Asianet Suvarna News Asianet Suvarna News

Bengaluru: ರಾಜಧಾನಿಯಲ್ಲಿ ಈಗ 82 ಲಕ್ಷ ಮತದಾರರು: ತುಷಾರ್‌ ಗಿರಿನಾಥ್‌

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ 25 ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರಪಟ್ಟಿ ಪ್ರಕಟಿಸಲಾಗಿದ್ದು, ನಗರದ ಚಿಕ್ಕಪೇಟೆ, ಶಿವಾಜಿನಗರ, ಮಹದೇಪುರ ವಿಧಾನಸಭಾ ಕ್ಷೇತ್ರ ಹೊರತು ಪಡಿಸಿ ಉಳಿದ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 82.29 ಲಕ್ಷ ಮತದಾರರಿದ್ದಾರೆ. 80 ಸಾವಿರ ಮತದಾರರು ಹೆಚ್ಚಾಗಿದ್ದಾರೆ. 

Now there are 82 lakh voters in Bengaluru Says Tushar Girinath gvd
Author
First Published Jan 6, 2023, 8:56 AM IST

ಬೆಂಗಳೂರು (ಜ.06): ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಪೈಕಿ 25 ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರಪಟ್ಟಿ ಪ್ರಕಟಿಸಲಾಗಿದ್ದು, ನಗರದ ಚಿಕ್ಕಪೇಟೆ, ಶಿವಾಜಿನಗರ, ಮಹದೇಪುರ ವಿಧಾನಸಭಾ ಕ್ಷೇತ್ರ ಹೊರತು ಪಡಿಸಿ ಉಳಿದ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 82.29 ಲಕ್ಷ ಮತದಾರರಿದ್ದಾರೆ. 80 ಸಾವಿರ ಮತದಾರರು ಹೆಚ್ಚಾಗಿದ್ದಾರೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌, ಕಳೆದ ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ ಕರಡು ಮತದಾರ ಪಟ್ಟಿಯಲ್ಲಿ 25 ವಿಧಾನಸಭಾ ಕ್ಷೇತ್ರದಲ್ಲಿ 81,48,989 ಮತದಾರರಿದ್ದರು. ಇದೀಗ ಅಂತಿಮಗೊಳಿಸಿರುವ ಮತದಾರರ ಪಟ್ಟಿಯಲ್ಲಿ 80,386 ಮಂದಿ ಸೇರ್ಪಡೆಗೊಳ್ಳುವ ಮೂಲಕ ಒಟ್ಟು ಮತದಾರರ ಸಂಖ್ಯೆ 82,29,375ಗೆ ಏರಿಕೆಯಾಗಿದೆ ಎಂದು ತಿಳಿಸಿದರು. ಕರಡು ಮತದಾರ ಪಟ್ಟಿಬಿಡುಗಡೆ ನಂತರ ಹೊಸದಾಗಿ 1,02,460 ಮತದಾರರು ಸೇರ್ಪಡೆಯಾಗಿದ್ದಾರೆ. 26,085 ಮತದಾರರು ಹೆಸರು, ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಮಾಹಿತಿಯಲ್ಲಿ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. 

ವಿಧಾನಸಭಾ ಚುನಾವಣೆಗೆ ಸಿದ್ಧತೆ: ರಾಜ್ಯದ 221 ಕ್ಷೇತ್ರದಲ್ಲಿ 5 ಕೋಟಿ ಮತದಾರರು

22,244 ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅಂತಿಮ ಮತದಾರ ಪಟ್ಟಿಯಲ್ಲಿ 42,65,140 ಪುರುಷ ಮತದಾರರು, 39,62,712 ಮಹಿಳಾ ಮತದಾರರು, 1,523 ಇತರೆ ಮತದಾರರಿದ್ದಾರೆ ಎಂದರು. ಪಟ್ಟಿಯನ್ನು ವಿಎಚ್‌ಎ ಮೊಬೈಲ್‌ ಆ್ಯಪ್‌ ಮತ್ತು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ (ಎನ್‌ವಿಎಸ್‌ಪಿ) ವೆಬ್‌ಸೈಟ್‌ನಲ್ಲಿ ಮತದಾರರು ಮಾಹಿತಿಯನ್ನು ಪರೀಕ್ಷಿಸಿಕೊಳ್ಳಬಹುದು. ತಪ್ಪುಗಳಿದ್ದರೆ ಚುನಾವಣಾಧಿ ಕಾರಿಗಳ ಕಚೇರಿ, ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ನೋಂದಣಾಧಿಕಾರಿಗಳ ಕಚೇರಿ, ವಾರ್ಡ್‌ ಕಚೇರಿ ಹಾಗೂ ಬೂತ್‌ ಮಟ್ಟದ ಅಧಿಕಾರಿಗಳ ಬಳಿ ನಮೂನೆ 6, 7 ಮತ್ತು 8ರಲ್ಲಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

