Asianet Suvarna News Asianet Suvarna News

ಕೆರೆ ಒತ್ತುವರಿ ನಿರ್ದಾಕ್ಷಿಣ್ಯ ತೆರವುಗೊಳಿಸಲು ಸೂಚನೆ: ಸಚಿವ ಸೋಮಣ್ಣ

ಜಿಲ್ಲೆಯಲ್ಲಿರುವ ಎಲ್ಲಾ ರಾಜಕಾಲುವೆಗಳು, ಕೆರೆಗಳ ಒತ್ತುವರಿ ನಿರ್ದಾಕ್ಷಿಣ್ಯ ತೆರವುಗೊಳಿಸಬೇಕು. ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವುದು ಸೇರಿದಂತೆ ಕೆರೆಗಳ ಹಾನಿ ಸರಿಪಡಿಸುವ ಕಾಮಗಾರಿ ತುರ್ತಾಗಿ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು. 

Notice to clear lake encroachment says minister v somanna gvd
Author
First Published Sep 11, 2022, 1:15 PM IST

ಚಾಮರಾಜನಗರ (ಸೆ.11): ಜಿಲ್ಲೆಯಲ್ಲಿರುವ ಎಲ್ಲಾ ರಾಜಕಾಲುವೆಗಳು, ಕೆರೆಗಳ ಒತ್ತುವರಿ ನಿರ್ದಾಕ್ಷಿಣ್ಯ ತೆರವುಗೊಳಿಸಬೇಕು. ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವುದು ಸೇರಿದಂತೆ ಕೆರೆಗಳ ಹಾನಿ ಸರಿಪಡಿಸುವ ಕಾಮಗಾರಿ ತುರ್ತಾಗಿ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯಲ್ಲಿ ಮಳೆ ಪ್ರವಾಹದಿಂದ ಆಗಿರುವ ಹಾನಿ, ಪರಿಹಾರ ಕ್ರಮಗಳ ಸಂಬಂಧ ಶಾಸಕರ ಸಮ್ಮುಖದಲ್ಲಿ ನಡೆಸಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮನೆ, ಬೆಳೆಗಳಿಗೆ ಸಾಕಷ್ಟು ಹಾನಿಯಾಗಿವೆ. ರಾಜಕಾಲುವೆಗಳಲ್ಲಿ ನೀರು ಸರಾಗ ಹರಿಯದೇ ತೊಂದರೆ ಉಂಟಾಗಿವೆ. ಹೀಗಾಗಿ ರಾಜಕಾಲುವೆ, ಕೆರೆಗಳ ಒತ್ತುವರಿ ತೆರವು ಮಾಡಿಸಬೇಕು. ರಾಜಕಾಲುವೆಗಳ ಆಧುನೀಕರಣ ದುರಸ್ತಿ ಹಾಗೂ ಹಾನಿಯಾಗಿರುವ ಕೆರೆ ಸರಿಪಡಿಸುವ ಕಾಮಗಾರಿ ನಾಳೆಯಿಂದಲೇ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು.

ಟಾಸ್ಕ್‌ ಪೋರ್ಸ್‌ ಸಮಿತಿ ರಚಿಸಿ: ಕೆರೆ, ಕಾಲುವೆ ಸಂರಕ್ಷಣೆ, ಅಭಿವೃದ್ಧಿ, ಒತ್ತುವರಿ ತೆರವು ಸಂಬಂಧ ಕಾರ್ಯನಿರ್ವಹಿಸಲು ಸ್ಥಳೀಯ ಎಲ್ಲಾ ಶಾಸಕರ ಅಭಿಪ್ರಾಯ, ಸಹಕಾರ ಪಡೆದು ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನೊಳಗೊಂಡ ಟಾಸ್ಕ್‌ ಫೋರ್ಸ್‌ ರಚಿಸಬೇಕು. ಈ ಕಾರ್ಯಪಡೆ ಕೆರೆ, ಕಾಲುವೆ ಒತ್ತುವರಿ, ಅಭಿವೃದ್ಧಿಗೆ ಮೇಲುಸ್ತುವಾರಿ ಮಾಡಬೇಕೆಂದು ಸಚಿವರು ನಿರ್ದೇಶನ ನೀಡಿದರು. ರಾಜಕಾಲುವೆಗಳ ದುರಸ್ತಿ, ಆಧುನೀಕರಣ, ನಾಲೆಗಳಲ್ಲಿ ಸರಾಗ ನೀರು ಹರಿಯಬೇಕು. ಕೆರೆಗಳಲ್ಲಿ ಬೆಳೆದಿರುವ ತ್ಯಾಜ್ಯ ತೆರವುಗೊಳಿಸಬೇಕು. ಈ ಕೆಲಸಗಳಿಗೆ ಅಗತ್ಯ ಆರ್ಥಿಕ ನೆರವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುತ್ತದೆ. 

