ ಶಾಸಕ ತಿಪ್ಪಾರೆಡ್ಡಿ ಗರಂ

ತುರ್ತಾಗಿ ಸಿದ್ಧತೆ ಕೈಗೊಳ್ಳಿ:

ಕಾರ್ಯಕ್ರಮ 18 ಕ್ಕೆ ನಿಗದಿಯಾಗಿರುವುದರಿಂದ, ಕಾಲಾವಕಾಶ ಕಡಿಮೆ ಇದೆ. ಹೀಗಾಗಿ ತುರ್ತಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಂಡು, ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಹಾಗೂ ಸಮುದಾಯದ ಮುಖಂಡರ ಸಹಕಾರದೊಂದಿಗೆ ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಈಗಾಗಲೇ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ವೇದಿಕೆ ನಿರ್ಮಾಣ ಸೇರಿದಂತೆ ಅಗತ್ಯ ಪೂರ್ವಸಿದ್ಧತೆಗಳು ನಡೆಯುತ್ತಿವೆ. ವೇದಿಕೆ ಹಾಗೂ ಸಂಘಟನಾ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ, ಸಾರಿಗೆ ಸಮಿತಿ, ಮಾಧ್ಯಮ ಸಮಿತಿ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಯ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು ತಮ್ಮ ತಮ್ಮ ಹಂತದಲ್ಲಿ ಸಭೆ ನಡೆಸಿ, ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆ ಮುದ್ರಿಸಬೇಕು ಎಂದರು.

ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಲಿದ್ದು, ಕನಕ ವೃತ್ತದಿಂದ ಮದಕರಿ ವೃತ್ತದವರೆಗೂ ಇರುವ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿರುವ ಎಲ್ಲ ಮಹನೀಯರ ಪುತ್ಥಳಿಗಳಿಗೆ ಹೂವಿನ ಅಲಂಕಾರ ಮಾಡಬೇಕು, ಅಲ್ಲದೆ ವೃತ್ತಗಳನ್ನು ಅಲಂಕರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ವಿದ್ಯಾರ್ಥಿಗಳು ಭಾಗಿಯಾಗಲಿ:

ಸಮುದಾಯದ ಭಾರ್ಗವಿ ದ್ರಾವಿಡ್‌ ಮಾತನಾಡಿ, ಒನಕೆ ಓಬವ್ವ ಜಯಂತಿಯ ಮೆರವಣಿಗೆಗೆ ಜಿಲ್ಲೆಯ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲು ಕ್ರಮವಹಿಸಬೇಕು ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್‌ ರೆಡ್ಡಿ, ಜಿಲ್ಲೆಯ ಪ್ರೌಢಾಶಾಲೆಯ ಸುಮಾರು 400 ರಿಂದ 500 ವಿದ್ಯಾರ್ಥಿಗಳು ಒನಕೆ ಓಬವ್ವ ಅವರ ವೇಷಭೂಷಣದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್‌ ಅವರು, ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭದೊಂದಿಗೆ ಭಾಗವಹಿಸಲು ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.

ಒನಕೆ ಓಬವ್ವನ ಸಾಹಸ ಹೆಣ್ಣು ಮಕ್ಕಳಿಗೆ ಸ್ಫೂರ್ತಿ

ರಾಜ್ಯಸಭಾ ಮಾಜಿ ಸದಸ್ಯ ಎಚ್‌.ಹನುಮಂತಪ್ಪ ಮಾತನಾಡಿ, ಸರ್ಕಾರದ ವತಿಯಿಂದ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು. ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ ಮಾತನಾಡಿ, ಜಯಂತಿ ಅಂಗವಾಗಿ ಅಂದು ಬೆಳಗ್ಗೆ 9ಕ್ಕೆ ನಗರದ ಕನಕ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ನೀಡಿ, ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲು ಅಗತ್ಯ ಕ್ರಮ ವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ, ಸಹಾಯಕ ನಿರ್ದೇಶಕ ಎಸ್‌.ಕೆ.ಮಲ್ಲಿಕಾರ್ಜುನ್‌ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಛಲವಾದಿ ಸಮುದಾಯದ ಮುಖಂಡರು ಇದ್ದರು.

Latest Videos
Follow Us:
Download App:
  • android
  • ios