48 ಸಾವಿರ ಯುವ ಮತದಾರರು ಸೇರ್ಪಡೆ: ಮತದಾರ ಪಟ್ಟಿಗೆ 25 ವಿಧಾನಸಭಾ ಕ್ಷೇತ್ರದಿಂದ ಒಟ್ಟು 1 ಲಕ್ಷ ಯುವ ಮತದಾರರನ್ನು ಸೇರ್ಪಡೆ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಈ ಪೈಕಿ 48 ಸಾವಿರ ಯುವ ಮತದಾರರು ಸೇರ್ಪಡೆ ಆಗಿದ್ದಾರೆ. ಬಾಕಿ ಉಳಿದ 52 ಸಾವಿರ ಮತದಾರರ ಸೇರ್ಪಡೆಗೆ ವಿವಿಧ ಕ್ರಮ ಕೈಗೊಳ್ಳಲಾಗಿದೆ. ನಗರದ ವಿವಿಧ ಶಿಕ್ಷಣ ಸಂಸ್ಥೆಗಳಿಂದ 18 ವರ್ಷ ಮೇಲ್ಪಟ್ಟವಿದ್ಯಾರ್ಥಿಗಳ ಪಟ್ಟಿತರಿಸಿಕೊಳ್ಳಲಾಗಿದೆ. 75 ಸಾವಿರ ವಿದ್ಯಾರ್ಥಿಗಳು 18 ವರ್ಷ ಆಸುಪಾಸಿನವರಿದ್ದಾರೆ ಎಂದರು. ಇನ್ನು ನಗರದಲ್ಲಿ 34 ಸಾವಿರಕ್ಕೂ ಅಧಿಕ ಅಂಗವಿಕಲರಿದ್ದಾರೆ ಎಂದು ಮಾಹಿತಿ ಇದೆ. ಆದರೆ, ಮತದಾರ ಪಟ್ಟಿಯಲ್ಲಿ 18,536 ಮಂದಿ ಮಾತ್ರ ಇದ್ದಾರೆ. ಉಳಿದವರನ್ನು ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

70 ಸಾವಿರ ಸಂಶಯಾಸ್ಪದ ಮತದಾರರು: ಮತದಾರ ಪಟ್ಟಿ ಬಗ್ಗೆ ಸಾಕಷ್ಟುಆಕ್ಷೇಪ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ 25 ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಕಳೆದ ಒಂದು ವರ್ಷದ ಅವಧಿಯಲ್ಲಿ 70 ಸಾವಿರ ಮಂದಿ ಮತದಾರ ಪಟ್ಟಿಸೇರ್ಪಡೆ ಮತ್ತು ಹೆಸರು ತೆಗೆದು ಹಾಕುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆ ಮಾಡಿದ ಅರ್ಜಿಗಳು ಸಂಶಯಾಸ್ಪದವಾಗಿ ಕಂಡು ಬಂದಿದ್ದವು. ಸ್ಥಳ ಪರಿಶೀಲನೆ ನಡೆಸಿದಾಗ 60 ಸಾವಿರ ಮಂದಿಯ ಅರ್ಜಿಗಳು ಸರಿಯಾಗಿವೆ ಎಂದು ತಿಳಿದು ಬಂದಿದೆ. ಉಳಿದ 15 ಸಾವಿರ ಮಂದಿಯ ಅರ್ಜಿಗಳು ಮೂರ್ನಾಲ್ಕು ಕಡೆ ಮತದಾರ ಪಟ್ಟಿಗೆ ಸೇರ್ಪಡೆ ಆಗಿರುವುದು ದೃಡಪಟ್ಟಿದೆ ಎಂದರು.

