ಕೊಡಗು: ವರ್ಷ ಕಳೆದರೂ NDRF ಹಣ ಬಳಸದ ಅಧಿಕಾರಿಗಳಿಗೆ ನೋಟಿಸ್
ಕಳೆದ ವರ್ಷವೇ NDRF ನಿಂದ ವಿವಿಧ ಕಾಮಗಾರಿಗಳಿಗೆ ನೀಡಿದ್ದ ಹಣವನ್ನು ಸರಿಯಾಗಿ ಬಳಕೆ ಮಾಡದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಕೊಡಗು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ವರದಿ : ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.25) : ಕಳೆದ ವರ್ಷವೇ NDRF ನಿಂದ ವಿವಿಧ ಕಾಮಗಾರಿಗಳಿಗೆ ನೀಡಿದ್ದ ಹಣವನ್ನು ಸರಿಯಾಗಿ ಬಳಕೆ ಮಾಡದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಕೊಡಗು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣಬೈರೇಗೌಡ(Krishna byregowda) ಮತ್ತು ಕೊಡಗು ಉಸ್ತುವಾರಿ ಸಚಿವ ಭೋಸರಾಜ್(NS Bosaraju) ಅವರು ಕುಶಾಲನಗರದ ಸಾಯಿ ಬಡಾವಣೆ, ಬೇಂಗೂರು ಮತ್ತು ಭಾಗಮಂಡಲ ಸೇರಿದಂತೆ ವಿವಿಧ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸಚಿವ ಕೃಷ್ಣಬೈರೇಗೌಡ ಪಿಆರ್‌ಡಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಯಾವುದೆಲ್ಲಾ ಕೆಲಸಗಳಾಗಿವೆ ತಿಳಿಸಿ ಎಂದು ಪ್ರಶ್ನಿಸಿದರು.
ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಬೋಸರಾಜು ಭೇಟಿ
ಇದಕ್ಕೆ ಎಂಜಿನಿಯರ್ ನಾನು ಎರಡು ತಿಂಗಳಾಗಿದೆಯಷ್ಟೇ ಸರ್ ಬಂದು ಎಂದು ಉಡಾಫೆ ಉತ್ತರ ನೀಡಿದರು. ಇದರಿಂದ ಕೋಪ ಮಾಡಿಕೊಂಡ ಸಚಿವ ಕೃಷ್ಣಬೈರೇಗೌಡ ಅವರು ನಾನೂ ಕೂಡ ಕಂದಾಯ ಸಚಿವ ಆಗಿ ಎರಡು ತಿಂಗಳಾಗಿಲ್ಲ. ನಾನೂ ಹಾಗೆಂದು ಸುಮ್ಮನಿರಲು ಆಗುತ್ತದೆಯಾ ಎಂದು ಪ್ರಶ್ನಿಸಿದರು. ಕಳೆದ ವರ್ಷ ವಿವಿಧ ಇಲಾಖೆಗಳಿಗೆ ಎನ್ಡಿಆರ್ಎಫ್ ನಿಧಿಯಿಂದ 34 ಕೋಟಿ ಬಿಡುಗಡೆ ಮಾಡಲಾಗಿದೆ. ಯಾವುದೇ ಕೆಲಸಗಳು ಆಗಿರುವ ಬಗ್ಗೆ ಸರಿಯಾದ ಉತ್ತರ ಇಲ್ಲ. ಪ್ರಕೃತಿ ವಿಕೋಪ ಎಂಬುದನ್ನು ನೆಪವೊಡ್ಡಿ ಎರಡೆರಡು ಲಕ್ಷ ರೂಪಾಯಿ ನುಂಗಿರಬಹುದು. ಹೀಗಾಗಿ ಈಗಾಗಲೇ ಕಾಮಗಾರಿಗಳು ಶುರುವಾಗಿದ್ದರೆ ಅವುಗಳಿಗೆ ಸಮಯ ನಿಗದಿ ಮಾಡಿ ಬೇಗ ಕಾಮಗಾರಿ ಮುಗಿಸಲು ಸೂಚಿಸಬೇಕು. ಕಾಮಗಾರಿಗಳನ್ನೇ ಆರಂಭಿಸದಿದ್ದರೆ ಅಂತಹ ಕಾಮಗಾರಿಗಳಿಗೆ ರದ್ದುಪಡಿಸಿ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.
