ಬಿಬಿಎಂಪಿ ರಾಜಕಾಲುವೆ ಮೇಲಿನ ಕಟ್ಟಡಗಳ ನೆಲಸಮಕ್ಕೆ ನ.15 ಗಡುವು!
ಬೆಂಗಳೂರಿನಲ್ಲಿ ಮಳೆ ನೀರುಗಾಲುವೆ ಮತ್ತು ಕೆರೆ ಒತ್ತುವರಿ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ನವೆಂಬರ್ 15ರ ಗಡುವು ನೀಡಿದ್ದಾರೆ. ವಲಯ ಆಯುಕ್ತರಿಗೆ ಒತ್ತುವರಿ ತೆರವು ಜವಾಬ್ದಾರಿ ವಹಿಸಲಾಗಿದ್ದು, ತೆರವು ಮಾಡದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಕೆರೆ ಒತ್ತುವರಿ ಪತ್ತೆಗೆ ಸರ್ವೆ ನಡೆಸಲು ಸೂಚಿಸಲಾಗಿದೆ.
ಬೆಂಗಳೂರು (ಅ.25): ಬೆಂಗಳೂರು ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಮಳೆ ನೀರುಗಾಲುವೆಗಳ ಹಾಗೂ ಕೆರೆಗಳನ್ನು ಒತ್ತುವರಿ ಮಾಡಿದ ಜಾಗದಲ್ಲಿ ನಿರ್ಮಾಣ ಮಾಡಲಾದ ಎಲ್ಲ ಕಟ್ಟಡಗಳನ್ನು ನವೆಂಬರ್ 15ರೊಳಗೆ ತೆರವುಗೊಳಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪಾಲಿಕೆ ವ್ಯಾಪ್ತಿಯ ಎಲ್ಲ ತಹಸೀಲ್ದಾರರು ಹಾಗೂ ಪಾಲಿಕೆ ಅಧಿಕಾರಿಗಳುಗೆ ಖಡಕ್ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ಮಳೆ ನೀರುಗಾಲುವೆಗಳ ಹಾಗೂ ಕೆರೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಎಲ್ಲಾ ವಲಯದ ತಹಶಿಲ್ದಾರ್ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು ಮೊದಲಿಗೆ ಇಂದಿನಿಂದ ವಲಯವಾರು ಬೃಹತ್ ನೀರು ಗಾಲುವೆ ಹಾಗೂ ರಸ್ತೆಗಳ ನಿರ್ವಹಣೆಯ ಎಲ್ಲಾ ಜವಾಬ್ದಾರಿಯನ್ನು ಆಯಾ ವಲಯ ಆಯುಕ್ತರಿಗೆ ನೀಡಲು ಆದೇಶಿಸಿದರು. ಮೊದಲಿಗೆ ವಲಯವಾರು ಸಂಬಂಧಪಟ್ಟ ತಹಶಿಲ್ದಾರ್ ರವರು ಬಂದಿರುವ ಎಲ್ಲಾ ಪ್ರಸ್ತಾವನೆಯನ್ನು ಪರಿಮರ್ಶಿಸಿ ಒತ್ತುವರಿಯಾಗಿರುವ ಬಗ್ಗೆ ಆದೇಶಿಸಲಾದ ಸ್ಥಳವನ್ನು ನವೆಂಬರ್ 15ರೊಳಗೆ ತೆರವುಗೊಳಿಸಲು ಎಲ್ಲಾ ವಲಯ ಆಯುಕ್ತರಿಗೆ ನಿರ್ದೇಶಿಸಿದರು.
ಇದನ್ನೂ ಓದಿ: ಬೆಂಗಳೂರು ಟೆಂಡರ್ ಶ್ಯೂರ್ ರಸ್ತೆಗಳ ಮೇಲಿನ ಕೇಬಲ್ ತೆರವುಗೊಳಿಸಿ: ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ!