934 ಮಂದಿಯ ಸುಳಿವು ಸಿಕ್ಕಿಲ್ಲ: ಮತದಾರ ಪಟ್ಟಿಸೇರ್ಪಡೆಗೆ ಅರ್ಜಿ ಸಲ್ಲಿಕೆ ಮಾಡಿದ 934 ಮಂದಿಯ ಸುಳಿವು ಸಿಕ್ಕಿಲ್ಲ. ಈ ಪೈಕಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿಯೇ 617, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 299, ಉಳಿದ 23 ವಿಧಾನಸಭಾ ಕ್ಷೇತ್ರದಲ್ಲಿ 18 ಮಂದಿ ಇದ್ದಾರೆ. ಅವರ ಹೆಸರುಗಳನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡಿಲ್ಲ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದರು. ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್‌ ಕುಮಾರ್‌ ಘೋಷ್‌, ಅಪರ ಜಿಲ್ಲಾ ಚುನಾವಣಾ ಅಧಿಕಾರಿಗಳಾದ, ದಯಾನಂದ್‌, ಡಾ. ಹರೀಶ್‌ ಕುಮಾರ್‌, ಜಗದೀಶ್‌ ನಾಯ್ಕ್, ವೆಂಕಟಾಚಲಪತಿ, ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಉಮೇಶ್‌ ಉಪಸ್ಥಿತರಿದ್ದರು.

ಯಶವಂತಪುರದಲ್ಲಿ ಹೆಚ್ಚು ಡಿಲಿಟ್‌ ಮತ್ತು ಸೇರ್ಪಡೆ: ಕಳೆದ ನ.9 ರಿಂದ ಡಿ.8ರ ಅವಧಿಯಲ್ಲಿ ನಗರದ 25 ವಿಧಾನಸಭಾ ಕ್ಷೇತ್ರದ ಪೈಕಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮಂದಿಯ ಹೆಸರುಗಳನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಹಾಗೇಯೇ ಅತಿ ಹೆಚ್ಚು ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ. 2,248 ಮತದಾರರ ಹೆಸರಗಳನ್ನು ಪಟ್ಟಿಯಿಂದ ತೆಗೆದು ಹಾಕಿದರೆ, 10,868 ಮಂದಿಯ ಹೆಸರುಗಳನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

3 ಕ್ಷೇತ್ರದ ಪಟ್ಟಿ ಜ.15ಕ್ಕೆ: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಶಿವಾಜಿನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಯ ವಿಶೇಷ ಪರಿಶೀಲನೆಯನ್ನು ಕೇಂದ್ರ ಚುನಾವಣಾ ಆಯೋಗದಿಂದ ನೇಮಕ ಮಾಡಿದ ಅಧಿಕಾರಿಗಳು ನಡೆಸುತ್ತಿದ್ದು, ಜ.15 ರಂದು ಅಂತಿಮ ಪಟ್ಟಿಬಿಡುಗಡೆ ಮಾಡಲಿದ್ದಾರೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

ಹಾವೇರಿ ಪುಣ್ಯಭೂಮಿ, ತಫೋಭೂಮಿ: ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ

ಮತದಾರ ವಿವರ
ಲಿಂಗ ಸಂಖ್ಯೆ
ಪುರುಷ 42,65,140
ಮಹಿಳೆ 39,62,712
ಇತರೆ 1,523
ಒಟ್ಟು 82,29,375

ಅತಿ ಹೆಚ್ಚು ಮತದಾರರಿರುವ ಕ್ಷೇತ್ರ-ಬೆಂಗಳೂರು ದಕ್ಷಿಣ
ಒಟ್ಟು ಮತದಾರರು-6,50,532
ಪುರುಷ-3,44,268
ಮಹಿಳೆ-3,06,165
ಇತರೆ-99

ಕಡಿಮೆ ಮತದಾರರು ಇರುವ ಕ್ಷೇತ್ರ-ರಾಜಾಜಿನಗರ
ಒಟ್ಟು ಮತದಾರರು-2,01,287
ಪುರುಷ-1,01,976
ಮಹಿಳೆ-99,304
ಇತರೆ-7

Follow Us:
Download App:
  • android
  • ios