ಬೆಂಗಳೂರಿನಲ್ಲಿ ಮಹಿಳೆಯಿಂದ ಪೊಲೀಸ್ ಮೇಲೆ ಹಲ್ಲೆ
ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸೋನಂ ಎಂಬ ಯುವತಿ ಬೈಕ್ ಸವಾರನೊಂದಿಗೆ ಮಾತಿನ ಚಕಮಕಿ ನಡೆಸಿದ ಬಳಿಕ ಸಂಚಾರ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಆಕೆ ಆಕ್ರಮಣಕಾರಿಯಾಗಿ ವರ್ತಿಸಿದ್ದಾಳೆ ಎಂದು ಹೇಳಲಾಗುತ್ತುದೆ. ಆದರೆ, ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು (ಅ.25): ನಿನ್ನೆ ಬೆಂಗಳೂರಿನ ಇಂದಿರಾನಗರದ ಇಎಸ್ಐ ಆಸ್ಪತ್ರೆ ಜಂಕ್ಷನ್ ಬಳಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸೋನಂ ಎಂದು ಗುರುತಿಸಲಾದ ಯುವತಿ ಸಂಚಾರ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ಆಕೆ ವಿಚಿತ್ರವಾಗಿ ವರ್ತಿಸುತ್ತಿದ್ದಳು, ಬಹುಶಃ ಮಾನಸಿಕ ಸಮಸ್ಯೆಯಿಂದ ಹೀಗಾಗಿರಬಹುದು ಎಂದು ಹೇಳಲಾಗುತ್ತಿದೆ.
ಸೋನಂ ಬೈಕ್ ಸವಾರನೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿದ್ದಾಗ ಸಂಚಾರ ಪೊಲೀಸರು ಮಧ್ಯಪ್ರವೇಶಿಸಿದರು. ಪೊಲೀಸರು ಬಂದ ನಂತರ ಸೋನಂ ಮತ್ತಷ್ಟು ಕೋಪಗೊಂಡು, ಪೊಲೀಸರ ಮೇಲೆಯೇ ಎಗರಾಡುತ್ತಿದ್ದರು. ವಿಡಿಯೋ ದೃಶ್ಯಾವಳಿಗಳ ಪ್ರಕಾರ, ಅವರು ತಮ್ಮ ಮುಂದೆ ನಿಂತಿದ್ದ ಪೊಲೀಸರ ಬಾಡಿ ಕ್ಯಾಮೆರಾವನ್ನು ಕಿತ್ತುಹಾಕಲು ಪ್ರಯತ್ನಿಸಿದರು. ಹಿಂದಿ ಭಾಷೆಯಲ್ಲಿ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜೊತೆಗೆ ಕೋಪದಿಂದ ಒಬ್ಬ ಪೊಲೀಸರ ಕಾಲನ್ನು ತುಳಿದ ದೃಶ್ಯಾವಳಿಗಳು ವೈರಲ್ ವಿಡಿಯೋದಲ್ಲಿ ಕಂಡುಬರುತ್ತಿದೆ.
ಇದನ್ನೂ ಓದಿ: ನಿಮ್ಮ ಹೆಂಡತಿ 'ಕರಿಮಣಿ ಮಾಲೀಕ ನೀನಲ್ಲ' ಎಂದು ರೀಲ್ಸ್ ಮಾಡಿದರೆ ಗಂಡಂದಿರೇ ಹುಷಾರ್!
ಪೊಲೀಸರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಸೋನಂ ವಿರುದ್ಧ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಯುವತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರಬಹುದು, ಇದು ಮುಖಾಮುಖಿಯ ಸಮಯದಲ್ಲಿ ಅವರ ವಿಚಿತ್ರ ವರ್ತನೆಯನ್ನು ವಿವರಿಸಬಹುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ತನಿಖೆ ಮುಂದುವರಿದಂತೆ, ಈ ಘಟನೆಯು ಕಾನೂನು ಜಾರಿ ಅಧಿಕಾರಿಗಳೊಂದಿಗೆ, ವಿಶೇಷವಾಗಿ ರೋಡ್ ರೇಜ್ ಘಟನೆಗಳ ಸಮಯದಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ವರ್ತನೆ ಮಾಡುತ್ತಿರುವ ರೀತಿ ಪೊಲೀಸರಲ್ಲಿ ಆತಂಕ ಉಂಟುಮಾಡಿದೆ.
ಇನ್ನು ಪೊಲೀಸರು ಯುವತಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದಕ್ಕೂ ಮೊದಲೇ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇನ್ನು ಕೆಲವರು ಹೊರ ರಾಜ್ಯದಿಂದ ಬಂದವರು ರಾಜ್ಯದ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಹಲವು ಸಾರ್ವಜನಿಕ ಸೇವೆ ಮಾಡುವ ನೌಕರರನ್ನು ಗುರಿಯಾಗಿಸಿಕೊಂಡು ಹೀಗೆ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದೇ ತರಹದ ಹಲವು ಘಟನೆಗಳು ಬೆಂಗಳೂರಿನಲ್ಲಿ ನಡೆದಿವೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆಯೂ ಕೆಲವು ಯುವತಿಯರು ಪೊಲೀಸರ ಮೇಲೆ ದೈಹಿಕ ದೌರ್ಜನ್ಯ ಮಾಡುವ ವಿಡಿಯೋಗಳು ಆಗಿಂದಾಗ್ಗೆ ವೈರಲ್ ಆಗುತ್ತಿವೆ. ಇದು ಸ್ಥಳೀಯ ನಿವಾಸಿಗಳ ಸುರಕ್ಷತೆಯ ಬಗ್ಗೆ ಹಾಗೂ ಜನರನ್ನು ರಕ್ಷಣೆ ಮಾಡುವ ಪೊಲೀಸರ ಸುರಕ್ಷತೆ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತಿದೆ.
ಇದನ್ನೂ ಓದಿ: ಪೋಷಕರು ಎಸೆದು ಹೋದ ಮಗುವನ್ನು ದತ್ತು ಪಡೆದ ಸಬ್ ಇನ್ಸ್‌ಪೆಕ್ಟರ್
ಇದಲ್ಲದೆ, ಬೆಂಗಳೂರಿನಲ್ಲಿ ರೋಡ್ ರೇಜ್ ಘಟನೆಗಳ ಹೆಚ್ಚಳ ಆಗಿರುವುದು ಕೂಡ ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.