ಎಲ್ಲಾ ಅಸ್ಪತ್ರೆಗಳಲ್ಲಿ ಚಿಕಿತ್ಸೆಯ ದರದ ಪಟ್ಟಿ ಪ್ರದರ್ಶಿಸಲು ಸೂಚನೆ
ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತಿಯೊಂದು ಚಿಕಿತ್ಸೆಯ ದರದ ಪಟ್ಟಿಯನ್ನು ಪ್ರದರ್ಶಿಸಬೇಕು. ಕೆ ಪಿ ಎಂ ಇ ಕಾಯ್ದೆ ಅನ್ವಯ ಅಷ್ಟೇ ಹಣವನ್ನು ಮಾತ್ರ ಪಡೆಯಬೇಕು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ತಿಳಿಸಿದರು.
ಮೈಸೂರು : ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತಿಯೊಂದು ಚಿಕಿತ್ಸೆಯ ದರದ ಪಟ್ಟಿಯನ್ನು ಪ್ರದರ್ಶಿಸಬೇಕು. ಕೆ ಪಿ ಎಂ ಇ ಕಾಯ್ದೆ ಅನ್ವಯ ಅಷ್ಟೇ ಹಣವನ್ನು ಮಾತ್ರ ಪಡೆಯಬೇಕು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ತಿಳಿಸಿದರು.
ತಮ್ಮ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆ ಆರೋಗ್ಯ ಇಲಾಖೆಯ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ದರ ವಿಧಿಸುವ ಕುರಿತು ದೂರುಗಳು ಬರುತ್ತಿವೆ. ಜನರು ಪ್ರತಿ ಚಿಕಿತ್ಸೆಯ ಅರಿವು ಇರದೆ ಚಿಕಿತ್ಸೆ ಪಡೆದು ನಂತರ ಚಿಕಿತ್ಸೆಯ ಹಣ ಬರಿಸಲು ಪರದಾಡುತ್ತಾರೆ ಎಂದರು.
ಕೆ ಪಿ ಎಂ ಇ ಅಕ್ಟ್ ಅಡಿ ವೈದ್ಯರ ನಿರ್ಲಕ್ಷದ ಕುರಿತು ಬಂದಿರುವ ದೂರುಗಳ ಕುರಿತು ದೂರುದಾರರು ಹಾಗೂ ವೈದ್ಯರಿಂದ ಮಾಹಿತಿ ಪಡೆದರು. ದೂರುದಾರರ ಮನವಿಯ ಮೇರೆಗೆ ಈ ಪ್ರಕರಣಗಳನ್ನು ಕರ್ನಾಟಕ ಮೆಡಿಕಲ್ ಕೌನ್ಸಿಲ್ ಗೆ ಶಿಪಾರಸ್ಸು ಮಾಡುವುದಾಗಿ ತಿಳಿಸಿದರು. ಕನ್ಸಲ್ಟ್ ಫಾರಂ ಗಳನ್ನು ರೋಗಿಗಳಿಗೆ ಹಾಗೂ ಸಂಬoಧಿಸಿದವರಿಗೆ ಅರ್ಥವಾಗುವ ಭಾಷೆಯಲ್ಲಿ ಸರಳವಾಗಿ ಇರಬೇಕು ಎಂದು ಸೂಚಿಸಿದರು.
ಖಾಸಗಿ ಆಸ್ಪತ್ರೆಗಳ ನೋಂದಣಿಗೆ ಕೆ ಪಿ ಎಂ ಇ ಆನ್ಲೈನ್ ಪೋರ್ಟಲ್ ನಲ್ಲಿ ಬಂದಿರುವ ಅರ್ಜಿಗಳನ್ನು ಅ. 10 ರೊಳಗೆ ವಿಲೇವಾರಿ ಮಾಡಬೇಕು. ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತ ಕಡಿಮೆ ಆಗುತ್ತಿದೆ. ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಭ್ರೂಣ ಲಿಂಗ ಪತ್ತೆ ನಡೆಯುವ ಸಾದ್ಯತೆ ಇರುತ್ತದೆ ಆದ್ದರಿಂದ ಟಿ ಹೆಚ್ ಓ ಗಳು ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮಕ್ಕಳ ಲಿಂಗಾನುಪಾತ ಹೆಚ್ಚಳ ಮಾಡಲು ಚಟುವಟಿಕೆಗಳನ್ನು ಮಾಡಿ ಎಂದು ಅವರು ಸೂಚಿಸಿದರು.
ಇಂದ್ರ ಧನುಷ್ 5.0 ಚಿಕಿತ್ಸೆಯನ್ನು 0- 5 ವರ್ಷದ ಮಕ್ಕಳಿಗೆ ಶೇಕಡಾ 100 ರಷ್ಟು ಮಕ್ಕಳಿಗೆ ನೀಡಬೇಕು. ತಾಯಿ ಮಕ್ಕಳ ಮರಣ ದರವನ್ನು ಕಡಿಮೆ ಮಾಡಬೇಕು ಎಂದರು.
ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಜಯಂತ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.