ಬೆಂಗಳೂರು [ಜ.09]: ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕತೆ ಕುಸಿತದಂತಹ ವೈಫಲ್ಯಗಳನ್ನು ಮುಚ್ಚಿ ಹಾಕಲು ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಕಿ ಹಚ್ಚಿದೆ. ನನಗೆ ನನ್ನ ಜನ್ಮ ದಿನಾಂಕವೇ ಗೊತ್ತಿಲ್ಲ. ನಮ್ಮ ತಂದೆ, ತಾಯಿಯ ದಾಖಲೆಗಳನ್ನು ಎಲ್ಲಿಂದ ತರಬೇಕು? ಎಂದು ಸಾಹಿತಿ ದೇವನೂರು ಮಹಾದೇವ ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ, ಪೌರತ್ವ ತಿದ್ದುಪಡಿ ವಿರುದ್ಧವಾಗಿ ದೇಶದ ಬಹುಪಾಲು ಜನ ನಿಂತಿದ್ದಾರೆ. ಇದು ಶೇ.99ರಷ್ಟುಭಾರತೀಯರು ಹಾಗೂ ಶೇ.1ರಷ್ಟಿರುವ ಕೋಮುವಾದಿಗಳ ನಡುವಿನ ಸಂಘರ್ಷ ಎಂದು ಅಭಿಪ್ರಾಯಪಟ್ಟರು. ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಬುಧವಾರ ಗಾಂಧಿಭವನದಲ್ಲಿ ಏರ್ಪಡಿಸಿದ್ದ ‘ಪೌರತ್ವ ತಿದ್ದುಪಡಿ ಕಾಯ್ದಿ ವಿರೋಧಿ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶಾದ್ಯಂತ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಭೀತಿ ಶುರುವಾಗಿದೆ. ಪ್ರಸ್ತುತ ನನಗೆ ಹುಟ್ಟಿದ ದಿನಾಂಕ ಕೇಳಿದರೆ ಗೊತ್ತಿಲ್ಲ. ನನ್ನ ಸ್ಥಿತಿಯೇ ಹೀಗಿದ್ದಾಗ ನಮ್ಮ ಅಪ್ಪ, ಅಮ್ಮ ಹುಟ್ಟಿದ ದಿನಾಂಕ ನಾನೇಗೆ ಹೇಳಲಿ. ನರೇಂದ್ರ ಮೋದಿ ಅಪ್ಪ ಹುಟ್ಟಿದ್ದ ಐದು ದಿನದ ಮುಂಚೆ ಅಥವಾ ಅಮಿತ್‌ ಶಾ ಅವರ ಅಪ್ಪ ಹುಟ್ಟಿದ ಐದು ದಿನದ ನಂತರ ಎಂದು ಹೇಳಬೇಕೆ ಎಂದು ಪ್ರಶ್ನಿಸಿದರು.

ದೇಶದಲ್ಲಿರುವ ನಿರುದ್ಯೋಗ, ಆರ್ಥಿಕ ಕುಸಿತದಂತಹ ಗಂಭೀರ ಸಮಸ್ಯೆ ಮುಚ್ಚಿ ಹಾಕಲು ಸಿಎಎ ತರುತ್ತಿದ್ದಾರೆ. ಈ ಮೂಲಕ ಸರ್ಕಾರವೇ ಪೌರತ್ವದ ಬೆಂಕಿ ಹಚ್ಚುತ್ತಿದೆ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರು ದೇಶವನ್ನು ಮಾತ್ರವಲ್ಲ ಆಡಳಿತರೂಢ ಬಿಜೆಪಿ ಪಕ್ಷವನ್ನೇ ಧ್ವಂಸ ಮಾಡಿದೆ. ಬಿಜೆಪಿಗೆ ಸದ್ಯ ರಾಜಕೀಯ ಪಕ್ಷಕ್ಕೆ ಇರಬೇಕಾದ ಚಹರೆಯೇ ಇಲ್ಲ. ಜೀವವಿಲ್ಲದ ಸತ್ತ ಬೇರಿನಂತೆ ಇದೆ ಎಂದು ಆರೋಪಿಸಿದರು.

ಸಂವಿಧಾನಕ್ಕೆ ವಿಷ ಉಣಿಸುವ ಕೆಲಸ: ಬರಗೂರು ರಾಮಚಂದ್ರಪ್ಪ

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಪೌರತ್ವ ಕಾಯಿದೆ ವಿರೋಧಿಸುವವರೆಲ್ಲರೂ ಮುಸ್ಲೀಮರು ಎನ್ನಲಾಗುತ್ತಿದೆ. ಆದರೆ, ಇಲ್ಲಿರುವವರೆಲ್ಲರೂ ಹಿಂದುಳಿದ ವರ್ಗದವರು. ಸೈದ್ಧಾಂತಿಕವಾಗಿ ವಿರೋಧ ಮಾಡಿದ ವಿಶ್ವವಿದ್ಯಾಲಯಕ್ಕೆ ಗೂಂಡಾಗಳನ್ನು ಬಿಟ್ಟು ಗಲಾಟೆ ಮಾಡಿಸುತ್ತಾರೆ. ಒಬ್ಬ ಬಿಜೆಪಿ ನಾಯಿಬಡಕ ರಾಜಕಾರಣಿ ನಾವು ಅಧಿಕಾರಕ್ಕೆ ಬಂದಿರುವುದೆ ಸಂವಿಧಾನ ಬದಲಿಸಲು ಎನ್ನುತ್ತಾರೆ. 371ನೇ ವಿಧಿಯನ್ನು ಹತ್ತಿಕ್ಕಿದ್ದಾರೆ. ಈಗ ಸಂವಿಧಾನ ವಿಧಿಗೆ ವಿರುದ್ದವಾಗಿ ಪೌರತ್ವ ತಿದ್ದುಪಡಿ ಕಾಯಿದೆ ತರಲಾಗಿದೆ. ಈ ಮೂಲಕ ಬಿಜೆಪಿ ಸಂವಿಧಾನಕ್ಕೆ ವಿಷ ಉಣಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಎಲ್ಲರೂ ಪೌರತ್ವ ಸಾಬೀತುಪಡಿಸಬೇಕು: ಸಸಿಕಾಂತ್‌ ಸೆಂಥಿಲ್‌

ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಿಂದ ಯಾರ ಪೌರತ್ವವನ್ನು ಕಸಿಯುವ ಉದ್ದೇಶವಿಲ್ಲ ಎಂಬುದು ಹಸಿ ಸುಳ್ಳು. ಇದರಿಂದ ಮುಸ್ಲಿಮರಷ್ಟೇ ಅಲ್ಲ, ಎಲ್ಲರೂ ಪೌರತ್ವವನ್ನು ಸಾಬೀತುಪಡಿಸಬೇಕಾಗುತ್ತದೆ. ಪೌರತ್ವ ಸಾಬೀತು ಪಡಿಸಲು ನಮ್ಮ ತಂದೆ ಹುಟ್ಟಿದ ದಿನಾಂಕವಿರುವ ಪ್ರಮಾಣ ಪತ್ರ ಎಲ್ಲಿಂದ ತರಬೇಕು. ದೇಶದಲ್ಲಿ ನಿರುದ್ಯೋಗ, ಆರ್ಥಿಕ ಹಿಂಜರಿತದಂತಹ ಸಮಸ್ಯೆಗಳು ಕಾಡುತ್ತಿರುವಾಗ ಈ ಪ್ರಕ್ರಿಯೆ ಅನಿವಾರ್ಯವಿದೆಯೇ ಎಂದು ಪ್ರಶ್ನಿಸಿದರು.

ಪೌರತ್ವ ಕಾಯ್ದೆ ಹೋರಾಟ ಮುಸ್ಲಿಮರ, ದಲಿತರ, ಸಂವಿಧಾನ ಉಳಿಸುವ ಹೋರಾಟವಾಗಿದೆ. ಕೇಂದ್ರ ತನ್ನ ಮೊಂಡುತನ ಬಿಟ್ಟು ಜನರ ಮತ್ತು ವಿದ್ಯಾರ್ಥಿಗಳ ಮಾತನ್ನು ಆಲಿಸಬೇಕು. ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಜನಗಳೇ ಸ್ವಯಂ ಪ್ರೇರಿತರಾಗಿ ಬೀದಿಗಿಳಿದಿದ್ದಾರೆ. ಇದರಿಂದ ಹತಾಶವಾದ ಕೇಂದ್ರ ಸರ್ಕಾರ ಬುಲೆಟ್‌ ಮೂಲಕ ತಡೆಯಲು ಹೊರಟಿದೆ. ಇದು ಅಪಾಯಕಾರಿ. ಎಲ್ಲರೂ ಇದರ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.

CAA ಪರ ಅಭಿಯಾನ: ಬಿಜೆಪಿಗೆ 52 ಲಕ್ಷ ಮಿಸ್ಡ್ ಕಾಲ್!...

ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು ಮಾತನಾಡಿ, ಬಿಲ್ಲವ ಹಾಗೂ ಮುಸ್ಲಿಮರ ಸೌಹಾರ್ದತೆಗಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಪುಣೆಯಿಂದ ಗುಂಡು ಹೊಡೆಯತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ಅದೇ ಕೆಲಸ ಪೇಜಾವರ ಸ್ವಾಮೀಜಿ ಮಾಡಿದಾಗ ಇವರು ಮಾತನಾಡುವುದೇ ಇಲ್ಲ. ಪೇಜಾವರ ಸ್ವಾಮೀಜಿ ಅವರೂ ಮುಸ್ಲಿಂ ಹಾಗೂ ಹಿಂದೂಗಳು ಸಹೋದರರು ಎಂದರು. ಅವರು ಮಾತನಾಡಿದಾಗ ಇವರಿಗೆ ಏನೂ ಆಗುವುದಿಲ್ಲ. ನಾವು ಸೌಹಾರ್ದತೆ ಬಗ್ಗೆ ಮಾತನಾಡಿದರೆ ಇವರಿಗೆ ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಜಮೀರ್‌ ಅಹಮದ್‌ ಖಾನ್‌, ಎಚ್‌.ಆಂಜನೇಯ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಡಿಎಸ್‌ಎಸ್‌ ಅಂಬೇಡ್ಕರ್‌ ವಾದ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರಗೋಡು, ದಲಿತ ಮುಖಂಡ ಎನ್‌. ವೆಂಕಟೇಶ್‌, ಎನ್‌. ಮುನಿಸ್ವಾಮಿ, ವಿ.ನಾಗರಾಜ, ಅಣ್ಣಯ್ಯ, ಗೋಪಾಲಕೃಷ್ಣ ಅರಳಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.