ಮಡಿಕೇರಿ, [ಜ.11]: ದೇಶದ ಸಂವಿಧಾನಕ್ಕೆ ನಮಸ್ಕರಿಸಿ ಪ್ರಧಾನಿ ಪಟ್ಟ ಅಲಂಕರಿಸಿದ ನರೇಂದ್ರ ಮೋದಿ ಅವರು ಇಂದು ಅದೇ ಸಂವಿಧಾನಕ್ಕೆ ಗೋಡ್ಸೆ ಮಾದರಿಯಲ್ಲಿ ಗುಂಡಿಕ್ಕುವ ಪ್ರಯತ್ನ ಮಾಡಿದ್ದಾರೆಂದು ಹಿರಿಯ ಸಾಹಿತಿ ಹಾಗೂ ಚಿಂತಕ ದೇವನೂರು ಮಹಾದೇವ ಗಂಭೀರ ಆರೋಪ ಮಾಡಿದ್ದಾರೆ. 

ಪ್ರಗತಿಪರರ ಜನಾಂದೋಲನ ವೇದಿಕೆ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ಪೌರತ್ವ ಕಾಯ್ದೆ ವಿರುದ್ಧದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಎ ಕಾಯ್ದೆ ಕುರಿತು ಆತಂಕ ವ್ಯಕ್ತಪಡಿಸಿದರು.

‘ತಂದೆ, ತಾಯಿ ದಾಖಲೆ ಎಲ್ಲಿಂದ ತರಲಿ’ ಸಾಹಿತಿ ದೇವನೂರು ಮಹಾದೇವ ಕಿಡಿ

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ  ಗಾಂಧೀಜಿಯವರಿಗೆ ನಮಸ್ಕರಿಸಿದ ಬಳಿಕ ಎದೆಗೆ ಗುಂಡಿಟ್ಟು ಹತ್ಯೆ ಮಾಡಿದ ಗೋಡ್ಸೆ ಮಾದರಿಯಲ್ಲಿ, ಅಧಿಕಾರಕ್ಕೆ ಏರುವ ಹಂತದಲ್ಲಿ ಮೋದಿ ಅವರು ಸಂವಿಧಾನಕ್ಕೆ ನಮಿಸಿ, ಇದೀಗ NRC, CAA ಕಾಯ್ದೆಗಳ ಮೂಲಕ ಅದೇ ಸಂವಿಧಾನಕ್ಕೆ ಗುಂಡಿಕ್ಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಮಹದೇವ ದೇವನೂರು ಆರೋಪಿಸಿದರು.

ಜನರಿಂದ ಆಯ್ಕೆಯಾಗಿ ಬಂದ ಪ್ರಧಾನಿ ಇಂದು ಅದೇ ಜನರ ಪೌರತ್ವವನ್ನು ಪ್ರಶ್ನಿಸುತ್ತಿರುವುದು ದುರಂತ,. ಕಾಯ್ದೆ ಜಾರಿಯಾದರೆ ಅರಣ್ಯ ವಾಸಿಗಳ ಪಾಡೇನು ಎಂದು ಪ್ರಶ್ನಿಸಿದರು.  

ದೇಶದಲ್ಲಿ ಕೇವಲ ಶೇ. 1 ರಷ್ಟಿರುವ ಕೋಮುವಾದಿಗಳು ಹಾಗೂ ಶೇ.99 ರಷ್ಟು ಇರುವ ಭಾರತೀಯರ ನಡುವೆ ಹೋರಾಟ ನಡೆಯುತ್ತಿದೆ. ಈ ದೇಶದ ಪೌರತ್ವ ಹೊಂದಿದ ಮತದಾರರು ನೀಡಿದ ಮತಗಳಿಂದಲೇ ಇವರು ಪ್ರಧಾನಿಗಳಾಗಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಪೌರತ್ವವನ್ನು ಖಾತರಿ ಪಡಿಸಿ ಎಂದು ಹೇಳುತ್ತಿರುವುದು ವಿಪರ್ಯಾಸ ಎಂದರು.