ಪಿಆರ್ಡಿ ಇಲಾಖೆ ಇಂಜಿನಿಯರ್ ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕೃಷ್ಣಬೈರೇಗೌಡ ಅಧಿಕಾರಿಗಳ ಇಂತಹ ನಡೆವಳಿಕೆಯನ್ನು ನಾನು ಸಹಿಸಲ್ಲ ಎಂದು ಎಚ್ಚರಿಸಿದರು. ಕೊಡಗಿನಲ್ಲಿ ಯಾವುದೇ ಒತ್ತಡ ಇಲ್ಲ, ಜನರಿಂದಲೂ ಒತ್ತಡ ಇಲ್ಲ. ಇಲ್ಲಿ ಪ್ರಕೃತಿಯ ಒತ್ತಡವಿದೆ. ಇಂತಹ ಸಂದರ್ಭದಲ್ಲೂ ಅಧಿಕಾರಿಗಳು ಸರಿಯಾಗಿ ಅರ್ಥಮಾಡಿಕೊಂಡು ಕರ್ತವ್ಯ ನಿರ್ವಹಿಸದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಳೆ ಆಗದೇ ಇದ್ರೂ ಆಗಿದೆ ಎಂದು ಸಚಿವರಿಗೆ ತಪ್ಪು ಮಾಹಿತಿ ನೀಡಿದ ಕೃಷಿ ಅಧಿಕಾರಿಗಳು!
ಇನ್ನು ಸಭೆ ಬಳಿಕ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೆಲವು ಸ್ಥಳಗಳಲ್ಲಿ ಭೂಕುಸಿತ ಆಗುವ ಸಾಧ್ಯತೆ ಇದೆ ಎಂದು ಈಗಾಗಲೇ ಭಾರತೀಯ ಭೂಗರ್ಭ ಶಾಸ್ತ್ರಜ್ನರು ವರದಿ ನೀಡಿದ್ದಾರೆ. ಅದನ್ನು ತಡೆಗಟ್ಟಲು ಅಗತ್ಯವಾಗಿ ಬೇಕಾಗಿರುವ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಚಿಂತಿಸಿದ್ದು, ಅದಕ್ಕೆ ಬೇಕಾದ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. ಅದಕ್ಕಾಗಿ 20 ಕೋಟಿ ರೂಪಾಯಿಯನ್ನು ಸರ್ಕಾರ ಕೊಡಲು ಸಿದ್ಧವಿದೆ. ಈ ಹಣವನ್ನು ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಸಂಬಂಧಿಸಿದ ಯೋಜನೆ ರೂಪಿಸಿ ಜಿಲ್ಲೆಯ ಅಭಿವೃದ್ಧಿಗೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಬೇರೆ ಜಿಲ್ಲೆಗಳಿಗೆ ಹಣ ಹೋಗಲಿದೆ ಎಂದರು. ಜೊತೆಗೆ ಮಳೆ ಪರಿಸ್ಥಿತಿ ನಿಭಾಯಿಸಲು ಈಗಾಗಲೇ ಜಿಲ್ಲಾಧಿಕಾರಿ ಅವರ ಖಾತೆಯಲ್ಲಿ 56 ಕೋಟಿ ಇದೆ. ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 540 ಕೋಟಿ ರೂಪಾಯಿ ಇದೆ. ಇದಕ್ಕಿಂತಲೂ ಹೆಚ್ಚಿನ ಹಣದ ಅಗತ್ಯವಿದ್ದರೆ ಜಿಲ್ಲಾಧಿಕಾರಿ ಅವರು ವರದಿ ನೀಡಿ ಹಣ ಪಡೆಯಬಹುದು ಎಂದು ಹೇಳಿದರು.