ಒಂದಡಿ ನೀರಲ್ಲಿ ಎನ್‌ ಮಹೇಶ್‌ ದೋಣಿ ಪ್ರಯಾಣ: ಜ್ವರವಿತ್ತು ಅದಕ್ಕೇ ದೋಣಿ ಹತ್ತಿದೆ ಎಂದ ಶಾಸಕ

ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬ ಮಾಡಬೇಡಿ. ಮಳೆ ಪ್ರವಾಹದಿಂದ ಹಾನಿ ಸಂಭವಿಸದಿರಲು ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಸಚಿವರು ತಿಳಿಸಿದರು. ಸೇತುವೆ, ರಸ್ತೆಗಳನ್ನು ಸರಿಪಡಿಸುವ ಕಾರ್ಯಆಗಬೇಕು. ಜಿಲ್ಲೆಯ ಎಲ್ಲಾ ಕಡೆ ಪರಿಶೀಲಿಸಿ ಸಮಗ್ರ ವರದಿ ನೀಡಿ ಬೇಕಿರುವ ಅಂದಾಜು ಪ್ರಸ್ತಾವನೆ ಕೂಡಲೇ ಸಲ್ಲಿಸಿ, ಜನರು ಸಂಚರಿಸಲು ಯೋಗ್ಯವಾಗುವಂತೆ ರಸ್ತೆ ನಿರ್ಮಾಣ ಮಾಡಬೇಕು ಎಂದರು. ಕೃಷಿ, ತೋಟಗಾರಿಕೆ ಬೆಳೆ, ಮನೆ ಸಂಬಂಧ ಸಮೀಕ್ಷಾ ಕಾರ್ಯದ ವಿವರ ಪರಿಶೀಲಿಸಿದ ಸಚಿವರು ಚುರುಕಾಗಿ ಸಮೀಕ್ಷಾ ಕಾರ್ಯ ನಿರ್ವಹಿಸಿ ಕೂಡಲೇ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ತಲುಪಿಸಬೇಕು. 

ಮನೆಗೆ ನೀರು ನುಗ್ಗಿರುವ ಪ್ರಕರಣಗಳಲ್ಲಿ ಬಾಕಿ ಇರುವ ಸಂತ್ರಸ್ತರಿಗೆ ಸೌಲಭ್ಯ ತಲುಪಿಸಲು ದಾಖಲೆಗಳ ಸಬೂಬು ಹೇಳಬಾರದು. ಎಲ್ಲಾ ಪರಿಹಾರ ಕ್ರಮಗಳು ಶೀಘ್ರವಾಗಿ ಆಗಬೇಕೆಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಶಾಲೆ, ಅಂಗನವಾಡಿಗಳು ಹಾನಿಯಾಗಿರುವ ಕಡೆ ಕೂಡಲೇ ದುರಸ್ತಿಗೆ ಕ್ರಮವಹಿಸಬೇಕು. ಶಾಲಾ ಕೊಠಡಿಗಳ ನಿರ್ಮಾಣ ದುರಸ್ತಿಗೆ 7 ಕೋಟಿ ರು. ಅನುದಾನ ನೀಡಲಾಗುತ್ತದೆ. ಉದ್ಯೋಗ ಖಾತರಿ ಯೋಜನೆಯಡಿ ಸಹ ಗ್ರಾಮಾಂತರ ಒಳಭಾಗದ ರಸ್ತೆಗಳ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು. ಜಿ.ಪಂ. ಸಿಇಒ ಅಧಿಕಾರಿಗಳು ಈ ಬಗ್ಗೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಿ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಮಾಂಬಳ್ಳಿ ಸ್ಮಶಾನ ಭೂಮಿ ಸಂಬಂಧ ವಹಿಸಲಾಗಿರುವ ಕ್ರಮಗಳ ಬಗ್ಗೆ ವಿವರ ಪಡೆದ ಸಚಿವರು ಈ ನಿಟ್ಟಿನಲ್ಲಿ ತುರ್ತಾಗಿ ಎಲ್ಲಾ ಕ್ರಮಗಳನ್ನು ವಿಳಂಬ ಮಾಡದೇ ತೆಗೆದುಕೊಳ್ಳಬೇಕೆಂದು ಸೂಚಿಸಿದರು. ಶಾಸಕ ಸಿ. ಪುಟ್ಟರಂಗಶೆಟ್ಟಿಮಾತನಾಡಿ, ಹಲವು ಕೆರೆಗಳಿಗೆ ಹಾನಿಯಾಗಿದೆ. ನೀರು ನುಗ್ಗಿ ಕೋಸು, ಅರಿಶಿನ, ಬಾಳೆ ಇತರ ಬೆಳೆಗಳು ನಾಶವಾಗಿವೆ. ಇದಕ್ಕೆ ಸೂಕ್ತ ಪರಿಹಾರ ಶೀಘ್ರ ಸಿಗಬೇಕು ಎಂದರು. ಶಾಸಕ ಆರ್‌. ನರೇಂದ್ರ ಮಾತನಾಡಿ, ಕ್ಷೇತ್ರದಾದ್ಯಂತ ಪ್ರವಾಸ ಮಾಡಿ ಮಳೆ ಹಾನಿ ಪರಿಶೀಲಿಸಿದ್ದೇನೆ. ಲೊಕ್ಕನಹಳ್ಳಿ ಭಾಗದಲ್ಲಿ ಬೆಳುಳ್ಳಿ ಬೆಳೆ ಹಾಳಾಗಿದೆ. ಆಲೂಗಡ್ಡೆ ಬೆಳೆಗಾರರು ತೊಂದರೆಯಲ್ಲಿದ್ದಾರೆ. ಗುಂಡಾಲ್‌, ಕಬಿನಿ, ಮುಡುತೊರೆ ಜಲಾಶಯಗಳಿಗೆ ಸಂಬಂಧಿಸಿದಂತೆ ನಿರ್ವಹಣೆಯಾಗುತ್ತಿಲ್ಲ. ಮಳೆ ಬಂದಾಗ ತೊಂದರೆಯಾಗುತ್ತಿದೆ. ಅಧಿಕಾರಿಗಳು ಮಳೆ ಬಿಟ್ಟು ಬೇರೆ ಸಮಯದಲ್ಲಿ ಗಮನಹರಿಸುವುದಿಲ್ಲ ಎಂದರು.