ಬೃಹತ್ ನೀರುಗಾಲುವೆ ಒತ್ತುವರಿ ತೆರವು ಮಾಡದಿದ್ದರೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಕೆರೆ ಒತ್ತುವರಿ ಸಂಬಂಧಿಸಿದಂತೆ ಮಾತನಾಡಿ ತಕ್ಷಣವೇ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳ ಸರ್ವೆ ನಡೆಸಬೇಕು. ಸರ್ವೆ ದಾಖಲೆ ಬಂದ ತಕ್ಷಣ ಖಾಸಗಿ ಅಥವಾ ಸಾರ್ವಜನಿಕವಾಗಿ ಕೆರೆ ಒತ್ತುವರಿ ಕಂಡುಬಂದಲ್ಲಿ ಕೂಡಲೇ ತೆರವು ಗೊಳಿಸುವ ಕಾರ್ಯ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕಮಲಾನಗರದಲ್ಲಿ 3 ಅಂತಸ್ತಿನ ಕಟ್ಟಡ ತೆರವು ಕಾರ್ಯ ಆರಂಭ:
ಪಶ್ಚಿಮ ವಲಯದ ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾನಗರದಲ್ಲಿ ತಳಪಾಯದ ಗೋಡೆ ಶೇ. 20 ರಷ್ಟು ಕುಸಿದಿದ್ದು, ಇಂದು ತೆರವು ಕಾರ್ಯವನ್ನು ಪ್ರಾರಂಭಿಸಲಾಗಿದೆ. ಕಮಲಾನಗರ 3ನೇ ಮುಖ್ಯರಸ್ತೆಯ ಬಳಿ ದ್ವೀತೀಯ ನೀರುಗಾಲುವೆಗೆ ಹೊಂದಿಕೊಂಡಂತಿರುವ 3 ಅಂತಸ್ತಿನ ಮನೆಯನ್ನು, ಸುಮಾರು 20-25 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ತಳಭಾಗದಲ್ಲಿ ದ್ವಿತೀಯ ನೀರು ಗಾಲುವೆಯ ಮೂಲಕ ಬರುವ ನೀರು ಮನೆಯ ತಳಪಾಯದಕ್ಕೆ ಹೊಗಿರುವ ಕಾರಣ, ತಳಪಾಯದ ನೀರಿನ ಸಂಪ್(ನೀರಿನ ಟ್ಯಾಂಕ್) ಹಾಗೂ ಶೇ. 20 ರಷ್ಟು ತಳಪಾಯದ ಗೋಡೆ ಕುಸಿದಿರುತ್ತದೆ. ಈ ಸಂಬಂಧ ಮನೆಯ ಬಳಿ ವಲಯ ಆಯುಕ್ತರಾದ ಅರ್ಚನಾ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯಿಂದ ಪೊಲೀಸ್ ಮೇಲೆ ಹಲ್ಲೆ
ಈ 3 ಅಂತಸ್ತಿನ ಕಟ್ಟಡದಲ್ಲಿ 5 ಮನೆಗಳಿದ್ದು, ಎಲ್ಲಾ ಮನೆಗಳನ್ನು ಬಾಡಿಗೆಗೆ ನೀಡಲಾಗಿರುತ್ತದೆ. ತಳಪಾಯದ ಗೋಡೆ ಕುಸಿದಿರುವ ಪರಿಣಾಮ ಮನೆಗಳಲ್ಲಿದ್ದ ಎಲ್ಲಾ ಕುಟುಂಬಸ್ತರನ್ನು ಸ್ಥಳಾಂತರಿಸಲಾಗಿದ್ದು, ಮನೆಯಲ್ಲಿದ್ದ ಎಲ್ಲಾ ಸಾಮಗ್ರಿಳನ್ನು ಹೊರ ತೆಗೆಯಲಾಗಿದೆ. 5 ಕುಟುಂಬಗಳ ಪೈಕಿ, 3 ಕುಟುಂಬಗಳು ಸಂಬಂಧಿಕರ ಮನೆಗೆ ತೆರಳಿದ್ದು, 1 ಕುಟುಂಬ ಅಂಬೇಡ್ಕರ್ ಭವನ, ಇನ್ನೊಂದು ಕುಟುಂದ ದೇವಸ್ಥಾನದಲ್ಲಿ ತಂಗಿದ್ದು, ಅವರಿಗೆ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಎದುರು ಮನೆಯವರನ್ನು ಕೂಡಾ ಖಾಲಿ ಮಾಡಿಸಲಾಗಿದ್ದು, ಮನೆಗೆ ಸಂಪರ್ಕವಿದ್ದ ವಿದ್ಯುತ್ ಅನ್ನು ಕೂಡಾ ತೆಗೆಸಲಾಗಿದೆ. ಪಾಲಿಕೆ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು, ಕಟ್ಟಡವು ವಾಸಕ್ಕೆ ಯೋಗ್ಯವಾಗಿಲ್ಲದ ಪರಿಣಾಮ ಕಟ್ಟಡವನ್ನು ನೆಲಸಮ ಮಾಡಲಾಗುತ್ತಿದೆ.