ಶಾಸಕ ಎನ್‌. ಮಹೇಶ್‌ ಮಾತನಾಡಿ, ನರೇಗಾ ಅಡಿ ರಸ್ತೆ ನಿರ್ವಹಣೆಗೆ ಅವಕಾಶವಿದೆ. ಮೂಲ ಸೌಕರ್ಯಗಳಿಗೆ ಉಂಟಾದ ತೊಂದರೆ ಪಟ್ಟಿಮಾಡಿ, ಇದಕ್ಕಾಗಿ ವಿಶೇಷ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು. ಶಾಸಕ ಸಿ.ಎಸ್‌. ನಿರಂಜನ್‌ಕುಮಾರ್‌ ಮಾತನಾಡಿ, ತಮ್ಮ ಕ್ಷೇತ್ರದಲ್ಲೂ ಕೆರೆಗಳ ಸರಿಪಡಿಸುವ ಕಾರ್ಯ ಆಗಬೇಕು. ರಸ್ತೆ ದುರಸ್ತಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬೇಕು. ಬೆಳೆ ಪರಿಹಾರ ಸಿಗಬೇಕು ಎಂದರು. ವಿಧಾನ ಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ ಮಾತನಾಡಿ, ಗ್ರಾಮೀಣ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಕಾರ್ಯನಿರ್ವಹಣೆಯಲ್ಲಿ ನೆರವು ಸಿಗಬೇಕಿದೆ ಎಂದರು.

ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು ಮಾತನಾಡಿ, ನಗರದ ಜಿಲ್ಲಾಡಳಿತ ಭವನದ ಮುಖ್ಯ ದ್ವಾರ, ಬಿ. ರಾಚಯ್ಯ ಜೋಡಿರಸ್ತೆ, ಕ್ರೀಡಾಂಗಣ ಬಳಿ ಮಳೆ ಸಂದರ್ಭದಲ್ಲಿ ನೀರು ಹರಿದು ತೊಂದರೆಯಾಗುತ್ತಿದೆ. ಇದಕ್ಕೆ ಪರಿಹಾರ ಕಾಮಗಾರಿಗಳು ಆಗಬೇಕೆಂದರು. ಸಭೆಯ ಆರಂಭದಲ್ಲಿಯೇ ಗೋಡೆ ಕುಸಿದು ಮೃತಪಟ್ಟದಡದಹಳ್ಳಿಯ ಮೂರ್ತಿ ಅವರ ಕುಟುಂಬಕ್ಕೆ 5 ಲಕ್ಷ ರು.ಪರಿಹಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು ವಿತರಿಸಿದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಪಂ ಸಿಇಒ ಕೆ.ಎಂ. ಗಾಯಿತ್ರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌. ಸುಂದರ್‌ರಾಜ್‌, ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ನಿರ್ದೇಶಕ ಡಾ. ಸಂತೋಷ್‌ ಕುಮಾರ್‌ ಇದ್ದರು.

ನಗರದ ಕೇಂದ್ರದಲಿಯೇ ಜಿಲ್ಲಾ ಆಸ್ಪತ್ರೆ ಆರಂಭಿಸಲು ಸಚಿವರ ಸೂಚನೆ: ಚಾಮರಾಜನಗರ ಪಟ್ಟಣದಲ್ಲಿ ಈ ಹಿಂದೆ ಇದ್ದ ಕೇಂದ್ರ ಸ್ಥಳದಲ್ಲಿಯೇ ಜಿಲ್ಲಾ ಆಸ್ಪತ್ರೆ ತುರ್ತಾಗಿ ಆರಂಭಿಸುವಂತೆ ಸಚಿವ ವಿ. ಸೋಮಣ್ಣ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಹಿಂದಿನ ಸಭೆಯಲ್ಲಿಯೇ ಜಿಲ್ಲಾ ಆಸ್ಪತ್ರೆ ನಗರದ ಕೇಂದ್ರ ಭಾಗದಲ್ಲಿಯೇ ಈ ಹಿಂದೆ ಇದ್ದಂತೆಯೇ ಆರಂಭಿಸುವ ನಿಟ್ಟಿನಲ್ಲಿ ಸೂಕ್ತ ಸಮಾಲೋಚನೆ ನಡೆಸುವಂತೆ ಸೂಚಿಸಿದ್ದೆ. ಈ ಸಂಬಂಧ ಏನು ಕ್ರಮಗಳಾಗಿವೆ ಎಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಉತ್ತರಿಸಿ ಆಸ್ಪತ್ರೆ ಆರಂಭ ಸಂಬಂಧ ಸಭೆ ನಡೆಸಲಾಗಿದೆ. ಚಾಮರಾಜನಗರ ಜಿಲ್ಲಾ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಲ್ಲಿ ನಿಯೋಜನೆಗೊಂಡಿರುವ ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯನ್ನು ಮತ್ತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವಾಪಸ್ಸು ನಿಯೋಜಿಸಿದ್ದಲ್ಲಿ ಆಸ್ಪತ್ರೆ ನಿರ್ವಹಣೆ ಮಾಡಬಹುದಾಗಿದೆ ಎಂದರು.

ಸಮುದ್ರಕ್ಕೆ ವ್ಯರ್ಥವಾಗಿ ಹರಿಯುತ್ತಿದ್ದ ನೀರು ಕೆರೆಗೆ; ರೈತರ ಚಿಂತೆ ದೂರ ಮಾಡಿದ ಸಚಿವ ಸೋಮಣ್ಣ

ಸಚಿವ ವಿ. ಸೋಮಣ್ಣ ಮಾತನಾಡಿ, ಈಗಿರುವ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆ ಪಟ್ಟಣದಿಂದ 7 ಕಿ.ಮೀ ದೂರದಲ್ಲಿದೆ. ತುರ್ತು ಸಂದರ್ಭಗಳಲ್ಲಿ ಜನರಿಗೆ ತೀವ್ರ ಅನಾನುಕೂಲವಾಗುತ್ತಿದೆ. ಮೆಡಿಕಲ್‌ ಕಾಲೇಜು ಬೋಧನಾ ಆಸ್ಪತ್ರೆಗೆ ಪ್ರತ್ಯೇಕ ವ್ಯವಸ್ಥೆಯಾಗಲಿ. ಈ ಹಿಂದೆ ನಗರದ ಮುಖ್ಯ ಭಾಗದಲ್ಲಿ ಇದ್ದಂತೆಯೇ ಜಿಲ್ಲಾ ಆಸ್ಪತ್ರೆಯನ್ನು ಕೂಡಲೇ ಆರಂಭಿಸಿ. ವೈದ್ಯರು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಎಂದು ಸೂಚಿಸಿದರು. ವೈದ್ಯಕೀಯ ಕಾಲೇಜಿನ ಡೀನ್‌ ಡಾ. ಸಂಜೀವ್‌ ಆಸ್ಪತ್ರೆ ಸಂಬಂಧ ಮಾಹಿತಿ ನೀಡಿದರು.

Follow Us:
Download App:
  • android
  • ios